ಶ್ರೀ ಚೆನ್ನ ಕೇಶವ ಶೃಂಗಾರ ಭಾವ

ಶ್ರೀ ಚೆನ್ನ ಕೇಶವ ಶೃಂಗಾರ ಭಾವ

ಚಿತ್ರ

ಮುನ್ನ ವೇಲಾಪುರದಿ ನಿಂತಿಹ 
ಚೆನ್ನಿಗನ ಚೆಲುವೆಂತು ಬಣ್ಣಿಪೆ
ರನ್ನದಾಭರಣಗಳ ತೊಟ್ಟಿಹ ಸುಂದರಾಂಗನನು? |
ಚೆನ್ನಕೇಶವನೆಂಬ ಹೆಸರವ
-ನನ್ನೆ ನೆಚ್ಚಿದ ಮದನಿಕಾ ಮನ
ದನ್ನನಿವನೆಂತೆಂದು ನುಡಿವುದೆ ತಕ್ಕ ವರ್ಣನೆಯು! || ೧||

ತನ್ನ ಭಕುತರ ಸಕಲ ದುಃಖದ 
ಬಿನ್ನಪವ ಕೇಳುತ್ತಲೆಲ್ಲರ-
ವುನ್ನತಿಗೆ ತಾ ಮಿಗಿಲು ಕಾರಣ ಮಾರ ಚೆನ್ನಿಗನ |
ಸನ್ನಿಧಾನವು ಸಕಲ ಜನಪದ
ಕನ್ನಡದ ನೆಲಕೆಲ್ಲ ಒಬ್ಬನೆ 
ಚನ್ನಕೇಶವ ರಾಯನೆಂಬುದು ನಿತ್ಯ ನಿಚ್ಚಳವು ||೨||

ವಿಜಯ ಪಡೆದಿರೆ ಧೀರ ಬಿಟ್ಟಿಗ 
ಸುಜನಪತಿ ಪೂರಯಿಸೆ ಹರಕೆಯ
ವಿಜಯ ನಾರಾಯಣನ ಮೂರುತಿಯನ್ನು ಕೆತ್ತಿಸಿದ |
ನಿಜದಿ ಭಾಗ್ಯವುದವನ ಸನ್ನಿಧಿ
ಭಜಿಸುವಂತಹ ದಶೆಯು ದೊರೆವುದು!
ಋಜುತನದಿ ಚೆನ್ನಿಗನ ಮೀರುವ ದೇವನೆಲ್ಲಿಹನು? ||೩||

ತಾವರೆಯ ಮೊಗದಲ್ಲಿ ಕಂಗಳ 
ತಾವರೆಯೆರಡು ನಕ್ಕು ಅರಳಿರೆ
ಕಾವದೇವನ ಮೀರುವಂತಹ ಚೆಲುವು ಕಂಡಿರಲು |
ದೇವಿ ಶಾಂತಲೆಯಂದು ಮಾಡಿದೆ
ಹಾವ ಭಾವದ ನೃತ್ತ ಗಾನವು 
ನೇವುರದ ಕಿಂಕಿಣಿಯ ನಾದವದಿಲ್ಲಿ ಕೇಳುತಿದೆ ||೪||

-ಹಂಸಾನಂದಿ

ಕೊ: ಡಿವಿಜಿ ಯವರು, ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಇರುವ ಮದನಿಕಾ ವಿಗ್ರಹ (ಶಿಲಾಬಾಲಿಕೆ)ಗಳ ಬಗ್ಗೆ ಬರೆದಿರುವ ಅಂತಃಪುರಗೀತೆಗಳಲ್ಲಿ ಮೊದಲದ್ದು , ಚೆನ್ನಕೇಶವನ ಮೇಲೇ. ಚೆನ್ನಕೇಶವನ ಸೊಬಗನ್ನು ವರ್ಣಿಸುವ ಈ ನನ್ನ ಪದ್ಯಗಳಿಗೆ ಆ ಅಂತಃಪುರ ಗೀತೆಯು ಮೊದಲಾಗುವ  "ಶ್ರೀ ಚೆನ್ನಕೇಶವ ಶೃಂಗಾರಭಾವ" ಎಂಬ ತಲೆಬರಹವೇ ಸೂಕ್ತವಾಗಿ ಕಂಡದ್ದರಿಂದ ಹಾಗೇ ಬಳಸಿದ್ದೇನೆ.

ಕೊ.ಕೊ: ನಾಲ್ಕೂ ಪದ್ಯಗಳು ಭಾಮಿನಿ ಷಟ್ಪದಿಯಲ್ಲಿವೆ. ಈ ದೇವಾಲಯವನ್ನು ಕೆತ್ತಿಸಿದ, ಹೊಯ್ಸಳ ರಾಜ ಬಿಟ್ಟಿಗ ( ವಿಷ್ಣುವರ್ಧನ) ಮತ್ತು ಅವನ ರಾಣಿ ಶಾಂತಲೆಯ ಪ್ರಸತಾಪ ೩ ಹಾಗೂ ೪ನೇ ಪದ್ಯದಲ್ಲಿ ಬಂದಿದೆ. ವಿಜಯನಾರಾಯಣ ನೆಂಬ ಹೆಸರಿನ ಇಲ್ಲಿನ ಮೂರ್ತಿ, ಚೆನ್ನಕೇಶವನೆಂಬ ಹೆಸರಲ್ಲೇ ಹೆಚ್ಚು ಪ್ರಖ್ಯಾತ.

ಕೊ.ಕೊ.ಕೊ: "ಕಮಲೇ ಕಮಲೋತ್ಪತ್ತಿಃ" ಎಂಬ ಒಂದು ಸಮಸ್ಯಾಪದ್ಯವನ್ನು ಕಾಳಿದಾಸ ಬಿಡಿಸಿದನೆಂದು ದಂತಕತೆ. ಅದರ ಭಾವವನ್ನೇ ಇಲ್ಲಿ ನನ್ನ "ತಾವರೆಯ ಮೊಗದಲ್ಲಿ ಕಂಗಳ ತಾವರೆಯೆರಡು ನಕ್ಕು ಅರಳಿರೆ" ಎಂಬ ಸಾಲಿನಲ್ಲಿ ತರುವ ಯತ್ನ ಮಾಡಿದ್ದೇನೆ.

ಚಿತ್ರ ಕೃಪೆ: ಮಿತ್ರ ನಂದಕುಮಾರ್ ಅವರ ಕ್ಯಾಮರಾ ಕೈಚಳಕ  - ಬೇಲೂರಿನ ದೇವಸ್ಥಾನದ ಪ್ರಾಕಾರದ ಪನೋರಮಾ ನೋಟ.
 

Rating
No votes yet

Comments

Submitted by DR.S P Padmaprasad Sun, 04/19/2015 - 19:55

ಭಾಮಿನಿ ಶ್ಹಟ್ಪದಿಯಲ್ಲಿ ಬರೆಯುವ‌ ನಿಮ್ಮ‌ ಪ್ರಯತ್ನ‌ ಯಷಸ್ವಿಯಾಗಿದೆ.ಪದ್ಯಗಳ‌ ಭಾವ‌, ಭಾಷೆ ಎರಡೂ ಸೊಗಸಾಗಿವೆ. 'ಎಲ್ಲಾದರು ಇರು, ಎ0ತಾದರೂ ಇರು ಎ0ದೆ0ದಿಗು ನೀ ಕನ್ನಡವಾಗಿರು' ಎ0ಬ‌ ಕವಿಯ‌ ಆಸೆಯ‌ನ್ನು ನಿಮ್ಮ0ಥವರು ನನಸಾಗಿಸುತ್ತಿರುವುದು ನಮಗೆಲ್ಲಾ ಸ0ತೋಶ್ಹದ‌ ಸ0ಗತಿ.

Submitted by kavinagaraj Mon, 04/27/2015 - 08:38

ಶೀರ್ಷಿಕೆ ನೋಡಿದ ತಕ್ಷಣ ಅದೇ ಗೀತೆ ನೆನಪಿಗೆ ಬಂದು ಮನಸ್ಸು ಪ್ರಫುಲ್ಲವಾಯಿತು. ನಿಮ್ಮ ರಚನೆಯೂ ಮುದ ನೀಡುವಂತಹದು. ಅಭಿನಂದನೆಗಳು.