೧೦೧. ಲಲಿತಾ ಸಹಸ್ರನಾಮ ೩೭೬ರಿಂದ ೩೮೦ನೇ ನಾಮಗಳ ವಿವರಣೆ

೧೦೧. ಲಲಿತಾ ಸಹಸ್ರನಾಮ ೩೭೬ರಿಂದ ೩೮೦ನೇ ನಾಮಗಳ ವಿವರಣೆ

ಚಿತ್ರ

ರಾಜರಾಜೇಶ್ವರಿಯ ಚಿತ್ರಕೃಪೆ: ಅಂತರ್ಜಾಲ

ಲಲಿತಾ ಸಹಸ್ರನಾಮ ೩೭೬ - ೩೮೦

Śṛṅgāra-rasa- saṁpūrṇā शृङ्गार-रस-संपूर्णा (376)

೩೭೬. ಶೃಂಗಾರ-ರಸ-ಸಂಪೂರ್ಣಾ

          ದೇವಿಯು ಪ್ರೇಮದ ಸಾರವಾಗಿದ್ದಾಳೆ. ಹಿಂದಿನ ನಾಮವು ನಾಲ್ಕು ಪೀಠಗಳ ಕುರಿತಾಗಿ ಅದರಲ್ಲೂ ಪ್ರತ್ಯೇಕವಾಗಿ ಕಾಮಗಿರಿ ಪೀಠ ಅಥವಾ ಮೂಲಾಧಾರ ಚಕ್ರವನ್ನು ಕುರಿತಾಗಿ ಹೇಳುತ್ತದೆ. ಈ ನಾಮದಲ್ಲಿ ಪೂರ್ಣಗಿರಿ ಪೀಠ ಅಥವಾ ಮಣಿಪೂರಕ ಚಕ್ರದ ಕುರಿತಾಗಿ ಉಲ್ಲೇಖಿಸಲಾಗಿದೆ. ಹಿಂದಿನ ನಾಮದಲ್ಲಿ ಉಲ್ಲೇಖಿಸಲಾಗಿರುವ  ಮೂಲಾಧಾರ ಚಕ್ರ ಅಥವಾ ಕಾಮಗಿರಿ ಪೀಠದಲ್ಲಿ ಪರಾ ವಾಕ್ ಎನ್ನುವುದು ಉದ್ಭವವಾಗಿ ಅದು ಮುಂದಿನ ವಿಕಸನದ ಹಂತಕ್ಕಾಗಿ ಮಣಿಪೂರಕ ಚಕ್ರ ಅಥವಾ ಈ ಪೂರ್ಣಗಿರಿ ಪೀಠವನ್ನು ಪ್ರವೇಶಿಸುತ್ತದೆ. ಮಣಿಪೂರಕ ಚಕ್ರದಲ್ಲಿ ’ಕಾರಣ ಬಿಂದು’ ಎಂದು ಕರೆಯಲ್ಪಡುವ ಚುಕ್ಕೆಯು ಈ ಚಕ್ರದಲ್ಲಿ ’ಕಾರ್ಯಬಿಂದು’ ಆಗುತ್ತದೆ. ೩೬೬ನೇ ನಾಮದಲ್ಲಿ ಈ ಬಿಂದುಗಳ ಕುರಿತಾಗಿ ವಿವರವಾಗಿ ಚರ್ಚಿಸಲಾಗಿದೆ.

           ಲಲಿತಾಂಬಿಕೆಯು ಜೀವನದ ಎಲ್ಲಾ ಸುಂದರ ವಸ್ತುಗಳ ಸಾರ ಅಥವಾ ರಸದ ಮೂರ್ತ ರೂಪವಾಗಿದ್ದಾಳೆ. ಎಂಟರಿಂದ ಹತ್ತು ವಿಧವಾದ ರಸಗಳಿವೆಯೆಂದು ಹೇಳಲಾಗುತ್ತದೆಯಾದರೂ ಸಾಮಾನ್ಯವಾಗಿ ಒಂಭತ್ತು ವಿಧವಾದ ರಸಗಳನ್ನು (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ಎಂಬ ಒಂಬತ್ತು ರಸಗಳು) ಮಾತ್ರ ಕುರಿತು ಉಲ್ಲೇಖಿಸಲಾಗುತ್ತದೆ. ಆ ಹತ್ತು ರಸಗಳೆಂದರೆ ಶೃಂಗಾರ, ವೀರ, ಭೀಭತ್ಸ, ರೌದ್ರ, ಹಾಸ್ಯ, ಭಯಾನಕ, ಕರುಣ, ಅದ್ಭುತ, ಶಾಂತ ಮತ್ತು ಎದೆ ತುಂಬಿದ ಅನುಭವ ನೀಡುವ ರಸ (ಕಕ್ಷಾವೇಕ್ಷಕ कक्षावेक्षक= ಎದೆ ತುಂಬಿದ/ ಬೆಚ್ಚನೆಯ ಅನುಭವ, warmth). ಸೌಂದರ್ಯ ಲಹರಿಯು ದೇವಿಯು ವಿವಿಧ ಸಮಯಗಳಲ್ಲಿ ಪ್ರದರ್ಶಿಸುವ ಎಂಟು ವಿಧವಾದ ರಸಗಳನ್ನು ಹೆಸರಿಸುತ್ತದೆ. ಆಕೆಯು ಶಿವನೊಂದಿಗೆ ಶೃಂಗಾರ ರಸವನ್ನು ಪ್ರದರ್ಶಿಸಿದರೆ, ವೀರ ರಸವನ್ನು ದುಷ್ಟ ಶಕ್ತಿಗಳನ್ನು ನಾಶ ಮಾಡುವಾಗ, ಭೀಭತ್ಸ ರಸವನ್ನು ಅಜ್ಞಾನಿಗಳೊಡನೆ, ಭಯಾನಕತೆಯನ್ನು ಶಿವನ ಮೈಮೇಲಿರುವ ಹಾವುಗಳನ್ನು ನೋಡಿದಾಗ, ರೌದ್ರವನ್ನು ಗಂಗಾ ದೇವಿಯ ಮೇಲೆ ತೋರುತ್ತಾಳೆ (ಆಕೆಯನ್ನು ಶಿವನು ತನ್ನ ಜಟೆಯಲ್ಲಿ ಬಂಧಿಸಿದಾಗ), ಅದ್ಭುತವನ್ನು ಶಿವನ ಮೂರನೆಯ ಕಣ್ಣನ್ನು ನೋಡಿದಾಗ, ತನ್ನ ಭಕ್ತರ ಸಾನಿಧ್ಯದಲ್ಲಿದ್ದಾಗ ಎದೆ ತುಂಬಿದ ಅನುಭವದ ರಸವನ್ನು ಮತ್ತು ಲಾಸ್ಯ ರಸವನ್ನು (ನಾಟ್ಯ ಮಾಡುವಂತಹ ಭಾವನೆಗಳನ್ನು) ತನ್ನ ಅನುಚರರನ್ನು ಗಮನಿಸುವಾಗ ತೋರುತ್ತಾಳೆ. ಶಿವ ಮತ್ತು ಶಕ್ತಿಯರ ಪ್ರೇಮವನ್ನು ವಿವಿಧ ಗ್ರಂಥಗಳು ಬಹು ಚೆನ್ನಾಗಿ ವರ್ಣಿಸುತ್ತವೆ. ಪ್ರೇಮದ ಸಾರ ಅಥವಾ ಶೃಂಗಾರ ರಸವು ಎಲ್ಲಾ ರಸಗಳಿಗೆ ಕಾರಣವಾಗಿದೆ. ಈ ಎಲ್ಲಾ ಹೇಳಿಕೆಗಳು ದೇವಿಯ ಸಗುಣ ರೂಪವನ್ನು ಅರಿಯುವಾಗ ಉಪಯೋಗಕ್ಕೆ ಬಂದರೂ ಸಹ ಆಕೆಯ ನಿರ್ಗುಣ ಅಥವಾ ಪರಮಸ್ವರೂಪವು ಎಲ್ಲಾ ವಿಧವಾದ ಗುಣ ಮತ್ತು ರೂಪಗಳಿಗೆ ಅತೀತವಾಗಿದೆ.

          ಈ ನಾಮಕ್ಕೆ ಮತ್ತೊಂದು ವ್ಯಾಖ್ಯಾನವೂ ಇದೆ. ಶೃಂಗವೆಂದರೆ ಮೂಲಭೂತವಾದ ಮತ್ತು ಅರರ ಎಂದರೆ ಮುಸುಕು, ಸಂಪೂರ್ಣ ಎಂದರೆ ಪರಬ್ರಹ್ಮವೆಂದು ಅರ್ಥ. ಈ ವಿಧವಾಗಿ ವಿಶ್ಲೇಷಿಸಿದಾಗ, ದೇವಿಯು ಶುದ್ಧ ಬ್ರಹ್ಮದ ಅಥವಾ ನಿರ್ಗುಣ ಬ್ರಹ್ಮದ ಸ್ವರೂಪದಲ್ಲಿದ್ದಾಳೆಂದೂ ಮತ್ತು ಆಕೆಯು ಸಗುಣ ಬ್ರಹ್ಮದ ಸ್ವರೂಪದಲ್ಲೂ (ಮಾಯಾ ರೂಪದಲ್ಲೂ) ಇದ್ದಾಳೆಂದು ಅರ್ಥವಾಗುತ್ತದೆ.

          ಈ ನಾಮದಲ್ಲಿ ಪೂರ್ಣಗಿರಿ ಪೀಠವನ್ನೂ ಸಹ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತದೆ.

Jayā ज़या (377)

೩೭೭. ಜಯಾ

         ದೇವಿಯು ಯಾವಾಗಲೂ ವಿಜಯಿಯಾಗಿರುತ್ತಾಳೆ. ಆಕೆಯು ವಿಜಯದ ಮೂರ್ತರೂಪವೇ ಆಗಿದ್ದಾಳೆ. ಬಹುಶಃ ಇದು ಒಬ್ಬರು ತನ್ನ ಇಂದ್ರಿಯಗಳ ಮೇಲೆ ಜಯ ಸಾಧಿಸುವುದರ ಮೂಲಕ ದೇವಿಯ ವಿಜಯ ಸ್ವರೂಪವನ್ನು ಅರಿಯಬಹುದೆಂದು ಸೂಚಿಸುತ್ತದೆ. ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ಇಂದ್ರಿಯಗಳನ್ನು ಬಹುಶಃ ಅತ್ಯಂತ ಕೆಟ್ಟ ಶತ್ರುಗಳೆಂದು ಭಾವಿಸಲಾಗಿದೆ; ಏಕೆಂದರೆ ಇವುಗಳ ಪ್ರಭಾವದಿಂದ ಮನಸ್ಸು ಮಲಿನವಾಗುತ್ತದೆ. ಆದರೆ ಮನಸ್ಸನ್ನು ನಿಯಂತ್ರಣದಲ್ಲಿಟ್ಟರೆ ಇಂದ್ರಿಯಗಳು ಅದರ ಮೇಲೆ ಯಾವುದೇ ವಿಧವಾದ ದುಃಷ್ಪರಿಣಾಮವನ್ನುಂಟು ಮಾಡಲಾರವು ಹಾಗೂ ಮನಸ್ಸಿನ ಶಾಂತ ಚಿತ್ತವನ್ನು ವಿಕಲ್ಪಗೊಳಿಸಲಾರವು. ವಿಷ್ಣು ಸಹಸ್ರನಾಮದ ೫೦೯ನೇ ನಾಮವೂ ಸಹ ಜಯಃ ಆಗಿದ್ದು ಅದಕ್ಕೆ, "ಯಾರು ಎಲ್ಲಾ ಜೀವಿಗಳನ್ನು ಜಯಿಸುತ್ತಾನೆಯೋ ಅವನು" ಎಂದು ವ್ಯಾಖ್ಯಾನಿಸಲಾಗಿದೆ.

Jālandhra-sthitā जालन्ध्र-स्थिता (378)

೩೭೮. ಜಾಲಂಧ್ರ-ಸ್ಥಿತಾ

          ಇಲ್ಲಿ ಜಾಲಂಧರ ಪೀಠ ಅಥವಾ ಹೃದಯ ಚಕ್ರ (ಅನಾಹತ)ವನ್ನು ಉಲ್ಲೇಖಿಸಲಾಗಿದೆ, ಇಲ್ಲಿ ಶಬ್ದವು ಇನ್ನಷ್ಟು ಪರಿಷ್ಕರಣೆಗೊಂಡು ಮಧ್ಯಮಾ ಆಗಿ, ಅದು ಶಬ್ದವು ಹೊರಹೊಮ್ಮುವ ಅಂತಿಮ ಹಂತಕ್ಕಿಂತ ಮುಂಚಿನ ಹಂತವಾಗಿರುತ್ತದೆ. ಇದು, ದೇವಿಯ ಶಬ್ದ ಬ್ರಹ್ಮದ ಒಂದು ರೂಪವಾಗಿದೆ.

Oḍyāṇa-pīṭha-nilayā ओड्याण-पीठ-निलया (379)

೩೭೯. ಓಡ್ಯಾಣ-ಪೀಠ-ನಿಲಯಾ

          ದೇವಿಯು ಸ್ಥೂಲ ಶರೀರದ ನಾಲ್ಕನೆಯ ಪೀಠವಾದ ಓಡ್ಯಾಣದಲ್ಲಿ ನೆಲಸಿರುತ್ತಾಳೆ. ಇಲ್ಲಿ ಸಂಪೂರ್ಣವಾಗಿ ರೂಪಗೊಂಡ ಶಬ್ದವು ವೈಖರೀ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಓಡ್ಯಾಣ ಪೀಠವು ಕಂಠ ಚಕ್ರ ಅಥವಾ ವಿಶುದ್ಧಿ ಚಕ್ರಕ್ಕೆ ಸಂಭಂದಿಸಿದ್ದಾಗಿದೆ.

Bindumaṇḍala-vāsini बिन्दुमण्डल-वासिनि (380)

೩೮೦. ಬಿಂದುಮಂಡಲ-ವಾಸಿನಿ

           ದೇವಿಯು ಬಿಂದು ಮಂಡಲದಲ್ಲಿ ವಾಸಿಸುತ್ತಾಳೆ. ಬಿಂದುವೆಂದರೆ ಶ್ರೀ ಚಕ್ರದ ಮಧ್ಯದಲ್ಲಿರುವ ಚುಕ್ಕೆಯಾಗಿದ್ದು ಅಲ್ಲಿ ದೇವಿಯು ತನ್ನ ಸಂಗಾತಿಯಾದ ಶಿವನೊಡನೆ ವಾಸಿಸುತ್ತಾಳೆ. ಶ್ರೀ ಚಕ್ರದ ಈ ಬಿಂದುವನ್ನು ಬಹಳ ಶಕ್ತಿಯುತವಾದದ್ದೆಂದು ಪರಿಗಣಿಸಲಾಗಿದೆ ಏಕೆಂದರೆ ಅದು ಕಾಮೇಶ್ವರ ಮತ್ತು ಕಾಮೇಶ್ವರೀ ಇವರಿಬ್ಬರ ಆವಾಸ ಸ್ಥಾನವಾಗಿದೆ.

           ಈ ಬಿಂದವನ್ನು ಸಹಸ್ರಾರದಲ್ಲಿರುವ ರಂಧ್ರಕ್ಕೂ ಸಮೀಕರಿಸಲಾಗುತ್ತದೆ; ಅದನ್ನು ಬ್ರಹ್ಮರಂಧ್ರವೆಂದೂ ಕರೆಯುತ್ತಾರೆ ಮತ್ತದರ ಮೂಲಕ ದೇವರೊಂದಿಗೆ ಅನ್ಯೋನ್ಯ ಸಂಸರ್ಗವು (ಆಪ್ತ ಸಂಪರ್ಕವು) ಏರ್ಪಡುತ್ತದೆ. ಬ್ರಹ್ಮಾಂಡದ ಶಕ್ತಿಯು ಕಿರೀಟ ಚಕ್ರದಲ್ಲಿರುವ ಈ ರಂಧ್ರದ ಮೂಲಕ ಮತ್ತು ಬೆನ್ನ ಹುರಿಯಲ್ಲಿರುವ ಮೆದುಳ ಬಳ್ಳಿಯ  (ಹಿಂದಲೆಯ ಚಕ್ರದ) ಮೂಲಕವಷ್ಟೇ ಮಾನವ ಶರೀರದ ಒಳಗೆ ಪ್ರವೇಶವನ್ನು ಮಾಡಬಲ್ಲದು. ಯಾವಾಗ ಈ ಎರಡು ಸ್ಥಳಗಳು ಪ್ರಕೃತಿ ಮಾತೆಗೆ ಮತ್ತು ಬೆಳಗಿನ ಸೂರ್ಯನಿಗೆ ಹೊರಚಾಚಲ್ಪಡುತ್ತವೆಯೋ ಆಗ ರೋಗ ರಹಿತ ಜೀವನಕ್ಕೆ ಸಾಕಾಗುವಷ್ಟು ಬ್ರಹ್ಮಾಂಡ ಶಕ್ತಿಯನ್ನು ಸ್ಥೂಲ ಶರೀರವು ಒಳಗೆಳೆದುಕೊಳ್ಳಬಲ್ಲುದು. 

*******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 376-380 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sun, 08/25/2013 - 19:50

ಶ್ರೀಧರರೆ, ೧೦೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೩೭೬ - ೩೮೦
________________________________________

೩೭೬. ಶೃಂಗಾರ-ರಸ-ಸಂಪೂರ್ಣಾ 
ಕಾರಣಬಿಂದುವಿಂದ ಕಾರ್ಯಬಿಂದು ಕಾಮಗಿರಿಯಿಂದ ಪೂರ್ಣಗಿರಿ
ಮೂಲಾಧಾರದಿಂದ ಮಣಿಪೂರಕ ನಾದಬ್ರಹ್ಮದ ತ್ರಿಪುರ ಸುಂದರಿ
ಜಗ ಸೌಂದರ್ಯ ಪ್ರೇಮದ ಸಾರ ಲಲಿತೆ, ಶೃಂಗಾರರಸ ಸಂಪೂರ್ಣ
ಸಗುಣ ಶೃಂಗಾರರಸ ಮುಸುಕಲಿಟ್ಟ ನಿರ್ಗುಣ, ಪರಬ್ರಹ್ಮ ಸಂಕೀರ್ಣ!

ಶಿವನೊಡನೆ ಶೃಂಗಾರ ದುಷ್ಟ ನಾಶಕೆ ವೀರ ಅಜ್ಞಾನಿಗೆ ಭೀಭತ್ಸ ಪಾತ್ರ
ನಾಗಭೂಷಣಕೆ ಭಯಾನಕತೆ ಜಟೆ ಗಂಗೆಗೆ ರೌದ್ರತೆ ಅದ್ಭುತ ತ್ರಿನೇತ್ರ
ಶಿವಸಲ್ಲಾಪದೆ ಹಾಸ್ಯ ನಿಜ ಭಕ್ತರಿಗೆ ಕರುಣ ಪ್ರಳಯತಾಂಡವ ಶಾಂತ
ಎದೆ ತುಂಬಿದನುಭೂತಿ ರಸ ಲಾಸ್ಯ ಭಕ್ತ ಸಾನಿಧ್ಯದೆ ತೋರೊ ಲಲಿತ!

೩೭೭. ಜಯಾ 
ಆತ್ಮ ಸಾಕ್ಷಾತ್ಕಾರದ ಹಾದಿ, ಕಾಡುವ ಇಂದ್ರೀಯಗಳ ವ್ಯಾಧಿ
ಮಲಿನವಾಗಿಸುತ ಮನಸ, ವಿಕಲ್ಪಗೊಳಿಸೊ ಶತ್ರು ಒಳಗುದಿ
ಮೆಟ್ಟಲವುಗಳ ನಿಯಂತ್ರಿತ ಮನಸು, ಶಾಂತಚಿತ್ತ ದಿಗ್ವಿಜಯ
ವಿಜಯದ ಮೂರ್ತರೂಪಿಣಿ ಜಯಾ, ಲಲಿತೆ ನೀಡೇ ಅಭಯ!

೩೭೮. ಜಾಲಂಧ್ರ-ಸ್ಮಿತಾ 
ಶಬ್ದ ಹೊಮ್ಮುವ ವೇದ, ಹಂತ ಹಂತದಲಿ ಪ್ರಕಟಿತ ನಾದ
ಪೂರ್ಣಗಿರಿ ಕಾರ್ಯಬಿಂದು, ಅನಾಹತ ಚಕ್ರದಲಿಟ್ಟ ಪಾದ
ಜಾಲಂಧರ ಪೀಠದಿಂ ಮಧ್ಯಮಾ, ಜಾಲಂಧ್ರ ಸ್ಮಿತಾ ಲಲಿತೆ
ಶಬ್ದಬ್ರಹ್ಮ ರೂಪದಿ ಪರಿಷ್ಕರಿಸುತ, ವೈಖರಿಗಾಗುವ ಸಿದ್ದತೆ!

೩೭೯. ಓಡ್ಯಾಣ-ಪೀಠ-ನಿಲಯಾ
ದೇವಿ ಸ್ಥೂಲ ಶರೀರ ಚತುರ್ಥ ಪೀಠ, ಓಡ್ಯಾಣದಿ ಲಲಿತಾ ನಿವಸಿತೆ
ಜಾಲಂಧ್ರಪೀಠಾ ಮಧ್ಯಮಾ, ಹೃದಯದಿಂ ವಿಶುದ್ಧಿ ಚಕ್ರ ತಲುಪುತೆ
ಕಂಠ ಚಕ್ರಾಂತಿಮ ಪರಿಷ್ಕರಣೆ, ರೂಪಿತ ಶಬ್ದ ವೈಖರೀ ತಾನುದಯ
ಜ್ಞಾನಕೆ ಶಬ್ದವೆ ಮೂಲ, ಶಬ್ದ ಬ್ರಹ್ಮ ದೇವಿ ಓಡ್ಯಾಣ ಪೀಠ ನಿಲಯಾ!

೩೮೦. ಬಿಂದುಮಂಡಲ-ವಾಸಿನಿ 
ಶಬ್ದವೇರಿದಂತೆ ತಾರಕ, ಉನ್ನತೋನ್ನತ ಬಿಂದು ಶ್ರೀ ಚಕ್ರದ ಪುಳಕ
ನಡುಚುಕ್ಕೆಯಾ ಶಿವಶಕ್ತಿ, ಕಾಮೇಶ್ವರ ಕಾಮೇಶ್ವರೀ ರೂಪದ ಬೆಳಕ
ಬಿಂದು ಮಂಡಲ ವಾಸಿನಿ ಲಲಿತೆ, ಬ್ರಹ್ಮರಂಧ್ರ ಸಂಸರ್ಗಕೆ ಪ್ರತೀಕ
ಬ್ರಹ್ಮಾಂಡಶಕ್ತಿ ಸ್ಥೂಲಶರೀರಕೆ,ಕಿರೀಟಚಕ್ರ ಮುಖೇನ ಒಳಗೆಳೆಸುತ!
 

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
 

ನಾಗೇಶರೆ,
ಈ ಕಂತೂ ಸಹ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕೆಲವೊಂದು ಸಣ್ಣಪುಟ್ಟ ಬೆರಳಚ್ಚು ದೋಷಗಳನ್ನು ಸರಿಪಡಿಸಿ ಅಂತಿಮಗೊಳಿಸಬಹುದು.
೩೭೭. ಜಯಾ
ಆತ್ಮ ಸಾಕ್ಷಾತ್ಕಾರದ ಹಾದಿ, ಕಾಡುವ ಇಂದ್ರೀಯಗಳ ವ್ಯಾಧಿ
ಇಂದ್ರೀಯಗಳ=ಇಂದ್ರಿಯಗಳ
೩೭೮. ಜಾಲಂಧ್ರ-ಸ್ಮಿತಾ
:
:
ಜಾಲಂಧರ ಪೀಠದಿಂ ಮಧ್ಯಮಾ, ಜಾಲಂಧ್ರ ಸ್ಮಿತಾ ಲಲಿತೆ
ಜಾಲಂಧ್ರ ಸ್ಮಿತಾ ಲಲಿತೆ=ಜಾಲಂದರ ಸ್ಥಿತಾ ಲಲಿತೆ

೩೭೯. ಓಡ್ಯಾಣ-ಪೀಠ-ನಿಲಯಾ
:
:
ಕಂಠ ಚಕ್ರಾಂತಿಮ ಪರಿಷ್ಕರಣೆ, ರೂಪಿತ ಶಬ್ದ ವೈಖರೀ ತಾನುದಯ
ಕಂಠ ಚಕ್ರಾಂತಿಮ ಪರಿಷ್ಕರಣೆ=ಕಂಠ ಚಕ್ರದಂತಿಮ ಪರಿಷ್ಕರಣೆ
:
೩೮೦. ಬಿಂದುಮಂಡಲ-ವಾಸಿನಿ = ಈ ಕಂತಿನ ಹೈಲೈಟ್.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಮ್ಮ ಸಲಹೆಗಳನ್ನು ಸಮೀಕರಿಸಿ, ಈ ಆವೃತ್ತಿಯನ್ನು ಅಂತಿಮಗೊಳಿಸುತ್ತಿದ್ದೇನೆ.

೩೭೭. ಜಯಾ
ಆತ್ಮ ಸಾಕ್ಷಾತ್ಕಾರದ ಹಾದಿ, ಕಾಡುವ ಇಂದ್ರಿಯಗಳ ವ್ಯಾಧಿ
ಮಲಿನವಾಗಿಸುತ ಮನಸ, ವಿಕಲ್ಪಗೊಳಿಸೊ ಶತ್ರು ಒಳಗುದಿ
ಮೆಟ್ಟಲವುಗಳ ನಿಯಂತ್ರಿತ ಮನಸು, ಶಾಂತಚಿತ್ತ ದಿಗ್ವಿಜಯ
ವಿಜಯದ ಮೂರ್ತರೂಪಿಣಿ ಜಯಾ, ಲಲಿತೆ ನೀಡೇ ಅಭಯ!

೩೭೮. ಜಾಲಂಧ್ರ-ಸ್ಥಿತಾ
ಶಬ್ದ ಹೊಮ್ಮುವ ವೇದ, ಹಂತ ಹಂತದಲಿ ಪ್ರಕಟಿತ ನಾದ
ಪೂರ್ಣಗಿರಿ ಕಾರ್ಯಬಿಂದು, ಅನಾಹತ ಚಕ್ರದಲಿಟ್ಟ ಪಾದ
ಜಾಲಂಧರ ಪೀಠದಿಂ ಮಧ್ಯಮಾ, ಜಾಲಂದರಸ್ಥಿತಾ ಲಲಿತೆ
ಶಬ್ದಬ್ರಹ್ಮ ರೂಪದಿ ಪರಿಷ್ಕರಿಸುತ, ವೈಖರಿಗಾಗುವ ಸಿದ್ದತೆ!

೩೭೯. ಓಡ್ಯಾಣ-ಪೀಠ-ನಿಲಯಾ
ದೇವಿ ಸ್ಥೂಲ ಶರೀರ ಚತುರ್ಥ ಪೀಠ, ಓಡ್ಯಾಣದಿ ಲಲಿತಾ ನಿವಸಿತೆ
ಜಾಲಂಧ್ರಪೀಠಾ ಮಧ್ಯಮಾ, ಹೃದಯದಿಂ ವಿಶುದ್ಧಿ ಚಕ್ರ ತಲುಪುತೆ
ಕಂಠ ಚಕ್ರದಂತಿಮ ಪರಿಷ್ಕರಣೆ, ರೂಪಿತ ಶಬ್ದ ವೈಖರೀ ತಾನುದಯ
ಜ್ಞಾನಕೆ ಶಬ್ದವೆ ಮೂಲ, ಶಬ್ದ ಬ್ರಹ್ಮ ದೇವಿ ಓಡ್ಯಾಣ ಪೀಠ ನಿಲಯಾ!
 
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು

Submitted by partha1059 Mon, 08/26/2013 - 11:09

ಬಂಡ್ರಿಯವರೆ ಹಾಗು ನಾಗೇಶರವರೆ
ಲಲಿತ ಸಹಸ್ರದಲ್ಲಿ ನವರಸಗಳ ವರ್ಣನೆ ಚೆನ್ನಾಗಿ ಬಂದಿದೆ ಅಭಿನಂದನೆ
ಹಾಗೆ ನಾಗೇಶರವರಿಗೆ,
ನವರಸಗಳನ್ನು ಆಧಾರವಾಗಿಟ್ಟು, ಒಂದೊಂದು ರಸದಲ್ಲಿ ಒಂದೊಂದು ಕವನವನ್ನು ದೇವಿಗೆ ರಚಿಸುವಿರ ?

ಧನ್ಯವಾದಗಳು ಪಾರ್ಥ ಸರ್; ನಾಗೇಶರಿಗೆ ಖಂಡಿತಾ ಆ ಪ್ರತಿಭೆ ಇದೆ ಅವರು ಅದನ್ನು ಮಾಡಿಯೇ ತೀರುತ್ತಾರೆ.

ಪಾರ್ಥ ಸರ್ ಧನ್ಯವಾದಗಳು, ಶ್ರೀಧರರೆ / ಪಾರ್ಥ ಸರ್ - ಖಂಡಿತ ಪ್ರಯತ್ನಿಸುತ್ತೇನೆ - ಹೇಗೆ ಬರುವುದೋ ನೋಡೋಣ!

ಪಾರ್ಥಾ ಸಾರ್, ರಸಗಳ ಮೂಲ ವಿವರ, ಶ್ರೀಧರರ ವಿವರಣೆ ಜತೆಗೆ ತುಸು ಕಲ್ಪನೆ ಸೇರಿಸಿ ಹೆಣೆದ ಆವೃತ್ತಿ - ಮೂಲ ಆಶಯದ ಚೌಕಟ್ಟಿನಲ್ಲಿಯೆ ಇದೆಯೆಂಬ ಅನಿಸಿಕೆಯೊಡನೆ ಹಾಕುತ್ತಿದ್ದೇನೆ. ಎಂದಿನಂತೆ (ಹೇಗೂ ಶ್ರೀಧರರು ಎಂದಿನಂತೆ ಪರಿಷ್ಕರಿಸುವಾಗ ನ್ಯೂನ್ಯತೆಗಳನ್ನು ಹಿಡಿದುಹಾಕುತ್ತಾರೆ!). ನಿರೀಕ್ಷಿತ ಮಟ್ಟದಲ್ಲಿರದಿದ್ದರೆ ಮತ್ತೊಂದು ಆವೃತ್ತಿಗೆ ಮುಂದೊಮ್ಮೆ ಮತ್ತೆ ಪ್ರಯತ್ನಿಸುವೆ.
 
ನವರಸ ಲಲಿತಾ
______________________________________

1. ಅದ್ಭುತ 
ಅತ್ಯಾಶ್ಚರ್ಯ ಸಾಕಾರವಾಗಿ ಲಲಿತ, ಪರಬ್ರಹ್ಮ ಕಲ್ಪನಾತೀತ
ಸಗುಣ ನಿರ್ಗುಣ ಸಂಕಲಿತ, ಏಕೀಭವಿತ ಅರ್ಧನಾರಿ ಅದ್ಭುತ
ಪುಷ್ಪವೊಂದರಲೆ ಗಂಡು ಹೆಣ್ಣಂತೆ ಸಹಜ, ಶಿವಶಕ್ತಿ ನಿಜ ರೂಪ
ಅತಿಶಯ ಪುರುಷ ಪ್ರಕೃತಿ ಸಂಗಮ, ಪ್ರತಿಬಿಂಬಿತ ಅಪರೂಪ! 

2. ಕರುಣ  
ಕುಂಡಲಿನೀ ಸಹಸ್ರಾರಕೇರಿಸುವ್ಹಾದಿ, ಸಾಧಕನಾಗಿ ನಿತ್ರಾಣ
ಹಠಯೋಗದಿ ಮುನ್ನಡೆದರು, ಕಾಠಿಣ್ಯವಾಗಿಸುತೆ ಗತಪ್ರಾಣ
ಮೊರೆಯಿಡೆ ಕರುಣಾಮರ ಲಲಿತೆ, ನಿರ್ಜೀವದಲು ಶಕ್ತಿ ರಸ 
ಮರುಕ ಕನಿಕರ ದಯೆ ಹರಸುತ್ತ, ಸ್ಪುರಿಸುವ ಕರುಣಾ ರಸ!

3. ಬೀಭತ್ಸ
ಜಗದೆಲ್ಲಕು ಮೂಲಾಧಾರ, ಬ್ರಹ್ಮಾಂಡ ನಡೆಸಿ ಲಲಿತೆ ಸ್ವರ
ಅನುರಣಿತ ಪ್ರತಿ ಕ್ಷಣಕು, ಸೃಷ್ಟಿ ಸ್ಥಿತಿ ಲಯಗಳ ಅವತಾರ
ಸತ್ಯವರಿಯದೆ ಅಜ್ಞಾನದ ಮುಸುಕಲಿ, ಬಂಧಿತಗೆ ಜುಗುಪ್ಸೆ
ದೇವಿಯ ಕಾಡುವ ಭೀಭತ್ಸ ಭಾವ, ಜ್ಞಾನಿಗಳಾಗಿಸೆ ಅಪೇಕ್ಷೆ!

4. ರೌದ್ರ
ಮರದ ನೆರಳಂತೆ ತಂಪು, ದೇವಿ ಸನ್ನಿಧಿ ಪ್ರಶಾಂತ ಸಾಗರ
ಉರಿ ಬಿಸಿಲಂತೆ ರೌದ್ರ, ಸಿಟ್ಟು ಸೆಡವು ರೋಷದ ಅವತಾರ
ಪ್ರಕೃತಿ ರೂಪಿಣಿ ಹೊರತಾಗದೆ ಹೆಣ್ಣಾಗಿ, ಪ್ರಕಟಿಸುತ ರುದ್ರ
ಜಟೆಯಲಿ ಗಂಗೆಗೆ ಹರಿ ಹಾಯ್ದ ರೋಷಕೆ, ಸಂವತ್ಸರ ರೌದ್ರ!

5. ವೀರ
ಜೀವಿ ಪ್ರಾಪಂಚಿಕತೆ ವ್ಯಾಮೋಹ, ಲೌಕಿಕ ವ್ಯಸನ ಭಂಡಾರ
ಎಡಬಿಡದೆ ಕಾಡಿಸಿ ಅರಿಷಡ್ವರ್ಗ, ದುಷ್ಟಮನದ ಭಂಡಾಸುರ
ದುಷ್ಟದಮನ ಪರಾಕ್ರಮ, ಸಗಣ ಸಮೇತ ಹೋರಾಟಾ ದಿನ
ತನ್ನೊಳಗ ಗೆಲ್ವ ಶೌರ್ಯ ಕಲಿತನ, ವೀರರಸವೆ ದೇವಿ ಧ್ಯಾನ!

6. ಶಾಂತ 
ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಅನುಗ್ರಹ ಆವರ್ತನ ಚಕ್ರ
ಮಹಾ ಪ್ರಳಯ ತಾಂಡವ ನೃತ್ಯಕೆ, ಸಾಕ್ಷೀ ಭೂತ ಶಕ್ತಿ ಮಾತ್ರ
ಅಗ್ನಿಪರ್ವತದೊಡಲಿಂದ ಜತನ, ಹಿರಣ್ಯಗರ್ಭ ಪಡೆಯಲವನ  
ಪಂಚೇಂದ್ರಿಯ ಜಿತ ಪ್ರಶಾಂತ ನರ್ತನ, ಶಾಂತವಾಗಿಸಿ ಶಿವನ! 

7. ಶೃಂಗಾರ
ಸೃಷ್ಟಿಯೆ ಈ ಜಗದಾ ವಿಸ್ಮಯ, ಅಲಂಕಾರ, ಭೂಷಣಪ್ರಾಯ
ಪ್ರಣಯಾನುರಾಗಗಳೆ, ಭಾವಜ ವಿಲಾಸದ ಶೃಂಗಾರಸಮಯ
ಭಾವಜಾಂತಕನೂ ಹೊರತಿಲ್ಲ, ವಿಲಾಸಾ ರಸಿಕತೆಗೆ ಸಕ್ರೀಯ
ಶಿವಶಕ್ತಿ ಪರಬ್ರಹ್ಮದೇಕೀಭವ ರೂಪ, ಜಗ ಸಾರುವ ಉಪಾಯ!

8. ಹಾಸ್ಯ

ಶೃಂಗಾರ ಲಾಸ್ಯದೆ ಸರಸ, ಜತೆ ಸೇರಿಸುತ ಹಾಸ್ಯ ಸಲ್ಲಾಪ
ತ್ರಿಕಾರ್ಯದೇಕತಾನತೆ ನಡುವೆ, ಚಿಮ್ಮಿಸಿದ ಹರ್ಷೋಲ್ಲಾಸ
ಗಹನ ಗಂಭೀರ ಜ್ಞಾನ, ಹಾಸ್ಯ ರಸದಿ ಕಠಿಣತೆಗೆ ಸೋಪಾನ
ಸುಲಿದ ಬಾಳೆಯಂತೆ ಸುಲಲಿತ, ಹಾಸ್ಯರಸ ಪರವಶಮನ!

9. ಭಯಾನಕ
ಬಾಹ್ಯ ರೂಪಾಂತರದಂತೆ ನಡೆನುಡಿ, ದೇವಿ ಲಲಿತೆಗೂ ಕಾಡಿ
ಹೆಣ್ಣಾಗಿ ಏಕಾಂತದಲಿ, ಸರ್ಪಭೂಷಣನೊಡಗೂಡಿದ ಗಾರುಡಿ
ನಿರ್ಭಿತಿಯಲ್ಹರಿದಾಡುವ, ಸರ್ಪಸಂತತಿಗೆ ಭಯಾನಕ ಮುದ್ರೆ
ಸಹಸ್ರಾರ ಮಿಲನಕೆಲ್ಲೆಡೆ ತೊಡಕೆ, ಸಾಧಕನಿಗೆಚ್ಚರಿಸಿರೆ ಭದ್ರೆ!

10. ಎದೆ ತುಂಬಿದ ರಸ ಭಾವ  
ರಸಾನುಭೂತಿ ಮಧುರ ಸಂಗಮ, ಸಮ್ಮಿಲನಾ ಜಗಕೆ ಉಗಮ
ಶಿವ ಶಕ್ತಿ, ಪುರುಷ ಪ್ರಕೃತಿ, ಭಕ್ತ ಸಾಧಕರೆಲ್ಲರ ಸಾತ್ವಿಕ ಪ್ರೇಮ
ಪರಮಾನಂದಾಮೃತ ಸ್ರವಿಸುತ ಸಹಜ, ರಸಮಯ ಸಾನಿಧ್ಯ
ಎದೆ ತುಂಬಿ ಹರಿವ ಭಾವ ಸಂಚರಣೆ, ವರ್ಣನಾತೀತ ಸಮೃದ್ಧ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು