೧೦೨. ಲಲಿತಾ ಸಹಸ್ರನಾಮ ೩೮೧ರಿಂದ ೩೮೨ನೇ ನಾಮಗಳ ವಿವರಣೆ

೧೦೨. ಲಲಿತಾ ಸಹಸ್ರನಾಮ ೩೮೧ರಿಂದ ೩೮೨ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೮೧-೩೮೨

Rahoyāga-kramāradhyā रहोयाग-क्रमारध्या (381)

೩೮೧. ರಹೋಯಾಗ-ಕ್ರಮಾರಾಧ್ಯಾ

           ಈ ನಾಮವು ದೇವಿಯನ್ನು ರಹಸ್ಯವಾಗಿ ಉಪಾಸನೆ ಮಾಡುವುದರ ಕುರಿತಾಗಿ ಚರ್ಚಿಸುತ್ತದೆ. ರಹಸ್ಯ ಪೂಜೆ ಎಂದರೆ ಆಕೆಯನ್ನು ಬಾಹ್ಯಾಚರಣೆಗಳಿಲ್ಲದೆ ಆಂತರಿಕವಾಗಿ ಪೂಜಿಸುವುದೆಂದರ್ಥ. ದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಅಂತರಂಗದಲ್ಲಿ ಆಕೆಯನ್ನು ಪೂಜಿಸುವುದು ಅತ್ಯಂತ ಶಕ್ತಿಯುತವಾದ ಉಪಕರಣವಾಗಿದೆ, ಏಕೆಂದರೆ ಇದರ ಮೂಲಕ ಅಂತರಂಗದಲ್ಲಿರುವ ಆಕೆಯ ಸೂಕ್ಷ್ಮ ರೂಪಗಳನ್ನಷ್ಟೇ ಆರಾಧಿಸಬಹುದು. ಆಕೆಯ ಸೂಕ್ಷ್ಮಾತೀಸೂಕ್ಷ್ಮ ರೂಪವು ಕುಂಡಲಿನೀ ರೂಪವಾಗಿದೆ. ಸಹಸ್ರಾರ ಅಥವಾ ಕಿರೀಟ ಚಕ್ರದಲ್ಲಿ, ಆಕೆಯು ಶಿವನೊಂದಿಗೆ ಸಮಾಗಮ ಹೊಂದುವುದರಿಂದ, ಶಿವ-ಶಕ್ತಿಯರ ಈ ಐಕ್ಯರೂಪವನ್ನು ಪೂಜಿಸುವುದು ರಹಸ್ಯ ಪೂಜೆ ಎನಿಸಿಕೊಳ್ಳುತ್ತದೆ. ಸಹಜವಾಗಿಯೇ ಈ ಅಂತರಂಗದ ಪೂಜೆಯಲ್ಲಿ ಬೇರೆಯವರು ಭಾಗವಹಿಸಲಾರರು.

           ಅಂತರಂಗದ ಪೂಜೆಯಲ್ಲಿ ಅದು ಆಕೆಯ ಸ್ಥೂಲ ರೂಪವಾಗಿರಲಿ, ಅಥವಾ ಆಕೆಯ ಅತಿಸೂಕ್ಷ್ಮರೂಪವಾದ ಕಾಮಕಲಾ ಆಗಿರಲಿ ಅಥವಾ ಆಕೆಯ ಪರಮಸೂಕ್ಷ್ಮರೂಪವಾದ ಕುಂಡಲಿನೀ ರೂಪವಾಗಿರಲಿ ಅದು ಅತ್ಯಂತ ಮಹತ್ವವನ್ನು ಪಡೆದುಕೊಳ್ಳುತ್ತದೆ. ಬಾಹ್ಯ ಪೂಜೆಯಲ್ಲಿ ಸಾಧಕ ಅಥವಾ ಅಭ್ಯಸಿಗನು ಅನೇಕ ಕ್ರಿಯೆಗಳಿಂದ ಆವರಿಸಲ್ಪಟ್ಟಿರುತ್ತಾನೆ. ಸಾಮಾನ್ಯವಾಗಿ ನಡೆಯುವ ಪೂಜಾಚರಣೆಗಳಲ್ಲಿ ಕೇಂದ್ರೀಕೃತ ವಸ್ತುವಿನ ಮೇಲಿನ ಏಕಾಗ್ರತೆಯು ವಿಚಲಿತಗೊಳ್ಳುತ್ತದೆ ಮತ್ತು ಚದುರುತ್ತದೆ. ಅಂತರಂಗದ ಪೂಜೆಯಲ್ಲಿ ಎಲ್ಲಾ ಲಕ್ಷ್ಯವು ದೇವಿಯ ಮೇಲೆ ಕೇಂದ್ರೀಕೃತವಾಗಿದ್ದು ಅದರಲ್ಲಿ ಯಾವುದೇ ವಿಧವಾದ ಮನಸ್ಸನ್ನು ವಿಚಲಿತಗೊಳಿಸುವ ಅಡಚಣೆಗಳಿರುವುದಿಲ್ಲ. ಅಂತರಂಗ ಪೂಜೆಯ ಪ್ರಾರಂಭಿಕ ಹಂತದಲ್ಲಿ ಅಡಚಣೆಗಳನ್ನು ನಿವಾರಿಸಲಾಗದಿದ್ದರೂ ಸಹ ಯಾವಾಗ ಸಾಧನೆಯು ತೀವ್ರವಾಗುತ್ತದೆಯೋ ಅದು ಆನಂದದ ಸ್ಥಿತಿಯೆಡೆಗೆ ಕರೆದೊಯ್ದು ಅದು ಸಾಧಕನಲ್ಲಿ ಒಂದು ವಿಧವಾದ ವ್ಯಸನವನ್ನು (ಚಟವನ್ನು) ಹುಟ್ಟುಹಾಕಿ ಆ ಆನಂದದ ಸ್ಥಿತಿಯಲ್ಲಿಯೇ ಮುಳುಗಿರಬೇಕೆಂದು ಸಾಧಕನು ಬಯಸುವಂತೆ ಮಾಡುತ್ತದೆ. ಈ ಆನಂದದ ಸ್ಥಿತಿಯನ್ನು ಮಾತುಗಳ ಮೂಲಕ ವಿವರಿಸಲಾಗದು ಆದರೆ ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಒಬ್ಬನು ಆಧ್ಯಾತ್ಮಿಕ ಹಾದಿಯಲ್ಲಿ ನಿಜವಾಗಿಯೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಎರಡನೆಯದಾಗಿ, ಆನಂದದ ಸ್ಥಿತಿಯು ಭಗವಂತನ ರೂಪಗಳ ಮೇಲೆ ವಿಭಿನ್ನವಾಗಿರುವುದಿಲ್ಲ. ಈ ಆನಂದವೆನ್ನುವುದು ಒಂದು ಅದ್ವಿತೀಯ ಸಂಗತಿಯಾಗಿದ್ದು ಅದು ಎಲ್ಲಾ ರೂಪಗಳ ಆಚರಣೆಗಳಿಗೆ ಅನ್ವಯಿಸುತ್ತದೆ.

            ಶ್ರೀ ವಿದ್ಯಾ ಉಪಾಸನೆಯಲ್ಲಿ ಎರಡು ವಿಧವಾದ ಪೂಜೆಗಳಿವೆ. ಮೊದಲನೆಯದನ್ನು ‘ಸಮಯಾಚಾರ’ ಪೂಜೆ ಎನ್ನುತ್ತಾರೆ ಇದು ಅಂತರಂಗದ ಪೂಜೆಯಾಗಿದೆ. ಮತ್ತೊಂದು ‘ಕುಲಾಚಾರ’ ಪೂಜೆ ಅಥವಾ ಬಾಹ್ಯಾಚರಣೆಯಾಗಿದೆ. ಸೌಂದರ್ಯ ಲಹರಿಯಲ್ಲಿ (ಸ್ತೋತ್ರ ೮) ಈ ಸಮಯಾಚಾರ ಅಥವಾ ಅಂತರಂಗ ಪೂಜೆಯ ಕುರಿತಾದ ಉಲ್ಲೇಖವಿದೆ. "ನೀನು ಶಿವ ತತ್ವವನ್ನು ಪೀಠವಾಗಿರಿಸಿಕೊಂಡು ಮತ್ತು ಸದಾಶಿವ ತತ್ವವನ್ನು ನಿನ್ನ ಆಸನದ ಮೆತ್ತೆಯಾಗಿರಿಸಿಕೊಂಡು ಅಮೃತ ಸಾಗರದ (ಸಹಸ್ರಾರದ) ಮಧ್ಯದಲ್ಲಿ ಆಸೀನಳಾಗಿದ್ದೀಯ ಮತ್ತು ಪರಮಾನಂದವನ್ನು ಕೊಡಮಾಡುತ್ತಿದ್ದೀಯ. ಕೇವಲ ಭಾಗ್ಯಶಾಲಿಗಳಷ್ಟೇ ನಿನ್ನ ಈ ರೂಪದ ಮೇಲೆ ಧ್ಯಾನ ಮಾಡುತ್ತಾರೆ" ಎಂದು ಆ ಸ್ತೋತ್ರವು ಹೇಳುತ್ತದೆ.

            ಇಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು ಅದೇನೆಂದರೆ ಶಿವನ ಹೆಂಡತಿಯು ಅದು ಹೇಗೆ ಶಿವನನ್ನು ಆಧಾರವಾಗಿ ಹೊಂದಿರುವ ಆಸನದ ಮೇಲೆ ಸದಾಶಿವನನ್ನು (ಶಿವನ ಉನ್ನತ ರೂಪವನ್ನು) ಅದರ ಮೆತ್ತೆಯಾಗಿಸಿಕೊಂಡು ಕುಳಿತುಕೊಳ್ಳಬಲ್ಲಳು? ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಎರಡು ವಸ್ತುಗಳು ಏಕಕಾಲದಲ್ಲಿ ಒಂದೇ ಸ್ಥಳವನ್ನು ಆಕ್ರಮಿಸಿಕೊಳ್ಳಲಾರವು. ಆದ್ದರಿಂದ ಇದರ ಮೂಲಕ ವ್ಯಾಖ್ಯಾನಿಸಬಹುದಾದ್ದೇನೆಂದರೆ ಶಿವ ಮತ್ತು ಶಕ್ತಿಯರು ಯಾವುದೇ ವಿಧದಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಭಿನ್ನರಲ್ಲವೆನ್ನುವುದು. ಆದ್ದರಿಂದ ಶಿವ-ಶಕ್ತಿಯರ ಐಕ್ಯತೆಯು ಮಹತ್ವವನ್ನು ಪಡೆಯುತ್ತದೆ. ಧರ್ಮ ಗ್ರಂಥಗಳು ಸಹ, ಯಾರು ಯಾವಾಗಲೂ ನಿರಂತರ ದೇವಿಯ ಚಿಂತನೆಯಲ್ಲಿ ಇರುತ್ತಾರೆಯೋ ಅವರು ಮಾತ್ರವೇ ಪರಮಾನಂದದ ಸ್ಥಿತಿಯನ್ನು ಹೊಂದಬಲ್ಲರೇ ಹೊರತು ಯಾರು ಕೇವಲ ಪ್ರಾಪಂಚಿಕ ಜೀವನಕ್ಕೆ ಅಂಟಿಕೊಂಡಿರುತ್ತಾರೆಯೋ ಅವರಲ್ಲ, ಎಂದು ಸಾರುತ್ತವೆ.

Rahastarpaṇa-tarpitā रहस्तर्पण-तर्पिता (382)

೩೮೨. ರಹಸ್ತರ್ಪಣ-ತರ್ಪಿತಾ

           ಆಧ್ಯಾತ್ಮಿಕ ಸಾಧನಾ ಮಾರ್ಗದ ಆರಂಭಿಕ ಹಂತದಲ್ಲಿ ಮನಸ್ಸನ್ನು ಬಾಹ್ಯ ಆಲೋಚನೆಗಳಿಂದ ವಿಚಲಿತಗೊಳ್ಳದಂತೆ ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕಾಗಿ ಮಂತ್ರೋಚ್ಛಾರಣೆ ಮತ್ತು ಅದರ ಪುನರುಚ್ಛಾರಣೆಯ (ಜಪದ) ಅಭ್ಯಾಸವನ್ನು ಮಾಡುತ್ತಾರೆ. ಆ ಮಂತ್ರಗಳನ್ನು ಅದರ ಅರ್ಥಗಳನ್ನು ತಿಳಿದುಕೊಂಡ ನಂತರವಷ್ಟೇ ಉಚ್ಛರಿಸಬೇಕು. ಪಂಚದಶೀ ಮಂತ್ರದಲ್ಲಿ, ಹದಿನೈದು ಬೀಜಾಕ್ಷರಗಳಿದ್ದು ಅದರಲ್ಲಿರುವ ಪ್ರತೀ ಬೀಜಾಕ್ಷರಕ್ಕೂ ಪ್ರತ್ಯೇಕ ಅರ್ಥ ಮತ್ತು ಮಹತ್ವಗಳಿವೆ. ಇದನ್ನು ಪರಿಚಯದ ಆಧ್ಯಾಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮಂತ್ರವನ್ನು ಉಚ್ಛರಿಸುವಾಗ ಎರಡು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದೆಂದರೆ ದೇವರನ್ನು ವರ್ಣಿಸುವ ಧ್ಯಾನ ಶ್ಲೋಕ. ಇದು ಆ ದೇವತೆಯನ್ನು ಕಲ್ಪಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಎರಡನೆಯದು ಆ ಮಂತ್ರವೇ ಆಗಿದೆ ಅದು ಆ ಕಲ್ಪಿತ ದೇವತಾ ಸ್ವರೂಪದೊಳಗೆ ಜೀವವನ್ನು ತುಂಬುತ್ತದೆ. ಇದು ಆರಂಭಿಕ ಹಂತಗಳಿಗೆ ಮಾತ್ರವೇ ಅನ್ವಯವಾಗುತ್ತದೆ ಆದರೆ ಒಬ್ಬನ ಸಾಧನೆಯು ಬಲಗೊಳ್ಳುತ್ತಾ ಮುಂದಿನ ಹಂತಗಳನ್ನು ತಲುಪುವಾಗ ಹೆಚ್ಚಿನ ಮಾರ್ಗದರ್ಶನವನ್ನು ಆ ದೇವತೆಯೇ ಕೊಡುತ್ತಾ ಹೋಗುತ್ತದೆ; ಅದರೊಂದಿಗೆ ತಾದಾತ್ಮ್ಯವನ್ನು ಹೊಂದುವುದರ ಮೂಲಕ. ಈ ನಾಮವು ಆ ವಿಧವಾದ ಮಂತ್ರಗಳನ್ನು ಕೇವಲ ಮಾನಸಿಕವಾಗಿಯೇ ಉಚ್ಛರಿಸಬೇಕೆಂದು ಹೇಳುತ್ತದೆ.

           ಈ ನಾಮಕ್ಕೆ ಇನ್ನೊಂದು ವಿಧವಾದ ವಿಶ್ಲೇಷಣೆಯೂ ಇದೆ. ಈ ನಾಮವನ್ನು ಆಂತರಿಕ ಅಗ್ನಿಗೆ (ಮೂಲಾಧಾರ ಚಕ್ರದಲ್ಲಿ ಉತ್ಪನ್ನವಾಗಿ ನಿರಂತರವಾಗಿರುವ ಮತ್ತು ದೇಹವನ್ನು ಜೀವಂತವಾಗಿರಿಸುವ ಅಗ್ನಿ) ಅರ್ಪಿಸುವ ರಹಸ್ಯವಾದ ಆಹುತಿಗಳು ಎಂದೂ ಅರ್ಥೈಸಬಹುದು. ಈ ಆಹುತಿಗಳು ಒಳ್ಳೆಯ ಅಥವಾ ಕೆಟ್ಟ ಕರ್ಮಗಳಿಗೆ ಕಾರಣವಾದ ೩೬ ತತ್ವಗಳನ್ನು ಒಳಗೊಂಡಿವೆ. ಶ್ರೀ ವಿದ್ಯೆಯ ನವಾವರಣ ಪೂಜೆಯಲ್ಲಿ ಒಂದು ಪ್ರತ್ಯೇಕವಾದ ಆಚರಣೆಯಿದ್ದು ಅದನ್ನು ’ಆಂತರಿಕ ಆಹುತಿ’ ಅಥವಾ ‘ತತ್ವಶೋಧನ’ ಎನ್ನುತ್ತಾರೆ ಅದರಲ್ಲಿ ಎಲ್ಲಾ ವಿಧವಾದ ದ್ವಂದ್ವತೆಗಳನ್ನು ಆಂತರಿಕ ಅಗ್ನಿಯಲ್ಲಿ ಬಲಿಕೊಡಲಾಗುತ್ತದೆ (ಆಹುತಿಯಾಗಿ ಅರ್ಪಿಸಲಾಗುತ್ತದೆ).

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 381-382 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
No votes yet

Comments

Submitted by nageshamysore Mon, 08/26/2013 - 20:45

ಶ್ರೀಧರರೆ, ೧೦೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ತಮ್ಮ ಪರಿಷ್ಕರಣೆಗೆ.

ಲಲಿತಾ ಸಹಸ್ರನಾಮ ೩೮೧-೩೮೨
______________________________________

೩೮೧. ರಹೋಯಾಗ-ಕ್ರಮಾರಾಧ್ಯಾ
ಅಂತರಂಗ ರಹಸ್ಯೋಪಾಸನೆ ಕ್ರಮ, ಲಲಿತಾ ಸಾಕ್ಷಾತ್ಕಾರದ ಹೆಜ್ಜೆ
ಸೂಕ್ಷ್ಮ ರೂಪಗಳಾರಾಧನೆ, ಶಿವ ಶಕ್ತಿ ಮಿಲನದೈಕ್ಯರೂಪದಲಿ ಪೂಜೆ
ಸ್ಥೂಲ ಸೂಕ್ಷ್ಮಾತಿಸೂಷ್ಮ ಪರಮವೆಲ್ಲ ಮಹತ್ವ, ಏಕಾಗ್ರತೆಯೆಡೆ ಲಕ್ಷ್ಯ
ಸಾಧಕನಡ್ಡಿ ನಿವಾರಿಸುತ, ವ್ಯಸನಾನಂದ ಸ್ವಂತ, ಲೌಕಿಕಕೆ ನಿರ್ಲಕ್ಷ್ಯ!

ಅದ್ವಿತೀಯ ಆನಂದಮಯ, ಸರ್ವ ರೂಪಾಚರಣೆಗೆ ಅನ್ವಯ
ಮಾತಿಗೆ ನಿಲುಕದ ಆಧ್ಯಾತ್ಮಿಕ ಸ್ಥಿತಿ, ಪ್ರಾಮಾಣಿಕ ದಿಗ್ವಿಜಯ
ಶ್ರೀವಿದ್ಯಾ ಉಪಾಸನೆಯ 'ಕುಲಾಚಾರ' ಪೂಜೆ ಬಾಹ್ಯಾಚರಣೆ
ಅಂತರಂಗಿಕ 'ಸಮಯಾಚಾರ' ಪರಮಾನಂದಕೇರಿಸಿ ಮನ್ನಣೆ!

ಶಿವ ತತ್ವವೆ ಪೀಠ, ಸದಾಶಿವ ತತ್ವಾಸನದ ಮೆತ್ತೆ ಸಹಸ್ರಾರ ವೈಭವ
ಶಿವಶಕ್ತಿ ಮಿಲನ ರೂಪಾರಾಧಕರಿಗಿತ್ತು, ಪರಮಾನಂದಾಮೃತ ಸ್ರಾವ
ಪ್ರಕೃತಿ ಪುರುಷ ಸಂಗಮ, ಶಿವ ಶಕ್ತಿಯೈಕ್ಯತೆಯಾಗಲ್ಹೇಗೆ ಭಿನ್ನ ದ್ವೈತ
ಐಹಿಕದಿಂದಾಧ್ಯಾತ್ಮಿಕದತ್ತ, ದೇವಿ ಚಿಂತಕಗೆ ಪರಮಾನಂದ ಹಸ್ತಗತ!

ನನ್ನ ಕಲ್ಪನೆಯಲೊಂದು ಊಹೆ:
ಜಗ ಮೂಲಾಧಾರ ಪರಬ್ರಹ್ಮ, ನಿನ್ನೊಡನಿಹ ಬ್ರಹ್ಮಾಂಡಕೆ ಬುನಾದಿ
ಜಡ ಚೇತನದ ಭದ್ರ ಅಡಿಪಾಯ, ಮಿಸುಕಾಡದ ಪೀಠವಾಗಿ ನಿನ್ನಡಿ
ಚಲನ ಚೇತನ ಶಕ್ತಿ ಸುಗಮಕೆ, ಮೆತ್ತೆಯಾಗಿ ಸದಾಶಿವ ತತ್ವ ಹರಡಿ
ಮಿಲನೈಕ್ಯಭಾವ ಸಹಸ್ರಾರದಿ, ಪರಮಾನಂದಕೆ ನಿಜಸಾಧಕ ಜರಡಿ!

೩೮೨. ರಹಸ್ತರ್ಪಣ-ತರ್ಪಿತಾ 
ಸಾಧನೆ ಮಾರ್ಗದಾರಂಭಿಕ ಹಂತ, ಮನ ಬಾಹ್ಯಾಲೋಚನೆ ವಿಚಲಿತ
ನಿಯಂತ್ರಣಕೆ ಮಂತ್ರೋಚ್ಛಾರ ಜಪ, ಬೀಜಾಕ್ಷರಾರ್ಥ ಮಹತ್ವವನರಿತ
ವರ್ಣನೆ ಧ್ಯಾನ ಶ್ಲೋಕ ದೈವಾಕಾರ ಕಲ್ಪಿಸುತ, ಮಂತ್ರದೆ ಜೀವ ತುಂಬುತ
ಮಾನಸಿಕದುಚ್ಛರಿಸೊ ತಾದಾತ್ಮ್ಯಕ್ರಮವೆ, ರಹಸ್ತರ್ಪಣತರ್ಪಿತಾ ಲಲಿತಾ!

ಮೂಲಾಧಾರ ಚಕ್ರೋತ್ಪನ್ನ ರಹಸ್ಯಾಹುತಿ ತನಿ
ನಿರಂತರ ಜೀವಂತವಿಡುವ ಆಂತರಿಕ ದೇಹಾಗ್ನಿ
ಕರ್ಮಕಾರಣ ತತ್ವ ಆಂತರಿಕ-ಆಹುತಿಯಾಗಿತ್ತು
ದ್ವಂದ್ವತೆ ಬಲಿಯಾಗುತ ನವಾವರಣದ ಸಮಿತ್ತು!

ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು

ನಾಗೇಶರೆ,
ಈ ಕಂತಿನ ಪದ್ಯಗಳು ಬಹಳ ಸೊಗಸಾಗಿ ಮೂಡಿ ಬಂದಿವೆ. ಒಂದೆರಡು ಕಡೆ ಮಾತ್ರ ಅಲ್ಪ ಬದಲಾವಣೆ ಮಾಡಬೇಕಷ್ಟೆ.
೩೮೧. ರಹೋಯಾಗ-ಕ್ರಮಾರಾಧ್ಯಾ
೧)....ಸರಿಯಾಗಿದೆ

೨) ಅದ್ವಿತೀಯ ಆನಂದಮಯ, ಸರ್ವ ರೂಪಾಚರಣೆಗೆ ಅನ್ವಯ
ಸರ್ವ ರೂಪಾಚರಣೆಗೆ=ಸರ್ವ ರೂಪಾರ್ಚನೆಗೆ
:
;
೩) ..ಸರಿಯಾಗಿದೆ.

ನನ್ನ ಕಲ್ಪನೆಯಲೊಂದು ಊಹೆ: ಈ ಪದ್ಯವು ಬಹಳ ಸೊಗಸಾಗಿ ಮೂಡಿ ಬಂದಿದೆ. ಬಲ್ಲವನೇ ಬಲ್ಲ ಬೆಲ್ಲದಾ ಸವಿಯಂಬಂತೆ ಅದರ ಸಾರವನ್ನು ತಿಳಿಯಬೇಕೆಂದರೆ ತುಸು ಕಷ್ಟಪಡಲೇ ಬೇಕು.

೩೮೨. ರಹಸ್ತರ್ಪಣ-ತರ್ಪಿತಾ

ಮೂಲಾಧಾರ ಚಕ್ರೋತ್ಪನ್ನ ರಹಸ್ಯಾಹುತಿ ತನಿ
ನಿರಂತರ ಜೀವಂತವಿಡುವ ಆಂತರಿಕ ದೇಹಾಗ್ನಿ
ಕರ್ಮಕಾರಣ ತತ್ವ ಆಂತರಿಕ-ಆಹುತಿಯಾಗಿತ್ತು
ದ್ವಂದ್ವತೆ ಬಲಿಯಾಗುತ ನವಾವರಣದ ಸಮಿತ್ತು!
ಬಲಿಯಾಗುತ=ಬಲಿಯಾಗುವ ಅಂದರೆ ಸರಿಹೋಗಬಹುದೇನೋ ನೋಡಿ. ಒಟ್ಟಾರೆಯಾಗಿ ಕವನದ ಆಶಯ ಚೆನ್ನಾಗಿದೆ. ಈ ಪದವನ್ನು ಸ್ವಲ್ಪ ಮಾರ್ಪಡಿಸುವುದರಿಂದ ನಿಮ್ಮ ಆಶಯಕ್ಕೆ ಭಂಗ ಬರುವುದಿಲ್ಲವೆಂದುಕೊಳ್ಳುತ್ತೇನೆ. ಕಡೆಯ ಎರಡು ಸಾಲುಗಳನ್ನು ಒಟ್ಟಾಗಿ ಓದಿದಾಗ ಸ್ವಲ್ಪ ಗೊಂದಲ ಮೂಡಿತು ಹಾಗಾಗಿ ಸ್ವಲ್ಪ ವಿವರಿಸುವಿರೆಂದು ಆಶಿಸುತ್ತೇನೆ.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, 'ಸರ್ವ ರೂಪಾರ್ಚನೆ' ಸರಿಪಡಿಸಿದ ರೂಪ:

ಅದ್ವಿತೀಯ ಆನಂದಮಯ, ಸರ್ವ ರೂಪಾರ್ಚನೆಗೆ ಅನ್ವಯ
ಮಾತಿಗೆ ನಿಲುಕದ ಆಧ್ಯಾತ್ಮಿಕ ಸ್ಥಿತಿ, ಪ್ರಾಮಾಣಿಕ ದಿಗ್ವಿಜಯ
ಶ್ರೀವಿದ್ಯಾ ಉಪಾಸನೆಯ 'ಕುಲಾಚಾರ' ಪೂಜೆ ಬಾಹ್ಯಾಚರಣೆ
ಅಂತರಂಗಿಕ 'ಸಮಯಾಚಾರ' ಪರಮಾನಂದಕೇರಿಸಿ ಮನ್ನಣೆ!

ಮೂಲಾಧಾರ ಚಕ್ರೋತ್ಪನ್ನ ರಹಸ್ಯಾಹುತಿ ತನಿ
ನಿರಂತರ ಜೀವಂತವಿಡುವ ಆಂತರಿಕ ದೇಹಾಗ್ನಿ
ಕರ್ಮ ಕಾರಣ ತತ್ವ ರಹಸ್ಯಾಹುತಿ ಪಾಲಾಗಿತ್ತು
ದ್ವಂದ್ವತೆಯಬಲಿ 'ಆಂತರಿಕ ಆಹುತಿ'ಗೆ ಸಮಿತ್ತು!

ಮೂಲಾಧಾರ ಚಕ್ರದಲ್ಲುಗಮಿಸಿದ ಆಂತರಿಕ ಅಗ್ನಿಗೆ, ಕರ್ಮ ಕಾರಣ ತತ್ವಗಳನ್ನು ರಹಸ್ಯವಾಗಿ ಅಹುತಿಗಿಡುವುದು ಹಾಗೆಯೆ ನವಾವರಣ ಪೂಜೆಯಲ್ಲಿ ದ್ವಂದ್ವತೆಯನೆಲ್ಲ ಆಹುತಿಕೊಡುವುದು (ಆಂತರಿಕ ಆಹುತಿ) ಎನ್ನುವರ್ಥ ಬಿಂಬಿಸಲು ಯತ್ನಿಸಿದ್ದೆ. ಈಗ ತುಸು ಬದಲಿಸಿ, ಆ ಗೊಂದಲ ಕಡಿಮೆಯಾಗಿಸಲು ಯತ್ನಿಸಿದ್ದೇನೆ. ಸರಿ ಕಾಣುವುದೆ ನೊಡಿ.

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು