ನಮ್ಮ ನಡುವೆ ಹೀಗೇಕೆ??
ಹಾಗೆ ನೋಡೋಕ್ಕೆ ಹೋದರೆ ಇದು ಸಣ್ಣ ವಿಷಯ, ರಿರ್ಸರ್ವೇಷನ್ ಇಲ್ಲದೆ ರೈಲಿನಲ್ಲಿ ನುಗ್ಗಿ, ಸ್ಠಳ ಸಿಕ್ಕ ಕಡೆ ಕೂತುಕೊಳ್ಳೋದು ನಮ್ಮ ದೇಶದಲ್ಲಿ ಅತಿ ಸಾಮಾನ್ಯ, ಅಂಥ ಸಮಯದಲ್ಲಿ ಮಾತಿನ ಜಟಾಪಟಿ ಕೂಡ ಸರ್ವೇ ಸಾಮಾನ್ಯ. ಆದ್ರೆ ಅವತ್ತು ನಡೆದಿದ್ದು ಮಾತ್ರ ನಿಜಕ್ಕೂ ಕಡ್ಡೀನ ಗುಡ್ಡ ಮಾಡಿದಂಥದ್ದೇ!!
ಆವತ್ತು ಮುಂಬೈಯಿಂದ ಹಿಂದಿರುಗುತ್ತಿದ್ದಾಗ ಎಣಿಸಿದ್ದಂತೆಯೇ ಗುಲ್ಬರ್ಗ ಹತ್ತಿರದ ವಾಡಿಯಲ್ಲಿ ಜನರ ದಂಡು ನಮ್ಮ ಬೋಗಿಯಲ್ಲೂ ಹತ್ತಿತು. ಮಕ್ಕಳು ಮರಿಗಳೊಂದಿಗೆ ಭರ್ತಿಯಾಗಿದ್ದ ನಮ್ಮ ಕಡೆ ಕುಳಿತುಕೊಳ್ಳುವ ಯೋಚನೆ ಯಾರಿಗೂ ಬರಲಿಲ್ಲ ಅನ್ನಿಸತ್ತೆ, ಪಕ್ಕದ ಕೋಚ್ ನಲ್ಲಿ ಮದುವೆಯ ದಿಬ್ಬಣ ಅಲ್ಲಿ ಜನರೂ ಓಡಾಡುತ್ತಾ ಇದ್ದಿದ್ದರಿಂದ ಸಾಕಷ್ಟು ಸ್ಥಳವೂ ಖಾಲಿಯಾಗಿ ಕಣ್ಣಿಗೆ ಢಾಳಾಗಿ ಕಾಣುತ್ತಿತ್ತು.
ಹಾಗೇ ಟಿಕೆಟ್ ಅಥವಾ ರಿಸರ್ವೇಶನ್ ಇಲ್ಲದೇ ಬಂದಿದ್ದ ಕೆಲವರಲ್ಲಿ ಸುಮಾರು ೧೯-೨೦ ವಯಸ್ಸಿನ ಹುಡುಗನೊಬ್ಬ ನೇರವಾಗಿ ಹೋಗಿ ಸ್ಥಳ ಖಾಲಿಯಿದ್ದ ಕುಳಿತ. ಅಕ್ಕ ಪಕ್ಕದಲ್ಲಿದ್ದವರೆಲ್ಲಾ ಇಲ್ಲಿ ಬರುವವರಿದ್ದಾರೆ, ದಯವಿಟ್ಟು ಕುಳಿತುಕೊಳ್ಳಬೇಡಿ ಎಂದರೂ ಕಿವಿಗೆ ಬೀಳದವನಂತೆ! ಸಣ್ಣದಾಗಿ ಶುರುವಾದ ಮಾತಿನ ಕಲಹ ಇದ್ದಕ್ಕಿದಂತೇ ದೊಡ್ಡದಾಯಿತು. ಮಾತು ಅತಿಯಾದಾಗ, ಬಂದಿದ್ದ ಹುಡುಗ ಸೀಟಿನ ಮೇಲೆ ಉಗಿದೇ ಬಿಟ್ಟ !! ಕೋಪ ತಾಳಲಾರದೇ ಮದುವೆ ದಿಬ್ಬಣದಲ್ಲಿದ್ದ ಹಿರಿಯನೊಬ್ಬ ಒಂದು ಪೆಟ್ಟು ಕೊಟ್ಟ, ಈ ಹುಡುಗ ಮರುಮಾತಾಡದೇ ಅಲ್ಲಿಂದ ಹೊರಟ. ಸಧ್ಯ ಇಷ್ಟಕ್ಕೇ ಮುಗಿಯಿತು ಅಂತ ಯಾಕೋ ಅನ್ನಿಸಲಿಲ್ಲ, ಅಷ್ಟೊಂದು ಮಾತನಾಡಿದ ಹುಡುಗ ಏಟು ತಿಂದಾಕ್ಷಣ ಹೊರಟಿದ್ದು ಸ್ವಲ್ಪ ಅನುಮಾನಾಸ್ಪದವಾಗಿತ್ತು.
ನಾವು ಎಣಿಸಿದ್ದಂತೆಯೇ ಆ ಹುಡುಗ ಕೊಂಚ ಆ ಕೋಚ್ ನಿಂದ ದೂರ ಬಂದು (ಅಂದರೆ ನಮ್ಮ ಕೋಚ್ ಬಳಿ ನಿಂತು) ’ತನ್ನ ಜನರಿಗೆ’ (!!) ಫೋನ್ ಮಾಡಲಾರಂಭಿಸಿದ. – ಭಾಯಿಜಾನ್ ಮೇಂ ಕರೀಂ, ಮೇಂ ಉದ್ಯಾನ್ ಎಕ್ಸ್ ಪ್ರೆಸ್ಸ್ ಕೆ ಎಸ್ 5 ಮೆಂ ಹೂಂ. ಇಧರ್ ಕಿಸೀನೆ ಮೆರೆ ಪರ್ ಹಾಥ್ ಉಠಾಯ, ಅಗಲೆ ಸ್ಟೇಷನ್ ಮೆಂ ಅಪನೆ ಆದಮಿಯೋಂ ಕೋ ಲೇಕರ್ ಆವ್- ( ಅಣ್ಣ ನಾನು ಕರೀಂ, ನಾನು ಉದ್ಯಾನ್ ಎಕ್ಸ್ ಪ್ರೆಸ್ಸ್ ನ ಎಸ್ ೫ ರಲ್ಲಿದ್ದೇನೆ, ಇಲ್ಲಿ ಯಾರೋ ನನ್ನ ಮೇಲೆ ಕೈ ಮಾಡಿದ್ದಾರೆ, ನಮ್ಮ ಜನರ ಕರೆದುಕೊಂಡು ಮುಂದಿನ ಸ್ಟೇಷನ್ ಗೆ ಬನ್ನಿ) ಅಂತ ಹೇಳಿದ್ದು ಕೇಳಿ ನಮಗೆಲ್ಲಾ ಭಯಮಿಶ್ರಿತ ಅಚ್ಚರಿ!!
ಇಷ್ಟು ಎಳೆ ಪ್ರಾಯದ ಹುಡುಗ, ತನ್ನ ತಪ್ಪನ್ನ ಅರಿತುಕೊಳ್ಳದೇ , ತನಗೆ ಬಿದ್ದ ಹೊಡೆತದ ಅವಮಾನ ತೀರಿಸಿಕೊಳ್ಳೋಕ್ಕೆ ಹೀಗೇಕೆ ಮುಂದಾದ ? ಮಾತಿನ ಜಗಳ/ ಹೊಡೆತ ಸಾಲದೇ ಅಂದುಕೊಳ್ಳುವಷ್ಟರಲ್ಲಿ ಹುಡುಗ ಅಲ್ಲಿಂದ ನಾಪತ್ತೆ. ತಕ್ಷಣ ಪಕ್ಕದ ಕೋಚ್ ನವರಿಗೆ ಎಚ್ಚರಿಕೆ ಕೊಟ್ಟೆವು. ಮೊದಲೇ ಅವರಿಗೂ ಸುಳಿವು ಸಿಕ್ಕಿತ್ತೇನೋ, ಕೋಚ್ ನ ಬಾಗಿಲನ್ನು ಬಿಗಿಯಾಗಿ ಮುಚ್ಚಿದರು. ನೋಡುತ್ತಿದ್ದಂತೇ ಮುಂದಿನ ನಿಲ್ದಾಣ ಬಂದೇ ಬಿಟ್ಟಿತು; ೨೦-೨೫ ಜನರ ದಂಡು ನಮ್ಮ ಕೋಚಿನ ಮೇಲೆ ಅಕ್ರಮಿಸಲೂ ಮುಂದಾದರು- ದರವಾಜಾ ಖೋಲೋ ಎಂದು ಕಿರುಚುತ್ತಾ, ಬಾಗಿಲು ತೆಗೆಯದಾದಾಗ, ಮುಂದಿನ ಬೋಗಿಗೆ ಹೋಗಿ ಅಲ್ಲಿಂದ ನುಗ್ಗಿ ಬಂದರು. ಎಲ್ಲೋ ಇದ್ದ ಈ ಹುಡುಗನೂ ಅಲ್ಲಿಗೇ ಬಂದು ತಮ್ಮವರೊಂದಿಗೆ ಸೇರಿ, ತನಗೆ ಹೊಡೆದವರಿಗೆ ಮತ್ತು ಆತನ ಸಹ ಪ್ರಯಾಣಿಕರಿಗೆ ಚೆನ್ನಾಗಿ ತದುಕಲಾರಂಭಿಸಿದ.
ಅಕ್ಕ ಪಕ್ಕದಕೋಚ್ ನಲ್ಲಿದ್ದ ನಾವೆಲ್ಲರೂ ಬಂದವರಿಗೆ ಗದರಿ, ಹೊಡೆದಾಟ ನಿಲ್ಲಿಸಲು ಯತ್ನಿಸಿದ್ದೂ ವ್ಯರ್ಥ ಪ್ರಯತ್ನ ವಾಯಿತು. ಈ ಗಲಾಟೆಯಲ್ಲೇ ಯಾರೋ ಒಬ್ಬರು ರೈಲಿನ ಚೇನ್ ಎಳೆದರೂ ಅದು ತಕ್ಷಣ ನಿಲ್ಲಲಿಲ್ಲ (ಬಹುಶ: ಜೋರಾಗಿ ಎಳೆಯಲಿಲ್ಲವೋ ಏನೋ!) ಸ್ಟೇಷನ್ ನಿಂದ ಹೊರಟ ಕೆಲವೇ ನಿಮಿಷದಲ್ಲಿ ಇವೆಲ್ಲಾ ಆದದ್ದು. ಮುಂದಿನ ಐದೇ ನಿಮಿಷದಲ್ಲೇ ತಮ್ಮ ಕೆಲಸ ಪೂರೈಸಿದ ಗುಂಪು, ಅಲ್ಲಿಂದ ನಾಪತ್ತೆ!! ಮಧ್ಯದಲ್ಲಿ ರೇಲ್ವೇ ಪೊಲೀಸರೂ ಸಹ ಬರುವುದಿಲ್ಲವೆಂದು ನಂತರ ತಿಳಿದುಬಂತು.
ಮುಂದಿನ ನಿಲ್ದಾಣದಲ್ಲಿ ಪೊಲೀಸರ ಆಗಮನ, ಮತ್ತೆ ರಾತ್ರಿಯೆಲ್ಲಾ ನಮ್ಮ ಕೋಚಿಗೆ ಸಂಪೂರ್ಣ ರಕ್ಷಣೆ; ಹೊಡೆಸಿಕೊಂಡವರು ಮಾತ್ರ ರಾತ್ರಿಯೆಲ್ಲಾ ಮೂವ್, ಅಯೊಡೆಕ್ಸ್ ತಿಕ್ಕಿಕೊಳ್ಳುತ್ತಿದ್ದರು. ಮದುವೆಗೆಂದು ಹೊರಟವರು ಸಲ್ಲದ ಜಗಳಕ್ಕೆ ಬಿದ್ದು, ನೋವು ತಿಂದು ಕುಳಿತಿದ್ರು ಒಂದುಕಡೆ, ಇನ್ನೊಂದು ಕಡೆ ನಾವೆಲ್ಲಾ ಸಣ್ಣ ಸಣ್ಣ ಗಲಾಟೆಗಳು ಹೇಗೆ ಮತದ ಬಣ್ಣ ಪಡೆದು ಗಲಭೆ ಆಗಬಹುದು ಅನ್ನೋದಕ್ಕೆ ಸಾಕ್ಷಿಯಾಗಿ ಕುಳಿತಿದ್ವಿ,
Comments
ಉ: ನಮ್ಮ ನಡುವೆ ಹೀಗೇಕೆ??