ಹೆಣ್ಣು ಮಕ್ಕಳೇಕೆ ಹೀಗೆ ತಾವರೆಯ ಎಲೆಯ ಮೇಲಿನ ಹನಿಯ ಹಾಗೆ

ಹೆಣ್ಣು ಮಕ್ಕಳೇಕೆ ಹೀಗೆ ತಾವರೆಯ ಎಲೆಯ ಮೇಲಿನ ಹನಿಯ ಹಾಗೆ

ಸಾಕಿ ಬೆಳೆಸುವ ತನಕ ಹೆತ್ತವರೇ ಜೀವ. ಹೆತ್ತವರ ಬಿಟ್ಟು ಎಲ್ಲೂ ಸುಳಿಯ ಮನ .  ಹೀಗೆಲ್ಲಾ ಇರುವ ಈ ಹೆಣ್ಣು ಮಕ್ಕಳು ಈ ಪ್ರೇಮದ ಬಲೆಗೆ ಬಿದ್ದ ತಕ್ಷಣ ಏನಾಗಿ ಹೋಗುತ್ತಾರೆ


ಹೆತ್ತವರನ್ನೂ ನಿರ್ಲಕ್ಷಿಸಿ ಅಕ್ಷರಶ್: ಕಾಲಲ್ಲಿ ಜಾಡಿಸಿ ಹೋಗುತ್ತಾರಲ್ಲಾ ಯಾಕೆ?


ಅಲ್ಲಿಯವರೆಗೆ ಅಪ್ಪನ ಕೈ ಹಿಡಿದು ಸಾಗಿದ್ದು , ಯಾರಾದರೂ ಗದರಿದರೆ  ಕೂಡಲೆ ಅಮ್ಮನ ಸೆರಗಿನ ಹಿಂದೆ  ಅಡಗಿದ್ದು ಎಲ್ಲಾ ಮರೆತುಬಿಡುತ್ತಾರೆ ಯಾಕೆ?


ಇಲ್ಲಿಯವರೆಗೆ ಅಪ್ಪಾ ಅಮ್ಮನೇ ಎಲ್ಲಾ ಆಗಿದ್ದ ಈ ಹುಡುಗಿಯರಿಗೆ ಪ್ರೇಮದಲ್ಲಿ ಬಿದ್ದ ನಂತರ ಈ ಹೆತ್ತವರೇ ಬದ್ದ ವೈರಿಗಳಂತೆ ಕಾಣತೊಡಗುವುದು ವಿಪರ್ಯಾಸವೇ ಸರಿ


ಇಷ್ಟೆಲ್ಲಾ ಹೇಳಿದ್ದು ಸಂಬಂಧಿಕರೊಬರ ಮಗಳು ತಾನು ಮೆಚ್ಚಿದ ಪುಡಿ ರೌಡಿಯೊಬ್ಬನ ಜೊತೆ ಹೊರಟು ಹೋಗಿದ್ದು   ಅವಳ ತಾಯಿ ಪಟ್ಟ ನೋವು ಅಪಮಾನ  ಇವುಗಳನ್ನು ನೋಡಿದ ಮೇಲೆ.


ಆ ಹುಡುಗೆ ತನಗೆ ಹದಿನೆಂಟಾಗುವುದನ್ನೇ ಕಾಯುತ್ತಿದ್ದವಳಂತೆ  ಮಾರನೆಯ ದಿನವೇ ಜನ್ಮ ಪ್ರಮಾಣ ಪತ್ರವನ್ನು ತೆಗೆದುಕೊಂಡು ತಾನು ಪ್ರೀತಿಸಿದೆ ಎಂದುಕೊಂಡ ಇಪ್ಪತ್ತಾರರ ಹುಡುಗನೊಬ್ಬನ ಜೊತೆ ಹೋದವಳು ಹಿಂದಿರುಗಿ ಬಂದದ್ದು  ಕುತ್ತಿಗೆಯಲ್ಲಿ ತಾಳಿ ಕಾಲ್ಬೆರಳಲ್ಲಿ ಕಾಲುಂಗರದ ಜೊತೆ.


ಹೊರಟಿದ್ದು ಕೂಡ ನೇರ ಪೋಲೀಸ್ ಠಾಣೆಗೆ  ತಾನು ಪ್ರಾಪ್ತ ವಯಸಿನವಳಾಗಿದ್ದು ಇಷ್ಟಾ ಪಟ್ಟವರ ಜೊತೆ ಮದುವೆಯಾಗಿದ್ದಕ್ಕೆ  ಹೆತ್ತವರಿಂದ ಪ್ರಾಣ ಬೆದರಿಕೆ ಇದೆ ಎಂದು ದೂರು ಕೊಟ್ಟು ಹೊರಟೇ ಹೋದಳು. ಠಾಣೆಯಲ್ಲಿಯೇ ಇದ್ದ ನನ್ನ ಅಕ್ಕ(ಆ ಹುಡುಗಿಯ ಸೋದರತ್ತೆ ) ಅವಳ  ಅಮ್ಮ ದೊಡ್ಡಮ್ಮ ಚಿಕ್ಕಮ್ಮ ಅಣ್ಣ ಯಾರೂ ಕಣ್ಣಿಗೆ ಕಾಣಲಿಲ್ಲ.


ಹೀಗೆಲ್ಲಾ ಮಾಡುವಾಗ ಒಮ್ಮೆಯಾದರೂ ಪತಿಯನ್ನು ಕಳೆದುಕೊಂಡ ತನ್ನ ಅಮ್ಮನ ಬಗ್ಗೆ , ಅಣ್ಣನ ಬಗ್ಗೆ ಯೋಚಿಸಿರಬಹುದಿತ್ತಲ್ಲವೆ?


ಹೀಗೆ ಇವತ್ತು ಟೈಲರ್ ಒಬ್ಬರು ಸಿಕ್ಕರು.


ಗಂಡ ಹೆಂಡತಿ ತುಂಬಾ ಕಷ್ಟ ಪಟ್ಟು  ಮಕ್ಕಳನ್ನು ಓದಿಸಿದರು. ಎಷ್ಟೋ ಜನರ ಕೈ ಕಾಲು ಹಿಡಿದು ಕೆಲಸ ಕೊಡಿಸಿದ್ದರು


 ಅವರ ಒಬ್ಬ ಮಗಳಿಗೆ ಮದುವೆಯಾಗಿದೆ ಟಿ ಸಿ ಎಸ್ ನಲ್ಲಿದ್ದಾಳೆ ಇನ್ನೊಬ್ಬಳು ಎಚ್ ಪಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.  ಮಕ್ಕಳಿಬ್ಬರೂ ಒಳ್ಳೆಯ ಉದ್ಯೋಗದಲ್ಲಿದಾರಲ್ಲಾ ಇನ್ನಾದರೂ ವಿಶ್ರಾಂತಿ ತೆಗೆದುಕೊಳ್ಳಿ ಎಂದೆ. ಅವರ ಕಣ್ಣಲ್ಲಿ ಕಂಡೂ ಕಾಣದ ಕಣ್ಣೀರು. "ಬೆಳೆಸುವ ತನಕ ಮಕ್ಕಳು .  ದುಡಿತ ಶುರು ಮಾಡಿದ ಮೇಲೆ ಮದುವೆಯಾದ ಮೇಲೆ ಅವರುಗಳು ತುಂಬಾ ಬದಲಾಗಿಬಿಡುತ್ತಾರೆ  . ಅಷ್ಟಕ್ಕೂ ನಮ್ಮ ಅನ್ನ ನಾವೆ ಸಂಪಾದಿಸಿಕೊಳ್ಳಬೇಕೇ ಹೊರತು ಅವರುಗಳ ಮೇಲೆ ಡಿಪೆಂಡ್ ಆಗಬಾರದು  . ಅವರ ದಾರಿ ಅವರದ್ದು ನಮ್ಮ ದಾರಿ ನಮ್ಮದು "ಎಂದರು


ಯಾಕೆ ಈ ಹೆಣ್ಣು ಮಕ್ಕಳು ಹೀಗೆ.  ಅಪ್ಪ ಅಮ್ಮನ ನೋವು ಅವರಿಗೇಕೆ ತಟ್ಟುವುದಿಲ್ಲ.


ಈ ಮೇಲಿನವುಕ್ಕೆ ಅಪವಾದಗಳೂ ಇರಬಹುದು  . ಹಾಗಿದ್ದಲ್ಲಿ ಸಂತೋಷ

Rating
No votes yet

Comments