ಚಿಂತನ ಇಲ್ಲದ ನನ್ನ ’ಚಿಂತನ’!

ಚಿಂತನ ಇಲ್ಲದ ನನ್ನ ’ಚಿಂತನ’!

ಬರಹ

  ಎಂದಿನಂತೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ನನಗೊಂದು ಅಂಚೆ ಲಕೋಟೆ ಬಂತು. ಎಂದಿನಂತೆ ಅದು ’ಚಿಂತನ’ ಕಾರ್ಯಕ್ರಮದ ಧ್ವನಿಗ್ರಹಣಕ್ಕೆ ಆಹ್ವಾನ ಎಂಬುದನ್ನರಿತ ನಾನು ಎಂದಿನಂತೆ ಆ ಲಕೋಟೆಯನ್ನು ಹಾಗೇ ಎತ್ತಿ ಬದಿಗಿಟ್ಟೆ.
  ಕೆಲವು ದಿನಗಳ ನಂತರ ಲಕೋಟೆ ತೆರೆದು ಒಪ್ಪಿಗೆ ಪತ್ರ ರವಾನಿಸಿ ಪೂರ್ವಯೋಜಿತ ಪ್ರವಾಸಕ್ಕೆ ಹೊರಟೆ. ಪ್ರವಾಸದಿಂದ ಹಿಂತಿರುಗಿ ಗಣಕಯಂತ್ರದೆದುರು ಕುಳಿತವನು ಲೇಖನ, ಮಿಂಚಂಚೆ, ಸಂಗೀತಶ್ರವಣ, ಹೀಗೆ ಯಂತ್ರಮಂತ್ರಮುಗ್ಧನಾಗಿ ಒಂದು ದಿನ ಕಳೆದೆ. ಮರುದಿನವೇ ’ಚಿಂತನ’ದ ಧ್ವನಿಗ್ರಹಣ.
  ಧ್ವನಿಗ್ರಹಣದ ದಿನ ಬೆಳಗಾಯಿತು. ಇನ್ನು ನಾಲ್ಕು ಗಂಟೆಗಳೊಳಗೆ ಬೆಂಮನಸಾ ಬಸ್ಸು ಹತ್ತಿರಬೇಕು ನಾನು. ಆಕಾಶವಾಣಿ ಕೇಂದ್ರಕ್ಕೆ ಹೋಗಿ ಸ್ವಂತ ಆಯ್ಕೆಯ ಮೂರು ವಿಷಯಗಳ ಬಗ್ಗೆ ತಲಾ ನಾಲ್ಕು ನಿಮಿಷ ಮಾತನಾಡಬೇಕು. ನಾನಿನ್ನೂ ವಿಷಯಗಳ ಆಯ್ಕೆಯನ್ನೇ ಮಾಡಿಕೊಂಡಿರಲಿಲ್ಲ.(!)
  ಅಜಮಾಸು ನೂರಕ್ಕೆ ಹತ್ತಿರ ಇಂಥ ರೇಡಿಯೋ ಕಾರ್ಯಕ್ರಮಗಳನ್ನು ಕೊಟ್ಟಿರುವುದರಿಂದ ನನಗೆ ನನ್ನ ಬಗ್ಗೆ ಅತಿಯಾದ ಆತ್ಮವಿಶ್ವಾಸ. ಚಿಂತನ ಮಾಡದೆಯೇ ಚಿಂತನ ಕಾರ್ಯಕ್ರಮ ನೀಡಬಲ್ಲೆನೆಂಬ ಹುಚ್ಚು ಧೈರ್ಯ.(!)
  ಇದೇ ಧೈರ್ಯ ನನ್ನನ್ನು ಧ್ವನಿಗ್ರಹಣದ ದಿನ ಬೆಳಗ್ಗೆಯೂ ಗಣಕಯಂತ್ರದೆದುರು ಕುಳ್ಳಿರಿಸಿತು. ಪ್ರಾತಃದಿನಚರಿ ಪೂರೈಸಿ ಗಣಕಯಂತ್ರದೆದುರು ಕೂತವನು ಮುವ್ವತ್ತೆಂಟು ಮಿಂಚಂಚೆ ತೆರೆದೋದಿ, ಆ ಪೈಕಿ ಹದಿನೈದು ಮಿಂಚಂಚೆ ಕೊಂಡೊಯ್ದ ಕಡೆ ಹೋಗಿ ಆ ಎಲ್ಲ ಕಿರುಬರಹಗಳನ್ನೂ ಓದಿ, ಸಂಪದಿಗ ಮಿತ್ರ ಸೈಯದ್ ಅಬ್ದುಲ್ ಲತೀಫ್ ಅವರನ್ನೂ ಒಳಗೊಂಡಂತೆ ನಾಲ್ವರ ಜಿಜ್ಞಾಸು ಮಿಂಚಂಚೆಗಳಿಗೆ ಉತ್ತರ ನೀಡಿ ಯಂತ್ರಬಿಟ್ಟೇಳುವಷ್ಟರಲ್ಲಿ ಯಂತ್ರದೆದುರೇ ಒಂದೂವರೆ ಗಂಟೆ ಕಾಲ ವ್ಯಯವಾಗಿಹೋಗಿತ್ತು. ಆಕಾಶವಾಣಿ ಕೇಂದ್ರದೆಡೆಗೆ ಬಸ್ಸೇರಲು ಇನ್ನು ಒಂದೂವರೆ ಗಂಟೆ ಸಮಯ ಮಾತ್ರ ಉಳಿದಿತ್ತು. ’ಚಿಂತನ’ದ ಬಗ್ಗೆ ನನ್ನಲ್ಲಿನ್ನೂ ಯಾವ ಚಿಂತನ-ಮಂಥನವೂ ಆರಂಭವಾಗಿರಲಿಲ್ಲ.(!)
  ಮೂರು ಹಾಳೆ, (ಒಂದು) ಲೇಖನಿ ಹಿಡಿದು ಕುಳಿತೆ. ಸರಸರನೆ, (ಶರವೇಗದಲ್ಲಿ), ತೋಚಿದ್ದನ್ನು ಗೀಚತೊಡಗಿದೆ. ’ಛಿ!ಂತನ’ದ ಎರಡು ದಿಢೀರ್ ದೋಸೆಗಳು ತಯಾರಾದವು! ಮೂರನೆಯ ದೋಸೆಗೆ ಹಿಟ್ಟು ಹೊಯ್ಯಬೇಕೆನ್ನುವಷ್ಟರಲ್ಲಿ  ಆಕಾಶವಾಣಿ ಕೇಂದ್ರದಿಂದ ದೂರವಾಣಿ ಕರೆ ಬಂತು. ’ಚಿಂತನ’ಕ್ಕೆ ನನ್ನನ್ನು ಆಹ್ವಾನಿಸಿದ್ದ ನೂತನ್ ಕದಂ ಮೇಡಂ ಮಾತನಾಡಿ ಧ್ವನಿಗ್ರಹಣದ ಬಗ್ಗೆ ಜ್ಞಾಪಿಸಿದರು. ಇನ್ನು ಒಂದೂಕಾಲು ಗಂಟೆಯೊಳಗೆ ಅವರೆದುರಿರುವುದಾಗಿ ಮಾತುಕೊಟ್ಟು ಮೂರನೆಯ ದೋಸೆಯ ತಯಾರಿಯಲ್ಲಿ ತೊಡಗಿದೆ.
  ಒಟ್ಟು ಒಂದೂವರೆ ಗಂಟೆ ಸಮಯದೊಳಗೆ ಮೂರು ’ಚಿಂತನ’(ಹಸಿಬಿಸಿ ದೋಸೆ)ಗಳನ್ನು ತಯಾರಿಸಿ, ಬೆಂಮನಸಾ ಬಸ್ಸು, ಆಟೋ, ಹೀಗೆ ಒಟ್ಟು ನಲವತ್ತು ನಿಮಿಷ ಪ್ರಯಾಣಿಸಿ, ಸಮಯಕ್ಕೆ ಸರಿಯಾಗಿ ನೂತನ್ ಮೇಡಂ ಎದುರು ಏದುಸಿರುಬಿಡುತ್ತ ನಿಂತಿದ್ದೆ.
  ***
  ನಿನ್ನೆ ಧ್ವನಿಗ್ರಹಣ ಆಗಿದೆ. ಇದೇ ತಿಂಗಳ ಒಂಬತ್ತು, ಹತ್ತೊಂಬತ್ತು ಮತ್ತು ಇಪ್ಪತ್ತೊಂಬತ್ತನೇ ದಿನಾಂಕಗಳಂದು ಬೆಳಗ್ಗೆ ಆರೂವರೆಯಿಂದ - ಒಂದು ದಿನಕ್ಕೆ ಒಂದರಂತೆ - ತಲಾ ಐದು ನಿಮಿಷಗಳ ಅವಧಿಯ, ನನ್ನ ಒಟ್ಟು ಮೂರು ’ಚಿಂತನ’ ಕಾರ್ಯಕ್ರಮಗಳು ಆಕಾಶವಾಣಿಯ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗಲಿವೆ. ಅನುಕ್ರಮವಾಗಿ, ’ಆಸೆಗೊಂದು ಮಿತಿ’, ’ಮೊಬೈಲ್ ಮಾತು’, ’ಕ್ರೀಡಾ ಮನೋಭಾವ’ ಇವು ಮೂರು ’ಚಿಂತನ’ದ ವಿಷಯಗಳು.
  ರೇಡಿಯೋ ಉಳ್ಳ ಮತ್ತು ಬೆಂಗಳೂರು ಕೇಂದ್ರದ ಲಭ್ಯತೆ (FM ಅಲ್ಲ; Medium Wave, 612 KHz, 490.2 meters) ಇರುವ ಸಂಪದಿಗ ಮಿತ್ರರು ದಯೆಯಿಟ್ಟು ನನ್ನ ಈ ಮೂರು "ಚಿಂತನರಹಿತ ’ಚಿಂತನ’ ಕಾರ್ಯಕ್ರಮ"ಗಳನ್ನು ಕೇಳಿ ನನಗೊಂದಿಷ್ಟು ಬುದ್ಧಿ ಹೇಳಿ.
  ಹ್ಞಾ! ನನ್ನ ಕರ್ಣಕಠೋರ ಕಂಠ ಆಲಿಸಿರದ ಮಿತ್ರರಿಗೆ ಈ ಅರವತ್ತರವನ ಅದಿರುವ (ಆದರೂ ಕಠೋರವಾದ) ಕಂಠ ಆಲಿಸುವ ದೌರ್ಭಾಗ್ಯ! ಈ ಮಿತ್ರನಿಗೋಸ್ಕರ ಆಲಿಸಿ; ಸಹಿಸಿಕೊಳ್ಳಿ.