ಹುಚ್ಚರಾಯಸ್ವಾಮಿ ಮಹಾತ್ಮೆ

ಹುಚ್ಚರಾಯಸ್ವಾಮಿ ಮಹಾತ್ಮೆ

ಬರಹ

ಶಿಕಾರಿಪುರದ ಆಂಜನೇಯನಿಗೆ ಹುಚ್ಚರಾಯಸ್ವಾಮಿ ಎಂದು ಕರೆಯುವುದು ಇದೆ. ಕಾರಣ ಇಲ್ಲಿ ವ್ಯಾಸರಾಯರು ಬಂದಂತಹ ಸಂದರ್ಭದಲ್ಲಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕೆಂಬ ದೇವರ ಆಜ್ಞೆಯಾಯಿತಂತೆ. ಆಗ ಕೆರೆಯ ದಡದಲ್ಲಿ ಸಮೀಪದಲ್ಲಿ ಇರುವಂತಹ ನಿವೇಶನದಲ್ಲಿ ಸ್ಥಾಪಿಸಬೇಕೆಂದು ತೀರ್ಮಾನ ಮಾಡಲಾಯಿತು. ಆ ನಿವೇಶನ "ಹುಚ್ಚರಾಯ" ಎಂಬುವರ ಹೆಸರಿನಲ್ಲಿ ಇದ್ದ ಕಾರಣ ಆಂಜನೇಯ ಹುಚ್ಚರಾಯಸ್ವಾಮಿಯಾದ.

 

ಆಶ್ಚರ್ಯಕರ ಸಂಗತಿಯೆಂದರೆ ವಿಗ್ರಹ ಕೂಡ ಕೆರಯಲ್ಲಿಯೇ ದೊರೆಯಿತು. ವಿಗ್ರಹವನ್ನು ಎತ್ತುವಾಗ ಮೂಗು ಮುರಿದ ಪರಿಣಾಮ ಹಿಮಾಲಯದ ತಪ್ಪಲಿನಿಂದ ತಂದಂತಹ ಸಾಲಿಗ್ರಾಮದ ಮೂಗನ್ನು ಸ್ವಾಮಿಗೆ ಕೂರಿಸಲಾಯಿತು. ಹಾಗಾಗಿ ವಿಗ್ರಹ ಮತ್ತು ಮೂಗಿಗೆ ಈಗಲೂ ವ್ಯತ್ಯಾಸ ಕಾಣಬಹುದಾಗಿದೆ. ಇದಕ್ಕೆ "ಭ್ರಾಂತೇಶ" ಎಂದು ಕೂಡ ಕರೆಯುವುದು ಉಂಟು. ಅಧಿಕ ಶ್ರಾವಣದಲ್ಲಿ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕಿನ ಸಾತೇನಹಳ್ಳಿಯ ಬಳಿಯಿರುವ ಶಾಂತೇಶ, ಕದರಲಮಂಡಗಿಯ ಕಾಂತೇಶ ಹಾಗೂ ಶಿಕಾರಿಪುರದ ಭ್ರಾಂತೇಶನನ್ನು ಒಂದೇ ದಿನ ನೋಡಿದರೆ ಕಾಶಿಗೆ ಹೋಗಿ ಬಂದಷ್ಟು ಪುಣ್ಯ ಎಂಬ ಮಾತಿದೆ.

ಈ ದಿನಗಳಲ್ಲಿ ಇಲ್ಲಿನ ಧರ್ಮದರ್ಶಿ ಸಮಿತಿ ವತಿಯಿಂದ ವಿಶೇಷ ಪ್ರಸಾದ ವಿನಿಯೋಗ ಹಾಗೇ ಬಂದಂತಹ ಭಕ್ತರಿಗೆ ಹೆಚ್ಚಿನ ಕಾಳಜಿ ವಹಿಸಿ ಅವರ ಆಗುಹೋಗುಗಳನ್ನು ನೋಡಿಕೊಳ್ಳುತ್ತಾರೆ. ಹುಚ್ಚರಾಯಸ್ವಾಮಿಗೆ ಕೇವಲ ಶಿವಮೊಗ್ಗ ಜಿಲ್ಲೆಯವರು ಮಾತ್ರವಲ್ಲದೆ. ದೇಶಾದ್ಯಾಂತ ಭಕ್ತರು ಇದ್ದಾರೆ. ವಿಶೇಷ ದಿನಗಳಲ್ಲಿ ಜಾತ್ರೆಯಂತಾಗಿರುತ್ತದೆ. ಇಲ್ಲಿ ಆಂಜನೇಯನಿಗೆ ಹರಕೆ ಹೊತ್ತರೆ ನಿಜ ಆಗುತ್ತದೆ ಎನ್ನುವ ವಾಡಿಕೆಯೂ ಇದೆ. ಯಡಿಯೂರಪ್ಪನವರು ಇಲ್ಲಿನ ದೇವಸ್ಥಾನದ ಅಭಿವೃದ್ದಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದ್ದಾರೆ.

ಅವರು ಯಾವುದೇ ಚುನಾವಣೆಗೆ ಸ್ಪರ್ಧಿಸುವ ಮುನ್ನ ಹುಚ್ಚರಾಯನಿಗೆ ಅಂದರೆ ಊರ ದೇವನಿಗೆ ಮೊದಲು ಪೂಜೆ ಮಾಡಿಸಿಯೇ ನಂತರದ ಕೆಲಸ. ಚೈತ್ರ ಹುಣ್ಣಿಮೆಯಂದು ನಡೆಯುವ ರಥೋತ್ಸವಕ್ಕೆ ತಪ್ಪದೇ ಹಾಜರಾಗುತ್ತಾರೆ. ಅದಕ್ಕೆಂದು ವಿಶೇಷ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೂ ಉಂಟು. ಇದರ ವಿಶೇಷತೆ ಏನೆಂದರೆ ಕೇವಲ ಹಿಂದುಗಳು ಮಾತ್ರವಲ್ಲದೆ ಮುಸ್ಲಿಂ ಭಕ್ತರೂ ಕೂಡ ಹೆಚ್ಚಾಗಿಯೇ ಇದ್ದಾರೆ.