ಹಾನಗಲ್ ತಾಲ್ಲೂಕು ಕೊಪ್ಪರಸಿಕೊಪ್ಪ; ಮತ್ತೊಂದು ಕರಡಿ ಅಮಾನವೀಯ ಹತ್ಯೆ.

ಹಾನಗಲ್ ತಾಲ್ಲೂಕು ಕೊಪ್ಪರಸಿಕೊಪ್ಪ; ಮತ್ತೊಂದು ಕರಡಿ ಅಮಾನವೀಯ ಹತ್ಯೆ.

ಬರಹ

ಹಾನಗಲ್  ತಾಲೂಕಿನ ಕೊಪ್ಪರಿಸಿಕೊಪ್ಪದಲ್ಲಿ ಗುರುವಾರ ಗ್ರಾಮಸ್ಥರು ಕಲ್ಲು ಹೊಡೆದು ಕೊಂದ ಮೂಕ ಕರಡಿ.

 

ಮೇಲಿನ ಚಿತ್ರ ನೋಡಿ. ಇಷ್ಟು ಜನ ತುಸು ವಿವೇಚನೆಯಿಂದ, ವಿವೇಕದಿಂದ ವರ್ತಿಸಿದ್ದರೆ ಒಂದು ಮೂಕ ಪ್ರಾಣಿಯ ಜೀವ ಉಳಿಸಬಹುದಿತ್ತು. ಕೊನೆ ಪಕ್ಷ ನಿತ್ರಾಣಗೊಳಿಸಿ ಬಂಧಿಸಬಹುದಿತ್ತು. ಆಹಾರ ಒದಗಿಸಿ, ಹಸಿದು ಹೈರಾಣಾದ ಕರಡಿಯ ಹಸಿವು-ದಾಹ ಇಂಗಿಸಿ ಶಾಂತಗೊಳಿಸಿ ಸಂಬಂಧ ಪಟ್ಟವರಿಗೆ ವಿಷಯ ತಿಳಿಸಬಹುದಿತ್ತು. 

 

ಆದರೆ ಕಾಡಿನಿಂದ ಊರಿಗೆ ಬಂದ ಕರಡಿ ಸಾರ್ವಜನಿಕರಿಂದ ಕಲ್ಲೇಟು ತಿಂದು ಅಸುನೀಗಿತು. ಹಾನಗಲ್  ತಾಲ್ಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಿನ್ನೆ (ಗುರುವಾರ) ಬೆಳಿಗ್ಗೆ ಈ ದುರಂತ ನಡೆದಿದೆ. ಕೊಪ್ಪರಸಿಕೊಪ್ಪ ಗ್ರಾಮದ ಶಿವಕ್ಕ ಗೊಲ್ಲರ್  ಅವರ ಮನೆಗೆ ಬೆಳಗಿನಜಾವ ೫ ಗಂಟೆಯ ವೇಳೆಗೆ ಆಹಾರ ಅರಸಿ ನುಗ್ಗಿದ ಕರಡಿ, ಮನೆಯ ಗ್ವಾದ್ಲಿಯಲ್ಲಿ ಕಟ್ಟಲಾಗಿದ್ದ ಎತ್ತೊಂದನ್ನು ಕಚ್ಚಿ ಗಾಯಗೊಳಿಸಿದೆ. ಮನೆಯ ಯಜಮಾನ ಆಗಂತುಕ ಕರಡಿಯನ್ನು ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಲು ಯತ್ನಿಸಿ ವಿಫಲರಾಗಿದ್ದಾರೆ.

 

ತನ್ನನ್ನು ಬಂಧಿಸಬಹುದು ಎಂಬ ಪೂರ್ವ ಸೂಚನೆ ಪಡೆದ ಕರಡಿ ಬೆದರಿ, ಎಲ್ಲರ ಕೈಯಿಂದ ತಪ್ಪಿಸಿಕೊಳ್ಳಲು ಮುಂದಾಗಿ ಊರ ತುಂಬ ಅಲೆದಾಡಲು ಆರಂಭಿಸಿದೆ. ಬೆದರಿದ ಜನ ಕರಡಿಗೆ ಕಲ್ಲೆಸೆಯಲು ಮುಂದಾದರು. ಕೈಗೆ ಸಿಕ್ಕ ತರಹೇವಾರಿ ಗಾತ್ರದ ಕಲ್ಲುಗಳನ್ನು ೨೦ ಕ್ಕೂ ಹೆಚ್ಚು ಜನ ಒಂದೆಡೆ ಸೇರಿ ತಾರಾಮಾರಾ ಬೀಸಿ ಕರಡಿಗೆ ಬೀಸಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಕರಡಿ ದಾರಿಯಲ್ಲಿ ಸಿಕ್ಕ ಇಬ್ಬರನ್ನು ಪ್ರಾಣ ಸಂಕಟದಿಂದ ಕಚ್ಚಿ ಗಾಯಗೊಳಿಸಿದೆ. ರಾಜು ಹನುಮಂತಪ್ಪ ವಾಲ್ಮೀಕಿ ಹಾಗೂ ಅಶೋಕ ನಾಗಪ್ಪ ಮಡಿವಾಳರ ಕರಡಿಯ ದಾಳಿಗೆ ಗಾಯಗೊಂಡವರು. 

 

 

ಇತ್ತೀಚೆಗೆ ರೋಣ ತಾಲೂಕು ಮಾರನಬಸರಿಯಲ್ಲಿ ಜನರ ಆಕ್ರೋಷಕ್ಕೆ ತುತ್ತಾಗಿ ಪ್ರಾಣತೆತ್ತ ಕರಡಿ.

 

ಈ ಸರ್ಕಸ್ ಕೊನೆಗೊಳ್ಳುವ ಮೊದಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ತಲುಪಿತ್ತು. ನಿತ್ರಾಣಗೊಂಡ, ಅರೆ ಪ್ರಜ್ಞೆಗೆ ಜಾರಿದ್ದ ಕರಡಿಯನ್ನು ಹಿಡಿದುಕೊಂಡು ಅಲ್ಲಿಯೇ ಚೂರು ಚಿಕಿತ್ಸೆ ನೀಡಿ, ತುರ್ತು ಚಿಕಿತ್ಸೆಗಾಗಿ ಹಾನಗಲ್ ಜಾನುವಾರು ಚಿಕಿತ್ಸಾ ಕೇಂದ್ರಕ್ಕೆ ಹೊತ್ತು ತಂದರು. ಆದರೆ ಪೆಟ್ಟು ತಾಳಲಾರದೇ ಮಾರ್ಗದಲ್ಲಿಯೇ ಕರಡಿ ಅಸುನೀಗಿತ್ತು. ಕರಡಿಯ ಈ ಪರಿಯ ನಡುವಳಿಕೆಯ ಕುರಿತು ಅಭ್ಯಾಸ ಮಾಡಿದ ವೈದ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿಯ ತಲೆಗೆ ಸುಮಾರು ಒಂದು ತಿಂಗಳ ಕೆಳಗೆ ಬಲವಾದ ಪೆಟ್ಟು ಬಿದ್ದು, ಗಾಯ ಹುಣ್ಣಾಗಿ ಪರಿವರ್ತನೆಯಾಗಿ ಹುಳುಗಳು ತುಂಬಿಬಿಟ್ಟಿದ್ದವು.

 

ಬಹುತೇಕ ನಾಯಿ ಮರಿಗಳು ದ್ವಿಚಕ್ರ ವಾಹನಕ್ಕೆ ಸಿಲುಕಿ, ಗಾಯಗೊಂಡ ನಂತರ ವಾಹನಗಳ ಬಗ್ಗೆ ಜುಗುಪ್ಸೆ ಮೈಗೂಡಿಸಿಕೊಂಡಿದ್ದು ನಾವು ಕಾಣುತ್ತೇವೆ. ನಾಯಿ ಮರಿಗಳು ದೊಡ್ಡವಾದ ಮೇಲೆ ಯಾರೇ ಅವುಗಳ ಮುಂದೆ ಗಾಡಿ ಓಡಿಸಿದರೂ ಕಚ್ಚಲು ಹವಣಿಸಿ, ಬೆನ್ನಟ್ಟುವುದು ನಿಮ್ಮ ಅನುಭವಕ್ಕೂ ಬಂದಿರಬಹುದು. ಕೆಲವರು ಅವುಗಳಿಂದ ಕಚ್ಚಿಸಿಕೊಂಡಿರಲೂ ಬಹುದು. ಈ ಕರಡಿಯ ವಿಚಾರದಲ್ಲೂ ಕೂಡ ಮೊದಲು ಹಾನಗಲ್ ತಾಲೂಕಿನ ಯಾವುದೋ ಗ್ರಾಮಕ್ಕೆ ಲಗ್ಗೆ ಹಾಕಿದಾಗ ಅಲ್ಲಿನ ಗ್ರಾಮಸ್ಥರಿಂದ ಪೆಟ್ಟು ತಿಂದು, ಪ್ರಾಣ ಉಳಿಸಿಕೊಂಡು ಪರಾರಿಯಾಗಿದೆ. ಆದರೆ ಆ ಗ್ರಾಮದವರು ಕರಡಿ ದಾಳಿ ಮಾಡಿದ ಬಗ್ಗೆ, ಇವರು ಪೆಟ್ಟು ಕೊಟ್ಟ ಬಗ್ಗೆ ಪೊಲೀಸರಿಗಾಗಲಿ, ಅರಣ್ಯ ಇಲಾಖೆಯವರಿಗಾಗಲಿ ತಿಳಿಸಿದಂತೆ ಕಾಣುವುದಿಲ್ಲ. ಆ ಗಾಯವೇ ಹುಣ್ಣಾಗಿ ಪರಿವರ್ತನೆಯಾಗಿ, ತ್ರಾಸು ತಾಳಲಾರದೇ ಸಂಕಟದಿಂದ ಹುಚ್ಚಾಗಿ ವರ್ತಿಸಿ, ಕಂಡವರ ಮೇಲೆ ಎರಗಲು ಮುಂದಾಗಿದೆ. ಒಟ್ಟಾರೆ ತನ್ನದಲ್ಲದ ತಪ್ಪಿಗೆ ಕರಡಿ ಪ್ರಾಣತೆತ್ತಿದೆ.

 

ಕರಡಿಯ ‘ಉಪಟಳ’ ವಿರುವ ಊರುಗಳಲ್ಲಿ ಹೀಗೆ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದೇ? ಜನರೇ ಈ ಕೆಲಸಕ್ಕೆ ಮುಂದಾಗುವರೇ? ಅರಣ್ಯ ಇಲಾಖೆ ಜನರಲ್ಲಿ ಈ ಕುರಿತು ಸಾತ್ವಿಕ ಅರಿವು ಮೂಡಿಸುವುದೇ? ರಾತ್ರಿಯ ವೇಳೆ ಅಥವಾ ಬೆಳಗು ಮುಂಜಾನೆ ಹೊಲಕ್ಕೆ ಅಥವಾ ಬಹಿರ್ದೆಸೆಗೆಂದು ಬಯಲಿಗೆ ತೆರಳುವ ಬದಲು ಮನೆಗೊಂದು ಶೌಚಾಲಯ ಕಟ್ಟಿಸಿಕೊಂಡರೆ ಈ ಆಪಾಯ ಅರ್ಧ ದೂರಾದಂತೆ. ಜೊತೆಗೆ, ನಾಯಿಯನ್ನು ಕರೆದೊಯ್ಯುವುದು ಜೀವರಕ್ಷಕ ಸಾಧನ. ಹಾಗೆಯೇ ಕುರಿ ಮರಿಯಾದರೂ ನಡೆದೀತು. ನಾಯಿ ಕ್ವಚಿತ್ತಾಗಿ ಬಲಿಯಾದರೂ ವನ್ಯ ಜೀವಿಗಳೊಂದಿಗೆ ಸೆಣೆಸಲು ಮುಂದಾಗಿ ತನ್ನ ಮಾಲೀಕನ ಜೀವ ಉಳಿಸಬಲ್ಲುದು. ಹಾಗೆಯೇ ಕುರಿ ಸುಲಭವಾಗಿ ಕಾಡು ಪ್ರಾಣಿಗಳಿಗೆ ತುತ್ತಾದರೂ, ಮನುಷ್ಯನ ಜೀವ ಮಾತ್ರ  ಸುರಕ್ಷಿತ.  ಮನುಷರಿಗೆ ವನ್ಯ ಪ್ರಾಣಿಗಳ ಬಗ್ಗೆ ಇರುವಷ್ಟೇ ಭಯ ವನ್ಯ ಜೀವಿಗಳಿಗೂ ಮನುಷ್ಯರ ಬಗ್ಗೆ ಅಷ್ಟೇ ಪ್ರಮಾಣದ ಭಯ ಮನೆಮಾಡಿದೆ. ಹಾಗಾಗಿ, ಕೈಯಲ್ಲಿ ಬಲಿಷ್ಠವಾದ ಕೋಲು, ಬೆಂಕಿ ಹಚ್ಚಿದ ಹಿಲಾಲು, ಸಪ್ಪಳ ಮಾಡುವ ‘ಜಿರಕಿ ಚಪ್ಪಲ್’ ಧರಿಸಲು, ಊದಿನ ಕಡ್ಡಿ ನೀರಲ್ಲಿ ನೆನೆಸಿ ಮೂರು ಕಡೆಗಳಲ್ಲಿ ‘ಲಕ್ಷ್ಮಿ ಬಾಂಬ್’ ಕಟ್ಟಿಟ್ಟರೆ ಊದಿನ ಕಡ್ಡಿ ಸುಡುತ್ತ ಬಂದ ಹಾಗೆ, ಅಂದಾಜು ತಾಸಿಗೊಮ್ಮೆ  ಭೀಕರ ಸಪ್ಪಳ ಮಾಡುತ್ತ ಬಾಂಬ್ ಸಿಡಿಯುವುದರಿಂದ ವನ್ಯ ಪ್ರಾಣಿಗಳು ಇಲ್ಲ ಸುಳಿಯಲಾರವು. ಈ ಕುರಿತಂತೆ ಅರಣ್ಯ ಇಲಾಖೆಯ ಕುಶಲಿಗಳು ಜನರಿಗೆ ಹೇಳಿಕೊಡಬಹುದು. ಹೀಗೆ ಮಾಡುವುದರಿಂದ ತಕ್ಕ ಮಟ್ಟಿಗೆ ಮಾನವ-ವನ್ಯ ಜೀವಿ ಸಂಘರ್ಷಕ್ಕೆ ತಡೆಹಾಕಿದಂತಾಗುತ್ತದೆ.