‘ಅಪ್ಪ ಅನ್ನ ಗೆಲ್ಲಬೇಕು; ಅಮ್ಮ ಮನೆ ನಿಭಾಯಿಸಬೇಕು’, ಇದು ಹಳದಿ ಹೂಗುಬ್ಬಿಯ ಸಂಸಾರ!

‘ಅಪ್ಪ ಅನ್ನ ಗೆಲ್ಲಬೇಕು; ಅಮ್ಮ ಮನೆ ನಿಭಾಯಿಸಬೇಕು’, ಇದು ಹಳದಿ ಹೂಗುಬ್ಬಿಯ ಸಂಸಾರ!

ಬರಹ

ನವನಗರದ ಪ್ರೊ. ಎಂ.ಎ. ಸವಣೂರ ಅವರ ಮನೆಯಲ್ಲಿ ಗೂಡುಕಟ್ಟಿ ಸಂಸಾರ ಹೂಡಿದ ಪರ್ಪಲ್ ರಂಪ್ಡ್ ಸನ್ ಬರ್ಡ್ -ಹಳದಿ ಹೂಗುಬ್ಬಿ.

 

ಯಾವುದೇ ಗುಬ್ಬಿ ನಮ್ಮ ಮನೆಯ ಅಂಗಳದಲ್ಲಿ ಗೂಡು ಕಟ್ಟಿದರೆ ಹೇಗಿರಬೇಡ? ಸಹಜವಾಗಿ ಇಡೀ ಮನೆ ಮಂದಿ ಆ ಹಕ್ಕಿಯ ಬಾಣಂತನಕ್ಕೆ ಸಜ್ಜಾಗಿ ಬಿಡುತ್ತೇವೆ. ನಮ್ಮ ಮನೆಯ ಮಗು ಎಂಬಂತೆ ತೀರ ಪೊಸೆಸಿವ್ ಆಗಿ ಅದನ್ನು ಪೊರೆಯಲು ಮೊದಲು ಮಾಡುತ್ತೇವೆ. ಹುಬ್ಬಳ್ಳಿ ಸಮೀಪದ ನವನಗರದಲ್ಲಿ ಪ್ರೊ. ಮೊಹಮದ್ ಆಲಿ ಸವಣೂರ ಅವರ ಮನೆಯಲ್ಲಿ ಪರ್ಪಲ್ ರಂಪ್ಡ್ ಸನ್ ಬರ್ಡ್ - ಹಳದಿ ಹೂ ಗುಬ್ಬಿ ಮನೆ ಕಟ್ಟಿದ್ದೇ ತಡ, ಈ ಸಂಭ್ರಮ ಅಲ್ಲಿ ಮನೆ ಮಾಡಿತ್ತು.

 

ಮನೆಯ ಆವರಣದಲ್ಲಿ ನೆಡಲಾಗಿದ್ದ ಸೀತಾಫಲ ಗಿಡದ ತುತ್ತಾನ ತುದಿಗೆ ಹೂ ಗುಬ್ಬಿ ಗೂಡು ನೇಯಲು ಶುರುಮಾಡಿತ್ತು. ಈ ಕಾಮಗಾರಿಯ ಸುಳಿವು ಪಡೆದ ಅವರ ಮೂರು ಮಕ್ಕಳು, ಮಡದಿ ಮನೆಯ ಹಿಂಬಾಗಿಲಿನಿಂದ ಆ ಗಿಡದ ಬದಿಗೆ ಹೋಗುವ ರಸ್ತೆಗೆ ‘ನೋ ಎಂಟ್ರಿ’ ಪ್ರಕಟಿಸಿದರು. ಮನೆಯ ಕೆಲಸದ ಆಳು ಮಗಳಿಗೂ ಇದು ಅನ್ವಯ! ಯಾರೂ ಅತ್ತ ಸುಳಿಯುವಂತಿಲ್ಲ.

 

ಕೇವಲ ಒಂದು ವಾರ ಕಳೆಯುವ ಹೊತ್ತಿಗೆ ಸುಂದರವಾದ ‘ಹ್ಯಾಂಗಿಂಗ್ ಪ್ಯಾಲೆಸ್’ ರೂಪುಗೊಂಡಿತು. ಜೋತು ಬಿಟ್ಟ ಮಾವಿನ ಹಣ್ಣಿನ ಆಕಾರದಲ್ಲಿತ್ತು ಗೂಡು. ಕೇಂದ್ರ ಹಣಕಾಸು ಮಂತ್ರಾಲಯ ಟಂಕಿಸಿರುವ ಐವತ್ತು ಪೈಸೆ ನಾಣ್ಯ ಮಾತ್ರ ಹಿಡಿಯುಷ್ಟು ಅಲ್ಲಿ ಜಾಗೆ ಇತ್ತು. ಅಲ್ಲಿ ಮೆತ್ತನೆಯ ಬಿಳಿ ಹತ್ತಿ ಹಾಸಿದ ಬೆಡ್ ನಿರ್ಮಾಣಗೊಂಡಿತ್ತು. ಪುಟ್ಟ ಗೂಡಿನ ದ್ವಾರ ‘ಟೂಥ್ ಪೆಕ್’ ನಷ್ಟು ಉದ್ದ-ಅಗಲವಾಗಿತ್ತು. ಗಾಳಿ-ಮಳೆ ಬಿದ್ದರೆ ನೀರು ಬೆಚ್ಚನೆಯ ಗೂಡಿನ ಒಳ ಸೇರದಂತೆ ಗಿಡದ ಎಲೆಗಳೇ ಬಾಗಿಲುಗಳಾಗಿದ್ದವು! ಪುಟ್ಟ ಕಡ್ಡಿ, ಪ್ಲಾಸ್ಟಿಕ್ ವಾಯರ್, ನಾರು-ಹುಲ್ಲು ಬಳಸಿ ಜೋಳಿಗೆಯಾಕಾರದ ಗೂಡು ನಿರ್ಮಿಸಿದ್ದ ಹಳದಿ ಹೂಗುಬ್ಬಿ ಜೇಡರ ಬಲೆ ಭದ್ರವಾಗಿ ಗೂಡಿಗೆ ಹೊಸೆದು ತೊಟ್ಟಿಲಿನಂತೆ ಇಳಿ ಬಿಟ್ಟಿತ್ತು.

 

 

ಪ್ರೊ. ಎಂ.ಎ. ಸವಣೂರ ಅವರ ಮನೆಯಲ್ಲಿ ಹಳದಿ ಹೂಗುಬ್ಬಿ ಹೆಣೆದ ಗೂಡು ಪ್ರಾರಂಭದಲ್ಲಿ ಹೀಗಿತ್ತು.

 

ವಿಚಿತ್ರವೆಂದರೆ ಹೆಣ್ಣು ಹೂಗುಬ್ಬಿ ಮಾತ್ರ ಗೂಡು ರಚಿಸುವಲ್ಲಿ ಮುತುವರ್ಜಿ ವಹಿಸಿದ್ದು! ಗಂಡು ಹೂ ಗುಬ್ಬಿ ಕೇವಲ ತಂತಿಯ ಮೇಲೆ  ಕುಳಿತು ಸುಪರವಿಜನ್ ಮಾಡುತ್ತಿತ್ತು! ಗೂಡು ರಚನೆಯಾಗುತ್ತಿದ್ದಂತೆ ನೇರಳೆ ಬಣ್ಣ ಪ್ರಧಾನವಾಗಿರುವ ಗುಬ್ಬಚ್ಚಿಗಿಂತ ತುಸು ಚಿಕ್ಕದಾದ ಹಳದಿ ಹೂ ಗುಬ್ಬಿ ಪುಟ್ಟದಾದ ಗೂಡಿನಲ್ಲಿ ಎರಡು ಬಿಳಿ-ಮೇಲೆ ಕಪ್ಪು ಚುಕ್ಕೆಹೊಂದಿದ, ತುಸು ಗುಲಾಬಿ ಬಣ್ಣದ ಮುದ್ದಾದ ಮೊಟ್ಟೆಗಳನ್ನಿಟ್ಟಿತು. ಮೊಟ್ಟೆಗೆ ಕಾವು ಕೊಡಲಶುರು ಮಾಡಿದ ಮೇಲೆ ಹೆಣ್ಣು ಗುಬ್ಬಿ ಅತ್ಯಂತ ಕ್ವಚಿತ್ ಆಗಿ ಎದ್ದು ಹೊರಹೋಗುತ್ತಿತ್ತು. ಹೆಣ್ಣು ಹೂಗುಬ್ಬಿಯ ಉದರಂಭರಣ ಕೂಡ ಗಂಡೇ ಮಾಡುತ್ತಿತ್ತು. ಆದರೆ ಗಂಡು ಹಕ್ಕಿ ಒಮ್ಮೆಯೂ ಮೊಟ್ಟೆಗೆ ಕಾವು ಕೊಡಲು ಗೂಡಿನಲ್ಲಿ ಕುಳಿತುಕೊಳ್ಳಲಿಲ್ಲ. ಆದರೆ ಗೂಡನ್ನು ವೈರಿಗಳಿಂದ ಕಾಯುವುದು ಗಂಡು ಗುಬ್ಬಿಯ ಕೆಲಸವಾಗಿತ್ತು.

 

ನಾಯಿ-ಬೆಕ್ಕು, ಕಾಗೆ, ಗಂಡು ಹಾಗೂ ಹೆಣ್ಣು ಕೋಗಿಲೆ ಗಳು ಅತ್ತ ಸುಳಿದಾಗ ರೆಡ್ ವೆಂಟೆಡ್ ಬುಲ್ ಬುಲ್ ಹಾಗೂ ರೆಡ್ ವಿಸ್ಕರ್ಡ್ ಬುಲ್ ಬುಲ್ ಸಹ ಜೊತೆ ಸೇರಿ, ಗಲಾಟೆ ಎಬ್ಬಿಸಿ, ತೀವ್ರವಾಗಿ ಕಿರುಚಾಡಿ ಮನೆ ಮಂದಿಯನ್ನೆಲ್ಲ ಸೇರಿಸಿ ತಮ್ಮ ಗೂಡು ಕಾಯುವಂತೆ ಮೊರೆ ಇಡುತ್ತಿದ್ದವು. ಹಾಗಾಗಿ ಗಂಡು ಹಳದಿ ಹೂ ಗುಬ್ಬಿ ಸೇರಿದಂತೆ, ಅವರ ಗೆಳೆಯರ ಟೋಳಿಯ ಯಾರ ಮಾತನ್ನೂ ಕಡೆಗಣಿಸದ ಪ್ರಮೇಯ ಮನೆಯವರಿಗೆ ಇತ್ತು. ಗಲಾಟೆ ಎಬ್ಬಿಸಿ, ಕಿರುಚಾಡಲು ಶುರು ಮಾಡುತ್ತಿದ್ದಂತೆ ಮನೆಯ ಮಂದಿ ಅಲ್ಲಿ ನೆರೆದು ಸಂಭವನೀಯ ಅವಘಡದಿಂದ ಪಾರು ಮಾಡುತ್ತಿದ್ದರು.

 

ತನ್ನ ಗೂಡು-ಮರಿ ಹಾಗೂ ಮಡದಿಯ ಸುರಕ್ಷತೆಗಾಗಿ ಜಾಗ್ರತ ಸ್ಥಿತಿಯಲ್ಲಿ ಅವಲೋಕಿಸುತ್ತಿರುವ ಗಂಡು ಪರ್ಪಲ್ ರಂಪ್ಡ್ ಸನ್ ಬರ್ಡ್.

 

ಹೆಣ್ಣು ಹಳದಿ ಹೂ ಗುಬ್ಬಿ ಸಹ ಅಷ್ಟೇ ಜಾಣ! ಪ್ರೊ. ಸವಣೂರ ಅವರ ಮನೆಯ ಎರಡನೇ ಬೆಡ್ ರೂಂ ಕಿಟಕಿಗೆ ಅತ್ಯಂತ ಹತ್ತಿರದಲ್ಲಿ, ಸುಮಾರು ಕೈಗೆಟಕುಷ್ಟು ಸಮೀಪ ಕಟ್ಟಿತ್ತು. ರಾತ್ರಿ ವೇಳೆ ಬೆಕ್ಕು-ಮುಂಗುಸಿ, ಹಾವು ಅಥವಾ ಮಂಗ ಗೂಡಿನ ಸಮೀಪ ಸುಳಿದರೂ ಅವು ಮಲಗಿದವರನ್ನೂ ಎಚ್ಚರಿಸಲು ಅನುಕೂಲವಾಗುವಂತೆ ತಯಾರಿ ಮಾಡಿದ್ದವು. ಒಂದು ವಾರ ಕಳೆಯುವ ಹೊತ್ತಿಗೆ ಒಂದು ಮೊಟ್ಟೆ ಹಾಳಾಗಿ, ಮತ್ತೊಂದು ಮೊಟ್ಟೆಯಿಂದ ಮಾತ್ರ ಮಾಂಸದ ಮುದ್ದೆಯಂತಹ ಪುಟ್ಟ ಹಕ್ಕಿ ಜೀವ ತಳೆದಿತ್ತು. ಪ್ರೊ. ಸವಣೂರ ಅವರ ಮನೆಯಲ್ಲಿ ಸಂಭ್ರಮ ಹೇಳತೀರದ್ದು.

 

ಜೀವ ತಳೆದು ೨೧ ದಿನಗಳು ಕಳೆಯುವ ಹೊತ್ತಿಗೆ, ಸದಾ ಹಸಿವಿನಿಂದ ಚೀತ್ಕರಿಸುತ್ತಿದ್ದ ಮರಿಗೆ ಊಟ ಉಣಬಡಿಸಿ ಗಂಡು ಹಳದಿ ಗುಬ್ಬಿ- ‘ಅಪ್ಪ’ ಹೈರಾಣಾಗಿದ್ದರು! ಒಟ್ಟಾರೆ ಈ ಗುಬ್ಬಿಗಳ ಲೋಕದಲ್ಲಿಯೂ ಅಮ್ಮ ಮನೆ ನಡೆಸಬೇಕು; ಅಪ್ಪ ಅನ್ನ ಗೆಲ್ಲಬೇಕು! ಎಂಬುದನ್ನು ಸೂಚ್ಯವಾಗಿ ಮನದಟ್ಟು ಮಾಡಿಸಿದ್ದವು.

 

 

ಗಂಡು ಹಳದಿ ಹೂಗುಬ್ಬಿ ತನ್ನ ಮರಿಗೆ ಊಟ ಉಣಬಡಿಸಲು ಗೂಡಿಗೆ ನೇತು ಬಿದ್ದಿರುವುದು.

 

ನೇರಳೆ ಬಣ್ಣವೇ ಮಖ್ಯವಾಗಿ ಗೋಚರಿಸುವ ಗುಬ್ಬಚ್ಚಿಗಿಂತ ಕಡಿಮೆ ಗಾತ್ರದ ಹಕ್ಕಿ ಪರ್ಪಲ್ ರಂಪ್ಡ್ ಸನ್ ಬರ್ಡ್ - ಹಳದಿ ಹೂ ಗುಬ್ಬಿಗೆ ಎದೆ, ಹೊಟ್ಟೆ ಹಳದಿ ಬಣ್ಣ. ತಲೆ ಮಾತ್ರ ಮಿರಿ-ಮಿರಿ ಮಿಂಚುವ ನೀಲಿ ಬಣ್ಣ. ರೆಕ್ಕೆ ಮತ್ತು ಬಾಲದ ಪುಕ್ಕಗಳು ಹೊಳೆಯುವ ನೇರಳೆ ಬಣ್ಣ. ಹೆಣ್ಣು ಹಕ್ಕಿ ಮಾತ್ರ ಗಂಡು ಹಕ್ಕಿಯಷ್ಟು ಬಣ್ಣದಲ್ಲಿ ಮಿಂಚದೆ ಮಂದವಾಗಿ ಕಾಣಿಸುತ್ತದೆ. ಕಂದು ಗೆಂಪು ಬಣ್ಣ ಅದಕ್ಕೆ ಮಖ್ಯವಾಗಿದ್ದು, ಹೊಟ್ಟೆಯ ಭಾಗ ಬಿಳಿ ಬೂದು ಬಣ್ಣ. ಸದಾ ಜೋಡಿಯಾಗಿಯೇ ಕಾಣಸಿಗುವ ಇವು ಹೆಚ್ಚಾಗಿ ಮಕರಂಧವಿರುವ ಹೂವಿನ ಗಿಡದಲ್ಲಿಯೇ ಗಲಾಟೆ ಎಬ್ಬಿಸುತ್ತ ಕುಳಿತಿರುತ್ತವೆ.

 

ಈ ಹಕ್ಕಿಯ ವಿಶೇಷತೆಯೆಂದರೆ ಇದು ಭಾರತದಲ್ಲಿ ಮಾತ್ರ ಕಾಣಸಿಗುವ ಹಕ್ಕಿ ಎಂದು ದಾಖಲಿಸಿದ್ದಾರೆ  ಹಕ್ಕಿ ತಜ್ಞರು. ಆದರೆ ಈ ಹಿಂದೆ ಶ್ರೀ ಲಂಕಾದ ಹಲವು ಪ್ರದೇಶಗಳಲ್ಲಿ ಈ ಹಕ್ಕಿಯನ್ನು ಗುರುತಿಸಲಾಗಿತ್ತು. ಆದರೆ ಸದ್ಯ ಅಲ್ಲಿ ನಶಿಸಿ ಹೋಗಿದೆ. ಗೋದಾವರಿ ಕಣಿವೆ ಉತ್ತರದಲ್ಲಿಯೂ ಕೂಡ ಈ ಪ್ರಜಾತಿಗೆ ಸೇರಿದ ಹಕ್ಕಿಗಳು ಕಂಡುಬಂದಿಲ್ಲ. ಇತ್ತೀಚೆಗೆ ಪ್ರೊ. ಮೊಹಮದ್ ಆಲಿ ಸವಣೂರ ಅವರು ವಿದ್ಯಾರ್ಥಿಗಳೊಂದಿಗೆ ಸಿಂಗಾಪೂರ, ಮಲೇಷಿಯಾಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡಾಗ ದಕ್ಷಿಣ ಮಲೇಷಿಯಾದಲ್ಲಿ ಹಳದಿ ಹೂಗುಬ್ಬಿಯನ್ನು ಗುರುತಿಸಿದ್ದಾಗಿ ನನಗೆ ಹೇಳಿದ್ದಾರೆ.

 

ಹಕ್ಕಿ ಅತ್ಯಂತ ಹಗುರವಾಗಿರುವುದರಿಂದ ಹೂವಿನ ತೊಟ್ಟು, ದಳಗಳು ಮತ್ತು ಎಲೆಗಳ ಮೇಲೆ ನಾಜೂಕಾಗಿ ಕುಳಿತು, ಅಥವಾ ತೀವ್ರವಾಗಿ ರೆಕ್ಕೆ ಬಡಿಯುತ್ತ ಉದ್ದವಾದ ಕೊಕ್ಕನ್ನು ಹೂವಿನ ಪಾತ್ರದೊಳಗೆ ಇಳಿಸಿ ಮಧು ಹೀರುತ್ತವೆ. ಸುಮಾರು ೨೦ ಸೆಕೆಂಡುಗಳ ಕಾಲ ನಿಂತಲ್ಲೇ ತೇಲುವ, ರೆಕ್ಕೆ ಬಡಿಯುತ್ತ ಮಧುಪಾನ ಮಾಡುವ ಸಾಮರ್ಥ್ಯ ಈ ಹಕ್ಕಿಗಿದೆ. ಚಿಕ್..ಚಿಕ್..ಚೀಚೀ ಎಂದು ಖುಷಿಯಾಗಿ ಮಧುಪಾನ ಮಾಡುತ್ತ, ನಿರಂತರವಾಗಿ ಸಿಳ್ಳು ಹಾಕುತ್ತಿರುವುದೇ ಇವುಗಳನ್ನು ಸುಲಭವಾಗಿ ಗುರುತಿಸುವ ವಿಧಾನ. ಗಂಡು ಹಳದಿ ಹೂ ಗುಬ್ಬಿ ಮಾತ್ರ ಸುಶ್ರಾವ್ಯವಾಗಿ ಹಾಡಬಲ್ಲುದು. ಮೇಲಾಗಿ ಹಾಡುವಾಗ ತನ್ನ ರೆಕ್ಕೆಗಳನ್ನು ಮೇಲಕ್ಕೆತ್ತಿ, ದೇಹ ಉಬ್ಬಿಸಿ, ಬಾಲ ಅಲುಗಾಡಿಸಿ ಅತ್ಯಂತ ಚುರುಕಾಗಿ ಆಂಗಿಕ ಅಭಿನಯದೊಂದಿಗೆ ಹಾಡುತ್ತದೆ!

 

ಹಾಗೆಯೇ ಪರತಂತ್ರ ಜೀವಿಯ ಬಂದಳಿಕೆಗಳ ಬೀಜಪ್ರಸಾರಕ್ಕೂ ಸಹಾಯ ಮಾಡಿ, ಹೂವಿನ ಗಿಡಗಳಿಗೆ ತೊಂದರೆ ಕೊಡುತ್ತವೆ.  ಅನಗತ್ಯ ಪರಾಗಸ್ಪರ್ಷಕ್ಕೆ ಎಡೆ ಮಾಡಿಕೊಟ್ಟು ‘ಕ್ರಾಸ್ ಪಾಲಿನೇಷನ್’ ನಿಂದಾಗಿ ಹೂವಿನ ಗಿಡಗಳಲ್ಲಿ ವ್ಯತ್ಯಾಸ, ರೋಗ ಹರಡುವಲ್ಲಿ ಸಹ ಇವು ತಮ್ಮ ಅರಿವಿಗಿಲ್ಲದಂತೆ ಕಾರಣೀಭೂತವಾಗಿವೆ.   

 

ಪರ್ಪಲ್ ರಂಪ್ಡ್ ಸನ್ ಬರ್ಡ್ - ಹಳದಿ ಹೂ ಗುಬ್ಬಿ ಪ್ರೊ. ಸವಣೂರ ಅವರ ಮನೆಯಲ್ಲಿ ತನ್ನ ಗೂಡು ಕಟ್ಟಿಕೊಳ್ಳುತ್ತ.

 

ಅಂತೂ ಇಂತು ೧೪ನೇ ದಿನಕ್ಕೆ ಕಣ್ಣು ಬಿಟ್ಟ ಹಳದಿ ಹೂ ಗುಬ್ಬಿಯ ಮರಿ, ೨೧ ದಿನಗಳು ಕಳೆಯುವುದರೊಳಗೆ ರೆಕ್ಕೆ-ಪುಕ್ಕ ಬರಿಸಿಕೊಂಡು ತನ್ನಪ್ಪನಂತೆ ಹಾರಲು ತವಕದಿಂದ ಗೂಡಿನ ತುದಿಗೆ ಬಂದು ಕುಳಿತು ಕಾಯುತ್ತಿತ್ತು. ಒಂದು ಬೆಳಿಗ್ಗೆ ಹೇಳದೇ-ಕೇಳದೇ ಹಾರಿಯೂ ಹೋಯಿತು. ಈಗ ಆಗಾಗ ತನ್ನ ಅಪ್ಪ-ಅಮ್ಮಂದಿರೊಂದಿಗೆ ಆಗಾಗ ಪ್ರೊ. ಸವಣೂರ ಅವರ ಮನೆಗೆ ಹಾರಿ ಬಂದು, ಹೂವಿನ ಗಿಡಗಳ ಮೇಲೆ ಕುಳಿತಿರುತ್ತದೆ. ಸದಾ ಜಾಗ್ರತರಾಗಿ ಅಪ್ಪ-ಅಮ್ಮ ಹಕ್ಕಿ ಮರಿಗೆ ಹಾರುವ, ವೈರಿಗಳಿಂದ ತಪ್ಪಿಸಿಕೊಳ್ಳುವ ಪಟ್ಟುಗಳನ್ನು ಅದು ಕಲಿಯುತ್ತಿರುತ್ತದೆ. ಕೆಲವೊಮ್ಮೆ ಮಾಡಿಯೂ ತೋರಿಸುತ್ತದೆ! ಈಗ ಪ್ರೊ. ಸವಣೂರ ಅವರ ಮಕ್ಕಳು ಆ ಗೂಡನ್ನು ಜೋಪಾನವಾಗಿ ಕಾಯ್ದಿಟ್ಟಿದ್ದಾರೆ.

 

ಇಂದು ಅಪ್ಪಂದಿರ ದಿನ. ಹಾಗಾಗಿ ಹಕ್ಕಿಗಳ ಲೋಕದ ಒಬ್ಬ ಸಮರ್ಥ, ಮಾದರಿ ಅಪ್ಪನನ್ನು ಇಲ್ಲಿ ಪರಿಚಯಿಸಿದ್ದೇನೆ. ಎಲ್ಲರಿಗೂ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು.