‘ಬಿಳಿ ಹುಬ್ಬಿನ ಬೀಸಣಿಗೆ ಬಾಲದ ಕೀಟ ಭಕ್ಷಕ’ ಭಾಗವತರಿಗೆ `ಸಾಯೋಣಾರಾ' ಹೇಳಿದಾಗ..!

‘ಬಿಳಿ ಹುಬ್ಬಿನ ಬೀಸಣಿಗೆ ಬಾಲದ ಕೀಟ ಭಕ್ಷಕ’ ಭಾಗವತರಿಗೆ `ಸಾಯೋಣಾರಾ' ಹೇಳಿದಾಗ..!

ಬರಹ

ಧಾರವಾಡದ ರಾಧಾಕೃಷ್ನನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ೨೭ ದಿನಗಳ ಹಿಂದೆ ಗೂಡು ನೇಯುತ್ತಿದ್ದ ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher. ಚಿತ್ರ: ಬಿ.ಎಂ.ಕೇದಾರನಾಥ.

 

ಇದು ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ ಹಕ್ಕಿ. ಅರ್ಥಾತ್ ಬೀಸಣಿಗೆ ಬಾಲ -White-browed Fantail-Flycatcher. ದೂರದಿಂದ ‘ಕುಂಡೆಕುಸ್ಕ’ ಪಕ್ಷಿ -Wag Tail ತರಹ ಕಾಣಿಸುತ್ತದೆ. ಧಾರವಾಡದ‍ ರಾಧಾಕೃಷ್ಣ ನಗರದ ಬಳಿಯ ಜಲದರ್ಶಿನಿಪುರದಲ್ಲಿರುವ ಪರಿಸರ ಮಿತ್ರ, ನಾಟಿ ವೈದ್ಯ, ವೃತ್ತಿಯಿಂದ ಉಪನ್ಯಾಸಕರಾಗಿರುವ ಕುಮಾರ್ ಭಾಗವತ್ ಅವರ ಮನೆಯ ಅಂಗಳದಲ್ಲಿ ೨೭ ದಿನಗಳ ಹಿಂದೆ ಗೂಡು ಕಟ್ಟಲು ಆರಂಭಿಸಿತ್ತು ಈ ಬೀಸಣಿಗೆ ಬಾಲ.  

 

ಅವರ ಮನೆಯ ಆವರಣವೇ ಒಂದು ಪುಟ್ಟ ಕಾಡು. ಅಧ್ಯಯನ ಯೋಗ್ಯ ಔಷಧೀಯ ಸಸ್ಯಗಳ ಹಾಗೂ ಮನೆ ಅಂಗಳದ ‘ಕಿಚನ್ ಗಾರ್ಡನ್’ ಗೆ ಸುಂದರ ಮಾದರಿ. ಒಟ್ಟಾರೆ ಕಾಂಕ್ರೀಟ್ ನಾಡಿನ ಮಧ್ಯೆ ಪುಟ್ಟ ಕಾಡು ಕುಮಾರ್  ಭಾಗವತ್ ಅವರ ಮನೆ ಅಂಗಳ. ಹಾಗಾಗಿ ‘ಬೀಸಣಿಕೆ ಬಾಲ’ ಅವರ ಮನೆಯ ಅಂಗಳ ಆಯ್ದುಕೊಂಡಿರಬಹುದು! ಮನೆಯ ಬೆಡ್ ರೂಂ ಗೆ ಅತ್ಯಂತ ಹತ್ತಿರದಲ್ಲಿ ಮಾವಿನ ಗಿಡದ ಅತ್ಯಂತ ಚಿಕ್ಕ ಟೊಂಗೆಗೆ ಅದು ಈ ಗೂಡು ಹೆಣೆಯಲು ಶುರು ಮಾಡಿತ್ತು. ನಾವು ಚಹಾ ಕುಡಿಯಲು ಬಳಸುವ ಕಪ್ಪಿನ ಗಾತ್ರ ಗೂಡು ಹೊಂದಿತ್ತು. ದಂಪತಿಗಳು ಅತ್ಯಂತ ಮುತುವರ್ಜಿಯಿಂದ ಈ ಗೂಡು ನಾಲ್ಕು ದಿನಗಳಲ್ಲಿ ನೇಯ್ದು; ಜೇಡರ ಬಲೆಗಳನ್ನು ಎಗರಿಸಿ ತಂದು ಆ ಗೂಡಿನ ಸುತ್ತ ಹೆಣೆದು ಭದ್ರಗೊಳಿಸಿದವು. ಅಂತಿಮ ಹಂತಕ್ಕೆ ಗೂಡು ತಲುಪಿದಾಗ ಅದು ‘ಪಿಂಗಾಣಿ ಬಟ್ಟಲಿನಂತಾಗಿತ್ತು’!

 

ಧಾರವಾಡದ ರಾಧಾಕೃಷ್ಣನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ೨೭ ದಿನಗಳ ಹಿಂದೆ ಗೂಡು ನೇಯುತ್ತಿದ್ದ ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher. ಚಿತ್ರ: ಬಿ.ಎಂ.ಕೇದಾರನಾಥ.

 

ಪೂರ್ಣ ಗೂಡು ರೂಪುಗೊಳ್ಳುತ್ತಿದ್ದಂತೆ, ಹೆಣ್ಣು ‘ಬೀಸಣಿಗೆ ಬಾಲ’ ಸುಂದರವಾದ ತಿಳಿ ಗುಲಾಬಿ ಬಣ್ಣದ ಹಾಗೂ ಮೊಟ್ಟೆಯ ಎರಡೂ ಧ್ರುವಗಳಲ್ಲಿ ಬಿಳಿ ಉಂಗುರಗಳಿದ್ದ ಮೂರು ಮೊಟ್ಟೆಗಳನ್ನು ಇಟ್ಟಿತು. ಎರಡು ತಾಸಿಗೊಮ್ಮೆ ಅವುಗಳ ಪಾಳಿ ಬದಲಾಗುತ್ತಿತ್ತು. ಮನೆಯ ಆವರಣದಲ್ಲಿ ಸಹಜವಾಗಿ ಕಾಗೆ, ಬಿಳಿ ಕೋಗಿಲೆ, ಮಂಗಗಳು ದಾಳಿ ಇಟ್ಟಾಗ ಪಾಳಿಯ ಮೇಲಿದ್ದ ‘ಬೀಸಣಿಗೆ ಬಾಲ’ ಅಟ್ಟಿಸಿಕೊಂಡು ಹೋಗುತ್ತಿತ್ತು. ಮತ್ತೊಂದು ಕೂಡಲೇ ಗೂಡನ್ನು ಆಕ್ರಮಿಸಿಕೊಂಡು ಮೊಟ್ಟೆಗಳನ್ನು ಸಂರಕ್ಷಿಸಿಕೊಳ್ಳುತ್ತಿತ್ತು! ಅವುಗಳ ಪರಸ್ಪರ ಹೊಂದಾಣಿಕೆ, ಸಂಯೋಜನೆ, ಕೆಲಸಗಳನ್ನು ಹಂಚಿಕೊಳ್ಳುವಿಕೆ ನಿಜಕ್ಕೂ ಬೆರಗು ಹುಟ್ಟಿಸುವಂತಿತ್ತು.

 

ಧಾರವಾಡದ ರಾಧಾಕೃಷ್ಣನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ೨೨ ದಿನಗಳ ಹಿಂದೆ ಗೂಡಿನಲ್ಲಿ ಮೊಟ್ಟೆ ಇಟ್ಟು ಕಾವು ನೀಡಲು ಕುಳಿತ ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher. ಚಿತ್ರ: ಬಿ.ಎಂ.ಕೇದಾರನಾಥ.

 

ಆದರೆ ನಮಗೆಲ್ಲ ಅವುಗಳ ಮೊಟ್ಟೆ ನೋಡಬೇಕು ಎಂಬ ಕಾತರ ಮನೆ ಮಾಡಿತ್ತು. ಕುಮಾರ್ ಭಾಗವತ್ ಅವರು ಅದಕ್ಕೆ ಅವಕಾಶ ನೀಡಿದರೂ, ಪ್ರೊ. ಗಂಗಾಧರ ಕಲ್ಲೂರ್ ನಮಗೆ ಎಚ್ಚರಿಸಿದ್ದರು. "ನೋಡ್ರೀ..ನೀವು ಐದು ನಿಮಷದೊಳಗ ಫೋಟೊ ಹೊಡಕೊಂಡು ಸರದ ಬಿಡಬೇಕು; ನಾವೇನಾದ್ರೂ ಹತ್ತರಿಂದ ಇಪ್ಪತ್ತು ನಿಮಿಷ ಫೋಟೊ ಸೆಷೆನ್ ಮಾಡಿದ್ರ ತತ್ತಿ ಅಲ್ಲಿಯೇ ಬಿಟ್ಟು ಅವು ಹಾರಿ ಹೋಗಿ ಬಿಡಬಹುದು. ಮರಿ ಆದ ಮ್ಯಾಲೆ ಬೇಕಿದ್ರ ಹತ್ತ ನಿಮಿಷ ಫೋಟೊ ಹೊಡಕೊಳ್ಳುವಿರಂತೆ" ಅಂದು,  ಅರ್ಧ ಗಂಟೆ ಕಾಯ್ದು ತಾಯಿ ಹಕ್ಕಿ ಹಾರಿ ಹೋಗುತ್ತಿದ್ದಂತೆ ತಾವೇ ಸ್ವತ: ಕನ್ನಡಿ ಹಿಡಿದು ನಮಗೆ ತೋರಿಸಿದರು. ಆ ಚಿತ್ರ ಹೀಗಿತ್ತು..

 

ಧಾರವಾಡದ ರಾಧಾಕೃಷ್ಣನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ೨೨ ದಿನಗಳ ಹಿಂದೆ ಗೂಡಿನಲ್ಲಿ ಮೊಟ್ಟೆ ಮೊಳೆತಾಗ ಪ್ರೊ. ಗಂಗಾಧರ್ ಕಲೂರ್ ಕನ್ನಡಿ ಹಿಡಿದು ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher ಮೊಟ್ಟೆ ನಮಗೆ ತೋರಿಸಿದ್ದು ಹೀಗೆ. ಚಿತ್ರ: ಬಿ.ಎಂ.ಕೇದಾರನಾಥ.

 

ನಮಗೆ ಖುಷಿಯೋ ಖುಷಿ. ಆದರೆ ಆತಂಕಕ್ಕೆ ಒಳಗಾದಂತೆ ಕಂಡು ಬಂದ ದಂಪತಿ ಹಕ್ಕಿಗಳು ಭಯದಿಂದ ಗಿಡದಲ್ಲಿ ಅತ್ತಿಂದಿತ್ತ ಕುಣಿದಾಡಲು ಶುರುಮಾಡಿದವು. ಕೂಡಲೇ ಹಿಂದಕ್ಕೆ ಸರಿದು ಅವುಗಳ ಮಾನಸಿಕ ನೆಮ್ಮದಿಗೆ ಭಂಗತಂದಿದ್ದಕ್ಕೆ ಬೇಜಾರು ಪಟ್ಟುಕೊಂಡೆವು. ಆದರೆ ಭಾಗವತ್ ಅವರ ಮನೆಯ ಬೆಡ್ ರೂಂ ಕಿಟಕಿಯಿಂದ ಇನ್ನೂ ಫೋಟೊ ಕ್ಲಿಕ್ಕಿಸಲು ಹವಣಿಸುತ್ತಿದ್ದ ಕೇದಾರ ಅಣ್ಣನ ಲೆನ್ಸ್ ಗೆ ತಾಯಿ ಹಕ್ಕಿ ಸಿಟ್ಟಿನಿಂದ ಹಾರಿ ಬಂದು ಕುಕ್ಕಿತು. ಅಲ್ಲಿಗೆ ನಮ್ಮ ಫೋಟೊ ಸೆಷೆನ್ ಮುಕ್ತಾಯವಾಯಿತು!

 

ಗುಬ್ಬಚ್ಚಿ ಗಾತ್ರದ, ಸದಾ ಚಟುವಟಿಕೆಯಿಂದ ಇರುವ ಉತ್ಸಾಹಿ ಹಕ್ಕಿ ಈ ಬೀಸಣಿಗೆ ಬಾಲ. ಹೊಗೆಗಪ್ಪು ಬಣ್ಣದ ಈ ಹಕ್ಕಿಗೆ ಎದೆಯ ಮೇಲೆ ಕಪ್ಪು ಮತ್ತು ಬಿಳಿ ಬಣ್ಣದ ಚುಕ್ಕೆಗಳು ಪ್ರಧಾನವಾಗಿ ಗೋಚರಿಸುತ್ತವೆ. ಕಣ್ಣುಗಳ ಮೇಲೆ ಹುಬ್ಬಿನಂತೆ ಬಿಳಿ ಪಟ್ಟಿ ಇದೆ. ಈ ಹಕ್ಕಿಯ ಪ್ರಧಾನ ಲಕ್ಷಣವೆಂದರೆ ತನ್ನ ಪುಟ್ಟ ಬಾಲದ ಪುಕ್ಕಗಳನ್ನು ಬೀಸಣಿಗೆಯಂತೆ ಬಿಚ್ಚಿ, ರೆಕ್ಕೆ ಜೋತು ಬಿಟ್ಟು ನವಿಲನ್ನು ಹೋಲುವಂತೆ ಕಾಣುವುದು. ಗಿಡದ ರೆಂಬೆಯ ಮೇಲೆ ಕುಳಿತಾಗ ನವಿಲು ನರ್ತಿಸುವಂತೆ ವರ್ತಿಸುತ್ತದೆ. ಪೂರ್ಣ ಬಾಲ ಬಿಚ್ಚಿ, ಮೇಲಿಂದ ಕೆಳಕ್ಕೆ ಬೀಸಣಿಕೆ ಬಾಲ ಹಾರಿಸಿ-ಇಳಿಸಿ ಗಂಡು ಹಕ್ಕಿ ಹೆಣ್ಣನ್ನು ಸಹ ಆಕರ್ಷಿಸುತ್ತದೆ. ಬಣ್ಣಗಳಲ್ಲಿರುವ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಆಧರಿಸಿ ಹಕ್ಕಿ ತಜ್ಞರು ‘ಬೀಸಣಿಗೆ ಬಾಲ’ದ ಕುಟುಂಬಕ್ಕೆ ಸೇರಿದ ೫ ಪ್ರಜಾತಿಗಳನ್ನು ಗುರುತಿಸಿದ್ದಾರೆ. ಕರ್ನಾಟಕದಲ್ಲಿ ಐದು ಪ್ರಜಾತಿಗಳನ್ನೂ ನಾವು ಕಾಣಬಹುದಾಗಿದೆ. ಪ್ರದೇಶ ದಿಂದ ಪ್ರದೇಶಕ್ಕೆ ಗಾತ್ರ ಹಾಗೂ ಬಣ್ಣಗಳಲ್ಲಿ ಕೊಂಚ ವ್ಯತ್ಯಾಸ ಈ ಹಕ್ಕಿಗಳಲ್ಲಿ ನಾವು ಗುರುತಿಸಬಹುದಾಗಿದೆ. 

 

ಧಾರವಾಡದ ರಾಧಾಕೃಷ್ಣನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ೧೪ ದಿನಗಳ ಹಿಂದೆ ಗೂಡಿನಲ್ಲಿ ಮೊಟ್ಟೆ ಒಡೆದು ಮರಿಗಳು ಹೊರಬಂದಾಗ ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher ತನ್ನ ಗೂಡಿನಲ್ಲಿ ಕುಳಿತಿದ್ದು ಹೀಗೆ.  ಚಿತ್ರ: ಬಿ.ಎಂ.ಕೇದಾರನಾಥ.

 

ಕುರುಚಲು ಕಾಡು, ಮನೆ ಮುಂದಿನ ಬೇಲಿ, ಹೊಲ-ಗದ್ದೆಗಳು, ಉದ್ಯಾನವನಗಳಲ್ಲಿ ಇವು ಟೋಳಿಗಳಲ್ಲಿ ಕಾಣಸಿಗುತ್ತವೆ. ಕುಳಿತಲ್ಲಿ ಕೂಡದೇ, ಅತ್ಯಂತ ಚಂಚಲತೆಯಿಂದ ಬೇಲಿಯಿಂದ ಬೇಲಿಗೆ ಗದ್ದಲವೆಬ್ಬಿಸಿ ಹಾರಾಡುತ್ತವೆ. ಹಾರಿ ಬಂದು ಕುಳಿತಾಗಲೊಮ್ಮೆ ಬಾಲದ ಬೀಸಣಿಗೆ ಬಿಚ್ಚಿ ಎಡಕ್ಕೂ-ಬಲಕ್ಕೂ ತಿರುಗಿಸಿ ವಯ್ಯಾರದಿಂದ, ಬಿಂಕ ತೋರಿಸಿ ವಿರಾಜಮಾನವಾಗುತ್ತವೆ! ಹಾಗೆ ಹಾರುವಾಗ, ಬಂದು ಕುಳಿತಾಗ ‘ಚೀ..ಚೀ..ಚಿವ್ ಚೀ..ವೀ’ ಎಂಬಂತೆ ಹಾಗೂ ಗಂಡು ಹಕ್ಕಿ ಸಂತಾನೋತ್ಪತ್ತಿ ಸಮಯದಲ್ಲಿ ‘ಟಿಂಟಿಣಿ..ಟಿಂಟಿಣಿ..ಟಿಣ್’ ಎಂಬಂತೆ ಗೆಜ್ಜೆ ನಾದ ಹೊರಡಿಸಿದಂತೆ ಆಕರ್ಷಕವಾಗಿ ಕೂಗುತ್ತದೆ. ಮಾರ್ಚ್ ನಿಂದ ಆಗಸ್ಟ್ ಇವುಗಳ ಸಂತಾನೋತ್ಪತ್ತಿ ಕಾಲ. ಹಾಗಾಗಿ ಚಿಕ್ಕ ಪೊದೆ, ಕಣಿವೆ ಹಾಗೂ ಗಿಡಗಳ ಸಣ್ಣ ಕೊಬೆಗಳ ಮೇಲೆ ಹುಲ್ಲು-ನಾರು ಮತ್ತು ಜೇಡರ ಬಲೆ ಬಳಸಿ ಗೂಡು ಕಟ್ಟುತ್ತವೆ. 

 

ಕುಮಾರ್ ಭಾಗವತ್ ಅವರ ಮನೆಯಲ್ಲಿ ನಮಗೆ ಈ ಎಲ್ಲ ಬೆಳವಣಿಗೆಗಳನ್ನು ಸುಮಾರು ೨೭ ದಿನಗಳ ಕಾಲ ನೋಡಲು-ದಾಖಲಿಸಲು ಸಧ್ಯವಾಗಿದ್ದು ಖುಷಿ ಕೊಟ್ಟಿದೆ. ಹೀಗೆ ನೋಡುತ್ತಿರುವಂತೆಯೇ ೨೧ ದಿನಗಳ ಹೊತ್ತಿಗೆ ಮೂರು ಮೊಟ್ಟೆಗಳು ಒಡೆದು ಪುಟ್ಟ ಹಕ್ಕಿಗಳು ಜೀವ ತಳೆದವು. ನಮ್ಮ ಹರುಷಕ್ಕೆ ಪಾರವೇ ಇರಲಿಲ್ಲ. ಕುಮಾರ್ ಭಾಗವತ್ ಅವರ ಶ್ರೀಮತಿ-ಮಕ್ಕಳು ತಮ್ಮ ಬಡಾವಣೆಯ ಎಲ್ಲರನ್ನೂ ಕರೆ ತಂದು ತೋರಿಸಿ, ತಾವೇ ಸಾಕಿದ್ದೇವೆನೋ? ಎಂಬಂತೆ ಖುಷಿ ಪಟ್ಟರು.

 

 

ಧಾರವಾಡದ ರಾಧಾಕೃಷ್ಣನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ೧೨ ದಿನಗಳ ಹಿಂದೆ ಗೂಡಿನಲ್ಲಿ ಮೊಟ್ಟೆ ಒಡೆದು ಮರಿಗಳು ಹೊರಬಂದಾಗ ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher ತನ್ನ ಗೂಡಿನಲ್ಲಿ ಊಟ ಉಣಬಡಿಸುತ್ತಿದ್ದುದು ಹೀಗೆ.  ಚಿತ್ರ: ಬಿ.ಎಂ.ಕೇದಾರನಾಥ.

 

ಆಗಾಗ ರೆಕ್ಕೆ ಇರುವ ಕೀಟಗಳು, ಹ್ಯಾತೆಗಳು, ಜೇನ್ನೊಣಗಳು, ಪಾತರಗಿತ್ತಿಗಳು, ಅತ್ಯಂತ ವಿಷಕಾರಿ ಕೀಟಗಳನ್ನೂ ಸಹ ಒಮ್ಮೊಮ್ಮೆ ಹೆಕ್ಕಿ ಕೊಕ್ಕಿನಲ್ಲಿ ಬಂಧಿಸಿ ತಂದು, ತಾಯಿ ಮತ್ತು ತಂದೆ ಹಕ್ಕಿಗಳು ಮಾಂಸದ ಮುದ್ದೆಯಂತಿದ್ದ ಮರಿಗಳಿಗೆ ಉಣ ಬಡಿಸುತ್ತಿದ್ದುದು ನಮಗೆ ಭಯಂಕರವಾಗಿ ಕಾಣಿಸುತ್ತಿತ್ತು. ಮರಿಗಳ ಬಾಯಿಗೆ ಅಥವಾ ಗಂಟಲಿಗೆ ಕಚ್ಚಿದರೆ? ಎಂದು ಮನದಲ್ಲಿ ಕಾಳಜಿ ಮೂಡುತ್ತಿತ್ತು. ಒಟ್ಟಾರೆ ದಿನದ ೧೪ ತಾಸು ಮರಿಗಳ ಲಾಲನೆ-ಪಾಲನೆಯಲ್ಲಿ ‘ಬೀಸಣಿಗೆ ಬಾಲ’ ಸದಾ ತೊಡಗಿಸಿಕೊಂಡಿರುತ್ತಿದ್ದವು. ಬೇಜಾರು ಪಟ್ಟುಕೊಳ್ಳದೇ ಮರಿಗಳ ಉಚ್ಛಿಷ್ಠವನ್ನು ಕಕ್ಕಿನಲ್ಲಿ ಎತ್ತಿ ಹಿಡಿದು, ಗೂಡಿನಿಂದ ಹೊರಗೆ ಬಿಸಾಕಿ ಸ್ವಚ್ಛತೆ ಕಾಪಾಡುತ್ತಿದ್ದವು. ಮರಿಗಳ ಆರೋಗ್ಯದ ಬಗ್ಗೆ ಅವುಗಳಿಗಿದ್ದ ಕಾಳಜಿ ನಮ್ಮ ಕಣ್ಣು ತೆರೆಸುವಂತಿತ್ತು. ಹೀಗೆಯೇ ೮ ದಿನಗಳು ಕಳೆಯುವ ಹೊತ್ತಿಗೆ ಮರಿಗಳು ಕಣ್ಣು ಬಿಟ್ಟುವು.

 

ಧಾರವಾಡದ ರಾಧಾಕೃಷ್ಣನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ೧೦ ದಿನಗಳ ಹಿಂದೆ ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher ತನ್ನ ಗೂಡಿನಲ್ಲಿ ಮರಿಗಳಿಗೆ ಊಟ ಉಣಬಡಿಸಲು ರೆಕ್ಕೆಯಿರುವ ಹುಳುವೊಂದನ್ನು ಬೇಟೆಯಾಡಿ ತಂದ ಕ್ಷಣ.  ಚಿತ್ರ: ಬಿ.ಎಂ.ಕೇದಾರನಾಥ.

 

ಭಾರತ, ಬಾಂಗ್ಲಾ ದೇಶ, ಭರ್ಮಾ ಗಳಲ್ಲಿಯೂ ಕಂಡು ಬರುವ ಈ ‘ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ’ ಧಾರ್ವಾಡದಲ್ಲಿಯೂ ತನ್ನ ಛಾಪು ಮೂಡಿಸಿರುವುದು ನಮಗೆ ಹರ್ಷ ತಂದಿತ್ತು.

 

 

ಹಾರಲು ಇನ್ನೆರಡು ಬೀಸಣಿಗೆ ಬಾಲಗಳು ಸಜ್ಜಾಗಿರುವುದು.

 

ಸತತ ೨೭ ರಿಂದ ೨೯ ದಿನಗಳ ಕಾಲ ನಿತ್ಯ ಬೆಳಿಗ್ಗೆ ಭಾಗವತ್ ಅವರ ಮನೆಗೆ ಭೇಟಿ ಕೊಟ್ಟು, ತಾದಾತ್ಮ್ಜ್ಯದಿಂದ ಸುಂದರವಾದ ಚಿತ್ರಗಳನ್ನು ಮಾತ್ರವಲ್ಲ..ಹಕ್ಕಿಯ ಮೂಡ್ ಗಳನ್ನು ಸಹ ಸೆರೆ ಹಿಡಿದ ಛಾಯಾಪತ್ರಕರ್ತ ಮಿತ್ರ ಬಿ.ಎಂ.ಕೇದಾರನಾಥ್ ನಿಜಕ್ಕೂ ಅಭಿನಂದನೆಗೆ ಅರ್ಹರು. ಅವರ ಕಣ್ಣುಗಳ ಮೂಲಕ ನಾವೆಲ್ಲ ಈ ಚಿತ್ರಗಳನ್ನು ನೋಡಲು ಸಾಧ್ಯವಾಗಿದೆ.

 

ಧಾರವಾಡದ ರಾಧಾಕೃಷ್ಣನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ಕೇವಲ ೪ ದಿನಗಳ ಹಿಂದೆ ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher ಮರಿಗಳು ಹಾರಲು ಸನ್ನದ್ಧವಾಗಿ ಕಾಯ್ದಿರುವುದು. ಚಿತ್ರ: ಬಿ.ಎಂ.ಕೇದಾರನಾಥ.

 

ಕೇವಲ ೬ ದಿನಗಳ ಹಿಂದೆ ಈ ಮರಿಗಳು ತಮ್ಮ ತಾಯಿ ಹಾಗೂ ತಂದೆ ಹಕ್ಕಿಯಿಂದ ಹಾರುವ, ಜೋಲಿ ತಪ್ಪದಂತೆ ಮರದ ಅಥವಾ ಗಿಡದ ಟೊಂಗೆಗಳನ್ನು ಕಾಲಿನಿಂದ ಭದ್ರವಾಗಿ ಹಿಡಿದು ಕುಳಿತು ಕೊಳ್ಳುವ ಹಾಗೂ ಸಣ್ಣ ಹ್ಯಾತೆಗಳನ್ನು ಹಿಡಿದು ನುಂಗುವ ಬೇಟೆಯ ಕೌಷಲ್ಯಗಳನ್ನು ಕಲಿಯುವಲ್ಲಿ ನಿರತವಾಗಿದ್ದವು. ಹಾಗೆಯೇ ಒಂದೊಂದಾಗಿ ಗೂಡು ಬಿಟ್ಟು ಟೊಂಗೆಗಳನ್ನು ಆಶ್ರಯಿಸುತ್ತಿದ್ದಂತೆ ಅಪ್ಪ ಹಕ್ಕಿ ಜಾಗರೂಕತೆಯಿಂದ ದೂರದ ಟೊಂಗೆಗೆ ಹಾರುವಂತೆ ಪ್ರೇರೇಪಿಸುತ್ತಿತ್ತು. ಕಳೆದ ಮೂರು ದಿನಗಳ ಹಿಂದೆ ಸ್ವತಂತ್ರವಾಗಿ ಹಾರುವುದನ್ನು ಕಲಿತ ಮರಿಗಳು ಅಲ್ಲಿಯೇ ಭಾಗವತರ ಮನೆಯ ಅಂಗಳದಲ್ಲಿ ಹಾರಾಡಿ ಕೊನೆಗೆ ವಿಳಾಸ ನೀಡದೇ ಈ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಲು ಹಾರಿ ಹೋದವು.

 

ಧಾರವಾಡದ ರಾಧಾಕೃಷ್ಣನಗರದ ಬಳಿಯ ಜಲದರ್ಶಿನಿ ಪುರ ಬಡಾವಣೆಯಲ್ಲಿರುವ ಪರಿಸರ ಮಿತ್ರ ಕುಮಾರ ಭಾಗವತ್ ಅವರ ಮನೆ ಅಂಗಳದಲ್ಲಿ ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ -White Browed Fan Tail Fly Catcher ಮರಿಗಳು ಹಾರಿ ಹೋದ ಮೇಲೆ ಖಾಲಿಯಾದ ಗೂಡು ಹೀಗೆ ಭಣಗುಡುತ್ತಿತ್ತು. ಚಿತ್ರ: ಬಿ.ಎಂ.ಕೇದಾರನಾಥ.

 

ಆದರೆ ಭಾಗವತ ಅವರ ಮನೆಯಲ್ಲಿ ಈಗಲೂ ಖುಷಿ ಮನೆ ಮಾಡಿದೆ. ಬೀಸಣಿಗೆ ಬಾಲಗಳು  ಸಾಯೋಣಾರಾ ಹಾಡಿ ಹಾರಿ ಹೋಗಿದ್ದಕ್ಕೆ ಅವರಿಗೆ ದು:ಖವಿಲ್ಲ. ಅವು ಸುಖವಾಗಿ ಬಾಳಲಿ ಎಂಬ ಇಂಗಿತ ಅವರದ್ದು. ಮತ್ತೊಮ್ಮೆ ಅದೇ ಗೂಡಿನಲ್ಲಿ  ಬೀಸಣಿಗೆ ಬಾಲ ಮರಿ ಮಾಡಲಿ ಎಂಬ ಕೋರಿಕೆ ಮಾತ್ರ ಭಾಗವತರದ್ದು; ಹಾಗೆಯೇ ಆಗಲಿ ಎಂಬ ಹಾರೈಕೆ ನಮ್ಮೆಲ್ಲರದು!