ಷುಗರ್ ವಾಸಿಯಾಗಲು ಉತ್ತಮ ಸಲಹೆ - ತಕ್ಷಣವೇ ಸಂಪರ್ಕಿಸಿ

ಷುಗರ್ ವಾಸಿಯಾಗಲು ಉತ್ತಮ ಸಲಹೆ - ತಕ್ಷಣವೇ ಸಂಪರ್ಕಿಸಿ

ಬರಹ

ಪಕ್ಕದ ಹಳ್ಳಿಯ ಪಟೇಲ ಧಿಡೀರ್ ಡಾಕ್ಟರ್ ಆಗಿದ್ದ. ಎಲ್ಲಾ ಆಹ್ವಾನ ಪತ್ರಿಕೆಗಳಲ್ಲೂ ಡಾ.ಪಟೇಲ ಅಂತಾ ಇರೋದು. ಪೇಪರ್ನಾಗೆಲ್ಲಾ ಪೇಮಸ್. ಇವರ ಅಜ್ಜನ ಕಾಲದಾಗೆ ನಾಟಿ ಔಷಧಿ ಕೊಡ್ತಾ ಇದ್ರಂತೆ.  ಗಾಯ ಆದಾಗ ಅರಿಸಿನ ಹಚ್ಚೋದು, ವಾಂತಿ ಭೇದಿಗೆ ಔಷಧಿ ಕೊಡೋದನ್ನ ಕಲ್ತಿದ್ದ ಪಟೇಲ ಆರಾಮಾಗಿ ದುಡ್ಡು ಹೊಡೀಬೋದು ಅಂತಾ ಎಕ್ದಮ್ ಡಾಕ್ಟರ್ ಆಗಿದ್ದ. ಸುತ್ತ ಹತ್ತು ಹಳ್ಳಿಗೂ ರವಷ್ಟು ಪೇಮಸ್ ಆಗಿದ್ದ. ಬೆಳಗ್ಗೆ 8ರಿಂದನೇ ಜನ ಕ್ಯೂ ನಿಲ್ಲೋರು. ಅವರಿಗೆಲ್ಲಾ ತಿಂಡಿ, ಚಾ ಅದನ್ನು ಆಮ್ಯಾಕೆ ಬಿಲ್ನಾಗೆ ಸೇರ್ಸೋನು. ಇದು ನಮ್ಮೂರಿನ ಗೌಡಪ್ಪನ ಕಿವಿಗೆ ಬಿತ್ತು. ನನಗೂ ಸುಗರ್ ಇದ್ದಂಗೆ ಅನುಮಾನ ಐತೆ ಒಂದು ಸಾರಿ ಪಟೇಲನತಾವ ಹೋಗ್ ಬರನಾ ಕೋಮಲ್ ಅಂದ.

ಸರಿ, ಬೆಳಗ್ಗೆ ನಾನು, ಗೌಡ ಮತ್ತು ಸುಬ್ಬ ಬೈಕ್ ತೊಗಂಡು ಪಟೇಲನ ಹಳ್ಳಿಗೆ ಹೊಂಟ್ವಿ. ದೊಡ್ಡ ರಸ್ತೆ ಇರೋ ತನಕ ಬೈಕ್ನಾಗೆ ಹೋಯ್ತಿದ್ವಿ. ಆಮೇಲೆ ಸುಬ್ಬ ಬೈಕ್ ತಳ್ಕೊಂಡು ಮುಂದೆ ಹೋಗೋನು. ನಾವು ಹಿಂದೆ. ಗೌಡಪ್ಪನ ತ್ರಿಬ್ಸ್ ಪ್ರಾಬ್ಲಮ್. ಆದ್ರೆ ಜನ ಗೌಡಪ್ಪನ ಜುಗ್ಗ ತನಕ್ಕೆ ಬೆಂಕಿ ಹಾಕಾ. ಸರಿ ಪಟೇಲನ ಮನೆ ಬಂತು. ನಾವು ಕ್ಯೂನಾಗೆ ನಿಂತ್ವಿ. ಗೌಡಪ್ಪನ ಮೈನೇ ವಾಸ್ನೆ ಅಂದ್ರೆ, ಕ್ಯೂನಾಗೆ ಅವನ ಅಪ್ಪನಂತೋರು ಇದ್ರು. ಸುಬ್ಬ ವಾಸು ಊದಬತ್ತಿ ಹಚ್ಕಂಡೇ ಕ್ಯೂನಾಗೆ ಇದ್ದ. ಎಲ್ಲಿ ವಾಂತಿಗೆ ಔಸಧಿ ಕೊಟ್ಟಾನು ಪಟೇಲಾ ಅಂತಾ.

ಗೌಡಪ್ಪನ ಸರದಿ. ಗೌಡ್ರೆ ದಿನಕ್ಕೆ ಎಷ್ಟು ಸಕ್ಕರೆ ತಿಂತೀರಾ. "ಚಾ"ಕ್ಕೆ, ಮನೇಗೆ ಏನಾದರೂ ಸ್ವೀಟ್ ಮಾಡಿದರೆ ಹಾಗೇ ಎಲೆ ಅಡಿಕೆ ಹಾಕಿ ಬಾಯಿ ಸುಟ್ಟರೆ ಸಕ್ಕರೆ ತಿಂತೀವ್ನಿ. ಅಂಗಾರೆ ಸಾನೆ ಸುಗರ್ ಅಯ್ತೆ. ಒಂದ್ ಕೆಲಸ ಮಾಡಿ ಬೆಳಗ್ಗೆ 4ಕ್ಕೆ ಎದ್ದು ಎರಡು ಕೀ.ಮೀ ನಡೀರಿ. ಒಂದು ಕಿ.ಮೀ ಓಡಿರಿ,ಮತ್ತೆ ಎರಡು ಕಿ.ಮೀ ಬೈಕ್ನಾಗೆ ಹೋಗ್ರಿ. ಆಮ್ಯಾಕೆ ವಾಪಸ್ಸು ಬಸ್ನಾಗೆ ಬರ್ರಿ ಅಂದ. ಯಾಕ್ ಪಟೇಲರೆ ಹಿಂಗೆ. ಬೈಕ್ನಾಗೆ ಹೋದರೆ ಹೊಟ್ಟೆ ತುಳುಕೋದ್ರಿಂದ ಅಬ್ಸ್ 12 ಪ್ಯಾಕ್ ಆಯ್ತದೆ. ಸುಸ್ತಾಗಿರ್ತದಲ್ಲಾ ವಾಪಸ್ಸು ಅದಕ್ಕೆ ಬಸ್ನಾಗೆ ಬನ್ನಿ ಅಂದೆ. ಒಂದು ಸ್ವಲ್ಪ ಹಸಿರು ಔಷಧಿ ಕೊಟ್ಟ. ವಾಸ್ನೆ ತುಳಸೀಗಿಡದ್ದು ಇದ್ದಂಗೆ ಐತೆ. ಏ ಅವೆಲ್ಲಾ ಕೇಳಬಾರದು. ಪವರ್ ಒಂಟೋಯ್ತದೆ ಅಂದ ಪಟೇಲ.

ಸರಿ ಗೌಡ, ಪಟೇಲ ಹೇಳ್ದಂಗೆ ಸುರು ಹಚ್ಕಂಡ. ಬೆಳಗ್ಗೆ 4ಕ್ಕೆ ಎದ್ದು ಹರಿದೋಗಿರೋ ಷೂ ಹಾಕ್ಕೊಂಡು ಹೊಂಡೋನು. ಅದ್ರಾಗೆ ಮಣ್ಣು, ಕಲ್ಲು ಹೋದ್ರೆ ದಾರ್ಯಾಗೆ ಕಂತು ಬಿಚ್ಕಂಡು ನೆಲಕ್ಕೆ ಬಡಿಯೋನು. ಸಾಕ್ಸ್ ಇಲ್ಲಾ ಅಂತಾ ಹಳೇ ಪಂಚೆ ತುಂಡು ಕಾಲಿಗೆ ಬಿಗಿಯೋನು. ಬೀದ್ಯಾಗಿನ ನಾಯಿಯೆಲ್ಲಾ ಬೊಗಳೋವು. ಅದಕ್ಕೆ ಕೈನಾಗೆ ಕಲ್ಲು ಇಟ್ಕೊಂಡು ಹೋಗೋನು. ಹಳ್ಳಿ ದಾಟೋತಂಕ ಅವೇ ಫ್ರೆಂಡ್ಸ್. ನಾನು ಸುಬ್ಬ ಬೈಕ್ನಾಗೆ ಅವನು ಹೋಗಿ ಅರ್ಧ ಗಂಟೆ ಆದ್ ಮ್ಯಾಕೆ ಹೋಯ್ತಿದ್ವಿ. ಸರಿ ಬೆಳಗ್ಗೆ 4ಕ್ಕೆ ಮನೆಯಿಂದ ಹೋದ ಗೌಡ ಮಧ್ಯಾಹ್ನ 12ಕ್ಕೆ ಮನಿಗೆ ಬರೋನು. ಯಾಕೆಂದ್ರೆ ಆ ಕಡೆಯಿಂದ ಜನ ಇರಲ್ಲ ಅಂತಾ 11-30ಕ್ಕೆ ಮೊದಲ್ನೆ ಬಸ್. ಬಡ್ಡೆ ಹೈದ ಗೌಡ ಆ ಬಸ್ಸಿಗೂ ಪಾಸ್ ಮಾಡ್ಸಕಂಡಿದ್ದ.

ನಿಂಗನ ಕ್ಯಾಂಟೀನಿಗೆ ಬಂದರೆ ಸುಗರ್ ಲೆಸ್ ಚಾ. ಲೇ ಎಂಟಾಣೆ ತೊಗಳಲೇ ಅನ್ನೋನು ಗೌಡಪ್ಪ. ಏ ಥು, ಎರಡು ತಿಂಗಳಿಗೆ ಗರುಡ ಇದ್ದಂಗೆ ಇದ್ದ ಗೌಡ ಕಾಗೆ ತರ ಆಗೋಗಿದ್ದ. ಅವನ ಮೀಸೆ ನೋಡಿದ್ರೆ ದೃಷ್ಟಿ ಗೊಂಬೆಗೆ ಅಂಟಸ್ತದಂಗೆ ಕಾನ್ತಾ ಇತ್ತು. ಸಲ್ಟೆಲ್ಲಾ ಲೂಸ್ ಆಗಿತ್ತು. ಲೇ ಬಾರಲೇ ತಮ್ಮಾ ಅಂದ್ರೆ, ಯಾಕಲಾ ನಾನು ಗೌಡ. ನಮ್ಮೂರು ಹೆಣ್ಣು ಐಕ್ಳು ಕಟ್ಟಿಗೆ ಒಡಿಯೋ ಕಿಸ್ನ ಅಂದ್ಕೊಂಡು ಕಟ್ಟಿಗೆ ಒಡಿಯೋಕ್ಕೆ ಎಷ್ಟಲಾ ಅನ್ನೋವು. ತುಳಸಿ ಸೊಪ್ಪ ತಿಂದಿದ್ದೇ ತಿಂದಿದ್ದು. ಸರಿ ಮತ್ತೆ ಪಟೇಲನತಾವ ಹೋದ್ವಿ. ಲೇ ಸೈಡ್ಗೆ ನಿಂತ್ಕಳ್ರಲೆ ಅಂದ ಪಟೇಲ. ಮಗನೇ ನಾನು ಕಲಾ ಗೌಡ.

ಅಷ್ಟೊತ್ತಿಗೆ ಪಟೇಲನ ಮನೆತಾವ ಪೇಪರ್ನೋರು, ಟಿವಿಯೋರು ಜಮಾಯಿಸಿದ್ರು. ಪಟೇಲಂಗೆ ಇಂಟರ್ವ್ಯೂ ಮಾಡ್ತಾ ಇದ್ರು. ಯಾವುದಾದರೂ ಒಂದು ಉದಾ ಹೇಳಿ. ಅಂತಿದ್ದಾಗನೇ ಗೌಡಪ್ಪನ ಕರ್ಕೊಂಡು ಹೋಗಿ ಟಿವಿ ಕ್ಯಾಮರಾ ಮುಂದೆ ನಿಲ್ಸಿದ್ದ. ಸಲ್ಟು ತೆಗೆದು, ನೋಡಿ ಇವರು ಕಳೆದ ಎರಡು ತಿಂಗಳ ಹಿಂದೆ ತೆಳ್ಳಗಾಗಬೇಕು ಅಂತಾ ಬಂದಿದ್ರು. 10ಕೆಜಿ ಡವನ್ ಆಗಿದಾರೆ. ಇವರ ಅಬ್ಸ್ ನೋಡಿ. ಎಲ್ಲರಿಗೂ 6,8 ಬಂದರೆ ಎದೆ ಸೇರಿ ಇವರಿಗೆ 12 ಬಂದಿದೆ. ಇವರ ಕೈಕಾಲು ಮುಂಚೆ ಕಂಬ ಇದ್ದಂಗೆ ಇತ್ತು. ಈಗ ನೋಡಿ ಹಂಚಿಕಡ್ಡಿ ಆದಂಗೆ ಆಗೈತೆ. ಇವನ ಮುಖ ವಿಕಾರವಾಗಿತ್ತು. ಈಗ ನೋಡಿ ಅಂತಾ ಗೌಡಪ್ಪನ ಜೋಬಿಗೆ ಕೈ ಮಡಗಿ ಡಿಎಲ್ನಾಗೆ ಇರೋ ಪೊಟೋ ತೋರ್ಸದ. ಹಾಗೆ ಹೀಗೆ ಅಂತಾ ಎಲ್ಲಾ ಹೇಳ್ದ. ಗೌಡಪ್ಪ ಸಲ್ಟು ತೆಗೆದ್ರೆ ಕಟ್ಟಿಗೆ ಒಡಿಯೋ ಕಿಸ್ನ ಇದ್ದಂಗೆ ಇದ್ದ. ಇವರಿಗೆ ಕ್ಸಯಾ ಇದ್ದಂಗೆ ಕಾನ್ತದೆ ಅಂದಾ ಟಿವಿಯೋನು. ಯಾಕಲಾ, ಏನ್ಲಾ ಪಟೇಲ ನಾನು ಸುಗರ್ಗೆ ಅಂತ ಅಲ್ವಾ ಬಂದಿದ್ದು. ನೀವು ತೆಳ್ಳಗೆ ಆದ್ರೆ ಸುಗರ್ ಓಯ್ತದೆ ಎಲ್ಲಾ ಓಯ್ತದೆ ಅಂದ.

ಯಾಕೋ ಡೌಟ್ ಬಂದು ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಗೌಡಪ್ಪನ ಷಗರ್ ಡವನ್ ಆಗಿತ್ತು. ಇನ್ನೊಂದು ಸ್ವಲ್ಪ ದಿನ ಬಿಟ್ಟಿದ್ರೆ ಸಿದ್ದೇಸನ ಪಾದ ಸೇರ್ಕೊಂತಿದ್ರಿ ಅಂದ್ರು ಡಾಕ್ಟ್ರು. ಗೌಡಪ್ಪನ ತಲೆ ಗಿರ್ ಅಂದೋಯ್ತು. ನಿಂಗನ ಚಾ ಅಂಗಡಿಗೆ ಬಂದು 5ಚಮಚ ಸಕ್ಕರೆ ಹಾಕ್ಕುಸ್ಕೊಂಡು ಚಾ ಕುಡಿದ. ಮನ್ಯಾಗೆ ಎರ್ರಾಬಿರ್ರಿ ಸ್ವೀಟ್. ಅದು ಜಾಸ್ತಿಯಾಯ್ತು ಅಂದ್ರೆ ಉಪ್ಪಿನ ಕಾಯಿ ನೆಂಚ್ಕೊಂಡು ತಿನ್ನೋನು. ಅಂಗೂ ಹಿಂಗೂ ವಾರ ಕಳೆಯದೊರಳಗೆ ಒಂದು ಹತ್ತು ಕೆಜಿ ಸಕ್ಕರೆ ತಿಂದಿದ್ದ. ಏ ಮೂದೇವಿ ಇದೇನು ಹಿಂಗ್ ತಿನ್ತಿಯಾ ಅನ್ನೋವು ಹೆಂಡರು. ಈಗ ನಡೆಯಲಾ ಡಾಕ್ಟರ್ ತಾವ ಹೋಗೋಣ ಅಂದೂ ಚೆಕ್ ಮಾಡ್ಸಿದ್ರೆ ನಿಮಗೆ ಸ್ಯಾನೆ ಸುಗರ್ ಬಂದೈತೆ ಅಂದ್ರು. ಯಾಕ್ ಡಾಕ್ಟ್ರೆ, ನಿಮಗೆ ಮುಂಚೆ ಷುಗರ್ ಇರ್ಲಿಲ್ಲಾ. ನೀವು ಸುಮ್ನೆ ಪಥ್ಯಾ ಮಾಡಿದ್ದಕ್ಕೆ ಈಗ ಷುಗರ್ ಬಂದ್ಬಿಟ್ಟೈತೆ ಅಂತಿದ್ದಾಗೆನೇ, ಗೌಡಪ್ಪ, ಲೇ ಪಟೇಲ ನಿಂಗೆ ಐತಲಾ ಅಂದ.

ಅಟ್ಟೊತ್ತಿಗೆ ಸುಬ್ಬ ನಾನು ಒಂದು ದಪ ಬಾರೀ ಮೋಸನ್ ಆಯ್ತದೆ ಅಂತಾ ಹೋಗಿದ್ದಕ್ಕೆ ಮೋಸನ್ ಜಾಸ್ತಿ ಆಗೋ ಔಸಧಿ ಕೊಟ್ಟು ಅಡ್ಡ ಮಲಗ್ಸಿದ್ದಾ ಅಂದ. ಲೇ ಮುಂಚೆನೇ ಹೇಳ್ಬಾರ್ದಿತ್ತೇನ್ಲಾ. ಈಗ ದಿನ ಗೌಡಪ್ಪ ಬೆಳಗ್ಗೆ ಒಂದು ಫುಲ್ ಲೋಟದಾಗೆ ಬೇವಿನ ಸೊಪ್ಪಿನ ರಸ. ಎಲ್ಡು ಕಿ.ಮೀ ವಾಕಿಂಗ್, ಪಕ್ಕದಾಗೆ ಬಂದ್ರೆ ಮೇಕೆ ವಾಸ್ನೆ ಬತ್ತದೆ. ಸುಗರ್ ಲೆಸ್ ಚಾ, ಆಗಲೋ ಈಗಲೋ ಸ್ವೀಟ್. ಯಾವುದಾದರೂ ಫಂಕ್ಸನ್ ಗೆ ಬಂದ್ರೆ ಏ ಗೌಡಪ್ಪಂಗೆ ಹಾಕ್ ಬೇಡ್ರಿ ಸುಗರ್ ಐತೆ. ಲೇ ಪಟೇಲ ಅಂತಾ ಲೋಟ ಕುಕ್ತಾನೆ. ಸ್ವಲ್ಪ ದೂರು ಓಗ್ತಿದ್ದಾಗೆನೇ ಸುಸ್ತಾಯ್ತು ಅಂತಾ ಅಂಗೇ ಎಲ್ಲೆಂದ್ರೆ ಅಲ್ಲಿ ಕುಂತ್ಕತಾನೇ, ಅಂತು ಇಂತೂ ಏನು ಇಲ್ಲದ ನಮ್ಮ ಗೌಡಪ್ಪಂಗೆ ಸುಗರ್ ಅಟ್ಕಾಯಿಸ್ಕೊಂತು ಅನ್ನೋದು ಎಲ್ಲರಿಗೂ ಬೇಸರದ ವಿಸಯ. ಯಾಕೇಂದ್ರೆ ಅವರ ಮನೆಗೆ ಹೋದ್ರೆ ನಮಗೂ ಸುಗರ್ ಲೆಸ್ ಚಾ.