ಹೆ ಹೆ ನಾನೂ ಹಾಡಿಯೇ ಬಿಟ್ಟೆ

ಹೆ ಹೆ ನಾನೂ ಹಾಡಿಯೇ ಬಿಟ್ಟೆ

ನಾನು ಜನರೆದುರು  ಹಾಡಿ  ಸುಮಾರು ವರ್ಷಗಳೇ ಆಗಿರಬಹುದು. ಬಹುಷ: ಹತ್ತು ವರ್ಷಗಳಾಗಿರಬಹುದೇನೋ .ಈಗಲೂ ಮಗಳಿಗೆ ಜೋ ಜೋ ಹಾಡುವುದು , ಒಬ್ಬಳೇ    ಇದ್ದಾಗ ಅಥವ ಪತಿರಾಯ ತಲೆನೋವು ಸಾಕು ಎನ್ನುವವರೆಗೆ ಸಿನಿಮಾ ಹಾಡು ಹಾಡುವುದು ಇಷ್ಟೇ .  

ಹೀಗೆ ಹೋದ ತಿಂಗಳು ನನ್ನ ಭಾವನ ಮಗಳ ಸಮಾರಂಭಕ್ಜೆ ಹೋಗಿದ್ದೆವು ಹೊಸೂರಿನ ಜಕ್ಕಸಮುದ್ರ ಎಂಬ ಊರದು .ಎಲ್ಲರೂ ಮೂಲತ:  ಕನ್ನಡಿಗರೇ ಆದರೆ ತಮಿಳು ಮಿಶ್ರಿತ ಭಾಷೆ. ಅವರ ಕನ್ನಡವೇ ಬೇರೆ. ಸಮಾರಂಭ ಮುಗಿಸಿ ಅಲ್ಲಿಯೇ ಸಮೀಪದಲ್ಲಿ ಇದ್ದ ೮೦ ವರ್ಷ ಹಳೆಯದಾದ ರಾಘವೇಂದ್ರ ಗುಡಿಗೆ ಭೇಟಿ ಕೊಟ್ಟೆವು. 

ಪೂಜೆ ಶುರುವಾಗುವವರೆಗೂ  ಅಲ್ಲಿಯೆ ಇದ್ದ ಒಂದಷ್ಟು ಮಂದಿ ಹಾಡಲು ಶುರು ಮಾಡಿದರು. ಎಲ್ಲವೂ ಕೀರ್ತನೆಗಳು. ನಾನು ಕಲಿತಿದ್ದವೇ . ಹಾಗಾಗಿ ಅವರ ಹಾಡುಗಳಿಗೆ ಸುಮ್ಮನೇ ಬಾಯಿ ಆಡಿಸುತ್ತಿದ್ದೆ. ಪಾಪ ಪುರೋಹಿತರು ಚೆನ್ನಾಗಿ ಹಾಡುತ್ತಾಳೆ ಎಂದುಕೊಂಡರೇನೋ

"ನೀನೂ ಒಂದು ಹಾಡು ಹಾಡಮ್ಮಾ "ಎಂದರು

ನಾನು ಕಕ್ಕಾಬಿಕ್ಕಿ

"ಇಲ್ಲ ನನಗೆ ಬರೋದಿಲ್ಲ" ಎಂದೆ

"ಪರವಾಗಿಲ್ಲ ಹಾಡಿ ಆವಾಗಿಂದ ನೀವೂ ತಾಳ ಹಾಕುತ್ತಿದ್ದಿರಿ "ಅಂದರು ಮತ್ತೊಬ್ಬ ಮುತ್ತೈದೆ

ಅವರಿಗೇನು ಗೊತ್ತು ನಾನೂ ಸಿನಿಮಾ ಹಾಡುಗಳಿಗೂ ತಾಳ ಹಾಕುತೇನೆ ಅಂತ

"ಹೆ ಹೆ " ಎಂದೆ

ಯಾವ ದೇವರ ಹಾಡೂ ನೆನಪಿಗೆ ಬರುತ್ತಿಲ್ಲ. ಮನೆಯಲ್ಲಾದರೆ ನನ್ನದೇ ರಾಗ ನನ್ನದೇ ತಾಳ ಹಾಡಿದರೂ, ಕಿರುಚಿದರೂ ಕೇಳೋರಿಲ್ಲ. ಆದರೆ ಇಲ್ಲಿ?

ಎದುರಿಗೆ ನನ್ನ ವಾರಗಿತ್ತಿ. ಮರ್ಯಾದೆ ಪ್ರಶ್ನೆ . ಪಕ್ಕದಲ್ಲಿ ಪತಿರಾಯ  . ಅಷ್ಟೂ ಬರೋದಿಲ್ವಾ ಎನ್ನುವಂತೆ ನೋಡುತ್ತಿದ್ದಾರೆ. ಅಕ್ಕ ಪಕ್ಕದಲ್ಲಿ  ನೆಂಟರು. ಮರ್ಯಾದೆ ಉಳಿಸಿಕೊಳ್ಲಲೇ ಬೇಕಿತ್ತು

ಯಾರೋ ಭಾಗ್ಯಾದ ಲಕ್ಷಿ ಬಾರಮ್ಮ ಹಾಡಿ ಬಿಡಮ್ಮ 

ಎಂದರು

 

ತಕ್ಷಣ ಆದ್ವಾನ್ ಲಕ್ಷ್ಮಿದೇವಿ ನೆನಪಿಗೆ ಬಂದರು

ಅದ್ಯಾವುದೋ ಚಿತ್ರದಲ್ಲಿ ಹಾಡಿದ್ದು

ಭಾಗ್ಯಾದಾ ಲಕ್ಷ್ಮಿ ಬಾರಮ್ಮಾ ನಮ್ಮೊಮ್ಮಾ

ಸೌಭಾಗ್ಯ್ದದ ಲಕ್ಷ್ಮಿ ಬಾರಮ್ಮ

ಎಂದು ಶುರು ಮಾಡಿಯೇ ಬಿಟ್ಟೆ ಅದು ಹಿಂದೂಸ್ಥಾನಿ ಸಂಗೀತ ಶೈಲಿ ಅನ್ನಿಸುತ್ತೆ

ನಂತರದ  ಚರಣ ಹಾಡಬೇಕು

ಏನು ಮಾಡಿದರೂ ಆ ರಾಗದಲ್ಲಿ ಹಾಡು ನೆನಪಿಗೆ ಬರಲಿಲ್ಲ

ನಂತರ ಹೊರಳಿದ್ದು

ಪಕ್ಕಾ ಕರ್ನಾಟಕ ಶೈಲಿಯಲ್ಲಿ 

"ಸಕ್ಕರೆ ತುಪ್ಪ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ" ಎಂದು ಬದಲಾಯಿಸಿ ಮುಂದುವರೆದೆ

ಎಲ್ಲರೂ ತಬ್ಬಿಬ್ಬು ಯಾವ ಚರಣವೋ ಯಾವದೋ ಒಂದೂ ಆರ್ಡರ್ ಇಲ್ಲದಂತೆ ನೆನಪಿಗೆ ಬಂದಂತೆ ಹಾಡುತ್ತಿದ್ದೆ

ಹಾಗೆ  ಸ್ವಲ್ಪ ಹೊತ್ತಾದ ಮೇಲೆ 

ನಂತರದ  ಚರಣ ನೆನಪಿಗೆ ಬರಲಿಲ್ಲ

ಆಗಲೇ ನೆನಪಾದದ್ದು ಅನಂತನಾಗ್ . ನೋಡಿ ಸ್ವಾಮಿ ನಾವಿರೋದೆ ಹೀಗೆ  ಚಿತ್ರದ್ದು

 

"ಅತ್ತಿತ್ತಲುಗದೆ ಭಕ್ತರ ಮನೆಯಲಿ"

"ನಿತ್ಯ ಮಹೋತ್ಸವ ನಿತ್ಯ ಸುಂಮಂಗಲ"

 

ಎಂದು ಶುರು ಮಾಡಿ  ಮುಗಿಸಿಯೇ ಬಿಟ್ಟೆ

 

ಸುತ್ತಲಿದ್ದವರ ಮುಖ ನೋಡಲು ಹಿಂಜರಿಕೆ

ಮೊದಲಿಗೆ ನೋಡಿದು ವಾರಗಿತ್ತಿಯ ಮುಖ. ಮೊಗದಲ್ಲಿ ನಗು ಇತ್ತು ಅದೇನು ಛೇಡಿಕೆಯ ನಗೂನ ಅಥವ ಗೊತ್ತಾಗಲಿಲ್ಲ

ನಂತರ ನೋಡಿದ್ದು ಪುರೋಹಿತರನ್ನ

"ಚೆನ್ನಾಗಿ ಹಾಡಿದೆಯಮ್ಮ ಕಂಠ ಚೆನ್ನಾಗಿದೆ. ಎಲ್ಲಾ ರಾಗಾನೂ ಮಿಕ್ಸ್ ಮಾಡಿ ಹಾಡಿದ್ದು ಬೇಕಂತಾನೆ ತಾನೆ ? " ಎಂದರು

 

ಇಲ್ಲ ನಂಗೆ ನೆನಪಿಗೆ ಬಂದಿದ್ದು ಹಾಡಿದ್ದು ಅನ್ನೋಕಾಗತ್ತಾ?   ಹಾಗೆಲ್ಲಾ ಹೇಳಿದರೆ ಮರ್ಯಾದೆ ? ಹೌದು ಎಂಬಂತೆ ತಲೆ ಆಡಿಸಿದೆ

ಎಲ್ಲರೂ ಮಾತಾಡಿಸಿ ಹೋದರು

 

ಯಾರೋ "ಬೆಂಗಳೂರವರು  ಡಿಫರೆಂಟ್ ಅಂತ ತೋರಿಸಿಕೊಳ್ಳೋಕೆ ಹೀಗೆ ಹಾಡಿದ್ದಾಳೆ" ಎಂದರಂತೆ

 

ಅವರೆಲ್ಲರ ಮುಂದೆ ಅದುಮಿಟ್ಟಿದ್ದ ನಗು ಕಾರಿನಲ್ಲಿ ಕೂತಾಗ ಬುಗ್ಗೆ ಉಕ್ಕಿತು. ಮನೆಗೆ ಬಂದು ಅಮ್ಮನ ಬಳಿ ಹೇಳಿ ನಕ್ಕಿದ್ದೇ ನಕ್ಕಿದ್ದು

 

ಇಂತಹ ಸಂಧಿಗ್ದ ಸ್ಥಿತಿ ಬರಬಾರದು ಅಂತ ಇತ್ತೀಚಿಗೆ ದೇವರ ಹಾಡನ್ನೆಲ್ಲಾ ಕಲೀತಾ ಇದ್ದೇನೆ

Rating
No votes yet

Comments