ತಂತಿ ಪಕಡು ಸೀತಾರಾಮ್...... ಸೀತು ಮದುವೆ

ತಂತಿ ಪಕಡು ಸೀತಾರಾಮ್...... ಸೀತು ಮದುವೆ

ಬರಹ

ಇವರು ನಮ್ಮೂರಿನ ವಿಶಿಷ್ಟ ವ್ಯಕ್ತಿ. ಸೀತಾರಾಮ್, ವಯಸ್ಸು 60 ಆದರೂ ಮದುವೆಯಾಗಿಲ್ಲ. ಹಾಗಾಗಿ ಇವರನ್ನು ಊರಿನ ಹಿರಿಯ ಬ್ರಹ್ಮಚಾರಿ ಅನ್ನುತ್ತೇವೆ. ಹಂಗಂತ ಉಪನಯನದ ಮಾತೃ ಭೋಜನಕ್ಕೆ ಕರೆಯಕ್ಕಿಲ್ಲಾ. ಯಾಕೇಂದ್ರ ಇವರು ಸಾನೆ ಹಿರಿಯರು. ಇವರಿಗೆ "ತಂತಿ ಪಕಡು ಸೀತಾರಾಮ್" ಅಂತಾ ಕೂಡ ಕರೆಯಲಾಗುತ್ತದೆ. ಉಪನಾಮ. ಪ್ರೀತಿಯಿಂದ ಕೆಲವರು ಸೀತು ಅಂತಲೂ ಕರೆಯುತ್ತಾರೆ.

ಹಿಂಗೆ ಫಿಟ್ಸ್ ಬಂದಾಗ ದಾರೀಲಿ ಹೋಗುತ್ತಿದ್ದ ಇಸ್ಮಾಯಿಲ್ ಲೇ ಸೀತಾರಾಮ್ ತಂತಿ ಪಕಡ್ರೆ ಅಂದ್ನಂತೆ. ಆಗ ಸೀತು ತಂತಿ ಹಿಡಿತಿದ್ದಾಗೇನೇ ಫಿಟ್ಸ್ ಹೋಗಿತ್ತಂತೆ.

ಇವನ ದಿನಚರಿ ಏನೆಂದರೆ ಬೆಳಗ್ಗೆಯಿಂದ ಸಂಜೆಯ ತನಕ ಮನೆಯ ತೊಟ್ಟಿ, ಹಂಡೆ ಹಾಗೂ ಎಲ್ಲಾ ಕೊಡಗಳಿಗೂ ಬಾವಿಯಿಂದ ನೀರು ತಂದು ತುಂಬಿಸುವುದು. ಇವನು ನೀರು ಸೇದುವ ತಾಮ್ರದ ಕೊಡ ಸಾನ ಚೊಂಬಿಗಿಂತ ಸ್ವಲ್ಪ ದೊಡ್ಡದಾಗಿದೆ ಅಷ್ಟೆ. ಇದೊಂದು ಸಾರಿ ಬಾವೀಲಿ ಬಿದ್ದಾಗ ಅದನ್ನ ತೆಗೆಸಕ್ಕೆ ಅವರ ಅಣ್ಣ 300ರೂ ಖರ್ಚು ಮಾಡಿದ್ದರು. ಅಲ್ಲಿದ್ದೋರು ಯಾರೋ ಈ ದುಡ್ಡಿಗೆ ಎರಡು ಕೊಡ ಬರ್ತಿತ್ತಲ್ರೋ ಅಂತಾ ಉಗಿದಿದ್ರು. ಅವತ್ತು ಸ್ವಲ್ಪ ಹೆಚ್ಚು ಕಮ್ಮಿ ಯಾಗಿದ್ರೂ ಕೊಡ ತೆಗೆಯೋಗೆ ಇಳಿದಿದ್ದೋನು ಹೊಗೆ ಹಾಕಸ್ಕಂತಿದ್ದ. ಬಾವ್ಯಾಗೆ ಅಷ್ಟೊಂದು ಬಳ್ಳಿ ಇತ್ತು.

ಇವನು ಖಾಲಿ ಕೊಡ ತೊಗೊಂಡು ಹೊಂಟಾಗ ಯಾರಾದ್ರೂ ಎದುರಿಗೆ ಸಿಕ್ಕರೆ ಅವರ ಕೆಲಸ ಇವರ ಅಪ್ಪನಾಣೆಗೂ ಆಗೋಲ್ಲ. ಇವನ ಕೊಡ ರವಸ್ಟು ಪೇಮಸ್. ಇವರು ಸಂಜೆ ಹೊತ್ತು ರಾಮನ ಭಜನೆ ಓದುತ್ತಾರೆ. ಅದು ದೇವರಿಗೆ ಮತ್ತು ಇವರಿಗೆ ಮಾತ್ರ ಅರ್ಥವಾಗುತ್ತದೆ. ಕಾರಣ ಹಲ್ಲು ಇಲ್ದೆ ಇರೋದ್ರಿಂದ ಅರ್ಧ ಶಬ್ದಗಳು ಗಾಳಿಗೆ ಹೋಗುವುದಲ್ಲದೆ ಮೂಗಿನಲ್ಲಿ ಓದುವುದರಿಂದ ಚೀನಿ ಭಾಸೆ ತರಾ ಕೇಳ್ತದೆ. ಇನ್ನು ಇವರ ಧಿರಿಸು ಚಡ್ಡಿ ಹಾಗೂ ಹಳೇ ಸಲ್ಟು. ಮಠದಾಗೆ ಊಟ ಇತ್ತು ಅಂದ್ರೆ ಅರ್ಧಗಂಟೆ ಮುಂಚೆ ಹಾಜರ್. ಎಲ್ಲರೂ ಹೋದ್ ಮ್ಯಾಕೆ ವಾಪಾಸ್ಸು ಬರ್ತಾರೆ. ಅಲ್ಲಿ ಉಳಿದಿದ್ದು ಪಳಿದಿದ್ದು ಮನೆಗೆ ಪ್ಯಾಕಿಂಗ್. ಸೇವಿಂಗ್ ಮಾಡೋಕೆ ಏನಿಲ್ಲಾ ಎಂದರೂ ಒಂದು ಗಂಟೆ. ಹುಬ್ಬನ್ನೂ ಬಿಡೋದಿಲ್ಲ. ಸಾನ ಆದ್ ಮ್ಯಾಕೆ ಮತ್ತದೇ ಡ್ಯೂಟಿ. ಚೊಂಬಿನಲ್ಲಿ ನೀರು ತಂದು ತುಂಬಿಸುವುದು. ಇದು ಸೀತು ಬಯೋಡೆಟಾ.

ವಯಸ್ಸು 60 ಆಯಿತು. ನಾವೆಲ್ಲಾ ಸತ್ತರೆ ಇವನನ್ನು ಯಾರು ನೋಡಿಕೊಳ್ಳೋದು ಇವನಿಗೆ ಒಂದು ಮದುವೆ ಮಾಡೋಣ, ವಿಧವೆಯಾದರೂ ಸರಿ ಅಂತಾ ಅವರಣ್ಣಂಗೆ ಸಾನೆ ವರುಸಗಳಾದ ಮೇಲೆ  ಬುದ್ದಂಗೆ ಬೋದಿ ಮರದ ಕೆಳಕೆ ಆದಂಗೆ ಇವರಿಗೆ ಅಂಗಡಿ ಕಟ್ಟೆ ಮೇಲೆ ಬೀಡಿ ಹಚ್ಚಿ ಒಂದು ಧಮ್ ಬಿಟ್ಟಾಗ ಜ್ಞಾನೋದಯವಾಯಿತು. ಅಂತೂ ಪಕ್ಕದಹಳ್ಳಿಯ 56ವಯಸ್ಸಿನ ವಿಧವೆ ಸಿಕ್ಕಿದಳು. ಇವಳಿಗೆ ಪೆದ್ದಿ ಅನ್ನುತ್ತಾರಾದರೂ ಇವಳು ಸಾನೆ ಜಾಣೆ. ಹೆಣ್ಣು ನೋಡುವ ದಿನ ಬಂದೇ ಬಿಡ್ತು. ನವ ತರುಣ,ತರುಣಿ ಒಬ್ಬರನ್ನೊಬ್ಬರು ನೋಡಿ ಫಕ್ಕನೆ ನಗುತ್ತಿದ್ದರು. ಹಲ್ಲಿಲ್ಲ, ಎದೆಗೂಡ್ನಾಗೆ ಖಫ ಬೇರೆ. ನಕ್ಕಾಗ ಡಿಜಿಟಲ್ ಎಫೆಕ್ಟ್. ಮುಂಡೇವು ಕೇಸರಿಬಾತ್, ಉಪ್ಪಿಟ್ಟು ಬಾರಿಸಿದ್ದೇ ಬಾರಿಸಿದ್ದು. ರಾತ್ರಿ ಅಡುಗೆ ಮಾಡಬೇಡ ಅಂತಿದ್ದ ಸೀತು ಅತ್ತಿಗೆಗೆ. ಹುಡುಗ ಹುಡುಗಿಗೆ ಪ್ರೈವೇಟ್ ಆಗಿ ಮಾತಾಡಲು ಬಿಡಿ ಎಂದು ಅಟ್ಟಕ್ಕೆ ಹೋಗಿ ಎಂದರು. ಅಟ್ಟ ನೆಟ್ಟಗೆ ಇದ್ದುದರಿಂದ ಹತ್ತಬೇಕಾದರೆ ಎಲ್ಡು ಸತಿ ಬಿದ್ವು. ಗಾಬರಿಗೆ ಕೆಲವರು ಕೈಯಲ್ಲಿದ್ದ ತಟ್ಟೆ ಬಿಟ್ಟಿದ್ದರು. ಸರಿ ಮಾತಾಡ್ಕಂಡ್ ಬಂದ್ ಮ್ಯಾಕೆ ಹುಡುಗಿ ನನಗೆ ಹುಡುಗ ಬೇಡ ಅಂದಳು. ಯಾಕಮ್ಮಾ, ಅಪ್ಪಯ್ಯಾ ದಿನಾ ಬೆಳಗ್ಗೆ ನಾನು ಇವನ ಜೊತೆ ನೀರು ತರ್ಬೇಕಂತೆ, ಹಂಗೆ ಸಾನಕ್ಕೆ ಲೈಫ್ ಬಾಯ್ ಸೋಪಂತೆ. ಮೈ ವರ್ಸೊಕೊಳಕ್ಕೆ ಹಳೇ ಪಂಚೆಯಂತೆ. ಹಲ್ಲು ಉಜ್ಜಕ್ಕೆ ಇದ್ದಿಲು ಪುಡಿಯಂತೆ. ತಿಂಡಿ ಬೆಳಗ್ಗೆ ಹತ್ತಕ್ಕೆ ಕೊಡ್ತಾರಂತೆ ನಂಗೇ ಇವನು ಬೇಡಾ ಅಂದಳು.

ಅಲ್ಲಿಯವರೆಗೆ ನಗುತ್ತಿದ್ದ ಸೀತು ಜಾಂಬುವಂತನ ತರಾ ಆಗಿದ್ದ. ಅಂತೂ ಮದುವೆಯಾಯಿತು. ವಧು ವರರನ್ನು ನೋಡಿ, ಇನ್ನೊಂದು ಎಲ್ಡು ವರ್ಸಕ್ಕೆ ಸಾಯೋ ಮುಂಡೇವಕ್ಕೆ ಯಾಕ್ ಮದುವೆ ಮಾಡಕ್ಕೆ ಹೋದ್ರಿ ಅಂತಾ ಅವನ ಅಣ್ಣಂಗೆ ಉಗೀತಾ ಇದ್ರು. ಸಂಜೆ ಗಂಡು,ಹೆಣ್ಣಿಗೆ ಆರತಿ. ಹೆಂಗಸರು ಹೆಣ್ಣಿನ ಗಲ್ಲಕ್ಕೆ ಅರಿಸಿನ ಹಚ್ಚಿದ್ರೆ ಆ ಯಮ್ಮನ ಗಲ್ಲ ಅಂಗೇ ಒಳಗೆ ಹೋಗೋದು. ಹಲ್ಲಿಲ್ಲವಲ್ಲಾ. ಸೀತು ಫಕ್ಕನೆ ನಗೋನು. ಅಂತೂ ಮೊದಲ ರಾತ್ರಿಗೆ ಎಲ್ಲಾ ಅರೇಂಜ್ ಮಾಡಿದ್ದೂ ಆಯ್ತು. ತಿನ್ನಕ್ಕೆ ಆಗಕ್ಕಿಲ್ಲಾ ಅಂತಾ ಲಾಡೂನ ಹಾಲ್ನಾಗೆ ನೆನಸಿ ಬೌಲ್ ನಲ್ಲಿ ಹಾಕಿದ್ವಿ. ಜಹಾಂಗೀರ್ನ ಚೆನ್ನಾಗಿ ಪುಡಿ ಮಾಡಿದ್ವಿ. ಇನ್ನು ಕಡ್ಲೆ ಪುರಿ ಉಂಡೆ ಮಿಕ್ಸಿಗೆ ಹಾಕಿ ಪುಡಿ ಮಾಡ್ಸಿ ಇಟ್ಟಿದ್ವಿ. ಯಾವೂದು ಗಟ್ಟಿ ಹಣ್ಣು ಇಲ್ಲ. ಶಾಸ್ತ್ರಕ್ಕೆ ಅಂತಾ ನಿಜವಾದ ಪುರಿ ಉಂಡೆಗಳನ್ನು ಹಾಗೆ ಇಟ್ಟಿದ್ವಿ.

ಸರಿ ಅವರನ್ನು ಒಳಗೆ ಕಳಸಿ ಬಾಗಿಲು ಹಾಕಿದ್ದಾತು. ಸ್ವಲ್ಪ ಹೊತ್ತು ಆದ್ ಮ್ಯಾಕೆ ಧಡಾ ಬಡಾ ಅಂತಾ ಸೌಂಡ್ ಆತು. ನೋಡಿದ್ರೆ ಮಂಚದ ಹಲಗೆನೇ ಹಸೇ ಮಣೆಗೆ ಹಾಕಿದ್ದು ಜ್ಞಾಪಕ ಬಂತು. ಬಾಗಿಲು ಸಂದಿಯಿಂದನೇ ಒಂದು ಬಾಟ್ಲ್ ಅಮೃತಾಂಜನ್ ಹಾಕಿದ್ವಿ. ಅಮ್ಮಾ, ಬೆಳಗ್ಗೆ ಹತ್ತಾದರೂ ಇಬ್ಬರೂ ಹೊರಗೇ ಬರಲಿಲ್ಲ. ಗಾಬರಿಯಿಂದ ಬಾಗಿಲು ತೆಗೆದರೆ ಇಬ್ಬರೂ ಒಂದೊಂದು ದಿಕ್ಕನಾಗೆ ಮೂರ್ಛೆ ತಪ್ಪಿ ಬಿದ್ದಿದ್ವು. ಮೂಗನಾಗೆ, ಬಾಯನಾಗೆ ರಕ್ತ. ಅಂಗೇ ಅರಿಸಿನ ಬಳೆದು ಆಸ್ಪತ್ರೆಗೆ ಹಾಕಿದ್ವಿ. ಎಚ್ಚರ ಆದ್ ಮ್ಯಾಕೆ ಕೇಳಿದ್ರೆ. ಪುರಿ ಉಂಡೆಯಲ್ಲಿ ಬಡ್ಡೇ ಹತ್ತಾವು ರಾತ್ರೀ ಇಡೀ ಲಗೋರಿ, ತೂರ್ ಚೆಂಡು ಆಟ ಆಡಿದಾವೆ. ಅಷ್ಟೆ ಅಲ್ಲ, ಮೊದಲು ಹಾಲು ಯಾರು ಕುಡಿಯೋದು ಅಂತಾ ತಲ್ ತಲೆಗೆ ಡಿಕ್ಕಿ ಹೊಡಕ್ಕಾಂಡವೆ. ಕರೆಂಟ್ ಹೋಗ್ತಿದ್ದಾಗೆನೇ ಮನೆಗಿದ್ದ ಬೀರು,ಕಿಟಕಿ ಬಾಗಿಲಿಗೆ ಡಿಕ್ಕಿ ಹೊಡೆದು ಹಿಂಗಾಗಿದೆ ಅಂತಾ ಗೊತ್ತಾಯ್ತು. ಅಯ್ಯೋ ಮಂಗಂಗೆ ಮದುವೆ ಮಾಡ್ ದಂಗೆ ಆಯ್ತಲ್ಲಾ ಅಂತಾ ಅವರ ಅಣ್ಣ ಹೊರರೋಗಿಗಳ ವಾರ್ಡ್ನಾಗೆ ಬೀಡಿ ಹಚ್ಕೊಂಡು ಹೊಗೆ ಬಿಡ್ತಾ ಕೂತಿದ್ದ. ಇದು ಸೀತು ಮದುವೆ.