ಕೃಷ್ಣಸುಂದರಿಯ ಬಳಿಯಲ್ಲಿ

ಕೃಷ್ಣಸುಂದರಿಯ ಬಳಿಯಲ್ಲಿ

ಅವರ ಮನೆಯ ಕಡೆ ಹೆಜ್ಜೆ ಇಡುತ್ತಿದಂತೆಯೇ ನನ್ನ ಕಾಲೆಲ್ಲಾ ಕಣ್ಣಾಗಿತ್ತು. ಒಂದು ರೀತಿಯ ಅಳುಕು, ಭಯ ನನ್ನೆದಯನಾವರಿಸಿತ್ತು. ದಾರಿಯ ಅಕ್ಕ ಪಕ್ಕದ ಪೊದೆಯಲ್ಲಿ ಏನಾದರೂ ಮಿಸುಕಾಡಿದರೂ ಸಾಕು ಅಪ್ರಯತ್ನ ಪೂರ್ವಕವಾಗಿ ಮೈ ರೋಮ ನಿಮಿರಿ, ಭಯದ ರೋಮಾಂಚನವನ್ನುಂಟುಮಾಡಿತ್ತು. ಮನೆಯ ಕದ ತಟ್ಟುತ್ತಿದಂತೆಯೇ ನನ್ನ ಹೃದಯದ ಬಡಿತದ ಸದ್ದೂ ಅದರೊಡನೆ ಮಿಳಿತಗೊಂಡು ತಾಳ ಹಾಕಿದಂತೆ ಭಾಸವಾಯಿತು. ಒಳಗಡೆಯಿಂದ "ಯಾರು" ಎಂಬ ಹೆಂಗಸೊಬ್ಬರ ದನಿಗೆ ಮಾರುತ್ತರ ಕೊಡಲೂ ಬಾಯಿ ಒಣಗಿದಂತಾಗಿತ್ತು. ಆಕೆಯ ಹೆಜ್ಜೆ ಬಾಗಿಲ ಹತ್ತಿರ ಹತ್ತಿರ ಬರುತ್ತಿದ್ದಂತೆ ನನ್ನೊಳಗಿನ ಭಯ ನೂರ್ಮಡಿಸಿತು. ಬಾಗಿಲು ತೆರೆದ ಕೂಡಲೇ ಅದು ನನ್ನ ಮೇಲೆ ನುಗ್ಗಿ ಬಂದರೆ...

ಬಾಗಿಲು ತೆರೆದ ನಂತರ ಕಾಣಿಸಿದ್ದು, ಪ್ರಶ್ನಾರ್ಥಕ ನೋಟ ಬೀರಿದ ಇಳಿ ವಯಸ್ಸಿನ ಹೆಂಗಸನ್ನು. ನನ್ನ ಪರಿಚಯ ಮಾಡಿಕೊಡುತ್ತಾ, "ನಿನ್ನೆ ಫೋನ್ ಮಾಡಿದ್ದೆನಲ್ಲಾ ಬರುತ್ತೇನೆಂದು, ’ಅವರು’ ಇದ್ದಾರ" ಎಂದು ಕೇಳಿದೆ. "ಈಗಷ್ಟೆ ಒಬ್ರು ಫೋನ್ ಮಾಡಿದ್ರು ಇನ್ನೊಂದ್ ಅರ್ಧಗಂಟೇಲಿ ಬರ್ತಾರೆ ಕೂತಿರಿ", ಎಂದು ಒಳಗೆ ಆಹ್ವಾನಿಸಿದರು. "ಸರಿ, ಆದರೆ ನಿನ್ನೆ ಹಿಡಿದ ಕಾಳಿಂಗ ಸರ್ಪ.." ನನ್ನ ಮಾತನ್ನು ತಡೆಹಿಡಿದು ಆಕೆಯೇ ಮುಂದುವರಿಸಿದರು. "ನೀವು ಈಗ ಬಾಗಿಲ ಪಕ್ಕದ ಒಂದು ಗೋಣಿ ಚೀಲದ ಮೇಲೆ ಕೈ ಇಟ್ಟಿದ್ದೀರಲ್ಲ, ಅದ್ರ ಕೆಳಗೆ ಒಂದು ಪಂಜರ ಇದೆ ಅದ್ರೊಳಗೆ ಆರಾಮಾಗಿ ನಿದ್ರೆ ಮಾಡ್ತಾ ಇದೆ" ಎಂದುತ್ತರಿಸಿದರು.

ಒಮ್ಮೆ ಮೈ ಜುಮ್ಮೆಂದರೂ ತೋರಿಸಿಕೊಳ್ಳದೇ, ಗೂಡಿನ ಮೇಲೆ ಹೆದರಿಕೆಯಿಲ್ಲದೇ ಕೈಯಿಟ್ಟು ನಿಂತಿದ್ದ ನನ್ನ ಧೈರ್ಯಕ್ಕೆ ನಾನೇ ಮೆಚ್ಚಿ "ಈಗ ನೋಡಬಹುದಾ" ಕೇಳಿದೆ. "ಹೋ ಬನ್ನಿ", ಎಂದು ಮನೆಯಾಕೆ ಹೊರಗೆ ಕರೆದುಕೊಂಡು ಹೋಗಿ ಗೋಣಿ ಚೀಲವನ್ನು ಎತ್ತಿದಾಗ, ಪಂಜರದೊಳಗೆ ಪಾಪದ ಪ್ರಾಣಿಯಂತೆ ಸುರುಳಿ ಸುತ್ತಿ ಮಲಗಿರುವ ಕಾಳಿಂಗ ಸರ್ಪವನ್ನು ತೋರಿಸಿದರು. ತುದಿ ಮೊದಲು ಗೊತ್ತಾಗದ ನೀಳ ಕಾಯ, ಕಡು ಗಪ್ಪು ಮಿನುಗುವ ಮೈಬಣ್ಣ, ಮಧ್ಯೆ ಮಧ್ಯೆ ಪಟ್ಟೆಗಳು, ಗಮನಿಸಬಹುದಾದ ಉಸಿರಿನ ಏರಿಳಿತ. ಮತ್ತೆ ಮನೆಯೊಳಗೆ ತೆರಳಿ ಸಮಯ ಹೋಗದಿದ್ದುದಕ್ಕೆ ಮನೆಯವರು ಕೊಟ್ಟ ಬಾಳೆ ಹಣ್ಣು, ಕಾಫಿ ಮುಗಿಸುತ್ತಾ ಮಾತನಾಡುತ್ತಾ ಕುಳಿತೆವು.

ಸುಮಾರು ಅರ್ಧ ಗಂಟೆಯ ನಂತರ ನಾವು ಕಾಯಿತ್ತಿದ್ದ ಪ್ರಫುಲ್ಲ ಭಟ್ಟರ ಆಗಮನವಾಯಿತು. ಸುಮಾರು ಅರವತ್ತರ ಆಸು ಪಾಸಿನ ಭಟ್ಟರು, ಕಂಡ ಕೂಡಲೇ ಕೈಕುಲುಕಿ ಮಾತನಾಡಿಸಿ "ತುಂಬಾ ಹೊತ್ತಾಯ್ತೇನೋ ಬಂದಿದ್ದು" ಎಂದರು. ಈವರೆಗೆ ಪೇಪರಿನಲ್ಲಿ ಪ್ರಕಟವಾಗಿದ್ದ ಅವರ ಬಗೆಗಿನ ಲೇಖನಗಳು, ಚಿತ್ರಗಳನ್ನು ತೋರಿಸುತ್ತಾ ತಮ್ಮ ಅನುಭವ ಹಂಚಿಕೊಂಡರು.

ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮನೆ, ತೋಟಕ್ಕೆ ದಾರಿ ತಪ್ಪಿ ಬಂದ ಹಾವುಗಳನ್ನು ಹಿಡಿದು ಅರಣ್ಯ ಪಾಲಕರ ನೆರವಿನೊಂದಿಗೆ ಮತ್ತೆ ಕಾಡಿಗೆ ಬಿಡುವುದು ಇವರ ಹವ್ಯಾಸಗಳಲ್ಲೊಂದು. ಕಳಸದಲ್ಲಿ ಸ್ವಂತ ಮನೆ, ಆದಾಯಕ್ಕೆ ತೋಟ, ಬಾಡಿಗೆ ಮನೆ ಇರುವುದರಿಂದ ಈ ಕಾಯಕವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. "ಕಾಳಿಂಗ ಸರ್ಪ, ಹೆಬ್ಬಾವು, ಕೊಳಕು ಮಂಡಲ, ನಾಗರ ಹಾವು ಹೀಗೆ ಸುಮಾರು ವರ್ಷಕ್ಕೆ ೨೦೦-೨೫೦ ಹಾವುಗಳಿಗೆ ಮರುನೆಲೆ ಕಾಣಿಸುತ್ತೇನೆ" ಎನ್ನುತ್ತಾರೆ ಭಟ್ಟರು. ತಮ್ಮ ೧೫ನೇ ವರ್ಷದಿಂದ ಸ್ವಯಂ ಪ್ರೇರಣೆಯಿಂದ ಹಾವು ಹಿಡಿಯುವುದನ್ನು ಆಟವಾಗಿಸಿಕೊಂಡ ಭಟ್ಟರು, ಅವುಗಳ ಉಳಿವಿಗಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತಸದ ವಿಷಯ.

ಕೇವಲ ಹಾವು ಹಿಡಿದು ಕಾಡಿಗೆ ಬಿಡುವುದು ಮಾತ್ರವಲ್ಲ, ಜನರಿಗೆ ಶಾಲಾ ಮಕ್ಕಳಿಗೆ ಹಾವುಗಳ ಬಗ್ಗೆ ಅರಿವು ಮೂಡಿಸುವುದನ್ನೂ ಕೂಡ ಮಾಡುತ್ತಾ ಬಂದಿದ್ದಾರೆ. "ತೀರ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹಾವು ಮನುಷ್ಯರನ್ನು ಕಡಿಯಬಹುದು. ತಪ್ಪಿಸಿಕೊಳ್ಳಲು ಒಂದು ಚಿಕ್ಕ ಅವಕಾಶ ಸಿಕ್ಕಿದರೂ ಮನುಷ್ಯರಿಂದ ದೂರ ಇರುವುದಕ್ಕೇ ಇಷ್ಟ ಪಡುತ್ತವೆ" ಎನ್ನುತ್ತಾರೆ. ಹಾವುಗಳು ನಮ್ಮ ಸಂಸ್ಕೃತಿ, ದೇವತೆಗಳೊಂದಿಗೆ ಬೆರೆತಿವೆ, ಅವುಗಳನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂದು ಈ ಕೆಲಸ ಮಾಡುತ್ತೇನಷ್ಟೆ ಅಲ್ಲದೇ ಇದರಿಂದ ನಾನು ಬೇರಾವ ಪ್ರತಿಫಲವನ್ನೂ ಬಯಸುವುದಿಲ್ಲ ಎನ್ನುತ್ತಾರೆ. ಇದುವರೆಗೂ ಇವರು ಹಿಡಿದ ಹಾವುಗಳಲ್ಲಿ ಅತೀ ಉದ್ದದ್ದು, ಕೊಪ್ಪದ ಬಳಿ ಹಿಡಿದ ೧೬ ಅಡಿ ಉದ್ದದ ಕಾಳಿಂಗ ಸರ್ಪವಂತೆ. ಒಂದು ಕೋಲು, ಕೈಗೆ ಗ್ಲೌಸು ಹಾವು ಹಿಡಿದ ನಂತರ ಅದನ್ನು ತುಂಬಿಸಲು ಗೋಣಿ ಚೀಲ ಇವಿಷ್ಟು ಹಾವು ಹಿಡಿಯಲು ಅವರು ಬಳಸುವ ಉಪಕರಣಗಳು. ಗ್ಲೌಸು ಹಾವಿನ ಬಾಯಿಯಿಂದ ಹೊರಬರುವ ವಿಷ ಕೈಯ ಗಾಯಕ್ಕೆ, ಉಗುರಿನ ಸಂದಿಗೆ ಹೋಗಬಾರದೆಂದು ಹಾಕುತ್ತಾರಲ್ಲದೇ, ಅದರಿಂದ ಮತ್ತೇನೂ ಪ್ರಯೋಜನವಿಲ್ಲ ಎನ್ನುತ್ತಾರೆ. ಅಂದಹಾಗೇ ಈ ಹಾವು ಭಟ್ಟರು ಹಿಡಿದ ೧೫೧ನೇ ಕಾಳಿಂಗ ಸರ್ಪವಂತೆ.

ನಾನು ಹೊರಡುವ ಮುಂಚೆ ಭಟ್ಟರು, "ಹಾವನ್ನ ಹೊರಗೆ ತೆಗಿತೀನಿ, ನೊಡ್ಕೊಂಡು ಹೋಗಿ" ಎಂದರು. ಇದುವರೆಗೆ ಬರೀ ಜೂನಲ್ಲಿ ಕಾಳಿಂಗ ಸರ್ಪ ನೋಡಿದ್ದರಿಂದ, ಈ ಅವಕಾಶ ಕಳೆದುಕೊಳ್ಳುವ ಮನಸ್ಸಿರಲಿಲ್ಲ. "ಗೂಡಿಂದ ತೆಗಿಬೇಕಾದ್ರೆ ಅಡ್ಡಿಲ್ಲ, ಮತ್ತೆ ಗೂಡಿಗೆ ಹಾಕಬೇಕಾದಾಗ ಮಾತ್ರ ಅದರ ಬಾಲ ಸ್ವಲ್ಪ ಹಿಡಿದುಕೊಳ್ಳಬೇಕಾಗುತ್ತದೆ", ಎಂದಂದು ನನ್ನ ಪ್ರತಿಕ್ರಿಯೆಗೂ ಕಾಯದೇ ಗೂಡಿನ ಬಾಗಿಲು ತೆರೆದು ಹಾವನ್ನು ಹೊರಗೆ ತೆಗೆದೇ ಬಿಟ್ಟರು. ಛಾಯಾಗ್ರಹಣದ ನಿಯಮ ಎಲ್ಲಾ ಮರೆತು ನನಗೆ ಹೇಗೆ ತೆಗೆಯೋಕೆ ಬರುತ್ತೋ ಅಂತೆಯೇ ಕ್ಯಾಮರಾದಿಂದ ಕ್ಲಿಕ್ಕಿಸತೊಡಗಿದೆ.

ಕಾಳಿಂಗಾಭರಣರಾಗಿ ಭಟ್ಟರು
CSC_6348

ಹಾವಿನ ಕ್ಲೋಸ್-ಅಪ್ ತೆಗೆಯೋಕೆ ಪ್ರಯತ್ನಿಸಿದ್ದು
CSC_6353

ಅಷ್ಟರಲ್ಲೇ ಭಟ್ಟರಿಗೆ ಹಾವು ಹಿಡಿಯಲು ಇನ್ನೊಂದು ಕರೆ ಬಂದುದರಿಂದ, ಹಾವನ್ನು ಮರಳಿ ಗೂಡಿಗೆ ಹಾಕಲು ನಿರ್ಧರಿಸಿದರು. ನನ್ನ ಪುಣ್ಯಕ್ಕೆ ಪಕ್ಕದ ಮನೆಯವರು ಬಂದುದರಿಂದ ಅದರ ಬಾಲ ಹಿಡಿಯುವ ಕಷ್ಟ ತಪ್ಪಿತು. ಅಂದ ಹಾಗೇ ಭಟ್ಟರ ದೂರವಾಣಿ ಸಂಖ್ಯೆ: ೯೪೮ ೦೦೭ ೫೨೦೨.

CSC_6352

Rating
No votes yet

Comments