ಪಿಂಡ ಪ್ರದಾನ

ಪಿಂಡ ಪ್ರದಾನ

ಬರಹ

ನಮ್ಮೂರು ಗೌಡಪ್ಪನ ಅಪ್ಪ ತೀರಿ ವರ್ಷ ಆಯ್ತು. ಕನಸಾಗೆಲ್ಲಾ ಬಂದು ನಮ್ಮ ಅಪ್ಪ, ಹಸಿವಾಯ್ತದೆ , ಬೀಡಿ ಕೊಡ್ಲಾ, ಸುಗರ್ ಮಾತ್ರೆ,ಎಣ್ಣೆ ಕೊಡು ಅಂತಾ ಕೇಳ್ತಾನೆ. ಏನ್ ಮಾಡಬೇಕ್ಲಾ ಅಂದಾ ಗೌಡಪ್ಪ. ತಿಥಿ ಮಾಡ್ಬೇಕು. ಯಾರದು ನಂದಾ, ಅಲ್ಲಾ ನಿಮ್ಮಪ್ಪಂದು. ಸರಿ. ಅಂತಾ ಪಕ್ಕದಹಳ್ಳಿ ರಾಮಾಜೋಯ್ಸ್ ಹತ್ತಿರ ಹೋಗಿ ಕೇಳಿದ್ವಿ. ನಿಮ್ಮಪ್ಪನಿಗೆ ಏನೇನು ಆಸೆ ಇದೆಯೋ ಹಾಗೇ ಅವರು ಆಸೆ ಪಡುತ್ತಿದ್ದಂತಹ ವಸ್ತುಗಳನ್ನು ಇತರರಿಗೆ ನೀಡಿ ಸಂತಸ ಪಡಿಸಿದರೆ ಅವರ ಆತ್ಮಕ್ಕೆ ಚಿರಸಾಂತಿ ಸಿಗುತ್ತದೆ ಎಂದು ಜೋಯ್ಸ್ ರು ಹೇಳಿದರು. ಅದರಾಗೆ ಅವರ ಸ್ವಾರ್ಥನೂ ಇತ್ತು. ಬರೀ ಪಿಂಡ ಹಾಕಕ್ಕೆ ಒಂದು ಸಾವಿರ ದಕ್ಸಿಣೆ ಕೇಳಿದ್ರು. ಅಪ್ ಅಂಡ್ ಡೌನ್ ಪೆಟ್ರೋಲ್ ಚಾರ್ಜು. ಅವರ ಗಾಡಿ ಲೀಟರ್ಗೆ ಬರೀ 5ಕಿ.ಮೀ ಕೊಡ್ತದಂತೆ. ನೋಡಪ್ಪಾ ಗೌಡ, ಎಲೆ ಮ್ಯಾಕೆ ಎಲ್ಲಾ ನೂರು ರೂಪಾಯಿ ನೋಟೇ ಇಡಬೇಕು. ನಮಗೆ ದಾನ ಅಂತಾ ಒಂದು ಕೊಳಗ, 5ಕೆಜಿ ತುಪ್ಪ ಹೀಗೆ ಸಾನೆ ಬರೆದಿದ್ದರು. ಗೌಡಪ್ಪ ಅಂದ. ಲೇ ಜೋಯ್ಸ ಏನಾದರೂ ಸತ್ತರೆ ಇವನ ತಿಥಿ ಮಾಡದ್ರೋಗೆ ಇವನ ಮಕ್ಕಳು ಸತ್ತೋಯ್ತಾರೆ ಕನ್ಲಾ. ಏ ಜೋಸಿಸರು ಬಗ್ಗೆ ಅಂಗೆಲ್ಲಾ ಮಾತಾಡ್ ಬಾರದು. ಬಿರ್ರನೆ ಹಳ್ಳಿಗೆ ನಡೀರಿ ಸಿದ್ದ ಮಾಡ್ಕಳವಾ ಅಂದೆ.

ಸರಿ ಊರಿನೋರುಗೆಲ್ಲಾ ಊಟಕ್ಕೆ ಹೇಳಿದ್ದ.ಅವನ ಅಪ್ಪನ ಆಸೆಯಂತೆ ಒಂದು 6 ಬಾಕ್ಸ್ ಹೊಟ್ಟೆಗೆ ಹುಯ್ಕಳೋ ಎಣ್ಣೆ, 1 ಬಾಕ್ಸ್ ಜನತಾ ಬೀಡಿ, ಸುಗರ್ ಮಾತ್ರೆ ಒಂದು ಬಾಕ್ಸ್ ಎಲ್ಲಾ ತಂದ್ ಮಡಗಿದ್ದ. ಸರಿ ಜೋಯಿಸರು ಬಂದು ಈಗ ಪಿಂಡ ಪ್ರದಾನ ಕಾರ್ಯಕ್ರಮ, ಲೇ ಗೌಡ ಪಿಂಡ ತೊಗಂಡ್ ಬಾರಲಾ ಅಂದ್ರು. ಪಿಂಡನ ಮೂರು ಜನ ಎತ್ಕಂಡ್ ಬಂದು ಜೋಯಿಸನ ಮುಂದೆ ಮಡಗಿದ್ರು. ಪಿಂಡ ಇಟ್ಟಮ್ಯಾಕೆ ಜೋಯಿಸರು ಕಾಣಿಸ್ತಾನೆ ಇರ್ಲಿಲ್ಲ. ಒಂದೊಂದು ಪಿಂಡ ಏನಿಲ್ಲಾ ಅಂದರು. 5ಕೆಜಿ ಇತ್ತು. ಪೈಲ್ವಾನರು ಎತ್ತೋ ಕಲ್ಲುಗುಂಡು ತರಹ ಇತ್ತು. ಏನ್ಲಾ ಇದು ಗೌಡ ಅಂದ ಜೋಯಿಸ. ಬುದ್ದಿ ನಮ್ಮಪ್ಪ ಸಾನೆ ಹಸಿವು ಅಂತಾನೆ ಅದಕ್ಕೆ ಒಂದು ವರ್ಷ ತನಕ ಅವನು ಊಟ ಕೇಳಿರಬಾರದು ಅಂತಾ 15ಕೆಜಿ ಅಕ್ಕಿಯಾಗೆ ಮಾಡಿಸೀವ್ನಿ ಅಂದ. ಅದಕ್ಕೆ 5ಕೆಜಿ ಎಳ್ಳು, 4ಕೆಜಿ ತುಪ್ಪ ಎಲ್ಲಾ ಹಾಕಿದ್ನಂತೆ. ಸಿಟ್ಟಾದ ಜೋಯಿಸ, ನಿಮ್ಮಪ್ಪನ ಪಿಂಡ ನಾಯಿತಿನ್ನ ಅಂದರು. ಬುದ್ದಿ ಪಿಂಡ ಕಾಗೆ ತಿನ್ ಬೇಕು ಅಲ್ವರಾ ಅಂದ ಗೌಡಪ್ಪ. ಸರಿ ಪೂಜೆ ಸರುವಾಯ್ತು. ಈ ಪಿಂಡಕ್ಕೆ ಸಣ್ಣದಾಗೆ ಪೂಜೆ ಮಾಡಿದ್ರೆ ಆಗಕ್ಕಿಲ್ಲ ಎಂದ ಜೋಯಿಸಪ್ಪ. ಒಂದೊಂದು ಪಿಂಡಕ್ಕೆ ಅರ್ಧ ಕೆಜಿ ಅರಿಸಿನ,ಕುಂಕುಮ,ಒಂದು ಊದಬತ್ತಿ ಪಾಕೇಟ್ ಇಟ್ಟು ಪೂಜೆ ಮಾಡ್ದ. ದರ್ಬೆ ಇಟ್ಟರೆ ಕಾಣಕ್ಕಿಲ್ಲ ಅಂತಾ ಹಂಚಿ ಕಡ್ಡಿ ಪರ್ಕೆ ಮಡಗಿದ್ದ. ಹೇಳಿದ್ದೆಲ್ಲಾ ಸಂಧ್ಯಾ ವಂದನೆ ಮಂತ್ರಾನೆ. ಎಲ್ಲಾ ನಮಸ್ಕಾರ ಮಾಡಿ. ಅಂತಿದ್ದಾಗೆನೇ ಗೌಡಪ್ಪನ ಹೆಂಡರು ಜಾರಿ ಪಿಂಡದ ಮ್ಯಾಕೆ ಬಿದ್ಲು. ಏ ಪಿಂಡ ಒಡೆಯೋತ್ತೆ ಅಂದ ಜೋಯಿಸ. ಏ ಒಡೀಬಾರದು ಅಂತಾ ಫೆವಿಕಾಲ್ ಹಾಕಿದೀನಿ ಬಿಡ್ರಿ. ಸರಿ ಇದನ್ನ ನೀರಿಗೆ ಬಿಡ್ರಿ ಅಂದ್ರು. ಗೌಡಪ್ಪ ಅಷ್ಟನ್ನು ಚೀಲದಾಗೆ ತುಂಬುಕೊಂಡು ಹೊಂಟ. ಅದು ಒಂದು ತರಾ ಸಣ್ಣ ಹೆಣ ತರನಾ ಕಾಣೋದು. ನೀರಿಗೆ ಮೇಲಿಂದ ಪಿಂಡ ಎಸಿದ್ರೆ ಗೌಡಪ್ಪನ ಮುಖಕ್ಕೆ ನೀರು ಸಿಡಿಯೋದು. ಇನ್ನೆಂತ ಸೈಜು ಇರಬೇಕು ನೋಡ್ರಿ ಪಿಂಡಾ.

ನಮ್ಮೂರು ಐಕ್ಳು ಕುಡಿದ್ದೇ ಕುಡಿದಿದ್ದು, ಮನೆ ಮುಂದೆ ಫುಲ್ ಆಮ್ಲೇಟ್. ಅದನ್ನ ನೀವೇ ತೆಗಿಬೇಕು ಗೌಡ್ರೆ ಪುಣ್ಯ ಬತ್ತದೆ. ಪುಣ್ಯಕ್ಕೆ ಒಂದಿಷ್ಟು ಬೆಂಕಿ ಹಾಕ, ರೋಗ ಬತ್ತದೆ ಅಂತಾ ಮೂಗಿಗೆ ಬಟ್ಟೆ ಕಟ್ಟಿಕೊಂಡು ತೆಗೆದ. ಕೋಳಿಗೆ ಅಂತಾ ಒಂದು ಫಾರಂನ್ನೇ ಬುಕ್ ಮಾಡಿದ್ದ. ತರಕಾರಿ ಹೆಚ್ಚಕ್ಕೆ ಟೇಂ ಇಲ್ಲಾ ಅಂತ. ಭಟ್ಟರು ಎಲ್ಲಾದನ್ನೂ ಎರಡು ಹೋಳು ಮಾಡಿ ಹಾಕಿದ್ರು. ಕುಂಬಳಕಾಯಿ ಮಾತ್ರ ಸಣ್ಣಗೆ ಮಾಡಿದ್ರು. ಸ್ವೀಟ್ ತಿಂದು ಐಕ್ಳು ಮತ್ತೆ ಮನೇಗಂತ  ಕೈಗೆ ಬೇರೆ ಇಸ್ಕಳೋವು. ಗೌಡಪ್ಪಂಗೆ ಮಾತ್ರ ಮಾತ್ರೆ ಹಾಕಿದ್ದ ಸ್ವೀಟ್. ಒಂದು ಪಂಕ್ತಿ ಊಟ ಆಕ್ತಿದ್ದಾಗೆನೇ ಹೊರಗಡೆ ಹೋಮ ತರಾ ಹೋಗೆ ಬರೋದು. ಏನೂ ಅಂತಾ ನೋಡಿದ್ರೆ, ಬಡ್ಡೇ ಹತ್ತಾವು ಒಟ್ಟಿಗೇ ಬೀಡಿ ಸೇದ್ತಾ ಇದ್ವು. ಗೌಡಪ್ಪನೇ ಎಲೆ ತೆಗೆದ, ಇದರ ಮೇಲೆ ನೀವು ಉರುಳು ಸೇವೆ ಮಾಡು ಅಂದ ಜೋಯಿಸ. ಕೋಮಲಾ ಏನ್ಲಾ ಇದು. ಏ ಸುರು ಹಚ್ಕೊಳ್ಳಿ. ಉರಳು ಸೇವೆ ಮುಗಿದ ಮೇಲೆ ಗೌಡಪ್ಪನ ಬೆನ್ನು ನಬೋಡಿದ್ರೆ ಫುಲ್ ರಕ್ತ. ಗೌಡ್ರೆ ಏನಿದು. ಚಿಕನ್ ಪೀಸ್ ಮೂಳೆ ಅಂಗೇ ಎಲೆ ಮ್ಯಾಕೆ ಇತ್ತು ಕನ್ಲಾ. ಲೇ ಸುಬ್ಬಾ, ಅರಿಸಿನ ಎಲ್ಲೋ. ಲೇ ಇವತ್ತೊಂದಿನ ಬಿಟ್ ಬಿಡ್ರೋ ಅಂದ ಗೌಡ. ಸರಿ ಜೋಯಿಸಂಗೆ ಎಲ್ಲಾ ಕೊಟ್ಟು ಕಳಿಸಿದ್ವಿ. ಬಂದ್ ನೋಡಿದ್ರೆ ಷುಗರ್ ಮಾತ್ರೆ ಬಾಕ್ಸೇ ಇಲ್ಲಾ. ಜೋಯಿಸಂಗೆ 400 ಪಾಯಿಂಟ್ ಸುಗರ್ ಇತ್ತಂತೆ. ಟಿವಿಎಸ್  ನಾಗೆ ಬೋಟಿ ಬಾಕ್ಸ್ ಕಟ್ಕಂಡಂಗೆ ಕಟ್ಕಂಡ್ ಹೋಗ್ಯಾನೆ ಅಂತಾ ಗೊತ್ತಾತು.  ಗೌಡಪ್ಪ ಅಂದ ನಮ್ಮನ್ಯಾಗೆ ಇನ್ನು ಯಾರೇ ಸತ್ತರು ಈ ಕಾರ್ಯ ಮಾಡಕ್ಕಿಲ್ಲ ಕನ್ಲಾ. ಯಾಕ್ರೀ. ಬದುಕಿದ್ದೋರು ನಾವೇ ಸತ್ತೋಯ್ತೀವಿ ಕನ್ಲಾ. ಒಳಗಡೆ ಗೌಡಪ್ಪನ ಹೆಂಡರು, ಹೋಗೋರಿಗೆ ಅಂತಾ ಲಾಡು ಪ್ಯಾಕ್ ಮಾಡ್ತಾ ಇದ್ವು. ಇದನ್ನ ಗ್ರಾ.ಪಂ ಚುನಾವಣ್ಯಾಗೆ ಹಂಚಿದ್ರೆ ಅಧಿಕಾರನಾದರೂ ಸಿಕ್ಕಿರದೂ ಅಂದ ಗೌಡಪ್ಪ.