ಸಾಹಿತಿ ಬೀರಪ್ಪನವರ ಟಿವಿ ಸಂದರ್ಶನ

ಸಾಹಿತಿ ಬೀರಪ್ಪನವರ ಟಿವಿ ಸಂದರ್ಶನ

ಬರಹ

ವೀಕ್ಷಕರೆ ಮಾನ್ಯ ಸಾಹಿತಿಗಳಾದ ಬೀರಪ್ಪನವರು ಅರ್ಜೆಂಟಾಗಿ ಊರಿಗೆ ಹೊಂಟಿದ್ರು. ಯಾವುದೂ ಕಾರ್ಯಕ್ರಮ ಇಲ್ಲಾ ಅಂತಾ ಊರಿಗೆ ಹೊಂಟೋರನ್ನಾ ಹಿಡ್ಕಂಡು ಬಂದು ನಿಮ್ಮ ಮುಂದೆ ಕೂರಿಸಿದೀವಿ. ಬಸ್ ಟಿಕೆಟ್ ಕ್ಯಾನ್ಸಲ್ ಮಾಡ್ಸಿ. ಇವರಿಗೆ ಅಸ್ತಮಾ ಇರೋದ್ರಿಂದ, ಎ.ಸಿ ಆಫ್ ಮಾಡಿದೀವಿ. ಆಗಾಗ ಕೆಟ್ಟ ಟೀ. ಬ್ರೆಡ್. ಜ್ವರ ಬಂದೈತಂತೆ. ಹಂಗೇ ಇವರಿಗೆ ಬೆಳಕು ಆಗಕ್ಕಿಲ್ಲಾ ಅಂತಾ ಯಾವುದೇ ಎಕ್ಸಟ್ರಾ ಲೈಟಿಂಗ್ ಮಾಡಿಲ್ಲ. ಕತ್ತಲಾಗೆ ಇವರು ಕಾಣಲಿಲ್ಲಾ ಅಂತಾ ಬೇಜಾರ್ ಮಾಡ್ಕೊಬೇಡಿ. ಇದಕ್ಕೆ ಯಾರು ಜಾಹೀರಾತು ನೀಡಿಲ್ಲ. ಹಾಗಾಗಿ ಒಂದು ಗಂಟೆ ಇದೇ ಕಾರ್ಯಕ್ರಮ. ನೀವು ಪೋನ್ ಮಾಡಿ ಪ್ರಸ್ನೆ ಕೇಳಬಹುದು. ಹಾಗೇ ಪೋನ್ ಬಿಲ್ಲನ್ನು ನೀವು ನಮ್ಮ ಇಳಾಸಕ್ಕೆ ಕಳಿಸಿದರೆ. ಅದನ್ನ ಬೀರಪ್ಪನವರೆ ನೀಡ್ತಾರೆ. ಅಲ್ಲಾ ಸಾ. ಹೌದು.  ಮಾನ್ಯ ಬೀರಪ್ಪನವರಿಗೆ ಕ್ಯಾಮರಕ್ಕೆ ಸ್ವಾಗತ. ನಮಸ್ಕಾರ.


ಟಿವಿ : ಸಾ ನಿಮ್ಮ ಮೊದಲನೆ ಸಂಕಲನ "ಹಳ್ಳಿ ಹೈದ" ಸ್ಯಾನೇ ಪೇಮಸ್ ಆಗಿತ್ತು. ಆದರೆ "ಬಡ್ಡೆ ಐದ" ಯಾಕೆ ಪೇಮಸ್ ಆಗ್ಲಿಲ್ಲಾ.
ಬೀರಪ್ಪ : ಸೊಯ್, ಸೊಯ್  (ಸೌಂಡ್ ಮ್ಯಾನೇಜರ್ ಸೌಂಡ್ ಬಾಕ್ಸ್ ನಾಗೆ ಏನೋ ಪ್ರಾಬ್ಲಮ್ ಅಂತಾ ಎಲ್ಲಾ ಬಿಚ್ಕಂಡಿದ್ದ, ಆಮ್ಯಾಕೆ ಇದು ಅಸ್ತಮಾ ಎಫೆಕ್ಟ್ ಅಂತಾ ಗೊತ್ತಾಗಿದ್ದು), ನೋಡಿ ಹಳ್ಳಿ ಹೈದಾ ಜನ ಓದ್ಲಿಲ್ಲ. ಅದೇ ಓದಿಸ್ತು. ಯಾಕೇಂದ್ರೆ ಅದರ ಮ್ಯಾಕೆ ಹುಡಗೀರ ಪಿಚ್ಚರ್ ಹಾಕಿದ್ದೆ. ಬಡ್ಡೆ ಹೈದದಲ್ಲಿ ಸಿದ್ದೇಸನ ಪೋಟೋ ಹಾಕಿದ್ದೆ. ದೇವರು ಪುಸ್ತಕ ಅಂತಾ ಯಾರೂ ಓದ್ಲಿಲ್ಲ. ಅಟೆಯಾ.
ಟಿವಿ : ಅದು ಸರಿ, ಉಳಿದಿರೋ ಪುಸ್ತಕ ಏನ್ಮಾಡಿದೀರಿ.
ಬೀರಪ್ಪ : ನಮ್ಮ ಕುಟುಂಬದವರೆಲ್ಲರೂ ಸೇರಿ ವೈಟ್ನರ್ ಹಾಕಿ ಒರೆಸಿದೀವಿ. ಈಗ "ಹೆಣ್ಣು ಐಕ್ಳು" ಅಂತಾ ಹೊಸಾ ಪುಸ್ತಕ ಬರೀತೀದನಲ್ಲಾ ಅದಕ್ಕೆ ಉಪಯೋಗವಾಗುತ್ತೆ.
ಟಿವಿ : ಸರ್ ನಿಮಗೆ ಜಡೆಮಾಯಿಸಂದ್ರದಿಂದ ರಂಗೇಶ ಪೋನ್ ಮಾಡಿದಾರೆ. ಹೇಳಿ ರಂಗೇಶ್, ನಮ್ ಜೊತೆಗೆ ಬೀರಪ್ಪ ಇದಾರೆ ಮಾತನಾಡಿ
ಬೀರಪ್ಪ : ನಮಸ್ಕಾರ
ರಂಗೇಶ : ಸರ್ ನಿಮಗೆ ಎಷ್ಟು ವರ್ಷದಿಂದ ಅಸ್ತಮಾ ಇದೆ. ಯಾಕೇಂದ್ರೆ ನಮ್ಮ ಅಮ್ಮಂಗೂ ಐತೆ. ಅದಕ್ಕೆ ನೀವು ಏನು ಔಷಧಿ ತೆಗೆದುಕೊಳ್ಳುತ್ತೀರಾ ಒಸಿ ಹೇಳ್ತೀರಾ.
ಟಿವಿ : ಲೇ ಬಡ್ಡೆ ಐದ್ನೆ. ಇದನ್ನು ಬೆಳಗ್ಗೆ 7ಕ್ಕೆ, ಆರೋಗ್ಯ ದೌರ್ಭಾಗ್ಯ ಅಂತಾ ಕಾರ್ಯಕ್ರಮ ಬತ್ತದೆ. ಅದ್ರಾಗೆ ಕೇಳು. ಸರಿ ಬೀರಪ್ಪನವರೆ ಮತ್ತೊಂದು ಕಾಲ್, ಸಿಂಗಸಂದ್ರದಿಂದ ಸುಬ್ಬಿ ಅಂತಾ
ಬೀರಪ್ಪ : ಹೇಳಿ ಸುಬ್ಬಿ
ಸುಬ್ಬಿ : ಸರ್ ನಿಮ್ಮ ಇತ್ತೀಚಿನ ಲೇಖನದಲ್ಲಿ ಹೆಣ್ಣು ಐಕ್ಳಿಗೆ ಸಾನೇ ಐಡೀರಿಯಾ ಕೊಟ್ಟಿದಿರಾ. ಹಂಗೇ ನಮ್ಮೂರ್ನಾಗೆ ಬೋ ಹೆಣ್ಣು ಐಕ್ಳಿಗೆ ಮದುವೆಯಾಗಿಲ್ಲ. ಅಂಗೇ ಗಂಡು ಹುಡುಕಿ ಹೇಳಿ ಸಾ
ಟಿವಿ : ಯೋ ಅವರನ್ನೇನ್ ಮದುವೆ ಬ್ರೋಕರ್ ಅಂದ್ಕಂಡೀಯೇನಮ್ಮಾ. ಅದಕ್ಕೆ ಸ್ವಯಂವರ ಬತ್ತದೆ ಅದ್ರಾಗೆ ಕೇಳು. ಎಂಗಿದ್ರೂ ರಕ್ಸಿತಾಂಗೂ ಏನೂ ಕ್ಯಾಮೇ ಇಲ್ಲ. ಅದು ಹೇಳ್ತದೆ.
ಬೀರಪ್ಪ : ನೀವು ನನ್ನನ್ನ ಯಾವ ಕಾರ್ಯಕ್ರಮದಾಗೆ ಕರ್ಕಂಡ್ ಬಂದು ಕೂರಿಸಿದ್ದೀರಾ ಅಂತಾ ತಿಳೀತಿಲ್ಲಾ.
ಟಿವಿ : ಅಯ್ಯಯ್ಯೋ ಕರೆಂಟ್ ಹೋತಲ್ಲಾ ಸಾರ್. ಅಡಚಣೆಗಾಗಿ ಕ್ಸಮಿಸಿ. ನೀವು ಪೋನಾಗೆ ಮಾತಾಡ್ತಾನೇ ಇರಿ
ಬೀರಪ್ಪ : ಹೇಳಿ ನಾನು ಬೀರಪ್ಪ, ಯಾವ ಬೀರಪ್ಪಲಾ. ಲೇ ಬಡ್ಡೆ ಐದ್ನೆ ಹೋದ ವಾರ 2ಸಾವಿರ ಕಾಸು ಇಸ್ಕಂಡಿದ್ಯಲ್ಲಾ ಯಾವಾಗ್ಲಾ ಕೊಡ್ತೀಯಾ. ಹಲೋ ನಾನು ಸಾಹಿತಿ ಬೀರಪ್ಪ. ಲೇ ದುಡ್ಡು ಕೊಡಬೇಕಾಯ್ತದೆ ಅಂತಾ ಹೆಸರು ಬೇರೆ ಮಡಿಕ್ಕಂಡಿದಿಯಾ. ಸಿಗು ಮಗನೆ ನಿನಗೆ ಐತೆ. ಹಲೋ ಇದು ರಾಂಗ್ ನಂಬರ್.
ಟಿವಿ : ಕರೆಂಟ್ ಬಂದಿದೆ, ಮತ್ತೆ ಬೀರಪ್ಪನವರೊಂದಿಗೆ. ಸಾ ನಿಮ್ಮ ಮುಂದಿನ ಕಾದಂಬರಿ ಯಾವುದು.
ಬೀರಪ್ಪ : ಬೋ ಐತೆ, "ಗಬ್ಬುನಾಥ ಗೌಡಪ್ಪ ಊರ್ ಬಿಟ್ಟ" "ಸಿದ್ದೇಸನ ಪ್ರಪಂಚ" "ಸಂಪದದಲ್ಲಿ ಸಿದ್ದೇಸ" ಹೀಗೆ ಹತ್ತು ಹಲವು. ಆದರೆ ಪ್ರಿಂಟ್ ಹಾಕ್ಸೋದು ಒಂದೆಯಾ. ಯಾಕೇಂದ್ರೆ ಈ ಕಾದಂಬರಿ ಅಂತಾ ಎಲ್ಲಾ ಆಸ್ತಿ ಮಾರೀವ್ನಿ. ಇರೋದು ಒಂದೇ ಮನೆ ಅದಕ್ಕೆಯಾ.
ಟಿವಿ : ನಿಮಗೆ ಪ್ರಶಸ್ತಿ ಏನಾದರೂ ಸಿಕ್ಕಿದೆಯಾ, ಆ ಮ್ಯಾಕೆ ನಿಮ್ಮ ದಿನಚರಿ.
ಬೀರಪ್ಪ : ಪ್ರಶಸ್ತಿ ಸಾನೇ ಬಂದೈತೆ. ಅಣ್ಣಮ್ಮನ ಪೆಂಡಾಲ್ನಾಗೆ, ಗಣಪತಿ ಹಬ್ಬದಾಗೆ, ಕನ್ನಡ ರಾಜ್ಯೋಸ್ತವದಾಗೆ.... ಕೊಟ್ಟಿಲ್ಲ.
ಇನ್ನು ನನ್ನ ದಿನಚರಿ, ಬೆಳಗ್ಗೆ 6ಕ್ಕೆ ಎದ್ದೋನೆ, ಕೆರೆತಾವ ಬಂದ್ ಮ್ಯಾಕೆ ಎರಡು ಕಪ್ಪ ಟೀ, ಆಮ್ಯಾಕೆ ಒಂದು ಹತ್ತು ಬೀಡಿ, 9ಕ್ಕೆ ತಿಂಡಿ.
ಟಿವಿ : ನಾ ಕೇಳಿದ್ದು ಪುಸ್ತಕದ ಬಗ್ಗೆ, ನೀವೇನ್ ಡಾಕಟರಿಗೆ ಹೇಳ್ದಂಗೆ ಹೇಳ್ತೀರಲ್ಲಾ ಬೀರಪ್ಪನೋರೆ
ಬೀರಪ್ಪ : ಓಹ್ ಅದಾ, ಮೊದಲು ಬಫ್ ಷೀಟ್ನಾಗೆ, ಪೆನ್ಸಿಲ್ನಾಗೆ ಬರೆಯೋದು. ಅದು ಸರಿ ಅಂದ್ರೆ. ಒಳ್ಳೆ ಹಾಳ್ಯಾಗೆ ಪೆನ್ನಾಗೆ ಬರೆಯೋದು. ಇಂಗೆ ಬರೆದು ಬರೆದು ಬಲಗೈ ಬೆರಳೆಲ್ಲಾ ಸವದು ಹೋಗೈತೆ. ಒಂದು ರೀತಿ ಕುಷ್ಟ ಬಂದಂಗೆ ಆಗೈತೆ. ಬೆರಳು ಯಾವಾಗಲೂ ಮಡಚಿಕೊಂಡೇ ಇತ್ತದೆ. ಇನ್ನು ಇಂಕು ಹಾಕಂಕೆ ಅಂತಾ ಒಬ್ಬ ಹುಡಗನ್ನ ಮಡಿಕ್ಕಂಡಿದೀನಿ.
ಟಿವಿ : ಸಾ ಮತ್ತೊಂದು ಪೋನ್, ಸಾ ಈ ದರ್ಬೇಸಿ ಕಾರ್ಯಕ್ರಮ ಹಾಕೋ ಬದಲು, ಯಾವುದಾದರೂ ಪಿಚ್ಚರ್ ಹಾಡು ಹಾಕ್ಬೋದಿತ್ತಲ್ಲಾ ಸಾ.
ಬೀರಪ್ಪ : ರೀ ಏನ್ರೀ ಅವಮಾನ.
ಟಿವಿ : ಬೇಜಾರ್ ಮಾಡ್ಕಬೇಡಿ ಸಾ. ಜನ ಹಂಗೆಯಾ. ಸಾ ಮತ್ತೊಂದು ಪೋನ್. ಗಿಡ್ಡಪ್ಪ ಅಂತಾ.
ಗಿಡ್ಡಪ್ಪ : ಸಾ ನೀವು ಈಟೊಂದು ಕಾದಂಬರಿ ಬರೆಯೋ ಬದ್ಲು. ಒಂದು ಎರಡು ಎಕರೆ ಜಮೀನು ಮಾಡ್ಸಿದ್ರೆ. ನಿಮ್ಮ ಮನೇನೂ ಉದ್ದಾರವಾಗಿರೋದು. ಅಂಗೇ ಜನಕ್ಕೂ ಒಂದಿಷ್ಟು ಕೆಲಸ ಅಂತಾ ಸಿಕ್ಕಿರೋದು.
ಟಿವಿ : ಇಟ್ಟೋ ತನಕ ನಮ್ಮ ಜೊತೆ ಇದ್ದ ಬೀರಪ್ಪನವರಿಗೆ ಧನ್ಯವಾದಗಳು. ಬಸ್ ಚಾರ್ಜ್ ಹಂಗೇ ಜ್ವರಕ್ಕೆ ಮಾತ್ರೆ ಕೊಟ್ಟು ಬೀರಪ್ಪನ ಕಳಿಸಿ.
ಈಗ ನಮ್ಮ ಮುಂದಿನ ಕಾರ್ಯಕ್ರಮ " ಮುದ್ದೆ ಮಾಡಿ ಉಣ್ಣುವುದು ಹೇಗೆ" ನಮಸ್ಕಾರ.