ಸೇವಾ ಪುರಾಣ -6

ಸೇವಾ ಪುರಾಣ -6

ಬರಹ

                                                                               ಸೇವಾ ಪುರಾಣ -6
                                                                                 ಕರಾಳ ಅನುಭವ
ದುರಂತಕ್ಕೆ ಮುನ್ನುಡಿ   
     ಅರಸಿಕೆರೆಯ ಇನ್ನೊಬ್ಬ ಪ್ರಸಿದ್ಧ ವರ್ತಕರು ಹಾಗೂ ತಾಲ್ಲೂಕು ಕಾಂಗ್ರಸ್ ಅಧ್ಯಕ್ಷರಾಗಿದ್ದವರು ಕಛೇರಿಗೆ ಬಂದು ಶಿವಮೊಗ್ಗದಿಂದ ಅರಸಿಕೆರೆಗೆ ಪ್ರತಿವಾರ 15 ಲಾರಿ ಲೋಡು ಅಕ್ಕಿ ತಂದು ಮಾರಾಟ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರಂತೆ.ಜಿಲ್ಲಾಧಿಕಾರಿಯವರನ್ನೂ 'ಕಂಡು' ಸ್ವತಃ ಮಾತನಾಡಿ ಬಂದಿದ್ದರಂತೆ. ಆ ವಿಷಯ ನನಗೆ ಗೊತ್ತಿರಲಿಲ್ಲ ಮತ್ತು ಅವರು ಬಂದು ನನ್ನನ್ನು ವಿಚಾರಿಸಿದಾಗ ಅವರ ಅರ್ಜಿ ಇನ್ನೂ ನನ್ನ ಬಳಿಗೆ ಬಂದಿರಲಿಲ್ಲ. ಅವರು ಕೂಗಾಡಿ ಮಧ್ಯಾಹ್ನ ಬರುತ್ತೇನೆಂದೂ ಅಷ್ಟರಲ್ಲಿ ಕೆಲಸ ಮಾಡಿರಬೇಕೆಂದು ತಾಕೀತು ಮಾಡಿ ಹೋಗಿದ್ದರು.ಆಗ ಅಂತರ ಜಿಲ್ಲಾ ಅಕ್ಕಿ ಸಾಗಾಣಿಕೆಗೆ ನಿರ್ಬಂಧವಿದ್ದ ಕಾಲ. ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 15 ಕ್ವಿಂಟಾಲ್ ಅಕ್ಕಿ ಸಾಗಣೆಗೆ ಮಾತ್ರ ಅವಕಾಶವಿತ್ತು. ನಾನು ಧುರೀಣ ಶೆಟ್ಟರ ಅರ್ಜಿ ಪಡೆದು ಇದ್ದ ವಿಷಯ ಟಿಪ್ಪಣಿ ಮಂಡಿಸಿ ಅವಕಾಶವಿಲ್ಲದ ಕಾರಣ ಅರ್ಜಿ ವಿಲೆಯಿಡಬಹುದೆಂದು ಫುಡ್ ಅಸಿಸ್ಟೆಂಟರಿಗೆ ಕಳಿಸಿದೆ. ಫುಡ್ ಅಸಿಸ್ಟೆಂಟರು ನನ್ನ ಟಿಪ್ಪಣಿ ಒಪ್ಪಿದ್ದರು. ಮಧ್ಯಾಹ್ನ ವರ್ತಕರು ಬಂದಾಗ ವಿಲೆಯಿಟ್ಟ ಬಗ್ಗೆ ತಿಳಿಸಿದಾಗ ಸಿಟ್ಟಿಗೆದ್ದ ಅವರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಚರ್ಚಿಸಿದರು. ಜಿಲ್ಲಾಧಿಕಾರಿಯವರು ಫುಡ್ ಅಸಿಸ್ಟೆಂಟರನ್ನು ಕರಿಸಿ ಏನೋ ಸೂಚನೆ ನೀಡಿದರು. ಫುಡ್ ಅಸಿಸ್ಟೆಂಟರು ಬಂದು ನನಗೆ ಹೇಳಿಕಳಿಸಿ "ಹಾಳಾಗಿ ಹೋಗಲಿ, ಶೆಟ್ಟರ ಪರವಾಗಿ ಟಿಪ್ಪಣಿ ಬರೆದು ಕಡತ ಕಳಿಸು" ಎಂದು ನನಗೆ ಹೇಳಿದರು. ನಾನು ಒಪ್ಪಲಿಲ್ಲ. ನಾನು ಏನೇ ಟಿಪ್ಪಣಿ ಬರೆದರೂ ಆದೇಶ ಮಾಡುವವರು ಜಿಲ್ಲಾಧಿಕಾರಿಯವರೇ ಆದ್ದರಿಂದ ಅವರಿಗೆ ಬೇಕಾದ ಆದೇಶ ಮಾಡಬಹುದೆಂದು ಹೇಳಿದೆ.ಫುಡ್ ಅಸಿಸ್ಟೆಂಟರ ಒತ್ತಾಯ ಜಾಸ್ತಿಯಾದಾಗ ನಾನು ವಿವರವಾಗಿ ಹುಡುಕಿ ಅವರ ಸಗಟು ಪರವಾನಗಿ ನವೀಕರಿಸಿಲ್ಲದುದನ್ನು ಗಮನಿಸಿ ಸಗಟು ಪರವಾನಗಿ ನವೀಕರಣವಾದ ನಂತರ ಈ ವಿಷಯ ಪರಿಶೀಲಿಸಬಹುದೆಂದು ಟಿಪ್ಪಣಿ ಇಟ್ಟೆ. ತಾನು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದೆನೆಂದು ವರ್ತಕರು ವಾದಿಸಿದರೂ ಅದಕ್ಕೆ ಸಮರ್ಥನೆಯಿರಲಿಲ್ಲ. ಒಟ್ಟಿನಲ್ಲಿ ಅವರ ಕೆಲಸವಾಗಲಿಲ್ಲ. ಕೆಲಸ ಮಾಡಿಕೊಡದಿದ್ದಕ್ಕೆ ಜಿಲ್ಲಾಧಿಕಾರಿಯವರೂ ಅಸಮಾಧಾನಗೊಂಡಿದ್ದರು. ಈ ಪ್ರಕರಣ ನನ್ನ ಮುಂದಿನ ಕರಾಳ ಅನುಭವಗಳಿಗೆ ಮುನ್ನುಡಿ ಬರೆದಿದ್ದುದರ ಅರಿವು ನನಗಿರಲಿಲ್ಲ. ವರ್ತಕರಂತೂ "ಈಗ ತುರ್ತು ಪರಿಸ್ಥಿತಿಯಿರುವುದು ಗೊತ್ತಿಲ್ಲವಾ? ನಿನಗೊಂದು ಗತಿ ಕಾಣಿಸುತ್ತೇನೆ" ಎಂದು ಧಮಕಿ ಹಾಕಿ ಹೋಗಿದ್ದರು.


ಬಂಧನ


     ಮೇಲಿನ ಘಟನೆ ನಡೆದ ಮರುದಿನ ರಾತ್ರಿ ಸುಮಾರು 9-30ರ ವೇಳೆಯಲ್ಲಿ ಒಬ್ಬ ವ್ಯಕ್ತಿ ಬಂದು ನಮ್ಮ ಮನೆಯ ಬಾಗಿಲು ಬಡಿದ. ನಾನು ಬಾಗಿಲು ತೆರೆದಾಗ ಆ ವ್ಯಕ್ತಿ "ನಾಗರಾಜ್ ಇದ್ದಾರಾ?" ಎಂದು ಕೇಳಿದರು. 'ನಾನೇ ನಾಗರಾಜ್' ಎಂದಾಗ ತನ್ನ 'ಲೈಸೆನ್ಸ್ ರಿನ್ಯೂ ಮಾಡಿಸಿಕೊಳ್ಳಬೇಕಿತ್ತು' ಎಂದು ಆ ವ್ಯಕ್ತಿ ಹೇಳಿದರು. ಇಂತಹ ವಿಷಯಕ್ಕೆಲ್ಲಾ ಮನೆಯ ಹತ್ತಿರ ಬರಬಾರದೆಂದೂ ಮರುದಿನ ಕಛೇರಿಗೆ ಬರಬೇಕೆಂದೂ ಹೇಳಿಕಳಿಸಿದೆ. ಇದಾದ ಐದೇ ನಿಮಿಷಕ್ಕೆ ಒಂದು ಪೋಲಿಸ್ ಜೀಪು ನನ್ನ ಮನೆಯ ಬಳಿಗೆ ಬಂದಿತು. ಸಬ್ ಇನ್ಸ್ ಪೆಕ್ಟರರು, ಐದಾರು ಪೇದೆಗಳು ಮತ್ತು ನನ್ನನ್ನು ಕೇಳಿಕೊಂಡು ಬಂದಿದ್ದ ವ್ಯಕ್ತಿಗಳು ಮನೆಯ ಒಳಗೆ ನುಗ್ಗಿದರು. ಆ ವ್ಯಕ್ತಿ ಮಫ್ತಿಯಲ್ಲಿದ್ದ ಪೋಲಿಸು ಎಂದು ನಂತರ ನನಗೆ ತಿಳಿಯಿತು. ಸರ್ಚ್ ವಾರೆಂಟ್ ಇದೆಯೆಂದು ಹೇಳಿ ನನ್ನ ಮನೆಯನ್ನೆಲ್ಲಾ ಜಾಲಾಡಿದರು. ಅವರಿಗೆ ಬೇಕಾಗಿದ್ದಂತಹ ಯಾವುದೇ ದಾಖಲೆಗಳು ಅವರಿಗೆ ಸಿಕ್ಕಿದಂತೆ ಕಾಣಲಿಲ್ಲ. ಆದರೂ ನನ್ನನ್ನು ಜೀಪಿನಲ್ಲಿ ಕೂರಿಸಿಕೊಂಡು ಕರೆದೊಯ್ದರು. ನನ್ನ ತಂದೆ ಗಾಬರಿಯಾಗಿ ಕೇಳಿದ್ದಕ್ಕೆ ಅಂತಹುದೇನೂ ಇಲ್ಲವೆಂದೂ ನನ್ನ ಹೇಳಿಕೆ ಪಡೆದು ವಾಪಸು ಕಳಿಸುವುದಾಗಿಯೂ ಸಬ್ ಇನ್ಸ್ ಪೆಕ್ಟರರು ತಿಳಿಸಿದರು. ಅಂದು ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದರು, ಯಾರೂ ನಿದ್ದೆ ಮಾಡಲಿಲ್ಲ. ನಾನೂ ಸಹ ಅಂದು ಪೋಲಿಸ್ ಠಾಣೆಯಲ್ಲಿ ರಾತ್ರಿ ಕಳೆಯಬೇಕಾಯಿತು. ನನ್ನನ್ನು ಠಾಣೆಯಲ್ಲಿ ಕುಳಿತಿರಲು ಹೇಳಿ ರಾತ್ರಿ ಪಾಳಿಯ ಪೋಲಿಸರನ್ನು ಹೊರತುಪಡಿಸಿ ಎಲ್ಲರೂ ಜಾಗ ಖಾಲಿ ಮಾಡಿದ್ದರು. ಸೊಳ್ಳೆ, ತಿಗಣೆಗಳ ಕೈಲಿ ಕಡಿಸಿಕೊಳ್ಳುತ್ತಾ, ಏಕೆ ಕರೆದುಕೊಂಡುಬಂದಿದ್ದಾರೆಂದು ತಲೆ ಕೆಡಿಸಿಕೊಂಡು ಅಂದಿನ ರಾತ್ರಿ ಪೂರ್ತಾ ಠಾಣೆಯ ಬೆಂಚಿನ ಮೇಲೆ ತೂಕಡಿಸುತ್ತಾ ಕಳೆದಿದ್ದೆ. ಮರುದಿನ ಬೆಳಿಗ್ಗೆ ಸುಮಾರು 9-00 ಘಂಟೆ ವೇಳೆಗೆ ಬಂದ ಸಬ್ ಇನ್ಸ್ ಪೆಕ್ಟರರು ಜಿಲ್ಲಾಧಿಕಾರಿಯವರೊಂದಿಗೆ ಫೋನಿನಲ್ಲಿ ಮಾತನಾಡಿ 'ಮನೆಯನ್ನೆಲ್ಲಾ ಸರ್ಚ್ ಮಾಡಿದರೂ ಏನೂ ಸಿಗಲಿಲ್ಲ, ಏನು ಮಾಡಬೇಕು?' ಎಂದು ವಿಚಾರಿಸಿದ್ದಕ್ಕೆ ಜಿಲ್ಲಾಧಿಕಾರಿಯವರು 'ಪ್ರೊಸೀಡ್' ಎಂದು ಹೇಳಿದ ಮಾತು ಅಲ್ಲೇ ಕುಳಿತಿದ್ದ ನನಗೆ ಸ್ಪಷ್ಟವಾಗಿ ಕೇಳಿಸಿತು. ನನ್ನನ್ನು ಆಗ ನಿಷೇಧಕ್ಕೆ ಒಳಗಾಗಿದ್ದ ಆರೆಸ್ಸೆಸ್ ನ ಕಾರ್ಯಕರ್ತ ಎಂದು ಎಫ್.ಐ.ಆರ್. ಸಿದ್ಧಪಡಿಸಿ ಠಾಣೆಯಲ್ಲೇ ಇದ್ದ ಕರಪತ್ರವೊಂದನ್ನು ನನ್ನ ಮನೆಯಲ್ಲಿ ಸಿಕ್ಕಿದ್ದೆಂಬಂತೆ ಪಂಚನಾಮೆ ಮಾಡಿದಂತೆ ಮಾಡಿ ಅಲ್ಲೇ ಇದ್ದ ಕೆಲವರನ್ನು ಕರೆದು ಹಿಂದಿನ ದಿನದ ದಿನಾಂಕದಲ್ಲಿ ಸಹಿ ಮಾಡಿಸಿಕೊಂಡರು. ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆ ದಾಖಲಿಸಿ ನನ್ನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿ ಹಾಸನದ ಜೈಲಿಗೆ ತಳ್ಳಿದರು. ಆರೆಸ್ಸೆಸ್ ನಿಷೇಧಕ್ಕೆ ಒಳಗಾಗುವ ಮುನ್ನ ನಾನೊಬ್ಬ ಆರೆಸ್ಸೆಸ್ ನ ಕಾರ್ಯಕರ್ತನಾಗಿದ್ದಿರಬಹುದು.ಆದರೆ ಯಾವುದೇ ದಾಖಲೆ,ಆಧಾರಗಳಿಲ್ಲದೆ ಬಂಧಿಸಿ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿಯವರ ಕುಮ್ಮಕ್ಕೇ ಕಾರಣವೆಂಬುದು ಸುಸ್ಪಷ್ಟವಾಗಿತ್ತು. ಏಕೆಂದರೆ ಬಂಧನಕ್ಕೆ ಒಳಗಾಗಿ 48 ಘಂಟೆಗಳಿಗೂ ಹೆಚ್ಚುಕಾಲವಿದ್ದರೆ ಸೇವೆಯಿಂದ ಅಮಾನತ್ತಿನಲ್ಲಿಡಲು ಅವಕಾಶವಿದ್ದು, 48 ಘಂಟೆಗಳ ಒಳಗೇ ನನ್ನನ್ನು ಅಮಾನತ್ತಿನಲ್ಲಿರಿಸಿ ಆದೇಶವನ್ನು ನನಗೆ ಜಾರಿ ಮಾಡಿಸಿದ್ದು ಜಿಲ್ಲಾಧಿಕಾರಿಯವರು ಪೂರ್ವ ನಿರ್ಧರಿತವಾಗಿಯೇ ಮಾಡಿಸಿದ ಕೆಲಸವೆಂದು ನನಗೆ ಖಚಿತಪಡಿಸಿತು.


ಜಾಮೀನಿನ ಮೇಲೆ ಬಿಡುಗಡೆ
     ಯಾವ ಮ್ಯಾಜಿಸ್ಟ್ರೇಟರ ಮುಂದೆ ಆರೋಪಿಯಾಗಿ ನನ್ನನ್ನು ಹಾಜರುಪಡಿಸಲಾಗಿತ್ತೋ ಅದೇ ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ನನ್ನ ತಂದೆಯವರು ಶಿರಸ್ತೇದಾರರಾಗಿ ಕೆಲಸ ಮಾಡುತ್ತಿದ್ದರು. ಅವರಿಗೂ ಮುಜುಗರವಾಗಿತ್ತು. ನನ್ನ ತಂದೆಯವರು ಆದಿನ ಸಾಂದರ್ಭಿಕ ರಜೆ ಹಾಕಿ ಸುಪ್ರಸಿದ್ಧ ಹಿರಿಯ ವಕೀಲರೂ ಹಿರಿಯ ಕಾಂಗ್ರೆಸ್ ನಾಯಕರೂ ಆಗಿದ್ದ ಶ್ರೀ ಹಾರನಹಳ್ಳಿ ರಾಮಸ್ವಾಮಿಯವರ ಮೂಲಕ ಜಾಮೀನು ಅರ್ಜಿ ನ್ಯಾಯಾಲಯಕ್ಕೆ ಸಲ್ಲಿಸಿ ಮರುದಿನವೇ ನನ್ನನ್ನು ಜಾಮೀನಿನ ಮೇಲೆ ಬಿಡಿಸಿದರು. ಸ್ವತಃ ತಂದೆಯವರೇ ನನಗೆ ಜಾಮೀನಾಗಿ ನ್ಯಾಯಾಲಯಕ್ಕೆ ಬಾಂಡು ಸಲ್ಲಿಸಿದ್ದರು.ಬಂಧನವಾದ 48 ಘಂಟೆಗಳ ಒಳಗೇ ನನ್ನ ಬಿಡುಗಡೆಯಾಗಿದ್ದರಿಂದ ನನ್ನ ಅಮಾನತ್ತಿನ ಆದೇಶಕ್ಕೆ ಅರ್ಥವಿರಲಿಲ್ಲ. ಮನೆಗೆ ಬಂದು ಸ್ನಾನ ಮಾಡಿ ಊಟ ಮಾಡುವಾಗ ಮನೆಮಂದಿಯೆಲ್ಲಾ ಆತಂಕದಿಂದ ನನ್ನನ್ನೇ  ದಿಟ್ಟಿಸುತ್ತಿದ್ದರು. ನಮ್ಮಮ್ಮನ ಕಣ್ಣಿನಿಂದ ನೀರು ತುಳುಕಿತ್ತು. 'ನಾನೇನೂ ಕಳ್ಳತನ ಮಾಡಿ ಜೈಲಿಗೆ ಹೋಗಿಲ್ಲ. ಮಾಡಬಾರದ್ದು ಮಾಡಿಲ್ಲ' ಎಂದು ಹೇಳಿದರೂ ಅವರಿಗೆ ಅಸಮಾಧಾನವಿದ್ದುದು ಗೋಚರವಾಗುತ್ತಿತ್ತು.


ಜಿಲ್ಲಾಧಿಕಾರಿಯೊಂದಿಗೆ ಮುಖಾಮುಖಿ


     ಊಟ ಮಾಡಿದ ನಂತರದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಹೊರಟಾಗ ತಂದೆಯವರೂ ನನ್ನೊಂದಿಗೆ ಬಂದರು. ಜಿಲ್ಲಾಧಿಕಾರಿಯವರನ್ನು ಕಂಡಾಗ ಅವರು  ನನ್ನನ್ನು ಅಸಹನೆಯಿಂದಲೇ ನೋಡಿದರು. ನಾನು ಅವರಿಗೆ "ಅಧೀನ ನೌಕರರನ್ನು ರಕ್ಷಿಸಬೇಕಾದ ಮೇಲಾಧಿಕಾರಿಯೇ ನೌಕರನ ವಿರುದ್ಧ ಪ್ರಕರಣ ದಾಖಲಿಸಲು ಹೇಳುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಪ್ರಶ್ನಿಸಿದೆ. ಅವರು ಉತ್ತರಿಸಲಿಲ್ಲ. ಬಂಧನವಾದ 48 ಘಂಟೆಗಳ ಕಾಲದ ಒಳಗೇ ನಾನು ಅವರ ಮುಂದೆಯೇ ನಿಂತಿರುವುದರಿಂದ ಅಮಾನತ್ತಿನ ಆದೇಶವನ್ನು ಹಿಂಪಡೆಯಲು ಕೋರಿದೆ. ಅಮಾನತ್ತು ಪಡಿಸಬೇಕೆಂಬುದೇ ಉದ್ದೇಶವಾಗಿದ್ದಲ್ಲಿ ಬೇರೆ ಕಾರಣ ತೋರಿಸಿ ಅಮಾನತ್ತಿನಲ್ಲಿಡಬೇಕೆಂದು ಹೇಳಿದೆ. ಮಾತಿನ ನಡುವೆ ಅವರು "ಒತ್ತಡ ಬಂದಿದ್ದರಿಂದ ಹಾಗೆ ಮಾಡಬೇಕಾಯಿತೆಂದೂ, ಅಮಾನತ್ತು ಹಿಂಪಡೆಯಲು ಪೋಲಿಸ್ ಪ್ರಕರಣ ಇತ್ಯರ್ಥವಾಗಲಿ" ಎಂದು ಹೇಳಿದಾಗ ನನ್ನ ಸಹನೆಯ ಕಟ್ಟೆ ಒಡೆಯಿತು. ಜಿಲ್ಲಾಧಿಕಾರಿಯವರನ್ನು ಕಠಿಣವಾಗಿ ನಿಂದಿಸಿದೆ. ಜಿಲ್ಲಾಧಿಕಾರಿಯವರು ಪ್ರತಿಕ್ರಿಯಿಸಲಾರದೆ ಸುಮ್ಮನಿದ್ದರು. ಆವೇಶದ ಭರದಲ್ಲಿ ಒಂದೆರಡು ಅವಾಚ್ಯ ಶಬ್ದಗಳೂ ಹೊರಬಂದಾಗ ಹೆದರಿದ ನನ್ನ ತಂದೆ ಮತ್ತು ಜಿಲ್ಲಾಧಿಕಾರಿಯವರ ಆಪ್ತ ಸಹಾಯಕರು ನನ್ನ ಒಂದೊಂದು ತೋಳನ್ನು ಹಿಡಿದು ಹೊರಕ್ಕೆ ಎಳೆದೊಯ್ದರು. ನನ್ನ ಆವೇಶ ನನ್ನನ್ನು ಇನ್ನೂ ಹೆಚ್ಚಿನ ತೊಂದರೆಗೆ ಈಡು ಮಾಡುತ್ತದೆಂಬ ಅರಿವು ನನಗಾಗ ಇರಲಿಲ್ಲ.


     ಕಛೇರಿಯಿಂದ ನನಗೆ ನಿಷೇಧಕ್ಕೊಳಗಾದ ಆರೆಸ್ಸೆಸ್ ಚಟುವಟಿಕೆಗಳಲ್ಲಿ  ತೊಡಗಿದ್ದರಿಂದ ನನ್ನ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದೆಂದು ಕಾರಣ ಕೇಳಿ ನೋಟೀಸು ನೀಡಲಾಯಿತು. ಆ ನೋಟೀಸಿಗೆ ನಾನು ಸಿದ್ಧಪಡಿಸಿದ ಉತ್ತರವನ್ನು ತಂದೆಯವರು ಲಾಯರಿಗೆ ತೊರಿಸಿ ಕೊಡು ಎಂದು ಹೇಳಿದರು. ಆಗೆಲ್ಲಾ ಕಛೇರಿಯಲ್ಲಿ ಕನ್ನಡದ ಬಳಕೆ ಪೂರ್ಣವಾಗಿ ಬಂದಿರಲಿಲ್ಲ. ಇಂಗ್ಲಿಷ್ ಭಾಷೆಯಲ್ಲಿ ಬಂದಿದ್ದ ನೋಟೀಸಿಗೆ ನಾನೂ ಇಂಗ್ಲಿಷ್ ಭಾಷೆಯಲ್ಲೇ ಉತ್ತರ ಸಿದ್ಧಪಡಿಸಿದ್ದೆ. ನಾನು ಉತ್ತರವನ್ನು 'In response to your notice, I am to state that...' ಎಂದು ಪ್ರಾರಂಭಿಸಿದ್ದನ್ನು ಜೂನಿಯರ್ ಲಾಯರರು 'In response to your kind notice, I am to submit that ..' ಎಂದು ತಿದ್ದಿದರು. ಹಿರಿಯ ವಕೀಲರು 'In response to your kind notice, I beg to submit that ...' ಎಂದು ಬದಲಾಯಿಸಿದರೆ ನನ್ನ ತಂದೆಯವರು 'In response to your kind notice, I humbly beg to submit that ..' ಎಂದು ತಿದ್ದಿಕೊಟ್ಟರು. ನನಗಿಷ್ಟವಿಲ್ಲದಿದ್ದರೂ ಈ ಒಕ್ಕಣೆಯಿದ್ದ ಪತ್ರಕ್ಕೆ ಸಹಿ ಹಾಕಿ ಉತ್ತರ ಸಲ್ಲಿಸಿದೆ. ಒಬ್ಬೊಬ್ಬರ ಮನೋಭೂಮಿಕೆ ಒಂದೊಂದು ತರಹ ಎಂಬುದಕ್ಕೆ ಈ ತಿದ್ದಪಡಿಗಳೇ ಸಾಕ್ಷಿ. ಒಂದೇ ವಿಷಯಕ್ಕೆ ಎರಡೆರಡು ಕಡೆ ವಿಚಾರಣೆಗೆ ಅವಕಾಶವಿಲ್ಲದ್ದರಿಂದ ಇಲಾಖಾ ವಿಚಾರಣೆ ನಡೆಯಲೇ ಇಲ್ಲ. 'ಬ್ರಾಹ್ಮಣರಿಗೆ ನೌಕರಿ ಸಿಕ್ಕುವುದೇ ಕಷ್ಟ. ಅಂತಹುದರಲ್ಲಿ ನಾನು ಇದ್ದ ಕೆಲಸವನ್ನು ಹಾಳು ಮಾಡಿಕೊಳ್ಳುತ್ತಿದ್ದೇನೆಂದು' ನನ್ನ ತಂದೆಯವರು ನೋವಿನಿಂದ, ಬೇಸರದಿಂದ ಅಲವತ್ತುಕೊಳ್ಳುತ್ತಿದ್ದರು. ನನ್ನ ತಾಯಿ, ತಂಗಿ ಮತ್ತು ಮೂವರು ತಮ್ಮಂದಿರು ಆತಂಕಗೊಂಡಿದ್ದರು. ಒಂದೂವರೆ ವರ್ಷಗಳ ಕಾಲ ನಾನು ಸೇವೆಯಿಂದ ಅಮಾನತ್ತಿನಲ್ಲಿ ಕಳೆಯಬೇಕಾಯಿತು.


(ಕಾಲಘಟ್ಟ: 1975)                                                                                                                              ... ಮುಂದುವರೆಯಲಿದೆ