ಸೇವಾ ಪುರಾಣ -13: ಸರಳುಗಳ ಹಿಂದಿನ ಲೋಕ -6

ಸೇವಾ ಪುರಾಣ -13: ಸರಳುಗಳ ಹಿಂದಿನ ಲೋಕ -6

ಬರಹ

                                                 ಸರಳುಗಳ ಹಿಂದಿನ ಲೋಕ -6


ಸ್ವಾರಸ್ಯಕರ ಘಟನೆಗಳು
     ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ದೇಶಾದ್ಯಂತ ಕಾವೇರತೊಡಗಿ ಹಾಸನ ಜಿಲ್ಲೆಯಲ್ಲಿಯೂ ಪ್ರ್ರತಿಭಟನೆ ನಡೆಸಿ ಜೈಲು ಸೇರಿದವರಿಗೆ ಕಡಿಮೆಯಿರಲಿಲ್ಲ.ಹೆಚ್ಚಿನ ಸತ್ಯಾಗ್ರಹಿಗಳು ಆರೆಸ್ಸೆಸ್ ನವರಾಗಿದ್ದರು. ನಂತರದವರು ಜನಸಂಘದವರು. ಇತರ ವಿರೋಧ ಪಕ್ಷಗಳವರು ಪ್ರತಿಭಟನೆಯಲ್ಲಿ ಪಾಲ್ಗೊಂಡರೂ ಸಂಖ್ಯಾತ್ಮಕವಾಗಿ ಸಾಂಕೇತಿಕವಾಗಿತ್ತು ಎಂದೇ ಹೇಳಬಹುದು. ಆದರೆ ಪ್ರಚಾರ ಪಡೆದುಕೊಂಡವರಲ್ಲಿ ಅವರೇ ಮೊದಲಿಗರು. ಹಾಸನದಲ್ಲಂತೂ ಬೇರೆ ವಿರೋಧಪಕ್ಷಗಳವರು ಯಾರೂ ಇರಲಿಲ್ಲ. ಶ್ರೀ ದೇವೇಗೌಡರನ್ನು ಬೆಂಗಳೂರಿನಲ್ಲಿ ಸರ್ಕಾರವೇ ಬಂಧಿಸಿಟ್ಟಿತ್ತು. ಅವರು ಚಳುವಳಿ ಮಾಡಿ ಬಂಧಿತರಾಗಿದ್ದ ಬಗ್ಗೆ ನೆನಪು ನನಗಿಲ್ಲ. ಸತ್ಯಾಗ್ರಹ ಮಾಡುವವರು ಮೊದಲೇ ಇಂತಹ ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆಂದು ಜನರಿಗೆ ಕರಪತ್ರಗಳ ಮೂಲಕ ತಿಳಿಸಿ ಪ್ರತಿಭಟಿಸಿ ಬಂಧನಕ್ಕೊಳಗಾಗುತ್ತಿದ್ದರು. ಸತ್ಯಾಗ್ರಹ ತಪ್ಪಿಸಲು ಪೋಲಿಸರು ಮೊದಲೇ ಕೆಲವರನ್ನು ಬಂಧಿಸಿದರೂ ಬೇರೆಯವರು ಅಲ್ಲಿ ಸತ್ಯಾಗ್ರಹ ನಡೆಸುತ್ತಿದ್ದರು. ಕೆಲವೊಮ್ಮೆ ಪೋಲಿಸರನ್ನು ದಾರಿ ತಪ್ಪಿಸುವ ಸಲುವಾಗಿ ಬೇರೆ ಜನನಿಬಿಡ ಸ್ಥಳಗಳಲ್ಲಿ -ಅಂದರೆ, ಬಸ್ ನಿಲ್ದಾಣ, ಸಂತೆ,ಇತ್ಯಾದಿ- ಸತ್ಯಾಗ್ರಹ ನಡೆಸುತ್ತಿದ್ದರು. ಆಗ ಪೋಲಿಸರ ಪರದಾಟ ನೋಡಬೇಕಿತ್ತು. ಏನೇ ಆಗಲಿ ಚಳುವಳಿಗಳನ್ನು ಕಠಿಣವಾಗಿ ಹತ್ತಿಕ್ಕಲೇ ಬೇಕೆಂದು ಕೇಂದ್ರದ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಕಟ್ಟಪ್ಪಣೆ ಮಾಡಿದ್ದವು. ಅನೇಕ ಸ್ವಾರಸ್ಯಕರ ಘಟನೆಗಳು ಚಳುವಳಿ ಕಾಲದಲ್ಲಿ ನಡೆಯುತ್ತಿದ್ದು ಹೋರಾಟಕ್ಕೆ ಜನಬೆಂಬಲ ಸಿಗತೊಡಗಿತ್ತು.

ಹೀಗೊಂದು ಸತ್ಯಾಗ್ರಹ
     ಸಕಲೇಶಪುರದ ದೇವಾಲದಕೆರೆ ಲೋಕೇಶಗೌಡರು ತಮ್ಮ ಹತ್ತು ಜನರ ತಂಡದೊಂದಿಗೆ ಹಾಸನದ ನರಸಿಂಹರಾಜ ವೃತ್ತದಲ್ಲಿ ತುರ್ತು ಪರಿಸ್ಥಿತಿ ಪ್ರತಿಭಟಿಸಿ ಸತ್ಯಾಗ್ರಹ ಮಾಡಲಿರುವ ಬಗ್ಗೆ ಮೂರು ದಿನಗಳ ಮೊದಲೇ ಪ್ರಚುರಪಡಿಸಿದ್ದರು. ಪೋಲಿಸರು ಪೂರ್ವಭಾವಿಯಾಗಿ ಬಂಧಿಸಲು ನೋಡಿದರೆ ಎಲ್ಲರೂ ತಲೆ ಮರೆಸಿಕೊಂಡಿದ್ದರು. ಪೋಲಿಸರು ಶತಾಯ ಗತಾಯ ಪ್ರತಿಭಟನೆ ನಡೆಯದಿರುವಂತೆ ನೋಡಿಕೊಳ್ಳಲು ಸಂಕಲ್ಪ ಮಾಡಿದ್ದಂತೆ ಅಂದು ರಸ್ತೆಯಲ್ಲಿ ಸಂಚಾರವನ್ನೇ ನಿರ್ಬಂಧಿಸಿಬಿಟ್ಟಿದ್ದರು. ಯಾರಾದರೂ ಆ ರಸ್ತೆಯಲ್ಲಿ ಕಾರಣವಿಲ್ಲದೆ ನಿಲ್ಲುವಂತೆಯೇ ಇರಲಿಲ್ಲ. ಬರುವ ವಾಹನಗಳನ್ನೆಲ್ಲಾ ಹಿಂದಿನ ಮತ್ತು ಮುಂದಿನ ರಸ್ತೆಗಳಲ್ಲಿ ತಡೆದು ಪರಿಶೀಲಿಸಿ ಬೇರೆ ರಸ್ತೆಗಳಲ್ಲಿ ಹೋಗುವಂತೆ ನಿರ್ದೇಶಿಸುತ್ತಿದ್ದರು. ಅನುಮಾನ ಬಂದವರನ್ನು ಹಿಡಿದಿರಿಸಿಕೊಳ್ಳುತ್ತಿದ್ದರು. ಆ ಸಮಯಕ್ಕೆ ಒಂದು ಮೆಟಡಾರ್ ಅಲ್ಲಿಗೆ ಬಂತು. ಅಪಾಯಸ್ಥಿತಿಯಲ್ಲಿ ಗಾಯಗೊಂಡು ಮೈಯೆಲ್ಲಾ ಬ್ಯಾಂಡೇಜು ಹಾಕಿದ್ದರೂ ರಕ್ತ ಒಸರುತ್ತಿದ್ದ ಗಾಯಾಳುವನ್ನು ಬಂಧುಗಳು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದುದನ್ನು ನೋಡಿದ ಪೋಲಿಸರು ಮಾನವೀಯತೆ ತೋರಿಸಿ ಆ ರಸ್ತೆಯಲ್ಲೇ ಹೋಗಲು ಬಿಟ್ಟರು. ದುರದೃಷ್ಟಕ್ಕೆ ಆ ವ್ಯಾನು ಸರ್ಕಲ್ಲಿನಲ್ಲೇ ಕೆಟ್ಟು ನಿಂತುಬಿಟ್ಟಿತು. ಅದನ್ನು ಪಕ್ಕಕ್ಕೆ ನಿಲ್ಲಿಸಲು ಬಂಧುಗಳು ಇಳಿದಾಗ ಪೋಲಿಸರೂ ತಳ್ಳಿ ಸಹಕರಿಸಿದರು. ಬೇರೆ ವಾಹನ ತರುವುದಾಗಿ ಹೇಳಿ ನಾಲ್ವರು ನಾಲ್ಕು ರಸ್ತೆಗಳಲ್ಲಿ ಹೊರಟು ಅಲ್ಲಿ ಸರಪಟಾಕಿಗಳನ್ನು ಹಚ್ಚಿಬಿಟ್ಟರು. ಪೋಲಿಸರು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ ಗಾಯಾಳು ಒಂದು ಕೈಯಲ್ಲಿ ಕೇಸರಿ ದ್ವಜ ಮತ್ತು ಇನ್ನೊಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ವ್ಯಾನಿನಿಂದ ಕೆಳಗೆ ಧುಮುಕಿ 'ಭಾರತಮಾತಾ ಕಿ ಜಯ್', 'ವಂದೇ ಮಾತರಂ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ', ಇತ್ಯಾದಿ ಘೋಷಣೆಗಳನ್ನು ಹಾಕತೊಡಗಿದ. ಉಳಿದವರೂ ಧ್ವನಿಗೂಡಿಸಿದರು. ಕರಪತ್ರಗಳನ್ನು ತೂರಾಡಿದರು. ಅದು ಮೈಗೆಲ್ಲಾ ಬ್ಯಾಂಡೇಜು ಹಾಕಿಕೊಂಡು ಕೆಂಪು ಇಂಕು ಸುರಿದುಕೊಂಡು ಪೋಲಿಸರನ್ನು ಏಮಾರಿಸಿದ ಲೋಕೇಶಗೌಡ ಮತ್ತು ಅವರ ತಂಡದವರು ನಡೆಸಿದ ಸತ್ಯಾಗ್ರಹದ ಪರಿಯಾಗಿತ್ತು.

     ಇಂತಹುದೇ ಚಳುವಳಿಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿತ್ತು. ನಿಜವಾದ ಶವದಂತೇ ಸಿಂಗರಿಸಿದ್ದ ಗೊಂಬೆಯ ಒಳಗೆ ಪಟಾಕಿಗಳನ್ನು ತುಂಬಿ ಶವಮೆರವಣಿಗೆಯಂತೆ ಯಾರಿಗೂ ಅನುಮಾನ ಬರದಂತೆ ಹೊತ್ತೊಯ್ದು ರಸ್ತೆಯ ಮಧ್ಯಭಾಗದಲ್ಲಿಟ್ಟು ಪಟಾಕಿಗೆ ಬೆಂಕಿ ಹಚ್ಚಿಬಿಡುತ್ತಿದ್ದರು. ಘೋಷಣೆಗಳನ್ನು ಹಾಕಿ ಕರಪತ್ರಗಳನ್ನು ಹಂಚುತ್ತಿದ್ದರು. ವಿಪರ್ಯಾಸವೆಂದರೆ ಜನ ಕರಪತ್ರಗಳನ್ನು ಬಹಿರಂಗವಾಗಿ ಓದಲು ಹೆದರುತ್ತಿದ್ದರು. ಕದ್ದುಮುಚ್ಚಿ ಓದುತ್ತಿದ್ದರು. ಸತ್ಯಾಗ್ರಹಗಳು ಹೆಚ್ಚಾದಂತೆ ಜೈಲುಗಳು ತುಂಬಿ ತುಳುಕಲಾರಂಭಿಸಿದವು. ಹೆಚ್ಚಾದವರನ್ನು ಬಳ್ಳಾರಿ, ಮೈಸೂರು, ಬೆಳಗಾಂ ಜೈಲುಗಳಿಗೆ ಕಳಿಸುತ್ತಿದ್ದರು. ಅಲ್ಲೂ ಸ್ಥಳವಿಲ್ಲದೆ ಕಳಿಸಬಾರದೆಂದು ಅಲ್ಲಿಂದ ಸೂಚನೆಗಳು ಬರಹತ್ತಿದವು. ಹೀಗಾಗಿ ಚಳುವಳಿ ಮಾಡಿದವರನ್ನು ಒಂದು ದಿನ ಠಾಣೆಯಲ್ಲಿರಿಸಿಕೊಂಡು ಹೊಡೆದು, ಬಡಿದು, ಎಚ್ಚರಿಕೆ ಕೊಟ್ಟು ಬಿಟ್ಟುಕಳಿಸುತ್ತಿದ್ದರು. ಹೇಗೂ ಬಿಟ್ಟುಬಿಡುತ್ತಾರೆಂದು ಸತ್ಯಾಗ್ರಹದಲ್ಲಿ ಭಾಗವಹಿಸಿದವರನ್ನು ಬಂಧಿಸಿ ಜೈಲಿಗೆ ತಂದು ಬಿಟ್ಟ ಸಂದರ್ಭಗಳಲ್ಲಿ ಅವರ ಗೋಳು ಕಂಡು ನಮಗೆ ನಗು ಬರುತ್ತಿತ್ತು.

ಜೈಲಿನಲ್ಲಿ ತಿಥಿ ಊಟ!
     ಜೈಲಿನಲ್ಲಿ ರಾಜಕೀಯ ಬಂದಿಗಳ ಸಂಖ್ಯೆ ಜಾಸ್ತಿಯಾದಂತೆ ಜೈಲು ಸಿಬ್ಬಂದಿಗೆ ಕೆಲಸ ಕಷ್ಟವಾಯಿತು. ಜೈಲಿನ ಒಳಗಡೆ ಸ್ಥಳಾವಕಾಶ ಬೇರೆ ಕಡಿಮೆಯಿತ್ತು. ಹೀಗಾಗಿ ರಾತ್ರಿ ಹೊತ್ತು ಮಾತ್ರ ನಮ್ಮ ಬ್ಯಾರಕ್ ಗೆ ಬೀಗ ಹಾಕುತ್ತಿದ್ದರು. ಜೈಲಿನ ಒಳ ಆವರಣದಲ್ಲಿ ಹಗಲಿನಲ್ಲಿ ನಾವು ಆರಾಮವಾಗಿ ಓಡಾಡಿಕೊಂಡಿದ್ದೆವು. ಎಲ್ಲರಲ್ಲೂ ಒಳಗೆ ಹುದುಗಿದ್ದ ಪ್ರತಿಭೆ -ಅಂದರೆ ಹಾಡು ಹೇಳುವುದು, ಕಥೆ ಹೇಳುವುದು, ಮಿಮಿಕ್ರಿ ಮಾಡುವುದು, ಚರ್ಚೆ ಮಾಡುವುದು, ಇತ್ಯಾದಿ- ಹೊರಬರಲು ಜೈಲು ಅವಕಾಶ ಮಾಡಿಕೊಟ್ಟಿತು. ಇಲ್ಲದಿದ್ದರೆ ಸಮಯ ಕಳೆಯಬೇಕಲ್ಲಾ! ಯಾವುದೂ ಬೇಕಿಲ್ಲದೆ ಒಂದೆಡೆ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲೂ ಸಮಯವಿತ್ತು. ಒಮ್ಮೆ ಇಂದಿರಮ್ಮನ ತಿಥಿ ಊಟ ಮಾಡಬೇಕನ್ನಿಸಿ ಜೈಲರರನ್ನು ಕೋರಿಕೊಂಡು ನಿತ್ಯ ಕೊಡುವ ಆಹಾರ ಸಾಮಗ್ರಿಗಳ ಬದಲಿಗೆ ಬೇರೆ ಸಾಮಗ್ರಿ ತರಿಸಿಕೊಂಡು ವಡೆ, ಪಾಯಸ ಮಾಡಿದ್ದೆವು. ಜೈಲರರೂ ಮತ್ತು ಜೈಲು ಸಿಬ್ಬಂದಿ ಸಹ ನಮ್ಮೊಡನೆ ಊಟ ಮಾಡಿದರು. ಆಗ ಆವರಣದಲ್ಲಿದ್ದ ಒಣ ತೆಂಗಿನಗರಿಗಳು, ಒಣಗಿದ ಎಲೆ, ಪುಳ್ಳೆಗಳನ್ನು ಸೇರಿಸಿ ಬೆಂಕಿ ಹಾಕಿ ಸುತ್ತಲೂ ಕುಣಿದಿದ್ದೆವು. ಆಗ ಬಂದಿಗಳೆಲ್ಲಾ ಬಾಯಿ ಬಾಯಿ ಬಡಿದುಕೊಂಡು 'ಸತ್ತಳಪ್ಪ ಸತ್ತಳೋ, ಇಂದಿರವ್ವ ಸತ್ತಳೋ', 'ಅಯ್ಯಯ್ಯೋ ಸತ್ತಳೋ' ಎಂದು ಗಟ್ಟಿಯಾಗಿ ಅಳುತ್ತಿದ್ದಂತೆ ಮಾಡುತ್ತಿದ್ದ ದೃಷ್ಯ ಮರೆಯಲಾಗಿಲ್ಲ.ಇನ್ನೊಂದು ಬ್ಯಾರಕ್ಕಿನಲ್ಲಿದ್ದ ಇತರೆ ಕೈದಿಗಳೂ ಸಹ ಒಳಗಿನಿಂದಲೇ ನಮ್ಮೊಡನೆ ಬಾಯಿ ಬಡಿದುಕೊಂಡು ಬೆಂಬಲ ಕೊಟ್ಟಿದ್ದರು. ಇಂದಿರಾಗಾಂಧಿಯವರ ಅಭಿಮಾನಿಗಳಿಗೆ ಈ ಘಟನೆ ಇಷ್ಟವಾಗದಿರಬಹುದು. ಆಕೆ ಒಬ್ಬ ದಕ್ಷ ಆಡಳಿತಗಾರ್ತಿಯಾಗಿದ್ದಿರಬಹುದು. ಆದರೆ ಅಧಿಕಾರದಲ್ಲಿ ಏನನ್ನೂ ಮಾಡಲು ಹೇಸದಿದ್ದ ಆಕೆಯ ವರ್ತನೆಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗೆ ಅರ್ಥವಿತ್ತು ಎಂಬುದು ನನ್ನ ಭಾವನೆ. ಅಲ್ಲದೆ ನಾನು ನಡೆದಿದ್ದ ಘಟನೆಯ ನಿರೂಪಣೆ ಮಾಡುತ್ತಿದ್ದೇನಷ್ಟೆ. 1975ರ ಆಸುಪಾಸಿನಲ್ಲಿ ಜನಿಸಿದವರಿಗೆ ತುರ್ತು ಪರಿಸ್ಥಿತಿಯ ಕರಾಳತೆಯ ಅರಿವಿಲ್ಲದಿರಬಹುದು. ಇಂದಿರಾಗಾಂಧಿಯವರ ವಿರುದ್ಧ ಭ್ರಷ್ಟಾಚಾರದ ಆರೋಪ ರುಜುವಾತಾಗಿ ಆಕೆ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅಲಹಾಬಾದ್ ಉಚ್ಛನ್ಯಾಯಾಲಯದ ಆದೇಶದ ನಂತರದಲ್ಲಿ ಆಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು.ಹಲವಾರು ಸಂಘ ಸಂಸ್ಥೆಗಳನ್ನು ನಿಷೇಧಿಸಿದರು. ಅಧಿಕಾರದಲ್ಲಿ ಮುಂದುವರೆಯಲು ಲೋಕಸಭೆಯ ಅವಧಿಯನ್ನೇ 5 ವರ್ಷಗಳಿಂದ 7ವರ್ಷಗಳಿಗೆ ವಿಸ್ತರಿಸಲಾಯಿತು. ಪತ್ರಿಕಾ ಸೆನ್ಸಾರ್ ಜಾರಿಗೆ ಬಂತು. ದೇಶದ ಹೆಚ್ಚಿನ ಪತ್ರಿಕೆಗಳು ಸಂಪಾದಕೀಯದ ಭಾಗವನ್ನು ಖಾಲಿ ಬಿಟ್ಟು ಪ್ರತಿಭಟನೆ ವ್ಯಕ್ತಪಡಿಸಿದವು. ಕಾಂಗ್ರೆಸ್ ವಿರೋಧಿ ಸುದ್ದಿಗಳು ಬರಲು ಅವಕಾಶವೇ ಇರಲಿಲ್ಲ. ವಿರುದ್ಧ ತೀರ್ಪು ನೀಡಿದ್ದ ಅಲಹಾಬಾದ್ ನ್ಯಾಯಾಲಯದ ನ್ಯಾಯಾಧೀಶರು ಅಪಘಾತವೊಂದರಲ್ಲಿ ತೀರಿಕೊಂಡರಂತೆ. ಸರ್ಕಾರಿ ಮಾಧ್ಯಮಗಳು, ಆಕಾಶವಾಣಿ ಕಾಂಗ್ರೆಸ್ ತುತ್ತೂರಿಗಳಾಗಿದ್ದವು. ರಾತ್ರೋರಾತ್ರಿ ನೂರಾರು ವಿರೋಧ ಪಕ್ಷಗಳ ನಾಯಕರುಗಳನ್ನು, ಸಂಘ, ಸಂಸ್ಥೆಗಳ- ವಿಶೇಷವಾಗಿ ಆರೆಸ್ಸೆಸ್ಸಿನ- ಕಾರ್ಯಕರ್ತರನ್ನು ಬಂಧಿಸಲಾಯಿತು. ಬಂಧನ ಕಾರ್ಯ ನಿರಂತರವಾಗಿತ್ತು. ಕಾಂಗ್ರೆಸ್ ವಿರುದ್ಧ ಯಾರೂ ಸೊಲ್ಲೆತ್ತಬಾರದೆಂಬುದು ಉದ್ದೇಶವಾಗಿತ್ತು. ಸಾಮಾನ್ಯ ಜನರೂ ಸಹ ಮುಕ್ತವಾಗಿ ಮಾತನಾಡಲು ಅಂಜುವಂತಹ ವಾತಾವರಣ ನಿರ್ಮಿತವಾಗಿತ್ತು. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಜೈಲಿನಲ್ಲಿ ಬಂಧಿಸಿಡಲು ಅವಕಾಶ ಕೊಡುವ ಕರಾಳ 'ಮೀಸಾ' ಕಾಯದೆ ಜಾರಿಗೊಳಿಸಲಾಯಿತು. ಈಗ ಓದುಗರಿಗೆ ಬಂಧಿಗಳ ಆಕ್ರೋಶ ಅರ್ಥವಾಗಿರಬಹುದು.

(ಕಾಲಘಟ್ಟ: 1976)                                                                              .. ಮುಂದುವರೆಯುವುದು.