ಅಪ್ಪ- ಒಂದು ಹೊಸ "ಹೆಜ್ಜೆ"; ಹೊಸ ಅನುಭವ.

ಅಪ್ಪ- ಒಂದು ಹೊಸ "ಹೆಜ್ಜೆ"; ಹೊಸ ಅನುಭವ.

ಬರಹ


 ಹೆಜ್ಜೆ ತಂಡದ ಸದಸ್ಯನಾದಾಗ ನಾನು ಗಂಗೋತ್ರಿಯಲ್ಲಿದ್ದೆ. ಪೋನ್ ಕರೆಯಲ್ಲಿಯೇ ಜೆ ಪಿ ನನ್ನ ಸದಸ್ಯತ್ವವನ್ನು ಅಪ್ರೂವ್ ಮಾಡಿದರು.


 ನಾಟಕದಲ್ಲಿ ನನ್ನ ಅನುಭವ ಅಷ್ಟಕ್ಕಷ್ಟೇ! ಕಾಲೇಜಿನಲ್ಲಿ ರೂಪಕ, ಮ್ಯಾಡ್ ಆಡ್ ಗಳನ್ನು ಮಾಡಿದ್ದಷ್ಟೇ. ರಂಗಭೂಮಿಯದೇ ಅಂತ ಅನುಭವ ಇಲ್ಲ.


ಎಲ್ಲ ಹೊಸಬರನ್ನು ಹಾಕಿಕೊಂಡು ತಂಡವನ್ನು ಕಟ್ಟಿದ ಜೆಪಿಯವರನ್ನು ಈ ವೇಳೆಯಲ್ಲಿ ಅಭಿನಂದಿಸಲೇಬೇಕು.


ನಾಟಕ v/s ಬರಹ:

 

   ಬರಹ ಸ್ವಂತದ್ದು. ಎದೆಯಾಳದಿಂದ ಬರುವಂಥದ್ದು. ನನ್ನ ಅನಿಸಿಕೆಗಳು ಭಾವನೆಗಳಿಗೆ ಅಲ್ಲಿ ಬೆಲೆಯಿದೆ. ನನಗಿಷ್ಟ ಬಂದಂತೆ ಅದನ್ನು ಪ್ರಚುರಪಡಿಸಬಹುದು. ಅಲ್ಲಿ ನನ್ನತನಕ್ಕೊಂದು ತೂಕ ಇದೆ. ಬರಹ ಸಹಜ ಅಭಿವ್ಯಕ್ತಿ.

   ನಾಟಕ ಹಾಗಲ್ಲ, ಅದು ನಿರ್ದೇಶಕನ ಕೂಸು. ನಿರ್ದೇಶಕನ ಭಾವನೆಗಳು ಅನೇಕ ಬಾರಿ ನೋಡುಗರ ಭಾವನೆಗೆ ತಕ್ಕುನಾಗಿರುತ್ತದೆ. ಅಲ್ಲಿ ’ನಾನು’ ಎಂಬುದಕ್ಕೆ ಬೆಲೆಯಿಲ್ಲ. ನನಗೆ ನೀಡಿದ ಪಾತ್ರ ಮಾತ್ರ ನಾನು. ಆ ಪಾತ್ರದ ಭವನೆಗಳೇ ನನ್ನ ಭಾವನೆಗಳು. ಯಾರದೋ ಭಾವನೆಗೆ ತಕ್ಕಂತೆ ಮೊಗವನ್ನು, ನಡಿಗೆಯನ್ನು ಬದಲಿಸಿಕೊಳ್ಳಬೇಕು. ಎಲ್ಲವೂ ಕೃತಕ! ಇನ್ನೊಬ್ಬರ ತಾಳಕ್ಕೆ ನಾವು ಲಯವಾಗಬೇಕು.

 ಹಾಗಾಗಿ ನಾಟಕದ ಬಗ್ಗೆ ಮೊದಲು ನನಗಿದ್ದ ಒಲುಮೆ ಅಷ್ಟಕ್ಕಷ್ಟೇ! ನನ್ನ ’ಅಹಂ’ ಗೆ ಒಂದು ಬೆಲೆಯಿಲ್ಲದ ನೆಲೆ ನನಗಿಷ್ಟವಾಗುವುದಾದರೂ ಹೇಗೆ?


 ಜೆಪಿಯವರ ಸಂಗಡ ಈ ಬಗ್ಗೆ ಕಲಿತದ್ದು ಬಹಳ. ತನ್ನದಲ್ಲದ ಭಾವನೆಗಳನ್ನು, ವ್ಯಕ್ತಿತ್ವವನ್ನು ಒಳಗೆ ಆವಾಹಿಸಿಕೊಂಡು ಅದನ್ನು ನೂರಾರು ಜನರ ಮುಂದೆ ಅದು ತನ್ನ ಸ್ವಂತದ್ದೇ ಎಂಬಂತೆ ಬಿಂಬಿಸುವುದಿದೆಯಲ್ಲ, ಅದು ಸುಲಭವಲ್ಲ. ಅದೂ ಕಲೆ. ಅದು ಅಹಂಕಾರಿಗಳಿಗಲ್ಲ! ತನ್ನತನವನ್ನು ಮರೆತವರಿಗೆ ಮಾತ್ರ. ಆ ಪಾತ್ರದಿಂದ ತನಗಾಗಿ ಕೆಲವನ್ನು ಕಲಿಯುವವರಿಗಾಗಿ ಮಾತ್ರ. ಈ ಮನಸ್ಥಿತಿ ಇಲ್ಲದ ಕಾರಣದಿಂದಾಗಿಯೇ ಈ ಹೊತ್ತಿನಲ್ಲಿ ಉತ್ತಮ ನಟನಟಿಯರು ಕಾಣುವುದಿಲ್ಲ!

 

 ನನ್ನದೊಂದಿಷ್ಟು ಕೊಸರು:

 

 ನನಗೆ ಎಲ್ಲ ಕಡೆಯೂ ಪ್ರಶ್ನೆಗಳು ಹುಟ್ಟುತ್ತವೆ. ಪ್ರಶ್ನೆ ಕಾಡತೊಡಗಿದರೆ ಉತ್ತರ ದೊರೆಯುವವರೆಗೂ ಸಮಾಧಾನವಿಲ್ಲ. ನಾಟಕದ ವಿಷಯವೂ ಅಷ್ಟೇ! ಇಲ್ಲಿ ನನ್ನ ಅನುಭವಗಳೇ ನನಗೆ ಉತ್ತರ ದೊರಕಿಸಿಕೊಟ್ಟವು. ರಂಗದ ಬಗ್ಗೆ ಆಳವಾಗಿ ಇನ್ನೂ ತಿಳಿದಿಲ್ಲವಾದರೂ ಅದರ ಬಗ್ಗೆ ಚಿಕ್ಕ ಪಕ್ಷಿನೋಟವಂತೂ ಸಿಕ್ಕಿತು. ಇದಕ್ಕಾಗಿ ನಿರ್ದೇಶಕ ಅಶೋಕ್ ಬಾದರದಿನ್ನಿಯವರಿಗೆ ವಂದನೆಗಳು. "ನಿಮಗ ಏನು ಪ್ರಶ್ನಾ ಅದವೋ ಕೇಳ್ರಿ... ನನ್ನ ಹರಕೊಂಡು ತಿನ್ರಿ.." ಅಂತ ಪದೇ ಪದೇ ಹೇಳುತ್ತಿದ್ದರು. ತಮ್ಮ ಕಂಚಿನ ಕಂಠದಲ್ಲಿ ರಂಗಭೂಮಿಯ ಬಗ್ಗೆ ಅನುಭವಗಳನ್ನು ಹೇಳುತ್ತಿದ್ದರೆ ನಾವು ತುಟಿಪಿಟಿಕ್ಕೆನ್ನದೇ ಕೇಳುತ್ತಿದ್ದೆವು. ನನ್ನ ಎಲ್ಲ ಕುತೂಹಲಗಳನ್ನು ಅವರ ಮಾತುಗಳೇ ತಣಿಸುತ್ತಿದ್ದವು.

 



 ಜೆಪಿ ಬಗ್ಗೆ:


 ನಟ ಅಥವಾ ನಟಿ ಅಭಿನಯ ಕಲೆ ತಿಳಿದಿರುವವರು ಒಂದು ಪಾತ್ರವನ್ನು ಆವಾಹಿಸುವಾಗ ಭಾವನೆಗಳನ್ನು ಬಿಂಬಿಸಬೇಕು.ಇದು ಎಲ್ಲರಿಗೂ ತಿಳಿದಿರುವವದೇ. ನಾಟಕದ ನಡುವೆ ಕೆಲ scene ಗಳಲ್ಲಿ ಯಾವ ಭಾವನೆಯನ್ನೂ ಮುಖದ ಮೇಲೆ ತೋರ್ಪಡಿಸದೇ ಅಭಿನಯಿಸಬೇಕಾಗುತ್ತದೆ. ಇದು ಭಾವವನ್ನು ತೋರಿಸಿ ಅಭಿನಯಿಸುವುದಕ್ಕಿಂತ ಕಷ್ಟ! ತಮಿಳು ನಟ ವಿಕ್ರಂ ’ಪಿತಾಮಗನ್’ ಚಿತ್ರದಲ್ಲಿ ಇದನ್ನು ಸಾಧಿಸಿದ್ದಾರೆ. ನನಗನ್ನಿಸುವಂತೆ ವಿಕ್ರಂ ಬಿಟ್ಟರೆ ಇದನ್ನು ಸಾಧಿಸಿದ್ದು ಜೆ.ಪಿ ಮಾತ್ರ!


  "ರಾಜಕುಮಾರನ ಕಣ್ಣು ಕಿತ್ತುಕೊಂಡೆ.. ಗಲ್ಲ ಕಿತ್ತುಕೊಂಡೆ" ಸಂಭಾಷಣೆಯ ನಡುವಿನ ತೀವ್ರ ಭಾವಾವೇಶದ ಅಭಿನಯದ ಕೆಲವೇ ಕ್ಷಣಗಳಲ್ಲಿ ಬರುವ

"ಹೂವಿನ ಅಪ್ಪ ಯಾರು? ಬೀಜದ ಅಪ್ಪ ಯಾರು? .." ಸಂಭಾಷಣೆಯಲ್ಲಿ ನಿರ್ಲಿಪ್ತ ಮೊಗದಲ್ಲಿ (neutral face)ಅಭಿನಯಿಸಿದ್ದು ಜೆಪಿಯ ಅಭಿನಯ ಚಾತುರ್ಯಕ್ಕೆ ಉದಾಹರಣೆ. ನನ್ನ ಅಭಿಪ್ರಾಯದಲ್ಲಿ ಈ ಅಭಿನಯ ಇತಿಹಾಸದಲ್ಲಿ ದಾಖಲಾಗಬೇಕಾದ ಮಾಸ್ಟರ್ ಪೀಸ್!


 ಇದಕ್ಕಾಗಿ ಹ್ಯಾಟ್ಸಾಫ್ ಟು ಶ್ರೀಮತಿ ಜಯಲಕ್ಷ್ಮಿ ಪಾಟೀಲ್!!!


ನನ್ನ ಮತ್ತು ಅನಿಲ್ ರ ಎಲ್ಲಾ ತರಲೆಗಳನ್ನು ಸಹಿಸಿ ಮನ್ನಿಸಿದ್ದಕ್ಕೆ ಡಬಲ್ ಹ್ಯಾಟ್ಸಾಫ್!!!!



 ದೊಡ್ಡಬಸವ ನೀನಾಸಂ ನ ಹರೀಶ, ಚಿಕ್ಕ ಬಸವ ತೇಜಸ್, ಕುಲಕರ್ಣಿ ಮಾಸ್ತರು ಕಿರಣ್ ವಟಿ, ಚಂದ್ರಾರ ಅಪ್ಪ ದರ್ಶನ್, ಗೌಡರು ಅನಿಲ್ ರಮೇಶ ಇವರೆಲ್ಲರ ನೆನಪು ಸದಾ ಹಸಿರು. ಹಾಗೆಯೇ ನನ್ನ ಜೊತೆ ಸೇರಿ ಕೆಟ್ಟು ಹೋಗದಿದ್ದಕ್ಕೆ ಅಭಿನಂದನೆಗಳು!