ಸೇವಾ ಪುರಾಣ -14: ಸರಳುಗಳ ಹಿಂದಿನ ಲೋಕ -7

ಸೇವಾ ಪುರಾಣ -14: ಸರಳುಗಳ ಹಿಂದಿನ ಲೋಕ -7

ಬರಹ

                                               ಸರಳುಗಳ ಹಿಂದಿನ ಲೋಕ -7


ಕೈಕೋಳದ ಕಥೆ
     ವಿಚಾರಣೆಗಾಗಿ ನಮ್ಮನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನಮಗೆ ಕೈಕೋಳಗಳನ್ನು ಹಾಕಿ ಕರೆದೊಯ್ಯಲಾಗುತ್ತಿತ್ತು. ನಮ್ಮ ವಿಚಾರಣೆ ಆಗಿ ವಾಪಸು ಜೈಲು ತಲುಪುವವರೆಗೂ ಕೈಕೋಳಗಳು ಇರುತ್ತಿದ್ದವು. ನಮ್ಮ ಸ್ನೇಹಿತರು, ಬಂಧುಗಳು, ಪರಿಚಯದವರು ನಮ್ಮನ್ನು ಆ ಸ್ಥಿತಿಯಲ್ಲಿ ನೋಡಿದಾಗ ಅವರುಗಳಿಗೆ ಏನನ್ನಿಸುತ್ತಿತ್ತೋ ಗೊತ್ತಿಲ್ಲ. ನಮ್ಮ ಸಮಾಧಾನವೆಂದರೆ ಪೋಲಿಸರ ಮತ್ತು ಕಾಂಗ್ರೆಸ್ಸಿಗರ ದೃಷ್ಟಿಯಲ್ಲಿ ನಾವು ಸಮಾಜಘಾತಕರೆನಿಸಿಕೊಂಡಿದ್ದರೂ ನಾವು ಸಮಾಜಘಾತಕ ಕೆಲಸಗಳನ್ನು ಮಾಡಿ ಜೈಲಿಗೆ ಹೋಗಿರಲಿಲ್ಲ ಎಂಬುದು. ನನ್ನ ತಂದೆಯವರ ದುರಾದೃಷ್ಟವೋ, ನನ್ನ ಗ್ರಹಚಾರವೋ ಗೊತ್ತಿಲ್ಲ, ಯಾವ ನ್ಯಾಯಾಲಯಕ್ಕೆ ಆರೋಪಿಯಾಗಿ ನನ್ನನ್ನು ಕರೆದೊಯ್ಯಲಾಗುತ್ತಿತ್ತೋ ಅದೇ ನ್ಯಾಯಾಲಯದಲ್ಲಿ ನನ್ನ ತಂದೆ ಶಿರಸ್ತೇದಾರರಾಗಿ ಕೆಲಸ ಮಾಡುತ್ತಿದ್ದುದು! ನನ್ನ ವಿಚಾರಣಾ ದಿನಾಂಕಗಳಂದು ತಂದೆಯವರು ಸಾಂಧರ್ಭಿಕ ರಜೆ ಹಾಕಿಬಿಡುತ್ತಿದ್ದರು. ಒಮ್ಮೆ ವಿಚಾರಣೆ ಅಪೂರ್ಣವಾಗಿ ಮಧ್ಯಾಹ್ನ ಊಟವಿಲ್ಲದೆ (ವಿಚಾರಣೆ ಮುಗಿದು ಜೈಲಿಗೆ ವಾಪಸು ಹೋದಾಗಲೇ ನಮಗೆ ಊಟ) ನ್ಯಾಯಾಲಯದ ಆವರಣದಲ್ಲಿ ಕೈಕೋಳಗಳೊಂದಿಗೆ ಕುಳಿತಿದ್ದಾಗ ತಂದೆಯ ಸಹೋದ್ಯೋಗಿಯೊಬ್ಬರು ನಮಗೆಲ್ಲಾ ಬಾಳೆಹಣ್ಣು ತರಿಸಿಕೊಟ್ಟಿದ್ದರು. ಪರಿಚಯದ ಕೋರ್ಟಿನ ಬೆರಳಚ್ಚುಗಾರ್ತಿಯೊಬ್ಬರು ನನ್ನನ್ನು ನೋಡಿ ಕಣ್ಣು ಒರೆಸಿಕೊಂಡರು. ನನ್ನ ಪರಿಸ್ಥಿತಿ ಕಂಡು ಮರುಗಿದರೋ ಅಥವಾ 'ಎಂಥ ಅಪ್ಪನಿಗೆ ಎಂಥ ಮಗ' ಎಂತಲೋ ಗೊತ್ತಿಲ್ಲ. ಕೈಕೋಳಗಳನ್ನು ಹಾಕಿಕೊಂಡು ವ್ಯಾನು ಹತ್ತುವ ಮುನ್ನ ಕೋಳಗಳನ್ನು ಹಾಕಿದ ಕೈಗಳನ್ನು ಮೇಲೆತ್ತಿ 'ತುರ್ತು ಪರಿಸ್ಥಿತಿಗೆ ಧಿಕ್ಕಾರ' ಇತ್ಯಾದಿ ಘೋಷಣೆಗಳನ್ನು ಹಾಕಿ ಸುತ್ತಮುತ್ತಲಿದ್ದ ಜನರ ಗಮನ ಸೆಳೆಯುತ್ತಿದ್ದೆವು.
     ಹೀಗೆಯೇ ಒಮ್ಮೆ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನನ್ನ ಎಡಗೈ ಮತ್ತು ಅರಕಲಗೂಡಿನ ಪಟ್ಟಾಭಿರಾಮ ಎಂಬ ವಿದ್ಯಾರ್ಥಿಯ ಬಲಗೈ ಸೇರಿಸಿ ಬೇಡಿ ಹಾಕಿದ್ದರು. ಇಬ್ಬರೂ ಸಣಕಲರಾಗಿದ್ದು ಬೀಗ ಹಾಕಿದ್ದಂತೆಯೇ ನಮ್ಮ ಬೇಡಿಗಳನ್ನು ಕೈಯಿಂದ ತೆಗೆದುಬಿಡಬಹುದಿತ್ತು. ವ್ಯಾನಿನಲ್ಲಿ ಬರುವಾಗ ನರಸಿಂಹರಾಜವೃತ್ತದ ಸಮೀಪದ ತಗ್ಗು ಪ್ರದೇಶವಿದ್ದು (ಈಗ ಅಲ್ಲಿ ಅಂಗಡಿಗಳಿವೆ)ಅದರ ಸಮೀಪ ಬಂದಾಗ ನಮ್ಮ ಬೇಡಿಯನ್ನು ತೆಗೆದು ಪೋಲಿಸರಿಗೆ ತೋರಿಸಿ ವ್ಯಾನಿನ ಕಿಂಡಿಯಿಂದ ಆ ತಗ್ಗಿಗೆ ಎಸೆದುಬಿಟ್ಟೆವು. ಪೋಲಿಸರು ತಕ್ಷಣ ವ್ಯಾನು ನಿಲ್ಲಿಸಿ ನಮ್ಮನ್ನು ಬಯ್ಯುತ್ತಾ ಒಬ್ಬರು ಪೇದೆಯನ್ನು ಬೇಡಿ ಹುಡುಕಿ ತರಲು ಕಳಿಸಿದರು. ತಗ್ಗಿನಲ್ಲಿ ಕುರುಚಲು ಗಿಡಗಳು, ಹುಲ್ಲು, ಕೊಚ್ಚೆ ಇದ್ದು ಬೇಡಿಯನ್ನು ಹುಡುಕುವುದು ಸುಲಭವಾದ ಕೆಲಸವಾಗಿರಲಿಲ್ಲ. ಆ ಸಂದರ್ಭ ಉಪಯೋಗಿಸಿಕೊಂಡು ನಾವು ಮಾಮೂಲು ಘೋಷಣೆಗಳು 'ತುರ್ತು ಪರಿಸ್ಥಿತಿಗೆ ಧಿಕ್ಕಾರ', 'ಇಂದಿರಾಗಾಂಧಿಗೆ ಧಿಕ್ಕಾರ', ಇತ್ಯಾದಿಗಳನ್ನು ಹಾಕತೊಡಗಿದೆವು. ಅಲ್ಲಿ ಓಡಾಡುತ್ತಿದ್ದ ಜನರು ಕುತೂಹಲದಿಂದ ಗುಂಪು ಕೂಡಿ ನೋಡುತ್ತಿದ್ದರು. ಪಕ್ಕದಲ್ಲೇ ಎಸ್.ಪಿ. ಕಛೇರಿಯಿದ್ದು ಅಲ್ಲಿಂದ ಹಿರಿಯ ಅಧಿಕಾರಿಯೊಬ್ಬರು ಧಾವಿಸಿ ಬಂದು ನಮ್ಮನ್ನು ಮತ್ತು ಪೋಲಿಸರನ್ನು ಬೈದು ಬೇರೆ ಇಬ್ಬರು ಪೋಲಿಸರನ್ನು ಜೊತೆ ಮಾಡಿ ನಮ್ಮನ್ನು ಕೂಡಲೇ ನ್ಯಾಯಾಲಯಕ್ಕೆ ಕರೆದೊಯ್ಯುವಂತೆ ಮಾಡಿದರು. ಕೊನೆಗೂ ನಾವು ಎಸೆದಿದ್ದ ಬೇಡಿ ಸಿಕ್ಕಿತೋ ಇಲ್ಲವೋ ಗೊತ್ತಾಗಲಿಲ್ಲ. ಆ ವಿಷಯ ಅವತ್ತಿನ ಮಟ್ಟಿಗೆ ನಮಗೆ ಜೈಲಿನಲ್ಲಿ ಖುಷಿಯಾಗಿ ಚರ್ಚಿಸುವ ವಿಷಯವಾಯಿತು.

ಜೈಲಿನಲ್ಲಿ ನನ್ನ ಮನಸ್ಥಿತಿ
     ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು ನನ್ನ ನೌಕರಿಯ ಸ್ಥಿತಿ ಅತಂತ್ರವಾಗಿದ್ದಾಗ ಜೈಲಿನಲ್ಲಿ ನನ್ನ ಮನಸ್ಥಿತಿ ಹೇಗಿದ್ದಿರಬಹುದು! ನಿವೃತ್ತಿಯ ಅಂಚಿನಲ್ಲಿದ್ದ ತಂದೆ, ಅಮ್ಮ, ಮದುವೆಯಾಗಬೇಕಿದ್ದ ತಂಗಿ, ಇನ್ನೂ ಓದುತ್ತಿದ್ದ ಮೂವರು ತಮ್ಮಂದಿರು ಇವರ ಬಗ್ಗೆ ಯೋಚಿಸುವಾಗ ಮನಸ್ಸು ಕ್ಷೋಭೆಗೊಳ್ಳುತ್ತಿತ್ತು. ನೀರಿನಲ್ಲಿ ಮುಳುಗಿದಂತಾಗಿ ಈಜು ಬಾರದಿದ್ದರೂ ಕೈಕಾಲು ಬಡಿಯಲೇಬೇಕಿತ್ತು. ಅಂತರ್ಮುಖಿಯಾಗಿ ಗಂಟೆಗಟ್ಟಲೆ ಸುಮ್ಮನೆ ಒಂದೆಡೆ ಕುಳಿತು ಚಿಂತಿಸುತ್ತಿದ್ದೆ. ನೌಕರಿ ಹೋದರೆ ಬದಲಿ ಏನು ಮಾಡಬೇಕು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆ. ಬಾಳೆಹಣ್ಣು ಮಾರುವುದು, ಕಾಫಿಪುಡಿ ಅಂಗಡಿ ಇಡುವುದು, ಟ್ಯೂಶನ್ ಮಾಡುವುದು, ಇತ್ಯಾದಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೆ. ಏನು ಮಾಡಬೇಕೆಂದು ಸ್ಪಷ್ಟಗೊಳ್ಳದೆ ಗೊಂದಲಮಯವಾಗುತ್ತಿತ್ತು. ಜೊತೆಜೊತೆಗೆ ನನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡಿಗೆ ಮನಸ್ಸು ತಹತಹಿಸುತ್ತಿತ್ತು. ನನಗೆ ವಿನಾಕಾರಣ ತೊಂದರೆ ಕೊಟ್ಟ 12 ಜನರ ಮುಖಗಳು ಮನಃಪಟಲದ ಎದುರಿಗೆ ಬಂದು ಗಹಗಹಿಸಿ ನಗುತ್ತಿರುವಂತೆ ತೋರುತ್ತಿತ್ತು. ಅವರನ್ನು ಕೊಲ್ಲಬೇಕು ಎಂದುಕೊಳ್ಳುತ್ತಿದ್ದೆ. ಯಾರನ್ನು ಹೇಗೆ ಕೊಲ್ಲಬೇಕು ಎಂದು ಮನಸ್ಸು ಲೆಕ್ಕ ಹಾಕುತ್ತಿತ್ತು. ಹಾಗೆ ಮಾಡಿದರೆ ನನ್ನ ಮನೆಯವರಿಗೆ ತೊಂದರೆಯಾಗುತ್ತದೆ ಎಂದೂ ನನ್ನ ಒಳಮನಸ್ಸು ಎಚ್ಚರಿಕೆ ಕೊಡುತ್ತಿತ್ತು. ಇದಕ್ಕೆ ಪರಿಹಾರವಾಗಿ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಒಂದೆರಡು ವರ್ಷಗಳು, ಕಣ್ಮರೆಯಾಗಿ ಹೋಗಿಬಿಡುವುದು, ಪೋಲಿಸರು, ಅಷ್ಟೇ ಏಕೆ, ಮನೆಯವರೂ ಸಹ ನನ್ನನ್ನು ಮರೆತುಬಿಡಬೇಕು, ಅಲ್ಲಿಯವರೆಗೆ ಪರಿಚಯದವರು, ಸ್ನೇಹಿತರು, ಯಾರ ಕಣ್ಣಿಗೂ ಕಾಣಿಸಿಕೊಳ್ಳಬಾರದು; ನಂತರದಲ್ಲಿ ವೇಷ ಮರೆಸಿಕೊಂಡು ಬಂದು ಒಬ್ಬೊಬ್ಬರನ್ನೂ ನಾನು ಅಂದುಕೊಂಡಿದ್ದ ರೀತಿಯಲ್ಲಿ ಕೊಂದುಬಿಡಬೇಕು ಎಂದೆಲ್ಲಾ ನನ್ನ ದಗ್ಧ ಮನಸ್ಸು ಯೋಚಿಸುತ್ತಿತ್ತು.

ನಾನೇಕೆ ಉಗ್ರಗಾಮಿಯಾಗಲಿಲ್ಲ
     ಜೈಲಿನ ಒಳಗಡೆ ತುರ್ತು ಪರಿಸ್ಥಿತಿ ವಿರುದ್ಧ ಹೇಗೆ ಹೋರಾಡಬೇಕು ಎಂಬ ಚರ್ಚೆ ನಡೆಯುತ್ತಿದ್ದಾಗ ಎರಡು ಬಣಗಳಾಗುತ್ತಿದ್ದವು. ಅಹಿಂಸಾತ್ಮಕವಾಗಿ ಹೋರಾಡಬೇಕು ಎಂದು ಹೆಚ್ಚಿನವರು ಅಭಿಪ್ರಾಯಪಡುತ್ತಿದ್ದರು. ಹಿಂಸಾತ್ಮಕ ಹೋರಾಟವೇ ಪರಿಹಾರ ಎಂಬ ಬಣದಲ್ಲಿ ನಾನಿರುತ್ತಿದ್ದೆ ಮತ್ತು ಅದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದೆ. ಆಗೆಲ್ಲಾ ಉದ್ವೇಗದಿಂದ ವಾದಿಸುವಾಗ ನಾನು ನಾನಾಗಿರುತ್ತಿರಲಿಲ್ಲ. ಶಾಂತನಾದಾಗ ಅಹಿಂಸಾತ್ಮಕ ಹೋರಾಟವೇ ಉತ್ತಮವೆಂದು ಅನ್ನಿಸುತ್ತಿದ್ದರೂ ನನಗಾದ ಕಟು ಅನುಭವಗಳು ನನ್ನನ್ನು ಹಿಂಸಾತ್ಮಕ ಹೋರಾಟಕ್ಕೆ ಪ್ರೇರಿಸುತ್ತಿದ್ದವು. ಒಂದು ವೇಳೆ:
1. ನನ್ನ ವಿರುದ್ಧ ಹಾಕಲಾಗಿದ್ದ ಹಲವು ಕ್ರಿಮಿನಲ್ ಮೊಕದ್ದಮೆಗಳ ಪೈಕಿ ಯಾವುದಾದರೂ ಒಂದರಲ್ಲಿ ಆರೋಪ ರುಜುವಾತಾಗಿ ನನಗೆ ಶಿಕ್ಷೆಯಾಗಿದ್ದರೆ,
2. ನನ್ನ ನೌಕರಿ ಹೋಗಿದ್ದರೆ,
3. ನನ್ನ ಕುಟುಂಬದ ಸದಸ್ಯರುಗಳಿಗೆ ನನ್ನ ಕಾರಣದಿಂದ ತೊಂದರೆಯಾಗಿದ್ದರೆ,
4. ತುರ್ತು ಪರಿಸ್ಥಿತಿ ಅನಿರ್ದಿಷ್ಟ ಕಾಲ ಮುಂದುವರೆದಿದ್ದರೆ,
5. ವಿನಾಕಾರಣ ಕಿರುಕುಳಗಳು ಮುಂದುವರೆದಿದ್ದರೆ,
6. ಮೀಸಾ ಕಾಯದೆಯಂತೆ ವಿನಾಕಾರಣ ನನ್ನನ್ನು ಬಂಧನದಲ್ಲಿಟ್ಟಿದ್ದರೆ,
ನಾನೊಬ್ಬ ಸಮಾಜಘಾತಕ ವ್ಯಕ್ತಿಯಾಗುತ್ತಿದ್ದ್ದುದರಲ್ಲಿ ಅನುಮಾನವಿರಲಿಲ್ಲ. ಮೇಲೆ ತಿಳಿಸಿದ ಕಾರಣಗಳ ಪೈಕಿ ಯಾವುದಾದರೂ ಒಂದು ಕಾರಣ ನಾನು ಹಿಂಸಾತ್ಮಕ ಹೋರಾಟದಲ್ಲಿ ವಿಶ್ವಾಸವಿಡುವ ಉಗ್ರಗಾಮಿಯಾಗಲು ಸಾಕಾಗಿತ್ತು.
ನಾನು ಉಗ್ರಗಾಮಿಯಾಗದೇ ಇರುವುದಕ್ಕೆ ಸಹ ಕಾರಣಗಳಿದ್ದವು:
1. ನನ್ನ ಮನೆಯ ವಾತಾವರಣ, ನನಗಿದ್ದ ಸದ್ವಿಚಾರವುಳ್ಳ ಸ್ನೇಹಿತರು, ಬಂಧುಗಳು,
2. ಕೆಲವು ಮೊಕದ್ದಮೆಗಳು ನನ್ನ ಪರವಾಗಿ ಇತ್ಯರ್ಥಗೊಂಡರೆ ಉಳಿದ ಪ್ರಕರಣಗಳನ್ನು ತುರ್ತು ಪರಿಸ್ಥಿತಿ ಹೋದ ನಂತರದಲ್ಲಿ ಸರ್ಕಾರ ವಾಪಸು ಪಡೆದಿದ್ದು,
3. ನನ್ನ ನೌಕರಿ ಹೋಗದಿದ್ದುದು,
4. 1977ರಲ್ಲಿ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದದ್ದು,
5. ಎಸ್.ಪಿ.ಯವರು ನನ್ನನ್ನು ಮೀಸಾ ಕಾಯದೆಯನ್ವಯ ಬಂಧಿಸಿಡಲು ಶಿಫಾರಸು ಮಾಡಿದ್ದರೂ ಹೊಸದಾಗಿ ಬಂದಿದ್ದ ಜಿಲ್ಲಾಧಿಕಾರಿಯವರು ನನ್ನನ್ನು ಮೀಸಾ ಕಾಯದೆಯಲ್ಲಿ ಬಂಧಿಸಲು ಅನುಮತಿ ಕೊಡದಿದ್ದುದು,
6. ಆರೆಸ್ಸೆಸ್ಸಿನ ವಿಚಾರಗಳು ಮತ್ತು ಅಲ್ಲಿನ ಹಿರಿಯರ ನಡವಳಿಕೆಗಳಿಂದ ಪ್ರಭಾವಿತನಾದದ್ದು; ದೇಶಹಿತಕ್ಕೆ ಸ್ವಂತದ ಕಷ್ಟನಷ್ಟಗಳು ಮಾರಕವಾಗಬಾರದೆಂಬ ಅವರ ವಾದ ಮತ್ತು ಅಹಿಂಸಾಮಾರ್ಗವನ್ನು ಅವರು ಸಮರ್ಥಿಸುತ್ತಿದ್ದ ರೀತಿ; ಹೆಚ್ಚಾಗಿ ನಾನು ನಂಬಿದ ಧ್ಯೇಯ ಮತ್ತು ಮಾರ್ಗಗಳನ್ನು ಅವರು ಪ್ರೊತ್ಸಾಹಿಸಿದ್ದು,
7. ಹಿಂಸಾ ಮಾರ್ಗ ಹಿಡಿದಲ್ಲಿ ನನ್ನ ಕುಟುಂಬದವರಿಗೆ ತೊಂದರೆಯಾಗಬಹುದು ಎಂಬ ಅನಿಸಿಕೆ,
8. ನನ್ನನ್ನು ಕುಟುಂಬದವರು, ಸ್ನೇಹಿತರು ಮತ್ತು ಸುತ್ತಲಿನ ಸಮಾಜ ದೂರೀಕರಿಸಬಹುದೆಂಬ ಅನಿಸಿಕೆ,
9. ದೀರ್ಘ ಕಾಲದಲ್ಲಿ ಅದರಿಂದ ಸಮಾಜಕ್ಕೆ ಆಗುವ ಉಪಯೋಗದ ಬಗ್ಗೆ ಅನುಮಾನ ಹಾಗೂ ಸ್ವಂತಕ್ಕೆ ಆಗಬಹುದಾದ ನಷ್ಟ ಮತ್ತು ನಾನು ಜೀವ ಕಳೆದುಕೊಳ್ಳಬೇಕಾಗಿ ಬರುವ ಸಂಭಾವ್ಯತೆ,
10. ಅಂತಃಸಾಕ್ಷಿ.
ಹೀಗೆ ಹಲವಾರು ಸಂಗತಿಗಳು ನಾನು ದಾರಿ ತಪ್ಪದಿರಲು ನೆರವಾದವು. ಈಗ ಆ ಕುರಿತು ನೆನಪಾದಾಗಲೆಲ್ಲಾ 'ದೇವರು ದೊಡ್ಡವನು' ಎಂದುಕೊಳ್ಳುತ್ತಿರುತ್ತೇನೆ.
(ಕಾಲಘಟ್ಟ:1976)                                                                                      ..ಮುಂದುವರೆಯುವುದು.