ಸಾಹಿತ್ಯ ಸಮ್ಮೇಳನ

ಸಾಹಿತ್ಯ ಸಮ್ಮೇಳನ

ಬರಹ

ಸಾಹಿತ್ಯ ಸಮ್ಮೇಳನಕ್ಕೆ ನನಗೆ, ನಮ್ಮ ಪೆಸೆಲ್ ಗೌಡರಿಗೆ, ಸುಬ್ಬಂಗೆ ಆಹ್ವಾನ ಬಂದಿತ್ತು. ಗೌಡಪ್ಪ ಅಂದಾ ಇಲ್ಲಿ ಆಡಿದಂಗೆ ಮಂಗನ ತರಾ ಅಲ್ಲಿ ಆಡಬೇಡ್ರಲಾ. ಸ್ಟೇಜನಾಗೆ ಪ್ರಸಿದ್ದ ಕವಿಗಳು, ಸಾಹಿತಿಗಳು, ಮುಖ್ಕಮಂತ್ರಿ ಎಲ್ಲಾರೂ ಇರ್ತಾರೆ. ಸ್ವಲ್ಪ ಇನ್ ಡೀಸೆಂಟ್ ಆಗಿರ್ರಿ ಅಂದಾ. ಸರಿ ನಮ್ಮ ಜೊತೆ ನಮ್ಮ ಬಾಲ್ಯದ ಗೆಳೆಯರೂ ಹೊಂಟ್ರು. ಮಗಾ ಗೌಡಪ್ಪ ಬೆಳಗ್ಗೆನೆ ಮುಖಕ್ಕೆ ಗೋಡೆಗೆ ಲ್ಯಪ್ಪ ಹೊಡೆದಿರೋ ತರಾ ಪೌಡರ್ ಬಳ್ಕಂಡು, ಸೈಡ್ನಾಗೆ ಇರೋ ಚೀಲದಾಗೆ ಒಂದಿಷ್ಟು ಪೇಪರ್, ಪೈಜಾಮ, ಜುಬ್ಬ ಹಾಕ್ಕೊಂಡು ಬಂದಿದ್ದ. ಜುಬ್ಬದ ಹಿಂದೆ ಮನೆಗೆ ಇರೋ ಸಗಣಿ,ಪಗಣಿ ಎಲ್ಲಾ ಮೆತ್ಕಂಡು ಇತ್ತು. ಅದನ್ನ ಕೈನಾಗೆ ಒರೆಸ್ಕೊಂಡು ನಿಂಗನ ಹೆಗಲ ಮೇಲೆ ಕೈ ಒಗೆದ. ನಿಂಗನ ಹತ್ತಿರ ಹೋದರೆ ಬರೀ ಸಗಣಿ ವಾಸನೆಯಾ.

ಲೇ ಗೌಡಪ್ಪಂಗೆ ಲಾಡಿ ಒಳಗೆ ಹಾಕ್ಕಳಕ್ಕೆ ಹೇಳಲೇ ಅಂದಾ ಸುಬ್ಬ. ಅಷ್ಟುದ್ದ ಇತ್ತು. ಹೆಣ್ಣು ಐಕ್ಳಿಗೆ ಒಂದು ಹತ್ತು ಲಂಗಕ್ಕೆ ಆಗೋ ಅಷ್ಟು. ಸರಿ ಇಸ್ಮಾಯಿಲ್ ಬಸ್ ಬಂತು. ಎಲ್ಲಾ ಕೂತ್ವಿ. ನಿಧಾನಕ್ಕೆ ಹೋಗಲೇ, ಕಡೆಗೆ ನಮ್ಮ ಪೋಟೋಕ್ಕೆ ಹಾರ ಹಾಕೊಂಗೆ ಮಾಡೀಲಾ ಬಡ್ಡೆ ಐದ್ನೆ ಅಂದ ಗೌಡಪ್ಪ. ಅಣ್ಣಾ ನಿನ್ನೆಯಿಂದ ರಮ್ ಜಾನ್ ಉಪವಾಸ ಮಾಡೀವ್ನಿ. ಕಣ್ಣೆಲ್ಲಾ ಮಂಜು ಆಯ್ತಾ ಇದೆ ಅಂದ. ಲೇ ಯಾವುದಕ್ಕೂ ರೆಡಿ ಇರ್ರಲಾ ಅಂದ ಗೌಡಪ್ಪ. ಸರಿ ಬಸ್ನಾಗೆ ಬೇಜಾರು ಅಂತಾ ಗೌಡಪ್ಪನ ಪೇಪರ್ ಇಸ್ಕಂಡು ನಿಂಗ ಓದ್ತಾ ಇದ್ದ. ಲೇ ಇಲ್ಲಿ ನೋಡಲಾ ಕಿಸ್ನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದಾನೆ. ಮಗನೆ ಅದು ಹತ್ತು ವರ್ಷದ ಹಿಂದಿನ ಪೇಪರ್ ಕಲಾ ಅಂದೆ. ಮಗಾ ಗೌಡಪ್ಪ ಅಂಗಡಿಯಿಂದ ಸಾಮಾನು ಕಟ್ಟುಕೊಟ್ಟ ಪೇಪರ್ ತಂದಿದ್ದ. ಕಡ್ಲೆ ವಾಸನೆ ಬರೋದು.

ಸರಿ ಸಮ್ಮೇಳನಕ್ಕೆ ಹೋದ್ವಿ. ಗೌಡರು, ನಾನು, ಸುಬ್ಬ ವೇದಿಕೆ ಮೇಲೆ ಕೂತ್ವಿ. ಚಂಪಾ, ಹಂಪಾ, ಚಿಮೂ, ನಿಸಾರ್ ಅಹ್ಮದ್, ಇನ್ನೂ ಅನೇಕ ಕವಿ ಮಹಾಷಯರು, ಮುಕ್ಕಮಂತ್ರಿ ಎಲ್ಲಾ ಇದ್ರು. ಗೌಡಪ್ಪ ಹೋಗಿ ಯಡಿಯೂರಪ್ಪನ ಪಕ್ಕಾ ಕುಂತ. ಸಮ್ಮೇಳನ ಅಧ್ಯಕ್ಷರಿಗೆ ಜಾಗ ಇಲ್ಲಾ ಅಂತಾ ಕಡ್ಯಾಗೆ ಸ್ಟೂಲ್ ಮೇಲೆ ಕೂರಿಸಿದ್ರು. ಸರಿ ಎಂದಿನಂತೆ ನನ್ನ ಪ್ರಾರ್ಥನೆ. ಸುರು ಹಚ್ಕಂಡೆ. ಚಂಪಾಗೆ ನಮಸ್ಕಾರ ಮಾಡಿ ಆಸೀರ್ವಾದ ಮಾಡಿ ಸಾರ್ ಅಂದೆ. ಲೇ ನೀನೇನೋ ಮುಗೀತು ಬಿಡು ಅಂದ್ರು.

ಪ್ರಾರ್ಥನೆ ಸುರು

ಎಲ್ಲೋ ಜೋಗಪ್ಪ ನಿನ್ನ ಅರಮಾನೆ

ವೇದಿಕೆನೆ ನಿನ್ನ ತಳಮಾನೆ

ವೇದಿಕೆಯಲ್ಲಿ ಚಂಪಾ, ಹಂಪಾ ಎಲ್ಲಾ ಅವ್ರೆ

ಆದ್ರೆ ನೀನು ಮಾತ್ರ ಎಲ್ಲಿ ಇದ್ಯಾ ಸಿವನೆ.

ಅವನನ್ನ ಸಾಕು ಕರೀರಿ. ಮುಕ್ಕಮಂತ್ರಿ ಬೇರೆ ಕಾರ್ಯಕ್ರಮಕ್ಕೆ ಹೋಗಬೇಕು.

ಚಂಪಾ ಪಕ್ಕ ಕೂತರೆ ಕಟ ಕಟ ಅಂತಾ ಸವಂಡ್ ನೋಡಿದ್ರೆ ಹಲ್ಲು ಕಡೀತಾ ಇದ್ರು. ಯಾಕ್ ಸರ್. ಮಗನೇ ಇನ್ನೊಂದು ಸಾರಿ ನಾನಿದ್ದಾಗ ಪ್ರಾರ್ಥನೆ ಮಾಡಿದ್ರೆ 38ಹಲ್ಲು ಉದುರುಸ್ತೀನಿ ಅಂದ್ರು. ಅವನಿಗೆ ಇರೋದು ಬರೀ 32 ಹಲ್ಲು ಆಟೆಯಾ ಅಂದ ಸುಬ್ಬ. ಮಗನೇ ನಿಂದು ಸೇರ್ಕೊಂಡೇ ಹೇಳಿದ್ದು ಅಂದ್ರು. ಏನ್ಲಾ ಇವನು ಸಾಹಿತಿನೋ ಇಲ್ಲಾ ಡೆಂಟಿಸ್ಟ್ ಏನಲಾ ಅಂದ ಸುಬ್ಬ.

ಸರಿ ಈಗ ಕಾರ್ಯಕ್ರಮ ಉದ್ಘಾಟನೆ. ಟೇಪು ಬಿದ್ದು ಹೋಗಿತ್ತು. ಗೌಡಪ್ಪ ಯಾವುದೋ ಯೋಚನೆ ಮಾಡ್ತಾ ಇದ್ದ. ಅಲ್ಲಿದ್ದವರು ಗೌಡಪ್ಪನ ಲಾಡಿನೇ ಕಟ್ಟಿ ಯಡಿಯೂರಪ್ಪನಿಂದ ಕಟ್ಟು ಮಾಡಿಸಿ ಉದ್ಘಾಟನೆ ಮಾಡಿಸಿದ್ರು. ನೋತ್ತಾನೆ ಗೌಡಪ್ಪ ಹತ್ತು ಮಾರು ಇದ್ದದ್ದು ಲಾಡಿ. ಎರಡು ಮಳ ಆಗಿತ್ತು.

ಸರಿ ಚಂಪಾ, ಚಿಮೂ ಯಾವಾಗಲೂ ಜಗಳ ಆಡ್ತಾರಲಾ ಯಾಕಲಾ ಅಂದ ಕಟ್ಟಿಗೆ ಕಿಸ್ನ. ಒಬ್ಬರು ಸೆಕ್ಯುಲರ್ ಮತ್ತೊಬ್ಬರು ನಾನ್ ಸೆಕ್ಯುಲರ್ ಕಲಾ. ಅಂದ್ರೆ ವೆಜ್ ನಾನ್ ವೆಜ್ ಇದ್ದಂಗೆ ಅನ್ನು ಅಂದ ಮಗಾ ಕಿಸ್ನ. ಏನಿದು ವಾಸನೆ. ಹಳಸೋದು ಫಲಾವು ಮತ್ತು ಪೌಡರ್ ಸೇರಿ ವಾಸನೆ ಬತ್ತಾ ಇದೆಯಲ್ಲಾ ಅಂದ್ರು ಹಂಪಾ. ಅದಾ ಮ್ಯಾನುಫಾಕ್ಚರಿಂಗ್ ಕಂಪೆನಿ ಇಲ್ಲಿ ಅಯ್ತೇ ನೋಡಿ ಅಂದು ಸುಬ್ಬ ಗೌಡಪ್ಪನ ತೋರಿಸಿದ. ಏ ಥೂ. ಈ ವಾಸನೆಗೆ ನಿಸಾರು ಅಂಗೇ ಮೂರ್ಛೆ ಹೋಗಿತ್ತು. ರಂಜಾನ್ ಉಪವಾಸ ಬೇರೆ ಪಾನಿ ಮತ್ ದಾಲನಾ ಅಂತಿತ್ತು.

ಸರಿ ಚಂಪಾ ಭಾಸಣ ಸುರುವಾಯ್ತು. ಯಾರೇ ಭಾಸಣಕ್ಕೆ ಹೋದ್ರೂ ಸೊಯ್ ಅಂತಾ ಜಾರ್ಕಂಡು ಮೈಕ್ ಹತ್ರ ಹೋಗೋರು. ಒಂದು ಗಾಡಿ ಮಣ್ಣು ವೇದಿಕೆ ಜಮಖಾನದಾಗೆ ಇತ್ತು. ಚಂಪಾ ಯಾಕಪ್ಪಾ ಮೈಕ್ ಸರಿ ಇಲ್ವಾ. ಮೊದಲು ಬಾಯಲ್ಲಿ ಇರೋ ಮೈಕ್ ಕವರ್ ತೆಗೆದು ಮೈಕ್ ಗೆ ಹಾಕ್ರಿ. ಜಾರಿದ ರಭಸ ಅಂಗಿತ್ತು. ನೋಡ್ರೀ ನಾನು ಸಾಹಿತಿಯಾದಾಗ, ಅಂದ ಕಾಲತ್ತಿಲ್, ಪೆನ್ನು ಪೆನ್ಸಲ್ ಇಲ್ಲದೆ ಸ್ಲೇಟ್ ಮೇಲೆ ಬರೀತಾ ಇದ್ದೆ. ಅದನ್ನ ಒದ್ದೆ ಬಟ್ಟೇಲಿ ವರೆಸಿ ಮತ್ತೆ ಹೊಸದಾಗಿ ಬರೀತಾ ಇದ್ದೆ. ಅಟ್ಟು ಕಷ್ಟ ಪಟ್ಟಿದೀನಿ. ಚಿಮೂಗೆ ಚಡ್ಡಿ ಹಾಕಳಕ್ಕೆ ಬರ್ತಾ ಇರಲಿಲ್ಲ. ಲಾಡಿ ಕಟ್ತಾ ಇದ್ದೆ. ಗೌಡಪ್ಪ ತನ್ನ ಲಾಡಿ ನೋಡ್ಕಂಡ. ಏನಲಾ ಇದು. ಉದ್ಘಾಟನೆ ಆಗೈತೆ ಅಂದ ಕಿಸ್ನ.  ನನ್ನ ಬಗ್ಗೆನೇ ಬಯ್ಯೋದು. ಅವರ ತಲೆ ನೋಡಿರಿ ಒಟ್ಟಿಗೆ ಎರಡು ಆಮ್ಲೇಟ್ ಹಾಕ್ಬೋದು ಅಂತಿದ್ದಾಗೆನೇ ಕಿಸ್ನ ಸಾರಾಯಿ ಪಾಕೇಟ್ ತೆಗೆದು ಎಲ್ಲಲಾ ಆಮ್ಲೇಟ್ ಅಂದ. ಸುಮ್ಕಿರಲಾ ಅದು ಚಂಪಾ ಕಲಾ. ಬಯಲುಸೀಮೆ ಮೆಣಸಿನಕಾಯಿ ಕಾರಲಾ. ಹೂ ಕಲಾ ಸಾರಾಯಿಗೆ ಒಳ್ಳೆ ಮಜಾ ಅಂದ. ಭಾಸಣದ ಉದ್ದಕ್ಕೂ ಚಿಮೂಗೆ ಬಯ್ದಿದ್ದೇಯಾ. ಚಿಮೂಗೆ ಭಾಸಣ ಅಂತಿದ್ದಾಗೆನೇ ಟಣ್ ಅಂತ ಸವಂಡ್. ತಲೆ ಹೋಗಿ ಮೈಕ್ ಗೆ ಡಿಕ್ಕಿ,  ಚಂಪಾಗೆ ಬಯ್ದಿದ್ದು. ಹುಟ್ಟಿದ ದಿನಾಂಕ ತೋರಿಸಿದ ಚಿಮೂ, ನಾನು ಹುಟ್ಟಿದಾಗ ಇನ್ನೂ ಚಂಪಾ ಹುಟ್ಟೇ ಇರಲಿಲ್ಲ. ಅಕ್ಷರಭ್ಯಾಸ ಹೆಂಗ್ರೀ ಮಾಡಿಸ್ತಾನೆ. ನನ್ನ ತಲೆ ಮೇಲೆ ಆಮ್ಲೇಟ್ ಹಾಕಿದರೆ ಇವನ ಬಾಯ್ನಾಗೆ ಎರಡು ಲಾರಿ ಹೋಗ್ಬೋದು ಅಂತೂ ಚಿಮೂ.

ಲೇ ಇವರು ಚಂಪಾ ಅಂದು ಹೋಗಲೇ ಬಾರಲೇ ಅಂತಾರೆ ಅದು ಹೆಣ್ಣು ಅಲ್ವೇನ್ಲಾ. ಲೇ ಅದು ಗಂಡು ಕಲಾ. ಈ ಕಡೆ ನಿಸಾರ್ ಅಹ್ಮದ್, ಹಲ್ಲು ಬೇರೆ ಹಾಕಿರಲಿಲ್ಲಾ. ಅಲೆ ಇಸ್ಕಿ. ಕ್ಯಾ ಜಗಡಾ ಹಯ ರೇ ಅಂತು. ಅದೂ ಮೈಕ್ನಾಗೆ ಕೇಳ್ತಿಂದ್ದಂಗೆ, ಯಾವನಲಾ ಉರ್ದು ಮಾತೋಡುದು ಅಂದ್ವು ಕರವೇಯವು.

ಹಂಪಾ ಕನ್ನಡನೇ ಇಸ್ಟಾಗೋತು ಅಂದು, ಅದರ ಸೀರೆ ಅದೇ ತುಳಿದು ದಪ್ಪ್ ಅಂತಾ ಬಿದ್ದು ಎದ್ದು ಹೋತು, ಅದರ ಗಂಡನೂ ಅಂಗೇ ಹಿಂದೇ ಹೋತು. ಸರಿ ಇಬ್ಬರು ಕಡೆಯವರಿಗೂ ಹೊಡೆದಾಟ ಸುರುವಾಯ್ತು. ಸ್ಟೇಜ್ ಅನ್ನೋದು ರಣರಂಗ, ಸುಬ್ಬ ವಂದನಾರ್ಪಣೆ ಮಾತ್ತೀನಿ ಅಂದಾ. ಮಗನೆ ಇಲ್ಲೇ ಇದ್ರೆ ನಿಂಗೆ ವಂದ ನೆ ಮಾತ್ತಾರಲಾ ಅಂದ ಸೀತು. ಗೌಡಪ್ಪ ಎಲ್ಲೀ ಅಂತಾ ನೋಡಿದ್ರೆ. ಮಗಾ ಮೈಕ್ನೋರು  ಜೊತೆ ಸೇರ್ಕಂಡ್ ಇದ್ದ. ಯಾರೋ ವೇಸಧಾರಿ ಇರಬೇಕು ಅಂತಾ ಅವು ಸುಮ್ನಿದ್ವು. ಚಂಪಾ, ಚಿಮೂ ಯಾವ ಮಟ್ಟಕ್ಕೆ ಜಗಳ ಆಡಿದ್ವು ಅಂದ್ರೆ ಹೋಗೋ ಬೇಕಾದ್ರೆ ಪಟಾಪಟಿ ಚಡ್ಡಿ, ಬನೀನ್ ನಾಗೆ ಹೋದ್ವು. ಸರಿ ವಾಪಸ್ಸು ಬಂದ್ವಿ. ಗೌಡಪ್ಪ ದಿನಾ ಸಂಜೆ ಸಾನೇ ಪುಸ್ತಕ ಓದೋನು. ಸಣ್ಣ ಸಾಹಿತಿ ತರಾ ಆಗಿದ್ದ. ನೋಡಿದ್ರೆ ಮಗಾ ಸಮ್ಮೇಳನದ ಗಲಾಟೆಯಲ್ಲಿ ಒಂದು 40ಪುಸ್ತಕ ಹೊಡಕೊಂಡು ಬಂದಿದ್ದ.