ಬದುಕಿನ ಇಂಥ ಕೋಲಾಜಿನ (collage) ಮುಂದೆ ಅದು ಹೇಗೆ ನಿರ್ಲಿಪ್ತವಾಗಿರಲು ಸಾಧ್ಯ?]

ಬದುಕಿನ ಇಂಥ ಕೋಲಾಜಿನ (collage) ಮುಂದೆ ಅದು ಹೇಗೆ ನಿರ್ಲಿಪ್ತವಾಗಿರಲು ಸಾಧ್ಯ?]

ಬರಹ

ಹದಗೆಟ್ಟ ಹೈದರಾಬಾದಿನಿಂದ ಬೆಂದ ಕಾಳೂರಮ್ಮನ ಮಡಿಲು ಸೇರಿದಾಗ( ಆಗಸ್ಟ್ ೨೩ ರಂದು) ಚುಮುಚುಮು ಬೆಳಗಿನ ೫:೩೦ ಗಂಟೆ. ಮಂಜು ಮುಸುಕಿದ ಬಸ್ಸಿನ ಕಿಟಕಿ ಗಾಜಿನಿಂದ ನಿದ್ದೆಗಣ್ಣಲ್ಲಿ ನೋಡಿದರೆ ಅಗೋ ಅಲ್ಲಿ ಹೂವು ಮಾರುವ ಹಳ್ಳಿ ರೈತರೊಂದಿಗೆ ಚೌಕಾಶಿಗಿಳಿದ ದಲ್ಲಾಳಿಗಳು. ನಿಧಾನ ಗತಿಯಲ್ಲಿ ಬಸ್ಸು ಸಾಗುತ್ತಿರುವಂತೆ ಬೆಳಗು ಅವತರಿಸಿದ್ದು ಗೊತ್ತಾಗಲಿಲ್ಲ. ಕನ್ನೆತನ ಹೊತ್ತ ಬೆಂಗಳೂರು ನೋಡಲು ಬೆಳಗಿನ ಮುಂಜಾವು ಪ್ರಶಸ್ಥ. ನಿದಿರಮ್ಮನ ಮಡಿಲಲಿ ಮಲಗಿದ ಜೀವ ಕೋಟಿ ಇನ್ನೂ ಧಾವಂತಕ್ಕೆ ಬೀಳದೆ ಆಗ ತಾನೇ ಕಣ್ಣು ಬಿಡುವ ಹೊತ್ತು. ಮಜೆಸ್ಟಿಕ್ ತಲುಪಿದ್ದು ೬:೩೦ ರ ಸುಮಾರು.


ಮೊದಲ ನೋಟ :


ಹೋಟೆಲ್ಲುಗಳು ಹೊರಚೆಲ್ಲಿದ ಮುಸುರೆಯನ್ನು ತಿಂದು ದಷ್ಟಪುಷ್ಟವಾಗಿ ಬೆಳೆದ ಶ್ವಾನ ಪಡೆಯ ಗಸ್ತು ಮಜೆಸ್ಟಿಕ್ ಗಲ್ಲಿಗಳಲ್ಲಿ.


ಮರದ ಕಾಂಡಕ್ಕೆ ಮೊಳೆ ಹೊಡೆದು ಜೋಡಿಸಿದ ಮೂರು ಪ್ಲಾಸ್ಟಿಕ್ ಬಾಟಲಿಯ ಕೊನೆ, ಮೊದಲು ಮತ್ತು ಕೊನೆಗಳು. ಮೊದಲನೆಯ ಕೊನೆಯಲ್ಲಿ ಪಕ್ಕದಲ್ಲೇ ಸಿಗುವ ಟೊಮೇಟೊ ಬಾತು, ತೆಲೆ ಕೆಳಗಾಗಿ ನೇತುಬಿದ್ದ ಬಾಟಲಿಯ ಮುಚ್ಚಳದಲ್ಲಿ ನೀರು ಮತ್ತು ಮೂರನೆಯದರಲ್ಲಿ ಚಿತ್ರಾನ್ನ. ಬೆರಗುಗೊಂಡು ನೋಡಿದರೆ ಇದು ಮರದಲ್ಲಿ ಜೀವಿಸುವ ಅಳಿಲು ಮತ್ತು ಬಹುಷಃ ಇತರ ಪಾಪದ ಜೀವಿಗಳಿಗಾಗಿ. ಬಹಳಷ್ಟು ಸಲ ಮನುಷ್ಯನ ಕೆಟ್ಟ ಕೆಲಸಗಳಿಗಿಂತ ಅವನ ಈ ತರಹದ ಕ್ರಿಯೆಗಳು ನನ್ನನ್ನು ಅಚ್ಚರಿಗೀಡು ಮಾಡುತ್ತವೆ. ಇದೆ ನಂಬಿಕೆಯಲ್ಲಿ ನನ್ನ್ನ ಹೊಟ್ಟೆಗೆ ಸ್ವಲ್ಪ ಬೂಸಾ ತಿಂದು ಮರಳಿದೆ.


 


ಎರಡನೆಯ ನೋಟ:


ಮಜೆಸ್ಟಿಕ್ ಬಸ್ ನಿಲ್ದಾಣ ತಲುಪಿದ್ದು ೧೦ ಗಂಟೆಗೆ. ಕಾಲೇಜ್ ಹೈಕಳು ಟಿಪ್ ಟಾಪಾಗಿ ಬಿಗಿಯಾದ ಜೀನ್ಸ್ ತೊಟ್ಟು ತಂತಮ್ಮ ಕಾಲೇಜು ಸೇರಲು ಕಾಯುತ್ತಿರುವ ಸಮಯ. ಯಾವುದೋ ರೇಡಿಯೋ ಚನ್ನೆಲ್ಲಿನ ದರಿದ್ರ ಹಾಡಿಗೆ ಕಿವಿಗೊಟ್ಟು ಆಫೀಸೀಗೆ ಹೊರಟ ಡುಮ್ಮ ಹೊಟ್ಟೆಯ ಆಂಟಿ ಅಂಕಲ್ಲುಗಳು. 'ಸಾರ್ ರೂಂ ಬೇಕಾ?, ತುಂಬಾ ಚೀಪ್ ರೇಟ್ನಲ್ಲಿ ಕೊಡಿಸ್ತೀನಿ ಸಾರ್' ಎಂದು ಮುಂತಾಗಿ ಅಲವತ್ತುಕೊಳ್ಳುವ ತಲೆಹಿಡುಕರು. ಆದರೆ............... ಅಲ್ಲೇ ಪಕ್ಕದ ಪ್ಲಾಟ್ ಫಾರ್ಮಿನಲ್ಲಿ ಕೊಪ್ಪಳದಿಂದ ಬಂದ ದೃಷ್ಟಿಹೀನ ಹುಡುಗ. ಅವನಿಗೆ ಸಹಾಯ ಮಾಡಲು ಬೆಳಗಾವಿಯ ಹುಡುಗ ಮತ್ತು ಬೆಂಗಳೂರಿನಲ್ಲಿ ನೆಲೆಸಿದ ಆಂಧ್ರದ ಹುಡುಗಿ. ಹೆಗಲ ಮೇಲೆ ಕೈ ಇಟ್ಟು ಮಲ್ಲೇಶ್ವರಂ ಬಸ್ ಬರುವವರೆಗಿದ್ದು ಕಳಿಸಿಕೊಟ್ಟ ಆ ಭಾವುಕ ಜೀವಿಗಳು.


 


ಮೂರನೆಯ ನೋಟ:


ಪಾಸ್ಪೋರ್ಟ್ ಕೆಲಸಕ್ಕಾಗಿ ಕೋರಮಂಗಲದ RPO ಗೆ ೧೧:೩೦ ಗೆ. ಬೆಳಗಿನ ಐದರಿಂದ ಕಾಯ್ದು ಟೋಕನ್ ಗಿಟ್ಟಿಸಿಕೊಂಡು ತಮ್ಮ ಸರದಿಗೆ ಕಾಯುತ್ತಿರುವ ಮುದಿ/ಎಳೆ, ಗಂಡು- ಹೆಣ್ಣುಗಳು ಮತ್ತವರ ಅಪ್ಪ, ಅಮ್ಮ, ಅತ್ತೆ, ಮಾವ, ಗಂಡ, ಹೆಂಡತಿ ಇತ್ಯಾದಿಗಳು. ಕಾವಲು ನಿಂತ ಪೋಲೀಸಪ್ಪನ  ವಿನಾಕಾರಣ ಕರ್ತವ್ಯ ನಿಷ್ಠೆ, ಟೋಕನ್ ಸಿಗದ ನನ್ನಂಥವರ ಹುಸಿ ವಿಧೇಯತೆ. ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧೨ ರ ವರೆಗೆ ಟೋಕನ್ ಕೊಡುವುದಾಗಿ ಹೇಳಿ ೧೧:೩೦ ಗೆ ಬಂದ್ ಮಾಡಿದ್ದಕ್ಕೆ ಜನರ ಆಕ್ರೋಶ. ಅಷ್ಟರಲ್ಲಿ ತನ್ನ ಕೆಲಸದ ಮೇರೆಗೆ ಬಂದ ಸಿಖ್ ಬಂಧು ಪೋಲಿಸಪ್ಪನೊಂದಿಗೆ  ಜಗಳ ಕಾಯ್ದು ಸುಸ್ತಾಗಿ ನನ್ನೊಂದಿಗೆ ಈ ವ್ಯವಸ್ಥೆಯ ಬಗ್ಗೆ ಪುಗಸಟ್ಟೆ lecture ಕೊಡುತ್ತಿರಲು, ಯಾವನೋ ಒಬ್ಬ ಬಡಕಲು ಆಸಾಮಿ(ಬಹುಷಃ ದೇವರ ಕೆಲಸದವರ ಪರವಾದವನು) ಬಂದು 'ಸಾರ್ ಆಪ್ಕೋ ಟೋಕನ್ ಚಾಯಿಯೇ ಕ್ಯಾ?' ಎಂದು ಮುಂತಾಗಿ ಕೇಳಿ ಮರೆಗೆ ನಮ್ಮ ಗಡ್ಡಧಾರಿ ಸಿಖ್ ಬಂಧುವನ್ನು ಕರೆದೊಯ್ದು ನೂರು ರೂಪಾಯಿಗೆ ಒಂದು ಟೋಕನ್  ಕೊಟ್ಟು ಬೋಳಿಸಿ ಕಳಿಸಿದ. ಈ ಗೆಳೆಯ ಬಂದು ತಾನು ಹೋದ ನಂತರ ನನಗೆ ಅದೇ ಟೋಕನ್ ಕೊಡುವುದಾಗಿ ಹೇಳಿ ಹಾಗೆಯೇ ನಡೆದುಕೊಂಡ. ನನ್ನ ಕೆಲಸ ಮುಗಿದು ಹೊರ ಬಂದು ರೂಮು ತಲುಪಿದಾಗ ೩:೩೦.


 


ನೋಟ ನಾಲ್ಕು:


ಹಾದರದ ಬದುಕಿಗೆ ಆದರದ ಸ್ವಾಗತ ಎಂದು ಮುಂತಾಗಿ ಕರೆಯಲು ಲಾಯಕ್ಕಾದ ಅವೇ ರಸ್ತೆಗಳು! ಗೂಡು ಸೇರಲು ತವಕಿಸುತ್ತಿರುವ ಹಕ್ಕಿಗಳು ಮತ್ತು ಮನುಜರು. ಹತ್ತು ರೂಪಾಯಿಗೆ sox , ಮತ್ತಿನ್ನೆನ್ನನ್ನೋ ಮಾರುತ್ತಿರುವ ಸಂಜೆಯ ಬಂಧುಗಳು; ಅದೇ ನೆಲದಡಿಯ ಪ್ಯಾಸೇಜ್ ನಲ್ಲಿ ಅರ್ಧ ಸೆರಗು ಸರಿಸಿ ಪೂರ್ತಿ ಸೆರಗು ಹಾಸುವ ಆಮಿಷ ತೋರುವ  ಹಸಿದ, ಶೋಷಿತ ಹೆಣ್ಣುಗಳು. ಎಲ್ಲ ನೋಡಿಯೂ ನೋಡದಂತೆ ಹೋಗುವ ಖಾಖಿ ನಿಷ್ಟಾವಂತ, ಮೀಸೆಹೊತ್ತ ಕನಿಷ್ಠ ಬಿಲ್ಲೆಗಳು (constables). ಅಲ್ಲೇ ದಾರಿ ತಪ್ಪಿಸಿಕೊಂಡು ಅಳುತ್ತಿರುವ ಪುಟ್ಟ ಕೂಸು. ಯಾರೋ ಬಂದು ಈ ಕನಿಷ್ಠ ಬಿಲ್ಲೆಗಳನ್ನ  ಕರೆದು ಆ ಪುಟ್ಟ ಕಂದಮ್ಮನನ್ನು ಕೊಡುವ ಹೃದ್ಯ ಸನ್ನಿವೇಶ. ..


 ಇಷ್ಟೆಲ್ಲಾ ನೋಡಿದ ಮೇಲೂ ಸುಮ್ಮನೆ ಇರುವ ನನ್ನಂಥ, ನಿಮ್ಮಂಥ ನಾರ್ಮಲ್ ಜೀವಿಗಳು ಮತ್ತು ಅಕ್ಷರದ ಹಾದರ ಮಾಡಲು ತವಕಿಸುವ ಹಸಿ ಬಿಸಿ ಬ್ಲಾಗಿಗಳು, ಚಿಲ್ಲರೆ ಕವಿಗಳು & ಕಥಾಗಾರರು................