ಶೋಷಿತರಾದೆವು ಎಂದುಕೊಳ್ಳುವ ಮುನ್ನ

ಶೋಷಿತರಾದೆವು ಎಂದುಕೊಳ್ಳುವ ಮುನ್ನ

ಬರಹ

ಅಬ್ಬಾಬ್ಬ ಅದೇನು ಚೀರಾಟ ಹಾರಾಟ. ಮನೆಯಲ್ಲ್ಲೂ ಕವಲು . ಪತ್ರಿಕೆಯಲ್ಲೂ ಕವಲು. ಬ್ಲಾಗಿನಲ್ಲೂ ಕವಲು . ಕವಲು ಓದಿದಾಗಲೆ ಬಹಳಷ್ಟು ಪುರುಷರಿಗೆ ತಾವು ಶೋಷಿತರಾಗಿದ್ದು ಗೊತ್ತಾಯಿತಂತೆ. ಹೆಣ್ಣೊಬ್ಬಳು ತನ್ನ ಹಕ್ಕನ್ನ ಚಲಾಯಿಸಲಾರಂಭಿಸಿದ ಕೂಡಲೆ ಅದು ಕವಲು   ಕಾದಂಬರಿಯ ಮತ್ತೊಂದು ಕವಲಾಗಿಬಿಡುತ್ತದೆ.


 


ಸಹಸ್ರಾರು ವರ್ಷಗಳಿಂದ ಹೆಂಗಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಇಲ್ಲಿ ನಗಣ್ಯವಾಗಿಬಿಟ್ಟಿದೆ  .


ಎಷ್ಟೊಂದು ಘಟನೆಗಳು  ಸದ್ದಿಲ್ಲದೆ ಅಡಗಿಹೋಗಿವೆ


 


 ನನಗೆ ತುಂಬಾ ಆಪ್ತರಾದವರ ಕತೆಯೊಂದನ್ನು  ನಿಮ್ಮ ಮುಂದಿಡುತ್ತಿದ್ದೇನೆ .


ಇದು ಸುಮಾರು ೬೫ ವರ್ಷಗಳ ಹಿಂದೆ ನಡೆದದ್ದು


ಆ ಮನೆಯಲ್ಲಿ ಸಾಲು ಸಾಲು ಹೆಣ್ಣು ಮಕ್ಕಳು ಹದಿನಾಲ್ಕು ಮಕ್ಕಳು  . ಮೂವರಿಗೆ ಮದುವೆ ಆಗಿತ್ತು ಮೂರನೆಯವಳಿಗೆ  ನಾಲ್ಕನೇ ಹೆರಿಗೆಯಾಗಿತ್ತು. ತವರಿಗೆ ಬಂದಿದ್ದಳು  ಅವಳ ತಂಗಿ ಇನ್ನೂ ಹದಿಮೂರರ ಪುಟ್ಟ ಪೋರಿ.


ಮೂರನೆಯವಳ ಗಂಡ ಬಂದ ಅತ್ತೆ ಮನೆಗೆ   . ಹೆಂಡತಿ ಇನ್ನೂ ಹಸಿ ಬಾಣಂತಿ .


ಎಷ್ಟು ಹಸಿದಿದ್ದನೋ ಆ ಪುಟ್ಟ ಪೋರಿಯ ಮೇಲೆ ಕಣ್ಣು ಬಿದ್ದಿತ್ತು.


ಅದ್ಯಾವ ಸಮಯದಲ್ಲೋ  ಪೋರಿಯ ಬದುಕು ಮೂರಾಬಟ್ಟೆಯಾಗಿತ್ತು.


ಗಂಡನ ಹೆಸರನ್ನು ಕೆಡಿಸಲು ಬಯಸದ ಅಕ್ಕ, ಅಳಿಯನಿಗೇನಾದರೂ ಅಂದರೆ ಮಗಳ ಭವಿಷ್ಯವೇನಾಗಿಬಿಡುವುದು ಎಂದು ಹೆದರಿದ ಅಪ್ಪ ಅಮ್ಮ. ಬಾಯಿ ಬಿಟ್ಟರೆ ತಮ್ಮ ಮದುವೆ ಕನಸಿನ ಮಾತು ಎಂದು ಬೆದರಿದ ತಂಗಿಯರು ಈ ವಿಷಯವನ್ನು ಹೊರಹಾಕಲಿಲ್ಲ . ಇಲ್ಲಿ ಎಲ್ಲರೂ ಶೋಷಕರಾಗಿದ್ದರು


ಹುಡುಗಿ ಗರ್ಭಿಣಿಯಾದಳು . ದೂರದ ಊರೊಂದರಲ್ಲಿ  ಅವಳನ್ನು ಇರಿಸಿದರು. ಸರಿಯಾದ ಆರೈಕೆ ಪೂರೈಕೆಗಳಿಲ್ಲದೆ ಹುಡುಗಿ ಸೊರಗಿದ್ದಳು. ತನ್ನದಲ್ಲದ ತಪ್ಪಿಗೆ ತನ್ನವರಿಂದ ದೂರಾಗಿದ್ದಳು


ಕೊನೆಗೆ ಒಂದು ಹೆಣ್ಣು ಮಗುವನ್ನು ಹೆತ್ತು  ಉಸಿರೆಳೆದಳು..


ಹುಡುಗಿ ಪ್ಲೇಗ್ ಬಂದು ಸತ್ತಳೆಂದು ಊರಲ್ಲಾ ಸುದ್ದಿ ಹಬ್ಬಿಸಿದರು.


ಆ ಹೆಣ್ಣು ಮಗುವನ್ನು ತನ್ನದೇ ಮಗುವೆಂದು  ಅಕ್ಕ ಸಾರಿದಳು


 ಆ ಮಗುವೂ ಅವಳನ್ನೇ ತನ್ನ ಅಮ್ಮ ಎಂದು ಕೊಂಡು ಇಷ್ಟು ವರ್ಷ ( ಅರವತ್ತೈದು ವರ್ಷ )ನಂಬಿತ್ತು


ಇತ್ತೀಚಿಗೆ ಆ ಮಗು(ಈಗ ಅರವತ್ತೈದರ ವೃದ್ದೆ )ವಿಗೆ ಪಾಲಿನ ವಿಷಯ ಬಂದಾಗ ತಿಳಿಯಿತು. ಯಾರನ್ನು ತನ್ನವರೆಂದು ತಿಳಿದಿದ್ದರೋ ಅವರೆಲಾ ಈಗ  ಇವರನ್ನು ದೂರ ಮಾಡಿದ್ದಾರೆ.


ಇಂತಹ ಎಷ್ಟೊಂದು ಘಟನೆಗಳು ಬೆಳಕಿಗೆ ಬರದೇ ಇದ್ದಾವೋ.


 


 ಇಷ್ಟೊಂದು ವರ್ಷಗಳಿಂದ ಮೌನವಾಗಿ  ತಾಳಿಕೊಂಡಿದ್ದಳು ಹೆಣ್ಣು


ಅಂತಹ ಹೆಣ್ಣು ದನಿಯೆತ್ತಿದ ಕೂಡಲೆ ಅದನ್ನು ತಾಳಲಾರದೇ ಶೋಷಿತನಾದೆ ಎಂದು ಹಲುಬುವುದು ಸರಿಯಾ?