ವೀಕ್ ಆಗಬೇಕು

ವೀಕ್ ಆಗಬೇಕು

ಬರಹ

ಕೆರೆ ತಾವದಿಂದ ಹೋಯ್ತಾ ಇದ್ದೆ, ಅಟ್ಟೊತ್ತಿಗೆ ಗೌಡಪ್ಪ ತಲೆ ಮೇಲೆ ಕುಲಾವಿ, ಸ್ವಟರ್ ಹಾಕ್ಕೊಂಡ್ ಓಡ್ತಾ ಹಳ್ಳಿ ಕಡೇ ಬತ್ತಾ ಇದ್ದ. ಯಾಕ್ರೀ ಗೌಡರೆ ಜಾಗಿಂಗ್ ಮಾಡ್ತಾ ಇದೀರಲಾ ಅಂದೆ. ನೋಡಲಾ ಮೊನ್ನೆ ಡಾಕಟರು ತಾವ ಹೋಗಿದ್ದೆ ಸಾನೇ ದಪ್ಪಾ ಇದೆಯಾ ಸುಗರ್ 400ಪಾಯಿಂಟ್ ಆಯ್ತದೆ. ತೆಳ್ಳಗೆ ಆಗು ಅಂದ್ಯಾರೆ ಅದಕ್ಕೆ ಬಾಡಿ ಇಳಿಸ್ತಾ ಇದೀನಿ ಕಲಾ. ಅಂಗೇ ಇನ್ಸುಲೇಸನ್ ಸ್ಟಾಪ್ ಮಾಡೀವ್ನಿ. ನೋಡಲಾ ಮೈನಾಗೆ ಇರೋ ತೂತೆಲ್ಲಾ ಮುಚ್ಚೈತೆ  ಅಂದ. ಸರಿ ಕೈನಾಗೆ ಚೊಂಬು ಯಾಕೆ ಅಂದೆ. ನೋಡಲಾ ಎಲ್ಲಿ ಕೂರಬೇಕು ಅನ್ನಿಸ್ತದೋ ಅಲ್ಲೇ ಕೂರ್ತೀನಿ ಅದಕ್ಕೆ ಕಲಾ ಅಂದ ಗೌಡಪ್ಪ. ಮತ್ತೆ ವಾಸನೆ ಹೋಗೋದಿಕ್ಕೆ ಯಾವುದು ಔಷಧಿ ಹೇಳಿಲ್ವಾ ಅಂದೆ. ಹೋಗಲಾ ತಲೆ ತಿನ್ನಬೇಡ ಅಂದ. ಮಗಂದು ಬೆವರು ವಾಸನೆ ಅಂಗೇ ಗಮ್ ಅಂತಾ ಮೂಗಿಗೇ ಹೊಡೆಯೋದು. ಸರಿ ಬುಡಿ,  ನಂಗೆ ಸಾನೇ ಅರ್ಜೆಂಟ್ ಆಗೈತೆ ಆಮ್ಯಾಕೆ ಸಿಕ್ತೀನಿ ಅಂದು ಹೊಂಟು ಸ್ವಲ್ಪ ಹೊತ್ತಿಗೇನೆ ಧಪ್ ಅಂತಾ ಸವಂಡ್ ಬಂತು. ಏನು ಅಂತಾ ನೋಡಿದ್ರೆ ಗೌಡಪ್ಪ ಸಗಣಿ ಮ್ಯಾಕೆ ಕಾಲಿಟ್ಟು ಕಿಸ್ಕಂಡಿದ್ದ. ಎಬ್ಬಿಸಿ ಮತ್ತೆ ಜಾಗಿಂಗ್ ಪ್ರೋಸೆಸ್ ಸುರು ಮಾಡಿಸ್ದೆ.


ಬೆಳಗ್ಗೆ ಗೌಡಪ್ಪನ ಮನೆಗೆ ಹೋದ್ರೆ, ನಮ್ಮ ಹಳಸೋದ ಫಲಾವು ವಾಸನೆಯ ಗೌಡಪ್ಪ ಪೇಪರ್ ಓದ್ತಾ ಇದ್ದ. ಗೌಡ್ರೆ ಅಂತೂ ನೀವು ಪೇಪರ್ ಓದೋ ಹಂಗೆ ಆದ್ರಲಾ ಅದೇ ಖುಸಿ. ಕರವೇಯಕ್ಕೆ ಹೇಳ್ಬೇಕು ಅಂದೆ. ಮಗಂದು ಯಾವುದೋ ಸಾಮಾನು ಕಟ್ಟಿಸ್ಕಂಡ್ ಬಂದ್ ಪೇಪರ್ ಓದ್ತಾ ಇದ್ದ. ಅದೂ ದೇವೆಗೌಡರು ಪ್ರಧಾನ ಮಂತ್ರಿಯಾಗಿದ್ದು ಕಾಲ. ಏ ಥೂ. ಮನೇಲ್ಲಿ ತಕ್ಕಡಿ ಇತ್ತು. ಇದೇನು ಗೌಡಪ್ಪ ಏನಾದರೂ ಸೊಪ್ಪು ವ್ಯಾಪಾರ ಸುರುಹಚ್ಕಂಡನಾ ಅಂತಾ ಅನ್ಕೊಂತ್ತಿದ್ದಾಗೆನೇ, ಗೌಡಪ್ಪನ ಹೆಂಡರು 100ಗ್ರಾಂ ಕಲ್ಲು ಇಟ್ಟು ಹಿಂದಿನ ದಿನದ ಅನ್ನ ತೂಕ ಮಾಡಿದ್ಲು. ಹಂಗೇ 50ಗ್ರಾಂ ಕಲ್ಲು ಇಟ್ಟು ಸಾರು ತೂಕ ಮಾಡಿದ್ಲು. 25ಗ್ರಾಂ ಇಟ್ಟು ಮುದ್ದೆ ತೂಕ ಮಾಡಿದ್ಲು. ನೋಡವ್ವ ಸರಿಯಾಗೈತಾ ತೂಕ ಅಂದಾ ಗೌಡಪ್ಪ. ಹೂಂ ಸರಿ ಐತೆ ರೀ ಅಂತು. ಒಂದು ಗ್ರಾಂ ಜಾಸ್ತಿ ಆಗಬಾರದು ಅಂದ ಗೌಡಪ್ಪ. ಗೌಡ್ರೆ ಏನ್ರೀ ಇದು ಅಂದೆ. ನೋಡಲಾ ಡಾಕಟರು ಹೇಳವ್ರೆ ಎಲ್ಲಾನೂ ತೂಕದ ಲೆಕ್ಕದಾಗೆ ತಿನ್ನು ಹಂಗಾದ್ರೆ ಮಾತ್ರ ಸರಿ ಆಯ್ತೀಯಾ ಅಂದವ್ರೆ ಅದಕ್ಕೆ ಕಲಾ ತಕ್ಕಡಿ ತಂದೀವ್ನಿ ಅಂದ. ಮಗಾ ಅದಕ್ಕೆ 50ರೂಪಾಯಿ ಕೊಟ್ಟು ಸರ್ಕಾರದ ಸೀಲ್ ಬೇರೆ ಹಾಕ್ಸಿದ್ದ ಬಡ್ಡೀ ಮಗ. ಅದ್ರಾಗೆ 20ಗ್ರಾಂ ಬಟ್ಟು ಕಳೆದು ಹೋಗಿತ್ತು ಅಂತಾ ಗೌಡನ ಹೆಂಡರು ಮಂಚದ ಕೆಳಗೆ  ಗೌಡಪ್ಪನ ಪಂಚೆ ಎತ್ತಿ ಹುಡುಕ್ತಾ ಇದ್ಲು. ಏ ಥೂ.
 ಸರಿ ಗೌಡಪ್ಪನ ಹೆಂಡರು ಮಟನ್ ತಂದು 10ಗ್ರಾಂ ಬಟ್ಟು ಇಟ್ಟು ತೂಕ ಮಾಡಿದ್ಲು. 5ಗ್ರಾಂ ಜಾಸ್ತಿ ಬಂತು ಅದನ್ನ ಚಾಕೂನಾಗೆ ಕಟ್ ಮಾಡಿ ನಾಯಿಗೆ ಹಾಕಿದರೆ, ಮುಂಡೇದು ತಿನ್ಲಿಲ್ಲಾ ಹಂಗೇ ಹೋತು. ಗೌಡರೆ  ನಾಳೆ ಮಟನ್ ಊಟ ಆಹಾ ಅಂದೆ. ಒಂದು ಹಲ್ಲಿಗೂ ಸಾಕಾಗಕಿಲ್ಲಾ, ಆದ್ರೂ ಏನ್ಲಾ ಮಾಡೋದು. ಮೂರು ಹೆಂಡರನ್ನ ಸಾಕುಬೇಕು ಕನ್ಲಾ ಅಂದ. ಮೂರನೇ ಹೆಂಡರು ಯಾರ್ರೀ ಗೌಡ್ರೆ ಅಂದೆ. ಅದೇ ಕಲಾ ನಮ್ಮ ಪೂಜಾರಪ್ಪನ ತಂಗಿ ಕಲಾ.ಅಯ್ಯೋ ನಿನ್ ಮುಖಕ್ಕೆ ನಿಂಗನ ಅಂಗಡಿ ಚಾ ಚಲ್ಟಾ ಹುಯ್ಯಾ ಅವಳನ್ನೂ ಬಿಡಲಿಲ್ವಾ ಅಂದೆ. ಅವನ ಹತ್ರ ಹೋಗ್ರೀ ಮಗಾ ಮಾಟ ಮಾಡಿಸಿ ನಿಮ್ಮ ಕಣ್ಣು ತೆಗಿಸ್ತಾವ್ನೆ ಅಂದೆ. ಹಂಗಾರೆ ಬೇಡ ಬುಡ್ಲಾ ಅಂದ. ಮಗಾ ಯಾವಾಗಲೂ ತಲೆ ಬುರುಡೆ ಹಿಡ್ಕಂಡು ರಾತ್ರಿ ಮಸಾನ ತಾವ ಹೋಯ್ತಾ ಇದ್ದಾಗೆ ಡೌಟ್ ಇತ್ತು . ಮಗಾ ಅಘೋರಿ ಇದ್ದಂಗೆ ಅವನೆ ಕಲಾ ಅಂದ. ಅವನ ತಂಗಿ ಲೇಡಿ ಅಘೋರಿ ಇರಬೇಕು ಅಂದ. ನಿಮ್ಮನ್ನೂ ಮಸಾಣ ಕಾಯಕ್ಕೆ ವೀರಬಾಹು ತರಾ ಕಂಬಳ್ಯಾಗೆ ಅಂಗೇ ಒಂದು ಹೋಂ ಗಾರ್ಡ್ ಕೋಲು ಕೊಟ್ಟು ನಿಲ್ಲಿಸ್ತಾನೆ ಅಂದೆ.
ಸರಿ ನಮ್ಮ ಎಂದಿನ ಅಡ್ಡೆ ನಿಂಗನ ಚಾ ಅಂಗಡಿ ಅಡ್ಡೇ ತಾವ ಸೇರಿದ್ವಿ. ಗೌಡಪ್ಪ ಅರ್ಧ ಚಾ ಕುಡಿದು.  ಸಲ್ಟು ತೆಗೆದು ಚೆಡ್ಯಾಗೆ  ಪೋಸು ಕೊಟ್ಟ. ಅವನ ಕೈನಾಗೆ ಇರೋ ಬೈಸೆಪ್ಸ್ ನೋಡಿ ದೊನ್ನೆ ಸೀನ ಅಬ್ಬಬ್ಬಾ ಅಂದ. ಅಂಗೇ ಗೌಡಪ್ಪ 50ಡಿಪ್ಸ್ ಹೊಡೆದು ಆ ಕಡೆ ಹೋಗಿ ವಾಂತಿ ಮಾಡಿ ಬಂದ. ಯಾಕ್ರೀ ಗೌಡ್ರೆ, ನೀರು ಕೊಡಲಾ ನಿಂಗ ಅಂದ. ಈಗ ತಾನೆ ಊಟ ಮಾಡಿದ್ದೆ ಕಲಾ ಅದಕ್ಕೆ ಆಮ್ಲೇಟ್ ಹಾಕ್ದೆ. ಏ ಥೂ. ಸರೀ ಗೌಡಪ್ಪನ ಬಾಡಿ ಒಂದು ತರಾ ಮೂಲಂಗಿ ಆದಂಗೆ ಆಗಿತ್ತು, ಹೊಟ್ಟೆ ದಪ್ಪ. ಕೈ ಕಾಲು ಸಣ್ಣ. ಮಗಾ ಹಿರಣ್ಣಯ್ಯ ಕಟ್ಟಿದಂಗೆ ಚೆಡ್ಡಿ ಕಟ್ಟೋನು.
ಅದೇ ಸಮಯಕ್ಕೆ ನಮ್ಮೂರ್ನಾಗೆ ಬಾಡಿ ಬಿಲ್ಡಿಂಗ್ ಸ್ಪರ್ಧೆ ಇತ್ತು. ನೋಡಿದ್ರೆ ಗೌಡಪ್ಪನೂ ಹೆಸರೂ ಕೊಟ್ಟವ್ನೆ. ಸರೀ ಸುರವಾತು. ಕಿಸ್ನ ಬಂದು ಕೈ ತೋರಿಸಿದರೆ ಬರೀ ಮೂಳೇನೇ ಕಾಣೋದು. ನಮ್ಮ ತಂಬೂರಿ ಬಂದೋನೆ ಒಂದು 50ಕೆಜಿ ಅಕ್ಕಿ ಎತ್ತಿದ. ತಂತಿ ಪಕಡು ಸೀತು ಬಂದು ಒಂದು 100ಕೆಜಿ ಎತ್ತಿದ್ದ. ಸತ್ಯನಾರಾಯಣ ಪೂಜೆ ಪ್ರಸಾದ ಪ್ರಭಾವ. ಇದೀಗ ನಮ್ಮೂರ ಫೇಮಸ್ ಹಳಸೋದು ಫಲಾವು ವಾಸನೆಯ ಗೌಡಪ್ಪನವರು 150ಕೆಜಿ ಅಕ್ಕಿ ಎತ್ತುತ್ತಿದ್ದಾರೆ ಚಪ್ಪಾಳೆ. ಗೌಡ ಬಂದೋನೆ ಒಂದು ನಾಕು ಸಾಮು ಹೊಡೆದು ಎತ್ತಿ ಇಟ್ಟ. ಕಡೆಗೆ ಗೌಡಪ್ಪಂಗೆ ಪ್ರೈಸ್ ಕೊಟ್ವಿ. ಅದೂ ಪ್ರಾಥಮಿಕ ಸಾಲೇಯಲ್ಲಿ ಮಕ್ಕಳು ಗೆದ್ದಿರೋ ತುಕ್ಕು ಹಿಡಿದ ಕಬಡ್ಡಿ ಸೀಲ್ಡು.
ಬೆಳಗ್ಗೆ ಹೋದ್ರೆ ಗೌಡಪ್ಪನ ಬಲಗೈಗೆ ಬ್ಯಾಂಡೇಜ್ ಇತ್ತು. ಯಾಕ್ರೀ ಗೌಡ್ರೆ. ಬಲಗೈ ಡಿಸ್ ಲೊಕೇಟ್ ಆಗೈತೆ ಅಂದಾ. ಯಾಕ್ರೀ, ಮಗಂದು ಈರುಳ್ಳಿ ಚೀಲ ಜಾರತು ಕಲಾ ಅಂದ. ಅಂಗೇ ಭಟ್ಟಿ ಜಾರೈತೆ ಅಂತಾ ಒಂದು ಹತ್ತು ಕಿತಾ ಕೆರೆತಾವ ಹೋಗಿದ್ನಂತೆ. ದೊಡ್ಡ ಕರುಳು ಸಣ್ಣ ಕರುಳು ಹೋಗೈತೆ ಅಂದ. ಬೆಳಗ್ಗೆಯಿಂದ ತುಂಬಿಸಿದ್ದ ನೀರಿನ ಡ್ರಮ್ ಖಾಲಿಯಾಗಿತ್ತು. ನಿನ್ನ ಬಾಡಿಗೆ ಒಂದಿಷ್ಟು ಬೆಂಕಿ ಹಾಕ. ನೀರು ನೀನೇ ತೆಗೆದುಕೊಂಡು ಬಾ ಅಂತಾ ಗೌಡಪ್ಪನ ಹೆಂಡರು ಬಯ್ತಾ ಇದ್ಲು. ಗೌಡ್ರೆ ಏನ್ರೀ ನಿಮ್ಗೂ 6ಪ್ಯಾಕ್ ಬಂದೈತೆ ಅಂದೆ. ಲೇ ಅದು 6ಪ್ಯಾಕ್ ಅಲ್ಲ ಕಲಾ ಬೆನ್ನಿನ ಮೂಳೆ ಮುಂದೆ ಬಂದಿದೆ ಕಲಾ ಅಂದ. ಸರಿ ಅದೇ ಸಮಯಕ್ಕೆ ಕಟ್ಟಿಗೆ ಒಡೆಯೋ ಕಿಸ್ನ ಬಂದು ಗೌಡಪ್ಪನ ಪಕ್ಕ ಕೂತ. ಸುಬ್ಬ ಬಂದೋನೆ,  ಲೇ ಕಿಸ್ನ ನಿಮ್ಮಣ್ಣ ಯಾವಾಗ ಬಂದ್ ನಲಾ ಅಂದಾ . ಲೇ ನಮ್ಮ ಅಣ್ಣ ಅಲ್ಲ ಕಲಾ ಗೌಡಪ್ಪ ಕನ್ಲಾ ಅಂದ ಕಿಸ್ನ.  ಏ ಥೂ, ನಿನ್ ಮಖಕ್ಕೆ ದೋಸೆ ಹುಯ್ಯಾ. ಸುಳ್ಳು ಹೇಳ್ತೀಯಾ. ಇಲ್ಲಾ ಕಲಾ ನಮ್ಮ ತಾಯಿ ಸತ್ವಾಗ್ಲೂ ಗೌಡಪ್ಪ ಕಲಾ. ಗೌಡಪ್ಪ ಒಂದು ತರಾ ಕಟ್ಟಿಗೆ ಒಡೆಯೋರು ಕಿಸ್ನ ತರಾನೇ ಆಗಿದ್ದ. ಈಗ ಡಾಕಟರು ಹೇಳವ್ರಂತೆ ಇನ್ನೂ ವೀಕ್ ಆದ್ರೆ ನಿಮಗೆ ಡ್ರಿಪ್ಸ್ ಹಾಕಬೇಕು ಅಂತಾ. ಮಗಾ ಗೌಡಪ್ಪ ನಾಯಿ ಹೊಡಿಯೋ ಕೋಲು ಆದಂಗೆ ಆಗವ್ನೆ. ಹೆಂಡರು ಪಕ್ಕ ಹೋದರೆ ಮಗ ಕಂಡಂಗೆ ಕಾಣ್ತವ್ನೆ. ತಕ್ಕಡಿನಾ ಸಗಣಿ ತೂಗಕ್ಕೆ ಕೊಟ್ಟಿಗ್ಯಾಗೆ  ಹಾಕವ್ನೆ. ಜಾಗಿಂಗ್ ಅಂದ್ರೆ ಬೇಡ ಕಲಾ ದಪ್ಪ ಆಗಬೇಕು ಅಂತಾನೆ. ದಿನಾ ಒಂದು ಕೆಜಿ ಮಟನ್ ಅಂಗೇ ಒಂದು 5ಲೀ ಹಾಲು. ಗ್ಯಾಸ್ ಬೇರೆ. ಕೊಬ್ಬಿದ ಕುರಿ ಆದಂಗೆ ಆಗ್ತೀನಿ ನೋಡ್ರಲಾ ಅಂತಾನೆ ಬಡ್ಡೇ ಹತ್ತದ್ದು.