ತಂತಿ ಬಾಲದ ಅಂಬರ ಗುಬ್ಬಿಗಳದ್ದು ಮಣ್ಣಿನ ಉಂಡೆಗಳ ಮುತ್ತಿನ ಮನೆ!

ತಂತಿ ಬಾಲದ ಅಂಬರ ಗುಬ್ಬಿಗಳದ್ದು ಮಣ್ಣಿನ ಉಂಡೆಗಳ ಮುತ್ತಿನ ಮನೆ!

ಬರಹ

Wire Tailed Swallow - ತಂತಿ ಬಾಲದ ಅಂಬರ ಗುಬ್ಬಿಯ ಗೂಡು ಹಾಗೂ ಪುಟ್ಟ ಮರಿಗಳು.

 

ತಂತಿ ಬಾಲದ ಅಂಬರ ಗುಬ್ಬಿ, ಅರ್ಥಾತ್ Wire Tailed Swallow ಅಥವಾ 'Hirundo Smithii'. ನಾರ್ವೇಜಿಯನ್ ಸಸ್ಯ ಶಾಸ್ತ್ರಜ್ಞ ಪ್ರೊ. ಚೇತಿಯನ್ ಸ್ಮಿಥ್ ೧೮೧೬ ರಲ್ಲಿ ಕಾಂಗೋ ನದಿ ತೀರದಲ್ಲಿ ಕೈಗೊಂಡ ಪ್ರಸಿದ್ಧ ಬ್ರಿಟಿಷ್ ಉತ್ಖನನದ ಸ್ಮರಣಾರ್ಥವಾಗಿ ಈ ಅಂಬರ ಗುಬ್ಬಿಗೆ ಅವರ ಹೆಸರನ್ನು ನೀಡಲಾಗಿದೆ. ಟರ್ಕಿ ದೇಶದ ಜೇಮ್ಸ್ ಕಿಂಗಸ್ಟನ್ ಅವರು ಪ್ರೊ.ಸ್ಮಿಥ್ ಅವರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

 

ಪ್ರೊ. ಚೇತಿಯನ್ ಸ್ಮಿಥ್ ಅವರು ಡಾ. ಜೇಮ್ಸ್ ಕಿಂಗಸ್ಟನ್ ಅವರೊಂದಿಗೆ ಕಾಂಗೋ ನದಿ ತೀರದಲ್ಲಿ ನಡೆಸಿದ ಉತ್ಖನನದಂತೆ,  ಈ ತಂತಿ ಬಾಲದ ಅಂಬರಗುಬ್ಬಿ ಸಹ ಕೆರೆ, ಹಳ್ಳಗಳ ಸಮೀಪವೇ ವಾಸವಾಗಿದ್ದು, ಅಲ್ಲಿನ ತರಿಭೂಮಿ ಅಥವಾ ಮುಖಜ ಭೂಮಿಯ ಫಲವತ್ತಾದ ಮಣ್ಣಿನಲ್ಲಿ ಉತ್ಖನನ ನಡೆಸುತ್ತದೆ! ಆ ನಯವಾದ ಹದಗೊಂಡ ಮಣ್ಣನ್ನು ತನ್ನ ಕೊಕ್ಕಿನಲ್ಲಿ ಉಂಡೆಗಾತ್ರದಲ್ಲಿ ಹಿಡಿದು ತಂದು ವಿಚಿತ್ರವಾಗಿ ಮುತ್ತು ಪೋಣಿಸಿದಂತೆ ಗೂಡು ಹೆಣೆಯುತ್ತದೆ. ಸಾಮಾನ್ಯವಾಗಿ ಮನುಷ್ಯರು ಕಟ್ಟುವ ಕಟ್ಟಡಗಳಿಗೆ ಆಶ್ರಯ ಪಡೆದು, ಅತ್ಯಂತ ತನ್ಮಯತೆಯಿಂದ (ಮೇಲಿನ ಚಿತ್ರ ಗಮನಿಸಿ) ಮುತ್ತಿಟ್ಟಂತೆ ಅರ್ಧ ಬಟ್ಟಲಿನ ಆಕಾರದಲ್ಲಿ ಗೂಡು ಹೆಣೆಯುತ್ತದೆ. 

 

ಅತ್ಯಂತ ಚಾಕಚಕ್ಯತೆಯ ಸಿವಿಲ್ ಇಂಜಿನೀಯರ್ ನಂತೆ ಗಂಡು ಮತ್ತು ಹೆಣ್ಣು ಎರಡೂ ಅಂಬರ ಗುಬ್ಬಿಗಳು ಪರಸ್ಪರ ಸಂಯೋಜನೆಯೊಂದಿಗೆ ತಿಂಗಳುಗಟ್ಟಲೇ ಮಣ್ಣಿನ ಗೂಡು ನೇಯುತ್ತದೆ. ನೋಡಲು ಗಂಡು-ಹೆಣ್ಣು ಎರಡೂ ಹಕ್ಕಿಗಳಿ ಒಂದೇ ರೀತಿ ಕಂಡರೂ, ಹೆಣ್ಣು ಉಬ್ಬಿಗಿಂತ ಗಂಡು ಗುಬ್ಬಿಯ ಬಾಲದ ತಂತಿ ತುಸು ಉದ್ದವಾಗಿ ಹಾಗೂ ಮೈಮೇಲಿನ ನೀಲಿ ಬಣ್ಣ ಅತ್ಯಂತ ಪ್ರಖರವಾಗಿ ಹೊಳೆಯುತ್ತದೆ. ತಲೆ ಮೇಲಿನ ಕಂದು ಚೊಟ್ಟಿ ಕೂಗುವಾಗ ಎದ್ದು ನಿಂತು ಗಮನಸೆಳೆಯುತ್ತದೆ.

 

ಧಾರವಾಡದ ರಾಣಿ ಚೆನ್ನಮ್ಮ ನಗರದ ಮನೆಯೊಂದರ ಮಾಳಿಗೆಯ ಮೇಲೆ ಪಹರೆ ಕಾಯುತ್ತ ಕುಳಿತ ತಂತಿಬಾಲದ ಅಂಬರ ಗುಬ್ಬಿ. ಚಿತ್ರ: ಬಿ.ಎಂ.ಕೇದಾರನಾಥ.

 

ಇನ್ನುಳಿದ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಅಂಬರ ಗುಬ್ಬಿಯ ಕುಟುಂಬಕ್ಕೆ ಸೇರಿದ ಈ ತಂತಿ ಬಾಲ, ದಕ್ಷಿಣ ಆಫ್ರಿಕಾ, ಸಹಾರಾ ಸೇರಿದಂತೆ ದಕ್ಷಿಣ ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಕಾಣಸಿಗುತ್ತವೆ. ಪಾಕಿಸ್ತಾನ ಹಾಗೂ ಶ್ರೀಲಂಕಾಗಳಲ್ಲಿ ಇವು ಕ್ವಚಿತ್ತಾಗಿ ಕಂಡುಬಂದರೂ ಛಳಿಗಾಲದ ಸಮಯದಲ್ಲಿ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಲಸೆ ಬಂದಾಗ ಕಾಣಸಿಗುವುದು ಹೆಚ್ಚು.

 

ಯುದ್ಧ ವಿಮಾನಗಳಂತೆ, ಬೆಳಕಿನ ವೇಗದಲ್ಲಿ ಚಲಿಸುವ ಸುಪರ್ ಸಾನಿಕ್ ಜೆಟ್ ಪ್ಲೇನ್ ಗಳಂತೆ ತಂತಿ ಬಾಲದ ಅಂಬರಗುಬ್ಬಿಗಳು  ಅತ್ಯಂತ ವೇಗವಾಗಿ ಹಾರುವಲ್ಲಿ, ದಿಕ್ಕು ಬದಲಿಸಿ ಡೈವ್ ಹೊಡೆದು ತೋಲ ಕಾಯ್ದುಕೊಂಡು ಗಾಳಿಯಲ್ಲಿ ಹಾರಾಡುವ ಮಿಡತೆ ಪ್ರಜಾತಿಗೆ ಸೇರಿದ ಬಹುತೇಕ ಎಲ್ಲ ಚಿಟ್ಟೆ, ಮಿಡತೆಗಳನ್ನು ಹಿಡಿದು ತಿನ್ನುವಲ್ಲಿ ಇವು ಪಳಗಿವೆ. ಹಾಗೆ ಬೇಟೆಯನ್ನು ಕಬಳಿಸುತ್ತಲೇ, ನೀರಿನ ಬಳಿ ಹೊಂಚು ಹಾಕಿ ಕುಳಿತು ಬಿಸಿಲಿನ ಬೇಗೆಗೆ ನೀರಡಿಸಿ ಬರುವ ಚಿಕ್ಕ-ಪುಟ್ಟ ರೆಕ್ಕೆಯ ಹುಳುಗಳನ್ನು ತಪಸ್ಸಿನಂತೆ ಕುಳಿತು ಕಬಳಿಸುವಲ್ಲಿ ಹೆಸರುವಾಸಿ.

 

ಈ  ಮಧ್ಯೆ ವಿರಾಮ ಘೋಷಿಸಿದಂತೆ ಆಗಾಗ ಅದೇ ಸೂಸು ಮಣ್ಣನ್ನು ತಮ್ಮ ಕೊಕ್ಕಿನಲ್ಲಿ ಗೋಲಿಯಂತೆ ದುಂಡಗೆ ಮಾಡಿ, ಹಿಡಿದು ಕೊಂಡು ಸಮೀಪದ ಮನೆಗಳ ಗೋಡೆಯ ಮೂಲೆಗೆ ಹಾರಿ ಅರ್ಧ ಬಟ್ಟಲಿನಾಕಾರದ ಗೂಡು ನಿರ್ಮಿಸಿಕೊಳ್ಳುತ್ತವೆ. ಅದು ಬೀಳದದಂತೆ ಮಾಡಲು ತುಸು ಹತ್ತಿ, ದಾರ, ಕಾತಿ ಕೆಲವೊಮ್ಮೆ ಜೇಡರ ಬಲೆಯನ್ನು ಎಗರಿಸಿ ತಂದು ಗೂಡಿಗೆ ಭದ್ರ ಮಾಡಿ ಕಟ್ಟುತ್ತವೆ. 

 

ತಂತಿ ಬಾಲದ ಅಂಬರಗುಬ್ಬಿ ತನ್ನ ಪತ್ನಿಯನ್ನು ಕೂಗಿ ಕರೆಯುತ್ತಿರಬಹುದೇ? ಚಿತ್ರ: ಬಿ.ಎಂ.ಕೇದಾರನಾಥ.

 

ತಂತಿ ಬಾಲದ ಅಂಬರ ಗುಬ್ಬಿಗಳು ಹಾಗೆ ತಿಂಗಳುಗಟ್ಟಲೇ ಶ್ರಮಪಟ್ಟು ಕಟ್ಟಿದ ಮಣ್ಣಿನ ಗೂಡಿನಲ್ಲಿ ಕೆಲವೊಮ್ಮೆ ೩ ಹಾಗೂ ಮತ್ತೆ ಕೆಲವೊಮ್ಮೆ ೫ ಮೊಟ್ಟೆಗಳನ್ನು ಇಟ್ಟ ಉದಾಹರಣೆಗಳಿವೆ. ದಕ್ಷಿಣ ಆಫ್ರಿಕಾದ ಬಹುತೇಕ ಭಾಗಗಳಲ್ಲಿ ಕೇವಲ ಮೂರು ಮೊಟ್ಟೆಗಳು ಕಾಣಸಿಕ್ಕರೆ, ದಕ್ಷಿಣ ಏಷ್ಯಾ ಭಾಗದಲ್ಲಿ ಸಹಜವಾಗಿ ಐದು ಮೊಟ್ಟೆಗಳು ಈ ಅಂಬರ ಗುಬ್ಬಿಯ ಗೂಡುಗಳಲ್ಲಿ ಕಾಣಸಿಕ್ಕಿವೆ ಎಂದು ಪಕ್ಷಿ ತಜ್ಞರು ದಾಖಲಿಸಿದ್ದಾರೆ. 

 

ಉಳಿದ ಅಂಬರ ಗುಬ್ಬಿಗಳಂತೆ ತಂತಿ ಬಾಲದ ಅಂಬರಗುಬ್ಬಿ ಕಾಲೋನಿಯಲ್ಲಿ ಗೂಡುಗಳನ್ನು ನಿರ್ಮಿಸದೇ ಸ್ವತಂತ್ರವಾಗಿ ಮತ್ತು ಪ್ರತ್ಯೇಕವಾಗಿ ತಮ್ಮ ಗೂಡುಗಳನ್ನು ಹೆಣೆದುಕೊಳ್ಳುತ್ತವೆ. ಸುಮಾರು ೧೪ ಸೆಂ.ಮೀ ದಷ್ಟು ಉದ್ದವಿರುವ ಈ ಹಕ್ಕಿ, ತುಂಬ ಸೂಕ್ಷ್ಮವಾಗಿ ಕೂಗುತ್ತದೆ. ಅತ್ಯಂತ ಸುಶ್ರಾವ್ಯವಾಗಿ ಸ,ರಿ,ಗ,ಮ ಸಂಗೀತದ ಮೊದಲ ನಾಲ್ಕು ಸ್ವರಗಳನ್ನು ಸುಂದರವಾಗಿ ಆಲಾಪಿಸುತ್ತದೆ.

 

ತಂತಿ ಬಾಲದ ಹೆಣ್ಣು ಅಂಬರ ಗುಬ್ಬಿ ತನ್ನ ಯಜಮಾನನ ನಿರೀಕ್ಷೆಯಲ್ಲಿ. ಚಿತ್ರ: ಬಿ.ಎಂ.ಕೇದಾರನಾಥ. 

 

ಇತ್ತೀಚೆಗೆ ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ನಗರ, ಸಿಲ್ವರ್ ಆರ್ಚರ್ಡ್, ಚೆನ್ನಬಸವೇಶ್ವರ ನಗರ, ಶಾಂತಿ ನಿಕೇತನ ನಗರ, ಸಂಪಿಗೆ ನಗರ, ಸಾಧನಕೇರಿ, ಕೆಲಗೇರಿ ಭಾಗಗಳಲ್ಲಿ ತಂತಿ ಬಾಲದ ಅಂಬರ ಗುಬ್ಬಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಿವೆ. ಆದರೆ ಕೆರೆಗಳ ಹಾಗೂ ಅವುಗಳ ತರಿ ಭೂಮಿಗಳ ಒತ್ತುವರಿ ಬಹುಶ: ಪ್ರಜನನ ಕ್ರಿಯೆಗೆ ತೊಂದರೆ ಉಂಟು ಮಾಡಬಹುದೇನೋ? ಎಂಬ ಹೆದರಿಕೆ ನಮ್ಮಲ್ಲಿ ಮನೆ ಮಾಡಿದೆ. 

 

ಕಾಗೆಗಳಂತೆ ಈ ಪಕ್ಷಿ ಸಹ ಮಾನವ ನಿರ್ಮಿತ ಪರಿಸರದಲ್ಲಿ ಹೊಂದಿಕೊಂಡು ಬಾಳುವಷ್ಟು ಬದುಕಿನ ಕೌಶಲ್ಯಗಳನ್ನು ಕಲಿತುಕೊಂಡಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮೊಸಾಯಿಕ್ ಟೈಲ್ಸ್ ಅಳವಡಿಸಲಾದ ಮನೆಯ ಗೋಡೆಗೆ ಮಣ್ಣಿನಿಂದ ಅರ್ಧ ಬಟ್ಟಲಿನಾಕಾರದ ಗೂಡು ಕಟ್ಟಿರಬೇಕಾದರೆ, ಅಂಬರ ಗುಬ್ಬಿಯ ಆಧುನಿಕ ಅಭಿಯಾಂತ್ರಿಕ ಕೌಶಲ್ಯಗಳ ಬಗ್ಗೆ ವಿಸ್ಟ್ರುತವಾದ ಅಧ್ಯಯನ ನಡೆಸಬೇಕಾದ ತುರ್ತಿದೆ! ಇದು ನಮ್ಮ ಆಧುನಿಕತೆಯ ಹಾಗೂ ಪಕ್ಷಿಗಳ Evolution ಕುರಿತಾದ ಅಂತರ್ ಶಿಸ್ತೀಯ ಅಧ್ಯಯನಕ್ಕೆ ನಾಂದಿ ಹಾಡಬಹುದು!