ಮದುವೆ ಯಾವಾಗ ಮಾಡ್ಕೋತೀಯ ???

ಮದುವೆ ಯಾವಾಗ ಮಾಡ್ಕೋತೀಯ ???

ಮದುವೆ ಯಾವಾಗ ಮಾಡ್ಕೋತೀಯ, ನಮ್ಗೆಲ್ಲಾ ಮದ್ವೆ ಊಟ ಯಾವಾಗ ಹಾಕಿಸ್ತೀಯ....??? ಇದು ಮದುವೆಯಾಗದ ಹುಡುಗ ಮತ್ತು ಹುಡುಗಿಯರನ್ನು ಮಿಕ್ಕವರು ಕೇಳುವ ಸಾಮಾನ್ಯ ಪ್ರಶ್ನೆ.

"ಅಲ್ಲಾ ಸ್ವಾಮೀ.... ನಿಮಗೆ ಭರ್ಜರಿ ಊಟ ಬೇಕಾದ್ರೆ ನನ್ನೇ ಕೇಳಿ, ಮಾಡಿ ಹಾಕ್ತೀನಿ. ಅದಿಕ್ಕೆ ನನ್ ಮದುವೇನೇ ಆಗಬೇಕಾ ? ಬೇರೆ ಏನೂ ಕಾರಣನೇ ಸಿಕ್ಲಿಲ್ವಾ ??? ನಾನು ಒಂಟಿಯಾಗಿ ಇರೋದು ಕಂಡು ನಿಮ್ಗೆ (ಮದುವೆ ಆದವರಿಗೆ) ಹೊಟ್ಟೆ ಉರಿ ಬರತ್ತಾ??? ಅಥವಾ ನೀವು ಖೆಡ್ಡಾಗೆ ಬಿದ್ದಾಯ್ತು ಅಂತ ನನ್ನ ಮೇಲೆ ಹೊಟ್ಟೆಕಿಚ್ಚಾ???" ಹೀಗೆಲ್ಲಾ ಕೇಳೋಣಾ ಅನ್ಸತ್ತೆ. ಆದ್ರೆ ಸಮಾಜದಲ್ಲಿ ಸಭ್ಯ.. ಅಂತ ಅನ್ನಿಸ್ಕೊಂಡಿರೋದ್ರಿಂದ.... "ಅಯ್ಯೋ ಅದಕ್ಕೇನಂತೆ.... ಮೊದಲು ಒಳ್ಳೇ ಹುಡುಗಿ ಸಿಕ್ಲಿ.... ಆಮೇಲೆ ಮದುವೆ ಆಗ್ತೀನಿ" ಅಂತ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡ್ತಾ ಇದ್ದೆ.

ಇನ್ನು ಅದಕ್ಕೆಲ್ಲಾ ಅವಕಾಶ ಇಲ್ಲ ಬಿಡಿ. ಅಂತೂ ಇಂತೂ ನಮ್ಮ ಮನೆಯವರೆಲ್ಲಾ ಸೇರಿ ನನಗೂ ಒಂದು ಖೆಡ್ಡಾನ ತೋಡಿ ಆಗಿದೆ. ಅದರ ಹತ್ತಿರ ಕರ್ಕೊಂಡು ಬಂದದ್ದೂ ಆಗಿದೆ... ಇನ್ನೇನು ಅದಕ್ಕೆ ತಳ್ಳೋದೊಂದೇ ಬಾಕಿ ನೋಡಿ. ಇಷ್ಟು ದಿನ ನನ್ನ ಸ್ನೇಹಿತರಿಗೆ ಸಿಕ್ಕಾಪಟ್ಟೆ ಗೋಳುಕೊಡ್ತಾ ಇದ್ದೆ. ಇನ್ನು ಆ ಸರದಿಯಲ್ಲಿ ನಾನೇ ನಿಲ್ಲಬೇಕು. ನನ್ನ ಸಹೋದ್ಯೋಗಿ ಅವನ ಶ್ರೀಮತಿಯೊಂದಿಗೆ ಪ್ರತೀ ದಿನ ೧ ಘಂಟೆ ಫೋನಿನಲ್ಲಿ ಮಾತನಾಡೋವಾಗ ರೇಗಿಸ್ತಾ ಇದ್ದ ನಾನು ಇವತ್ತು ಗಪ್ ಚುಪ್... ಆಗೆಲ್ಲಾ ಕೇಳ್ತಾ ಇದ್ದೆ.... "ಅಷ್ಟು ಹೊತ್ತು ಮಾತಾಡೋಕೆ ಅದೇನಿರತ್ತೆ ನಿನ್ಗೆ ವಿಷ್ಯಗಳೂ??? ಪ್ರಪಂಚದ ಸುದ್ದೀ ಎಲ್ಲಾ ನಿನ್ ಹತ್ರಾನೇ ಇರತ್ತಾ???" ಇತ್ಯಾದಿ ಇತ್ಯಾದಿ.... ಆದ್ರೆ ಸತ್ಯವಾಗ್ಲೂ ಇವತ್ತು ನನ್ನ ಹತ್ರ ಆ ರೀತಿಯ ಪ್ರಶ್ನೆಗಳಿಗೆ ಉತ್ತರ ಇಲ್ಲ :)

ಮದುವೆಗೆ ಹುಡುಗಿಯ ಹುಡುಕಾಟ ಶುರುವಾದ್ರೆ ಗೆಳೆಯರು ಕೇಳೋ ಪ್ರಶ್ನೆ: "ಏನಮ್ಮಾ.... ಏಷ್ಟು ಉಪ್ಪಿಟ್ಟು+ಕೇಸರೀ ಭಾತು ಆಯ್ತು ಇಲ್ಲೀವರ್ಗೇ ???" ಅಂತ. ನಿಜ ಹೇಳಬೇಕು ಅಂದ್ರೆ ನನ್ನ ಜೀವನದಲ್ಲಿ ನಾನು ಉಪ್ಪಿಟ್ಟು+ಕೇಸರೀ ಭಾತು ತಿಂದೇ ಇಲ್ಲ :) ಇವಳನ್ನ ನೋಡಲು ಹೋದಾಗಲೂ ಕೊಟ್ಟದ್ದು ಆಲೂಗಡ್ಡೆ ಚಿಪ್ಸ್ ಮತ್ತೆ ಸೋನ್ ಪಾಪಡಿ.... ಅದೇ ನನ್ನ ಮೊದಲ ಮತ್ತು ಕೊನೆಯ ಇಂಟರ್ವ್ಯು ಆಗೋಯ್ತು. ಅದೇನೋಪ್ಪ.... ಪ್ರಪಂಚದಲ್ಲಿ ಹುಡುಗಿಯರು ಕಡಿಮೆ ಅಂತಾರೆ, ಆದ್ರೆ ನನ್ಗೆ ಯಾವುದೇ ಸಮಸ್ಯೆ ಆಗ್ಲಿಲ್ಲ ನೋಡಿ. ಮೊದಲ್ನೇ ಸಲ ನೋಡಿದ ಹುಡುಗೀನೇ ಕ್ಲಿಕ್ ಆಗೋದ್ಳು. ಇವತ್ತಿಗೂ ಅವಳಿಗೆ ರೇಗಿಸ್ತಾ ಇರ್ತೀನಿ ನಂಗೆ ಜೀವನದಲ್ಲಿ ಒಂದೇ ಒಂದ್ ಸಾರೀನೂ ಉಪ್ಪಿಟ್ಟು+ಕೇಸರೀ ಭಾತು ತಿನ್ನೋ ಅವಕಾಶ ಸಿಕ್ಕ್ಲೇ ಇಲ್ಲ ಅಂತ ;)

ಅವಳನ್ನ ನೋಡಿಕೊಂಡು ಬಂದ ಕೆಲವೇ ದಿನಗಳಲ್ಲಿ ಅವಳ ಹುಟ್ಟಿದ ಹಬ್ಬ ಇತ್ತು. ಹೇಗಾದ್ರೂ ಮಾಡಿ ಶುಭಾಷಯ ತಿಳಿಸ್ಬೇಕು, ಆ ನೆಪದಲ್ಲಿ ಅವಳಜೊತೆ ಮಾತಾಡ್ಬೇಕು ಅಂತ ಒದ್ದಾಡ್ತಾ ಇದ್ದೆ. ಅವಳ ಮೊಬೈಲ್ ನಂಬರ್ ಕೂಡಾ ನನ್ನ ಹತ್ತಿರ ಇರಲಿಲ್ಲ. ಇದ್ದದ್ದು ೨ ಬೇರೆ ಬೇರೆ ನಂಬರ್ ಗಳು. ಒಂದು ಅವರ ಮನೆಯ ಸ್ಥಿರದೂರವಾಣಿದು, ಮತ್ತೊಂದು ಅವಳ ದೊಡ್ಡಪ್ಪನ ಮೊಬೈಲ್ ನಂಬರ್. ಅಂತೂ ಇಂತೂ ನಾನು ಅವಳಿಗೆ ಹುಟ್ಟಿದ ಹಬ್ಬಕ್ಕೆ ಶುಭಾಷಯ ಕೋರಲೇ ಬೇಕು ಅಂತ ಅವಳ ಹುಟ್ಟಿದ ದಿನದಂದೇ ಆ ಸ್ಥಿರದೂರವಾಣಿ ಗೆ ಕರೆಮಾಡಿದೆ.

ನನ್ನ ಗ್ರಹಚಾರ ಕಣ್ರಿ.... ಆ ದಿನಾನೇ ಆ ಸ್ಥಿರದೂರವಾಣಿ ಕೈ ಕೊಟ್ಟಿತ್ತು. ನಾನೂ ಇತ್ತಕಡೆಯಿಂದ ಪ್ರಯತ್ನ ಪಟ್ಟಿದ್ದೂ ಪಟ್ಟಿದ್ದೇ... ಆದ್ರೆ ಪ್ರಯೋಜನ ಮಾತ್ರ ಆಗ್ಲಿಲ್ಲ. ಕೊನೇಗೆ ಧೈರ್ಯ ಮಾಡ್ಕೊಂಡು ಅವಳ ದೊಡ್ಡಪ್ಪನ ಮೊಬೈಲಿಗೇ ಕರೆ ಮಾಡಿದ್ದೆ :) ಕರೆ ಮಾಡಿ ನಂತರ ಆಕೆಯ ಮೊಬೈಲ್ ನಂಬರ್ ಪಡ್ಕೊಂಡಿದ್ದೆ.

ಮನೆಯಲ್ಲಿ ನಿಶ್ಛಿತ್ತಾರ್ಥದ ದಿನವೆಲ್ಲಾ ನಿಗದಿಯಾದಮೇಲೆ ಶುರುವಾಯ್ತು ನಮ್ಮ ಮೊಬೈಲ್ ಸಂಭಾಷಣೆ ಅದರ ಜೊತೆಯಲ್ಲೇ ನನ್ನ ಮೊಬೈಲ್ ಬಿಲ್ಲಿನ ಸ್ಪರ್ಧೆ ಕೂಡಾ!!! ನನ್ನ ಮೊಬೈಲ್ ಬಿಲ್ಲು ತಿಂಗಳಿಂದ ತಿಂಗಳಿಗೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತಿತ್ತು. ಮೊದ ಮೊದಲು ವೋಡೋಫೋನಿನವರಿಗೆ ಧಾರಾಳವಾಗಿ ಹಣ ಕಟ್ಟಿದ್ದಾಯ್ತು.... ಆಮೇಲೆ ಹೊಸಾ"ಐಡಿಯಾ" ಹೊಳೆದದ್ದರಿಂದ ಈಗ ತಿಂಗಳಿಗೆ ಕೇವಲ ೨೦೦/- ರೂಪಾಯಿಯಲ್ಲಿ ನಮ್ಮ ಮಾತೆಲ್ಲಾ ಸಾಗುತ್ತಲಿದೆ. ಹೆಚ್ಚಿನ ಖರ್ಚಿಲ್ಲದೇ ನಾವಿಬ್ಬರೂ ಆರಾಮವಾಗಿ ಮಾತನಾಡುವ ಸದವಕಾಶವನ್ನ "ಐಡಿಯ" ದವರು ನಮಗೆ ಒದಗಿಸಿಕೊಟ್ಟಿದ್ದಾರೆ. ನಿಮ್ಮಲ್ಲಿ ಯಾರಾದರೂ ನನ್ನ ಪರಿಸ್ಥಿತಿಯಲ್ಲೇ ಇದ್ದರೆ ನಿಮಗೂ "ಐಡಿಯ" ಚೆನ್ನಾಗಿ ಉಪಯೋಗಕ್ಕೆ ಬರಬಹುದು ಅಂತ ನನ್ನ ಅನಿಸಿಕೆ ;)

ನಿಶ್ಛಿತ್ತಾರ್ಥಕ್ಕೆ ಮೈಸೂರಿನಿಂದ ಒಂದು ಖಾಸಗೀ ವಾಹನದಲ್ಲಿ ಹೊರಟನಾವೆಲ್ಲಾ (ನಾನು ಮತ್ತು ನಮ್ಮ ಕುಟುಂಬದವರು) ಬೆಂಗಳೂರಿಗೆ ಬಂದ್ವಿ. ಬರುವಾಗ ಎಲ್ಲಾ ಸೇರ್ಕೊಂಡು ನನಗೆ ರೇಗ್ಸಿದ್ದೋ ರೇಗ್ಸಿದ್ದು. ಮದುವೆ ನಿಶ್ಛಿತ್ತಾರ್ಥದ ದಿನ ಎಲ್ಲರ ಹದ್ದಿನ ಕಣ್ಣೂ ನನ್ನನ್ನೇ ಹುಡುಕುತ್ತಿದ್ದವು. ಏನೋ ಒಂದುರೀತಿಯ ಮುಜುಗರ ನನ್ನಲ್ಲಿ. ಒಳ್ಳೆ ಮೃಗಾಲಯದಲ್ಲಿ ಪ್ರಾಣಿಯನ್ನ ನೋಡಿ ಖುಷಿ ಪಡೋರೀತಿ ನನ್ನ ನೋಡ್ತಾ ಅವರವರಲ್ಲೇ ಏನೇನೋ ಮಾತಾಡ್ಕೊತಾ ಇದ್ರು. ಅವಳ ಮನೆಯ ಮಂದಿಗೆ ನಾನು ಹೊಸಬ. ಹಾಗಾಗಿ ಎಲ್ಲರ ಕಣ್ಣೂ ನನ್ನ ಮೇಲೇ. ಹಲವು ಅಪರಿಚಿತ ಮುಖಗಳು ನನ್ನನ್ನೇ ನೋಡ್ತಾ ಇದ್ರೆ ಏನ್ ಮಾಡ್ಬೇಕು ಅಂತನೇ ಗೊತ್ತಾಗ್ತಾ ಇರ್ಲಿಲ್ಲ. ನನ್ಗೂ Full tension ಆಗ್ತಾ ಇತ್ತು. ಬರೀ ಎಲ್ಲಾರಿಗೂ ಒಂದು ಸ್ಮೈಲ್ ಮಾತ್ರ ಕೊಡ್ತಾ ಇದ್ದೆ. ಬೇರೆ ಮಾಡೋದಾದ್ರೂ ಏನು ಹೇಳಿ... :(

ನಾನು ಅವಳನ್ನ ನೋಡೋಕೆ ನಿಶ್ಛಿತ್ತಾರ್ಥಕ್ಕಿಂತಾ ಸುಮಾರು ೩ ತಿಂಗಳ ಹಿಂದೆ ಹೋಗಿದ್ದು. ನಂತರದ ನಮ್ಮ ಭೇಟಿ ನಿಶ್ಛಿತ್ತಾರ್ಥ ದ ದಿನದಂದೇ ಆದದ್ದು. ಚೆಂದದ ಸೀರೆ ಉಟ್ಕೊಂಡು ನನ್ನವಳು ಚೆನ್ನಾಗಿ ಕಾಣ್ತಾ ಇದ್ಳು. ಎಲ್ಲಾ ಕೇಳೋದು ಒಂದೇ ಪ್ರಶ್ನೆ, "ಯಾಕೆ ಇಷ್ಟು ಸಣ್ಣ ಆಗಿದ್ದೀರ ? ಪಾಪ ಅವ್ಳ್ದೇ ಯೋಚ್ನೇನಾ?? ಇನ್ನು ಸ್ವಲ್ಪ ತಿಂಗ್ಳು ವೈಟ್ ಮಾಡಿ... ಮನೆಗೇ ಬರ್ತಾಳೆ... ಅಲ್ಲಿವರ್ಗೇ ಸ್ವಲ್ಪ ಚೆನ್ನಾಗಿ ತಿಂದು ದಪ್ಪ ಆಗಿ, ಆಮೇಲೆ ಅವ್ಳು ಬಂದು ನಿಮ್ಮನ್ನ ಚೆನ್ನಾಗಿ ನೋಡ್ಕೋತಾಳೆ" ಅಂತ. ಎಲ್ಲರಿಗೂ ಉತ್ತರ ಕೊಟ್ಟೂ ಕೊಟ್ಟೂ ಸಾಕಾಯ್ತು. ಬಂದವರಿಗೆಲ್ಲಾ ನಮ್ಮ ಜೋಡಿ ಮೆಚ್ಚುಗೆ ಆಯ್ತು.

ಅಲ್ಲಾ.... ನಾನು ಅವ್ಳು ಬಂದಿಲ್ಲಾ ಅಂತ ಯೋಚ್ನೆ ಮಾಡ್ತಾ ಸಣ್ಣ ಆದ್ನಂತೆ. ಅವ್ರಿಗೇನ್ ಗೊತ್ತು, ದಿನಾಬೆಳಿಗ್ಗೆ ೪ ಘಂಟೆಗೇ ಎದ್ದು ತಿಂಡಿ ಮಾಡ್ಕೊಂಡು ಕೆಲ್ಸಕ್ಕೂ ಹೋಗಿ ಮತ್ತೆ ಮನೆಗೆ ಬಂದು ಅಡುಗೆ ಮಾಡ್ಕೊಂಡು ಮಲ್ಗೋವ್ರ ಕಷ್ಟ :P ಅದರ ಮಜವನ್ನ ಅನುಭವಿಸಿದವನೇ ಬಲ್ಲ ;) ಬೆಳಿಗ್ಗೆ ಆದ್ರೆ ತಿಂಡಿ ಮಾಡೋ ಗಡಿಬಿಡಿ, ಸಂಜೆ ಆದ್ರೆ ಅಡುಗೆ ಮಾಡೋ ಗಡಿಬಿಡಿ, ಇದರ ಜೊತೆಯಲ್ಲೇ ನಾಳೆಗೇನು ತಿಂಡಿ ಮಾಡೋದಪ್ಪಾ ಅನ್ನೋ ಯೋಚನೆ.... ಉಸ್ಸ್ಸಪ್ಪಾ... ಒಂದೋ ಎರಡೋ.... ಆದ್ರೂ ಸಧ್ಯಕ್ಕೆ ಈ ಜೀವನ ಮಸ್ತ್ ಆಗೇ ಇದೆ :) ಮುಂದೆ ಮದುವೆಯಾದಮೇಲೆ ಹೇಗಾಗತ್ತೋ ಗೊತ್ತಿಲ್ಲ :)

ಸಧ್ಯಕ್ಕೆ ನನ್ನ ಮದುವೆ ನಿಶ್ಛಿತ್ತಾರ್ಥಮುಗಿದಿದೆ. ಇನ್ನು ಮದುವೆ ಕಾರ್ಯ ಹೇಗೆ ಆಗತ್ತೋ ಅನ್ನೋ ಭಯ ಮನಸ್ಸಲ್ಲಿ ಕಾಡ್ತಾ ಇದೆ. ನಿಶ್ಛಿತ್ತಾರ್ಥ ಏನೋ ಯಾವ ತೊಂದರೆಯೂ ಇಲ್ಲದೇ ನಡೆದುಹೋಯ್ತು. ಮುಂದೆನೂ ಹಾಗೇ ಎಲ್ಲಾ ಸರಾಗವಾಗಿ ಆಗತ್ತೆ ಅಂತ ಅಂದ್ಕೊಂಡಿದೀನಿ. :)

Rating
No votes yet

Comments