ಸೇವಾಪುರಾಣ -18 : ಗುಲ್ಬರ್ಗ ತೋರಿಸಿದರು -3

ಸೇವಾಪುರಾಣ -18 : ಗುಲ್ಬರ್ಗ ತೋರಿಸಿದರು -3

ಬರಹ

ಕಣ್ಣು ಹಾಕೀರಿ, ಹುಷಾರ್!


     ಸೇಡಂ ತಾಲ್ಲೂಕಿನ ಜನರು ಸ್ವಭಾವತಃ ಸಜ್ಜನರು, ಬಡತನವಿದ್ದರೂ ಆತಿಥ್ಯ ನೀಡುವುದರಲ್ಲಿ ಸಾರ್ಥಕತೆ ಕಾಣುತ್ತಿದ್ದವರು. ಮೈಸೂರು, ಮಂಗಳೂರು ಕಡೆಯ ಜನರನ್ನು ಗೌರವದಿಂದ ಕಾಣುವ ದೊಡ್ಡಸ್ತಿಕೆ ಅವರಲ್ಲಿತ್ತು. ಅಲ್ಲಿನ ಹವಾಮಾನದ ಕಾರಣದಿಂದಾಗಿ ಸ್ವಲ್ಪ ಆಲಸಿಗಳು. ಒಳ್ಳೆಯ ಸ್ವಭಾವದವರಾದರೂ ಕೇಡು ಬಗೆದವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಈ ಬಗ್ಗೆ ನನ್ನ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕು. ನಾನು ಒಂದು ಹಳ್ಳಿಗೆ ಸ್ಥಳತನಿಖೆ ಸಲುವಾಗಿ ಹೋಗಿದ್ದೆ. ಆ ಹಳ್ಳಿಯ ಕುಲಕರ್ಣಿ (ಗ್ರಾಮಲೆಕ್ಕಿಗ) ನನಗೆ ಆತನ ಸ್ನೇಹಿತನ ಮನೆಯಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದ್ದ. ನಾನು, ಕುಲಕರ್ಣಿ, ಅವನ ಸ್ನೇಹಿತರು ಎಲ್ಲರೂ ಉಭಯಕುಶಲೋಪರಿ ಮಾತನಾಡುತ್ತಾ ಒಟ್ಟಿಗೆ ಊಟ ಮಾಡಿದೆವು. ನಾನು ಒಬ್ಬನೇ ಇದ್ದುದರಿಂದ ಉಳಿಯುವ ಸಂದರ್ಭಗಳಲ್ಲಿ ಹಳ್ಳಿಗಳಲ್ಲೇ ತಂಗುತ್ತಿದ್ದೆ. ಆ ಗ್ರಾಮದ ಕೆಲಸವಾದ ನಂತರ ನಾನು ಸಮೀಪದ ಮಳಖೇಡದ ರಾಯರ ಮಠಕ್ಕೆ ಹೋಗಿ ಅಲ್ಲಿನ ಕೊಠಡಿಯೊಂದರಲ್ಲಿ ಉಳಿದುಕೊಂಡೆ. ನನ್ನನ್ನು ಮಠಕ್ಕೆ ಬಿಟ್ಟು ಕುಲಕರ್ಣಿ ವಾಪಸು ಹಳ್ಳಿಗೆ ಹೋದ. ಮರುದಿನ ಬೆಳಿಗ್ಗೆ ನಾನು ಸೇಡಂಗೆ ಮರಳಿ ಬಂದು ಕಛೇರಿಗೆ ಹೋದಾಗ ಅಲ್ಲಿನ ಸಬ್ ಇನ್ಸ್ ಪೆಕ್ಟರರು ನನಗೆ ಕರೆಕಳುಹಿಸಿದರು. ಠಾಣೆಗೆ ಹೋದಾಗ ನನಗೆ ತಿಳಿದ ವಿಷಯ ನನ್ನನ್ನು ಬೆಚ್ಚಿಬೀಳಿಸಿತು. ಸಬ್ ಇನ್ಸ್ ಪೆಕ್ಟರರ ಟೇಬಲ್ ಮೇಲೆ ಒಂದು ಗಾಜಿನ ಬಾಟಲಿಯಲ್ಲಿ ಎರಡು ರಕ್ತಸಿಕ್ತ ಕಣ್ಣುಗಳಿದ್ದವು. ಲಾಕಪ್ಪಿನ ಸರಳುಗಳ ಹಿಂದೆ ಹಿಂದಿನ ದಿನ ನಾನು ಯಾರ ಮನೆಯಲ್ಲಿ ಊಟ ಮಾಡಿದ್ದೆನೋ ಆ ವ್ಯಕ್ತಿ ಮತ್ತು ಅವನ ಸಹೋದರರು ಇದ್ದುದು ಕಾಣಿಸಿತು. ವಿಷಯ ಗಂಭೀರವಾಗಿದೆಯೆಂದು ಭಾಸವಾಯಿತು. ಗ್ರಾಮಲೆಕ್ಕಿಗ ತನ್ನ ಸ್ನೇಹಿತನ ಮನೆಗೆ ಆಗಾಗ್ಗೆ ಹೋಗಿಬಂದು ಮಾಡುತ್ತಿದ್ದು ಕ್ರಮೇಣ ಗ್ರಾಮಲೆಕ್ಕಿಗನಿಗೂ ಅವನ ಸ್ನೇಹಿತನ ಪತ್ನಿಗೂ ಪರಸ್ಪರ ವಿಶ್ವಾಸ ಬೆಳೆದು ಅಕ್ರಮ ಸಂಬಂಧದವರೆಗೂ ಮುಂದುವರೆದಿತ್ತಂತೆ. ವಿಷಯ ತಿಳಿದ ಸ್ನೇಹಿತ ಗ್ರಾಮಲೆಕ್ಕಿಗನ ಮೇಲೆ ಸೇಡು ತೀರಿಸಿಕೊಳ್ಳಲು ಮುಹೂರ್ತಕ್ಕಾಗಿ ಕಾಯುತ್ತಿದ್ದನಂತೆ. ನಾನು ಹಳ್ಳಿಗೆ ಬಂದ ದಿನ ಊಟಕ್ಕೆ ವ್ಯವಸ್ಥೆ ಮಾಡಲು ಗ್ರಾಮಲೆಕ್ಕಿಗ ಹೇಳಿದಾಗ ಸ್ನೇಹಿತ ಕೂಡಲೇ ಒಪ್ಪಿ ಅಂದು ತನ್ನ ಮನೆಯಲ್ಲೇ ಉಳಿದುಕೊಳ್ಳಬಹುದೆಂದೂ ಹೇಳಿದ್ದನಂತೆ. ಮಧ್ಯರಾತ್ರಿಯಲ್ಲಿ ಅವನು ತನ್ನ ಸಹೋದರರೊಂದಿಗೆ ಒಟ್ಟಾಗಿ ಗ್ರಾಮಲೆಕ್ಕಿಗನ ಕೈಕಾಲು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ತನ್ನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ ಅವನ ಕಣ್ಣುಗಳನ್ನು ಕಿತ್ತಿದ್ದಲ್ಲದೆ ಅದನ್ನು ಬಾಟಲಿಯಲ್ಲಿ ಹಾಕಿಕೊಂಡು ಮರುದಿನ ಬೆಳಿಗ್ಗೆ ಬಂದು ಠಾಣೆಗೆ ಸ್ವತಃ ಬಂದು ಶರಣಾಗಿದ್ದನಂತೆ. ನಾನು ಅಂದು ಹತ್ತಿರದ ಮಳಖೇಡದ ರಾಯರ ಮಠ ನೋಡುವ ಮತ್ತು ಅಲ್ಲಿಯೇ ತಂಗುವ ಆಸಕ್ತಿ ತೋರಿರದಿದ್ದರೆ ಆ ಪ್ರಕರಣದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿಯಾಗಬೇಕಾಗುತ್ತಿತ್ತು. (ನನ್ನನ್ನು ಆರೋಪಿಗಳಲ್ಲಿ ಒಬ್ಬನಾಗಿಯೂ ಮಾಡಬಹುದಿತ್ತು!). ಮಳಖೇಡಕ್ಕೆ ಹೋಗಿದ್ದರಿಂದ ಠಾಣೆಗೆ ಹಾಜರಾಗಿ ಹೇಳಿಕೆ ಕೊಡುವಷ್ಟಕ್ಕೆ ಮಾತ್ರ ನನ್ನ ಪಾತ್ರ ಸೀಮಿತವಾಯಿತು. ಆಸ್ಪತ್ರೆಯಲ್ಲಿದ್ದ ಗ್ರಾಮಲೆಕ್ಕಿಗನನ್ನು ಕಂಡು ಸಾಂತ್ವನ ಹೇಳಿದೆ. ಆತನ ತಪ್ಪಿನ ವಿಮರ್ಶೆ ಮತ್ತು ಬುದ್ಧಿವಾದ ಹೇಳುವ ಸಂದರ್ಭ ಅದಾಗಿರಲಿಲ್ಲ. ದೃಷ್ಟಿಹೀನನಾದ ಆತನಿಗೆ ಆತನ ಹಕ್ಕಿನಲ್ಲಿದ್ದ ರಜೆ ಇರುವವರೆಗೆ ರಜೆ ಮಂಜೂರು ಮಾಡಿ ನಂತರದಲ್ಲಿ ಅವನನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಯಿತು.