‘ಗದುಗಿನ ನಡೆದಾಡುವ ದೇವರು’ -ಪುಟ್ಟರಾಜ ಗವಾಯಿಗಳು ಆತ್ಮೈಕ್ಯ.

Submitted by harshavardhan … on Fri, 09/17/2010 - 16:59
ಬರಹ

 

ಗದುಗಿನ ಪಂಡಿತ ಪುಟ್ಟರಾಜ ಕವಿಗವಾಯಿಗಳಿಗೆ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಸ್ಯಾಕ್ಸೋಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ.

 

ನಮ್ಮ ಪುಟ್ಟಯ್ಯಜ್ಜ ಇನ್ನಿಲ್ಲ. ನಂಬುವುದಾದರೂ ಹೇಗೆ? ಮನಸ್ಸು ವಿಚಲಿತವಾಗಿದೆ. ಕಣ್ಣಿರುವ ನನ್ನಂಥಹ ಅನೇಕರಿಗೆ ಬೆಳಕಾಗಿದ್ದ ಮಾನಧನ ಪುಟ್ಟರಾಜರ ನಿರ್ಗಮನದಿಂದ ಕತ್ತಲೆ ಆವರಿಸಿ, ಮಂಕು ಮಂಕುಕವಿದಂತಾಗಿದೆ. ವೀರನಾರಾಯಣನ ಗದಗ ಸಂಪೂರ್ಣ ಶೋಕಸಾಗರದಲ್ಲಿ ಮುಳುಗಿದೆ. ೨೫೦೦ ಕ್ಕೂ ಹೆಚ್ಚು ತುಲಭಾರಗಳನ್ನು ಅಪ್ಪನಿಗೆ ನೆರವೇರಿಸಿ ಅಭಿಮಾನದ ಮಾನಧನ ಅರ್ಪಿಸಿದ್ದ ನಾಡು ಈಗ ಅನಾಥವಾಗಿದೆ.

 

ಗದುಗಿನ ನಡೆದಾಡುವ ದೇವರು, ಪದ್ಮ ಭೂಷಣ ಡಾಕ್ಟರ್ ಪುಟ್ಟರಾಜ ಕವಿ ಗವಾಯಿಗಳು ಇಂದಿಗೆ ಇಹದ ವ್ಯಾಪಾರ ಮುಗಿಸಿ, ತಮ್ಮ ಗುರುಗಳಾದ ಪಂಡಿತ ಪಂಚಾಕ್ಷರ ಗವಾಯಿಗಳಲ್ಲಿ ಆತ್ಮೈಕ್ಯರಾದರು. ವಿಭಜಿತ ಧಾರವಾಡ ಜಿಲ್ಲೆಯ ನೂತನ ಜಿಲ್ಲೆಗಳಲ್ಲಿ ಒಂದಾದ ಗದುಗಿನ ವೀರನಾರಾಯಣನ ಬೀಡಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಮಧ್ಯಾನ್ಹ ೧೨.೧೦ಕ್ಕೆ ಸಂಗೀತದ ಕಲಾನಿಧಿ ನಾದ ಸರಸ್ವತಿಯ ಪಾದಕ್ಕೆ ಅರ್ಪಿತವಾಯಿತು. ಅವರಿಗೆ ೯೭ ವರ್ಷ ವಯಸ್ಸಾಗಿತ್ತು. ಹಾವೇರಿ ಜಿಲ್ಲೆ ದೇವಗಿರಿಯಲ್ಲಿ ೧೯೧೪ ರಲ್ಲಿ ಜನಿಸಿದ ಪೂಜ್ಯರು ವೀರೇಶ್ವರ ಪುಣ್ಯ ಆಶ್ರಮಕ್ಕೆ ಒದಗಿದ್ದು ಭಾಗ್ಯವೆಂದೇ ಹೇಳಬೇಕು.

 

ಅಚಂದ್ರಾರ್ಕಸ್ಥಾಯಿ ಅಮರತ್ವ ಪಡೆದ ಗದುಗಿನ ಪುಟ್ಟಯ್ಯಜ್ಜ ಹೀಗಿದ್ದರು. ಚಿತ್ರ: ಕೇದಾರನಾಥ.

 

ಅವರ ಗುರುಗಳಾಗಿದ್ದ ಪಂಡಿತ ಪಂಚಾಕ್ಷರ ಗವಾಯಿಗಳು ಪ್ರಾತ: ಸ್ಮರಣೀಯರು. ತಮ್ಮ ನಿಸ್ವಾರ್ಥ ಸೇವೆಗಾಗಿ ‘ವಿಕಲ ಚೇತನರ ಕುಬೇರರು’ ಎಂದು ಹಾನಗಲ್ ಕುಮಾರಸ್ವಾಮಿಗಳಿಂದ ಹರಸಿಕೊಂಡವರು. ಹುಟ್ಟು ಅಂಧರಾಗಿದ್ದ ಪೂಜ್ಯರು ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತಗಳಲ್ಲಿ ಪ್ರಾವಿಣ್ಯತೆ ಹೊಂದಿ ಉಭಯ ಗಾಯನ ವಿಶಾರದ ಎನಿಸಿದ್ದರು. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಜನಿಸಿದ ಪೂಜ್ಯರು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ, ಸಂಚಾರಿ ಸಂಗೀತ ಶಾಲೆಗಳನ್ನು ತೆರೆದು, ಅಲ್ಲಿ ನೂರಾರು ವಿಕಲಚೇತನ ಕಲಾಭ್ಯಾಸಿಗಳನ್ನು ಕರೆತಂದು ಸಹೃದಯರಿಂದ ಆ ಬಡ ವಿದ್ಯಾರ್ಥಿಗಳಿಗೆಲ್ಲ ಅನ್ನ, ಬಟ್ಟೆಗಳನ್ನು ಬೇಡಿ ತಂದು ಸಂಜೆ ಬಿಡಾರ ಹೂಡಿದಲ್ಲೆಲ್ಲ ಸಂಗೀತ ಕಾರ್ಯಕ್ರಮ ನಡೆಸಿದ ಪೂಜ್ಯ ಗವಾಯಿಗಳು ಮಾನವತೆಯ ಮೇರು.

ಲೋಕ ಜಂಗಮದ ಸೇವೆಯಲ್ಲಿಯೇ ನಿರತರಾಗಿ ೧೯೪೪ ರಲ್ಲಿ ಪೂಜ್ಯ ಪಂಚಾಕ್ಷರ ಗವಾಯಿಗಳು ಶಿವೈಕ್ಯರಾದರು.  ಜನ್ಮಾಂಧರೂ, ರಾಷ್ಟ್ರ ಪ್ರಸಿದ್ಧ ಸಂಗೀತ ವಿದ್ವಾಂಸರೂ ಆಗಿದ್ದ ಪಂಚಾಕ್ಷರ ಗವಾಯಿಗಳು ಗದುಗಿನಲ್ಲಿ ಸ್ಥಾಪಿಸಿದ ವೀರೇಶ್ವರ ಪುಣ್ಯಾಶ್ರಮ ಸಹಸ್ರಾರು ಕಲಾವಿದರನ್ನು ನಾಡಿಗೆ ನೀಡಿದೆ. ಆ ಮಹಾವಿದ್ಯಾಲಯದ ಸಾಂಸ್ಕೃತಿಕ ರಾಯಭಾರಿಗಳು ನಾಡನ್ನು ಶ್ರೀಮಂತಗೊಳಿಸಿದ್ದಾರೆ; ಗೊಳಿಸುತ್ತಿದ್ದಾರೆ.

 

 

ಧಾರವಾಡದಲ್ಲಿ ಜರುಗಿದ ಪುಟ್ಟರಾಜ ಸಮ್ಮಾನ್ ಕಾರ್ಯಕ್ರಮದಲಿ ಪಾಲ್ಗೊಂಡು ನಮ್ಮನ್ನು ಹರಸಿದ ಕ್ಷಣ. ಚಿತ್ರ: ಕೇದಾರನಾಥ.

 

ಈಗ ವೀರೇಶ್ವರ ಪುಣ್ಯಾಶ್ರಮ ಗವಾಯಿಗಳ ಪಟ್ಟದ ಶಿಷ್ಯರಾದ ಪದ್ಮವಿಭೂಷಣ ಡಾಕ್ಟರ್ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮಾರ್ಗದರ್ಶನದಲ್ಲಿ ಸುಮಾರು ಏಳು ದಶಕಗಳ ಕಾಲ ವಿಕಲಚೇತನರ ಬಾಳಿಗೆ ಬೆಳಕಾಗಿದೆ. ತಮ್ಮ ಗುರು ಪಂಚಾಕ್ಷರ ಗವಾಯಿಗಳಂತೆ ಲೋಕಜಂಗಮದ ಸೇವೆಯಲ್ಲಿ ನಿರತರಾಗಿದ್ದ ಕವಿ ಪುಟ್ಟರಾಜ ಗವಾಯಿಗಳ ನಿರ್ಗಮನದಿಂದ ನಿರ್ಮಿತವಾದ ಶೂನ್ಯಭಾವ ಈ ಶತಮಾನದ ಅಂತ್ಯದ ವರೆಗೂ ಭರ್ತಿಯಾಗುವ ಸೂಚನೆಗಳಿಲ್ಲ.

 

ಅಂಧ, ಅನಾಥ, ಅಂಗವಿಕಲರಾದ ಸುಮಾರು ೬೦೦ ಮಕ್ಕಳಿಗೆ ನಿತ್ಯ ತ್ರಿವಿಧ ದಾಸೋಹ ಮೂರ್ತಿಯಾಗಿ ಸಲುಹಿದ್ದ ಅಪ್ಪ ಪುಟ್ಟರಾಜರು ನಿಜಕ್ಕೂ ಬದುಕಿದ್ದಾಗಲೇ ದಂತಕಥೆಯಾದವರು. ಹುಟ್ಟು ಅಂಧರಾಗಿದ್ದ ಅವರು ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿಶಾರರಾಗಿದ್ದರು. ವೀಣೆ, ರುದ್ರವೀಣೆ, ಸಾರಂಗಿ, ವಾಯೋಲಿನ್, ಜಲತರಂಗ, ತಬಲಾ, ಹಾರ್ಮೋನಿಯಂ ಸೇರಿದಂತೆ ಹತ್ತು ವಾದ್ಯಗಳನ್ನು ನುಡಿಸುವ ಪ್ರೌಢಿಮೆ ಹೊಂದಿದ್ದರು. ಚತುರ್ಭಾಷಾ ಪಂಡಿತರಾಗಿದ್ದ ಅಪ್ಪಗಳು, ೪೦ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಶಿವಶರಣೆ ಅಕ್ಕಮಹಾದೇವಿಯ ಮೇಲೆ ರಚಿಸಿದ ಗ್ರಂಥಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಅವರು ಭಾಜರಾಗಿದ್ದರು.

 

ಧಾರವಾಡದ ಕಲಾಭವನದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪುಟ್ಟಯ್ಯಜ್ಜನವರು. ಚಿತ್ರ: ಕೇದಾರನಾಥ.

 

ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಪದ್ಮಭೂಷಣ ಪುರಸ್ಕಾರ, ತುಳಸಿ ಸಮ್ಮಾನ್ ಸೇರಿದಂತೆ ಅಸಂಖ್ಯ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದ ಅಪ್ಪ ಪುಟ್ಟರಾಜರು, ತ್ರಿಭಾಷಾ ಕವಿಯಾಗಿಯೂ ನಾಡನ್ನು ಹರಸಿದ್ದರು. ಅವರ ಕೊಡುಗೆಗಳ ಸ್ಮರಣಾರ್ಥ ಪ್ರತಿವರ್ಷ ರಾಷ್ಟ್ರಮಟ್ಟದ ಸಾಂಸ್ಕೃತಿಕ ರಾಯಭಾರಿ ಒಬ್ಬರಿಗೆ ಪಂಡಿತ ಪುಟ್ಟರಾಜ ಕವಿಗವಾಯಿ ರಾಷ್ಟ್ರೀಯ ಸಮ್ಮಾನ್ ನೀಡಿ ಗೌರವಿಸುವ ಪರಿಪಾಠ ಹೊಂದಲಾಗಿದೆ. 

 

ತ್ರಿಕಾಲ ಪೂಜಾ ನಿರತ ಶಿವಯೋಗಿಯಾಗಿ, ಆಶ್ರಮದ ಮಕ್ಕಳಿಗೆ ಅಕ್ಕರೆಯ ಅಪ್ಪನಾಗಿ, ಆಶ್ರಮದ ಭಕ್ತಾದಿಗಳಿಗೆ ಅಂತ:ಕರಣಿ ಅಜ್ಜನಾಗಿ ಅವರು ಸಲುಹಿದವರು. ೧೨ ವರ್ಷದವರಿದ್ದಾಗ ಆಶ್ರಮಕ್ಕೆ ಬಂದು ಅವರ ಶಿಷ್ಯನಾಗಿ, ಸತತ ೧೨ ವರ್ಷಗಳ ಕಾಲ ಅವರ ಊಟೋಪಚಾರದ ಹೊಣೆಹೊತ್ತ, ಪೂಜಾ ವಿಧಿಗಳ ಪ್ರಬಂಧಕರಾಗಿದ್ದ ಹಾಗೂ ಇಂದು ರಾಷ್ಟ್ರಖ್ಯಾತಿಯ ವಾಯೋಲಿನ್ ವಾದಕರಾದ ಪಂಡಿತ ಬಿ.ಎಸ್. ಮಠ ಅಭಿಮಾನದಿಂದ ತಮ್ಮ ಗುರುಗಳ ಬಗ್ಗೆ ಹೇಳುವುದೆಂದರೆ.."ತ್ಯಾಗರಾಜರು, ಕಾಳಿದಾಸರು, ಕನಕದಾಸರಂಥ ಮಹಾನ್ ಯತಿಗಳು, ಪೂಜ್ಯರು ನಮ್ಮ ಗುರುಗೋಳ್ರೀ..ನಾದಯೋಗಿ ಹೌದು, ಶಿವಯೋಗಿ ಹೌದು. ನಾನು ೧೪ ವರ್ಷದಾವಾ ಇದ್ದಾಗ ಹಾಡು ಕಲೀತಿನಿ ಅಪ್ಪಾ ಅಂದೆ. ಮುಂದ ಒಂದ ವರ್ಷದೊಳಗ ನನ್ನ ದನಿ ಒಡೀತು..ದಿಕ್ಕು ಕಾಣಧಂಗ ಆತು. ಗುರುಗೋಳು ಹೇಳಿದ್ರು..ಬಸಯ್ಯ ನೀನು ವಾಯೋಲಿನ್ ಕಲಿಯೋ..ನಾನು ಕಲಸ್ತೇನಿ ಅಂದ್ರು. ದಿನಾ ಬೆಳಿಗ್ಗೆ ಎದ್ದು ೪ ಗಂಟೇಕ ಗುರುಗಳ ಕ್ಲಾಸ್ ಆರಂಭ..ಒಮ್ಮೆ ನನಗ ನಿದ್ದಿ ಬಂತು. ಮಂಪರು ಬಂದು ಅಲ್ಲೇ ಮಲಗಿ ಬಿಟ್ಟೆ. ಗುರುಗೋಳು ಎರಡು ಸರ್ತಿ ಕರದರೂ ನನಗ ಎಚ್ಚರ ಆಗಲಿಲ್ಲ. ಉಳದವರು ಎಬ್ಬಿಸಿ ಅವರ ಹತ್ತಿರ ಕಳಿಸಿದರು. ನನ್ನ ಮೂಗು ಹಿಡದು ಎರಡು ಕಪಾಳಕ್ಕ ಹೊರಡದ್ರು..ನನ್ನ ಕಣ್ಣೊಳಗ ದೀಪ ಹತ್ತಿತು..

 

ಮಾನಧನ ಪುಟ್ಟಯ್ಯಜ್ಜ ಸಂಗೀತ ಸಮಾರಂಭವೊಂದರಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿರುವುದು. ಚಿತ್ರ: ಕೇದಾರನಾಥ.

 

ಇವತ್ತಿಗೂ ನಾನು ಬೆಳಿಗ್ಗೆ ೪ ಗಂಟೇಕ ಎದ್ದು ಅವರನ್ನ ನೆನೆಸಿ ರಿಯಾಜ್ ಮಾಡ್ತೇನಿ. ನನ್ನಂಥ ಸಾವಿರಾರು ಬಡ ಮಕ್ಕಳಿಗೆ ಆ ಅಪ್ಪ ಅನ್ನದಾತ, ಜ್ಞಾನದಾತ ಆಗಿದ್ರು..ಇನ್ನೆಲ್ಲಿ ಅಂಥವರು. ಹಂಗಾಗಿ ನನ್ನ ಮನಿ ಹೆಸರು ‘ಗುರು ಪುಟ್ಟರಾಜ ನಿಲಯ’. ನನ್ನಂಗ ಸಾವಿರಾರು ಜನರಿಗೆ ಆಶ್ರಯದಾತ ಅವರು ಆಗಿದ್ದಕ್ಕ ನಾಡಿನ ಸಂಗೀತ ರಾಯಭಾರಿಗಳು ತಯಾರ ಆದ್ರು.."

 

ನಿತ್ಯ ಬೆಳಿಗ್ಗೆ ೪ಕ್ಕೆ ಉತ್ಥಾನ. ತ್ರಿಕಾಲ ಶಿವಯೋಗ. ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಪಾಠ. ಇತರರಿಗೆ ಹೇಳಿ ಪುರಾಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ. ಆಶ್ರಮದ ಮಕ್ಕಳ ಆಟ-ಊಟ-ಉಪಚಾರ, ಅನಾರೋಗ್ಯ ಕಾಡಿದರೆ ದೇಖ್ ರೇಖ್ ಹಾಗೂ  ಆಡಳಿತದ ಮೇಲುಸ್ತುವಾರಿ, ಜತೆಗೆ ಆಶ್ರಮದ ದೈನಂದಿನ ಖರ್ಚು-ವೆಚ್ಚ ಸರಿದೂಗಿಸಲು ಹಾನಗಲ್ ಕುಮಾರಸ್ವಾಮಿಗಳು ತಮ್ಮ ಗುರುಗಳಿಗೆ ನೀಡಿದ್ದ ಜೋಳಿಗೆ ಹೆಗಲಿಗೇರಿಸಿ ಊರೂರು ಸಂಚಾರ, ನಿರಂತರ ಪ್ರವಾಸ ಪುಟ್ಟಯ್ಯಜ್ಜನವರ ಬದುಕಾಗಿತ್ತು. ೯೭ ವರ್ಷದ ವಯೋಸಹಜ ಕಾಯಿಲೆಗಳಿಂದ ಅವರು ಬಳಲಿದರೂ ಈ ನಡಾವಳಿಗೆ ಯಾವತ್ತೂ ಚ್ಯುತಿ ಬರಲಿಲ್ಲ. ಗುರು ಪಂಚಾಕ್ಷರಿ ನೀಡಿದ ಮಾರ್ಗ ದಂಡ ಯಾವತ್ತೂ ಕೈಯಲ್ಲಿ ಹಿಡಿದು ಅಪ್ಪ ನಡೆದರೆ ‘ನಡೆದಾಡುವ ದೇವರು’ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಕಾಣುತ್ತಿರಲಿಲ್ಲ.

 

 

ಅಪ್ಪ ಪುಟ್ಟಯ್ಯಜ್ಜ ಯಾವತ್ತೂ ಕುಳಿತುಕೊಳ್ಳುತ್ತಿದ್ದ ಭಂಗಿ. ಚಿತ್ರ:ಕೇದಾರನಾಥ.

 

ಲಕ್ಷಾಂತರ ಭಕ್ತರು, ಸಾವಿರಾರು ಅಭಿಮಾನಿಗಳು, ಆಶ್ರಮದ ಸಾವಿರಾರು ವಿದ್ಯಾರ್ಥಿಗಳು, ಆಶ್ರಮದಲ್ಲಿ ಕಲಿತು ಹೋಗಿ ಇಂದು ನಾಡಿನ ರಾಯಭಾರಿಗಳಾಗಿರುವ ಸಂಗೀತ ದಿಗ್ಗಜರು ನಿತ್ಯ ನಿರಂತರ ಪೂಜೆನಡೆಸಿ, ಆಶ್ರಮದ ಸುತ್ತ ದೀಡದಂಡ ನಮಸ್ಕಾರ ಹಾಕಿದರೂ ವಿಧಿ ಮನಸ್ಸು ಕರಗಲಿಲ್ಲ. ಕೊನೆಗೂ ವಿಧಿ ಗೆದ್ದಿತು. ಮಾನಧನ ಪುಟ್ಟಯ್ಯಜ್ಜ ನಮ್ಮನ್ನೆಲ್ಲ ಬಿಟ್ಟು ನಡೇದೇ ಬಿಟ್ಟರು. ಹಾನಗಲ್ ಕುಮಾರಸ್ವಾಮಿಗಳು ನೀಡಿದ ದಂಡ-ಜೋಳಿಗೆ ಇನ್ನು ಯೋಗ್ಯವಾರಸುದಾರರ ಕೈ ಸೇರಬೇಕಿದೆ.

 

ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಗದ್ದುಗೆಯಲ್ಲಿ ನಾಡಿನ ಗಣ್ಯರು-ಮಠಾಧೀಶರ ಸಾನಿಧ್ಯದಲ್ಲಿ ನಾಳೆ ಮಧ್ಯಾನ್ಹ ೧೨ ಗಂಟೆಗೆ ಅಂತಿಮ ವಿಧಿ-ವಿಧಾನಗಳು, ಸರಕಾರದ ಗೌರವ ಮರ್ಯಾದೆಗಳೊಂದಿಗೆ ಜರುಗಲಿವೆ. ನಿಜಾರ್ಥದಲ್ಲಿ ಕರ್ನಾಟಕ ರತ್ನ, ಭಾರತ ರತ್ನ ಪುಟ್ಟಯಜ್ಜ. ಅವರು ಯಾವತ್ತೂ ಯಾವುದಕ್ಕೊ ಆಸೆ ಪಟ್ಟವರಲ್ಲ.  ಅವರಿಗೆ  ಅರ್ಪಿಸಿದ ಎಲ್ಲವನ್ನು ಆಶ್ರಮಕ್ಕೆ  ಧಾರೆಎರೆದ ನಿಸ್ವಾರ್ಥಿ ಅವರು.

 

ಪುಟ್ಟರಾಜ ಗವಾಯಿಗಳು ಖ್ಯಾತ ಸಂಗೀತ ವಿಮರ್ಶಕ ಪ್ರೊ. ಸದಾನಂದ ಕನವಳ್ಳಿ ಹಾಗೂ ಅಂದಿನ ಧಾರ್ವಾಡ ಜಿಲ್ಲಾಧಿಕಾರಿ ಎಂ.ಎಸ್. ಶ್ರೀಕರ್ ಅವರೊಂದಿಗೆ. ಚಿತ್ರ: ಕೇದಾರನಾಥ.

 

ಆದರೆ ಅವರ ಅಭಿಮಾನಿಗಳ ಕೋರಿಕೆ -ಭಾರತ ಸರಕಾರ ಅವರಿಗೆ ಭಾರತ ರತ್ನ ಉಪಾಧಿಯಿಂದ ಗೌರವಿಸಬೇಕಿತ್ತು ಎಂಬುದಾಗಿತ್ತು. ಈಗ ಅವರೇ ಇಲ್ಲ. ನಾವು ಯಾರನ್ನೂ ಈ ಕುರಿತು ಇನ್ನು ಕೇಳುವುದೂ ಇಲ್ಲ. ಈ ವ್ಯವಸ್ಥೆಗೊಂದು ಧಿಕ್ಕಾರ ಮಾತ್ರ ನನ್ನಂಥಹ ಅನೇಕ ಅವರ ಅಭಿಮಾನಿಗಳಲ್ಲಿ ಉಳಿದುಹೋಯಿತು.