ಬೆಳದಿಂಗಳ ಬಾಲೆ...

ಬೆಳದಿಂಗಳ ಬಾಲೆ...

ಬರಹ

ಅವತ್ತು ಭಾನುವಾರ...ಸಿಕ್ಕಾಪಟ್ಟೆ ಮಳೆ ಬಂದು ಸಂಜೆ ೬  ಗಂಟೆಗೆ ಒಳ್ಳೆ ೮  ಗಂಟೆಯ ಹಾಗೆ ಕತ್ತಲು ಆವರಿಸಿತ್ತು...ಆಗ ತಾನೇ ಮಳೆ ನಿಂತಿತ್ತು...

ಆಚೆ ಒಳ್ಳೆ ಹವೆ ಇತ್ತು...ಆ ಮಣ್ಣಿನ ವಾಸನೆ ಆಹ್ಲಾದಕರವಾಗಿತ್ತು...ಸರಿ ಹಾಗೆ ಒಂದು ಸುತ್ತು ಹಾಕಿಕೊಂಡು ಬರೋಣ ಎಂದು ಮನೆಯಿಂದ ನಡೆದೇ

ಹೊರಟೆ..

 

ಮನೆಯಿಂದ ಸ್ವಲ್ಪ ದೂರ ಬಂದು ರಸ್ತೆ ತಿರುವಿನಲ್ಲಿ ತಿರುಗಿದಾಗ ಕಂಡಳು ಅವಳು...ಅದೇಕೋ ಅವಳನ್ನು ಕಂಡ ಕೂಡಲೇ ನಾನು ಆಚೆ ಬಂದ

ಉದ್ದೇಶ ಮರೆತು ಅಲ್ಲೇ ನಿಂತುಬಿಟ್ಟೆ...ಕತ್ತಲು ಆವರಿಸಿದ್ದರಿಂದ ಅವಳ ಮುಖ ಅಸ್ಪಷ್ಟವಾಗಿ ಕಾಣುತ್ತಿತ್ತು. ಹತ್ತಿರ ಹತ್ತಿರ ಬರುತ್ತಿದ್ದ ಹಾಗೆ ಅವಳ ಮುಖ

ಸ್ಪಷ್ಟವಾಗಿ ಗೋಚರವಾಯಿತು...ಅವಳ ಸೌಂದರ್ಯ ಪೂರ್ಣ ಚಂದಿರನು ನಾಚಿ ನೀರಾಗುವ ಹಾಗಿತ್ತು...ಶುಭ್ರವಾದ ಬಿಳಿ ಸಲ್ವಾರ್ ಮೇಲೊಂದು 

ಕೆಂಪು ದುಪ್ಪಟ್ಟ ಹೊದ್ದು ತನ್ನ ಸ್ನೇಹಿತೆಯರ ಜೊತೆ ನಡೆದು ಬರುತ್ತಿದ್ದಳು.

 

ನೋಡು ನೋಡುತ್ತಿದ್ದ ಹಾಗೆ ನನ್ನೆಡೆಗೆ ಬರುತ್ತಿರುವಳೇನೋ ಎಂದು ಭಾಸವಾಯಿತು.. ಈಗ ಇನ್ನು ಹತ್ತಿರ , ಇನ್ನು ಹತ್ತಿರ ....ಬಂದು ನನ್ನ ಪಕ್ಕದಲ್ಲೇ

ಇದ್ದ ಪಾನಿ ಪೂರಿ ಅಂಗಡಿಯ ಬಳಿ ಬಂದರು...ಅಂಗಡಿಯ ಬೆಳಕಿನಲ್ಲಿ ಅವಳ ಮುಖ ಇನ್ನು ಸ್ಪಷ್ಟವಾಗಿ ಕಾಣಿಸುತ್ತಿತ್ತು...ಅಂತಿಂಥ ಸೌಂದರ್ಯ ಅಲ್ಲ 

ಅವಳದ್ದು...ಸುತ್ತ ಮುತ್ತ ಇದ್ದ ಎಲ್ಲ ಹುಡುಗರ ಕಣ್ಣು ಅವಳ ಮೇಲಿತ್ತು...ಅಂತ ಸ್ನಿಗ್ಧ ಸೌಂದರ್ಯ ಅವಳದ್ದು..ಮುದ್ದಾದ ಮುಖ, ಅತಿ ಸುಂದರವಾದ

ಕಣ್ಣುಗಳು, ಸಂಪಿಗೆಯಂತ ನೀಳ ಮೂಗು...ಕೆನ್ನೆಗೆ ಮುತ್ತಿಡುತ್ತಿದ್ದ ಆ ಮುಂಗುರಳು...ಅರಳು ಹುರಿದಂತೆ ಪಟ ಪಟನೆ ಮಾತನಾಡುವ ಅವಳ ಶೈಲಿ

ಎಲ್ಲ ನೋಡುತ್ತಾ ಇವಳೇ ಏನೋ ನಾನು ಇಷ್ಟು ದಿನದಿಂದ ಕಾಯುತ್ತಿದ್ದ ನನ್ನ ಸ್ವಪ್ನ ಸುಂದರಿ ಎಂದು ಅಲ್ಲೇ ನಿಂತು ನೋಡುತ್ತಿದ್ದೆ. ಅವಳು ಪಾನಿ ಪೂರಿ

ಮೆಲ್ಲುತ್ತ ಒಮ್ಮೆ ನನ್ನತ್ತ ನೋಡಿದಳು. ಅವಳನ್ನೇ ದಿಟ್ಟಿಸುತ್ತಿದ್ದ ನಾನು ಮುಜುಗರವಾಗಿ ತಕ್ಷಣ ಬೇರೆಡೆಗೆ ತಿರುಗಿದೆ.. ಹೀಗೆ ಎರಡು ಮೂರು ಬಾರಿ

ನನ್ನ ಮತ್ತು ಅವಳ ಕಣ್ಣುಗಳು ಮೌನವಾಗಿ ಮಾತನಾಡಿದವು...ನಾಲ್ಕನೇ ಬಾರಿ ಅವಳು ನನ್ನ ಕಂಡು ನಕ್ಕಂತಾಯಿತು...

 

ಅಷ್ಟರಲ್ಲಿ ಅವಳ ಕೈಲಿದ್ದ ತಟ್ಟೆ ಖಾಲಿ ಆಯಿತು...ಅವಳು ತಟ್ಟೆ ಕೆಳಗಿಟ್ಟು ಹೊರಡಲು ಅನುವಾದಳು...ಇತ್ತ ಬಾಲ ಸುಟ್ಟ ಬೆಕ್ಕಿನಂತಾಗಿತ್ತು ನನ್ನ

ಪರಿಸ್ಥಿತಿ....ಅವಳನ್ನು ಹೇಗಾದರೂ ಮಾತನಾಡಿಸಬೇಕೆಂಬ ಚಡಪಡಿಕೆ...ಆದರೆ ಅವಳು ಯಾರು ಏನು ಒಂದು ತಿಳಿಯದೆ ಹೇಗೆ ಮಾತನಾಡಿಸುವುದು...

ಒಂದು ವೇಳೆ ಮಾತನಾಡಿಸಿದರು ಅವಳ ಪ್ರತಿಕ್ರಿಯೆ ಹೇಗಿರಬಹುದು...ಅವಳ ಸ್ನೇಹಿತೆಯರ ಮುಂದೆ ಅವಮಾನ ಮಾಡಿದರೆ ಹೇಗೆ..ಒಂದು ವೇಳೆ

ಚೆನ್ನಾಗಿ ಮಾತನಾಡಿಸಿದರು ಏನೆಂದು ಮಾತನಾಡುವುದು...ಮೊದಲನೇ ನೋಟದಲ್ಲೇ ಪ್ರೇಮಾಂಕುರವಾಯಿತೆಂದು ಹೇಳಲೇ...ಒಂದು ವೇಳೆ ತಿರಸ್ಕರಿಸಿದರೆ..

ಹೇಗೆ ತಡೆದುಕೊಳ್ಳುವುದು....ಅಥವಾ ಒಪ್ಪಿಕೊಂಡುಬಿಟ್ಟರೆ ಮನೆಯಲ್ಲಿ ಏನೆಂದು ಹೇಳುವುದು....ಅಥವಾ ನನ್ನ ಸ್ವಪ್ನ ಸುಂದರಿಯನ್ನು ಮರೆತುಬಿಡಲೇ...

ಕೇವಲ ಐದಾರು ನಿಮಿಷಗಳಲ್ಲಿ ನನ್ನ ತಲೆಯಲ್ಲಿ ಯೋಚನೆಗಳ ನಾಗಾಲೋಟ ಶುರುವಾಗಿಬಿಟ್ಟಿತು...

 

ಕೊನೆಗೆ ನಿರ್ಧರಿಸಿದೆ....ಆದದ್ದಾಗಲಿ ಇವಳನ್ನು ಕಳೆದುಕೊಳ್ಳುವುದು ಬೇಡ ಎಂದು ಯೋಚಿಸಿ ಅವಳನ್ನು ಮಾತನಾಡಿಸಲು ಅವಳ ಹಿಂದೆ ಹೊರಟೆ...

ಎರಡು ಬಾರಿ ತಿರುಗಿ ನೋಡಿದಳು....ಮೂರನೇ ಬಾರಿ ತಿರುಗಿ ನೋಡಿ ನಿಂತಳು. ಇನ್ನೇನು ಅವಳನ್ನು ಮಾತಾಡಿಸಲು ಸಮೀಪಿಸಿದೆ...

ಅಷ್ಟರಲ್ಲಿ....

 

ಕೌಸಲ್ಯ ಸುಪ್ರಜಾ ರಾಮ ಪೂರ್ವ..ಸಂಧ್ಯಾ ಪ್ರವರ್ತತೆ...ಎಂದು ಸುಬ್ಬುಲಕ್ಷ್ಮಿಯವರ ಕಂಠ ಸಿರಿಯಲ್ಲಿ ಸುಪ್ರಭಾತ ಮೊಳಗಿತು...ಅಂದರೆ ನನ್ನ

ಸಂಚಾರಿ ದೂರವಾಣಿಯ ಅಲಾರಂ ಹೊಡೆದುಕೊಂಡಿತು....ತಕ್ಷಣ ಎದ್ದು ನನ್ನ ನಿತ್ಯ ಕಾಯಕಕ್ಕೆ ಹೊರಟೆ...

 

ನನ್ನ ಕನಸಿನ ಸುಂದರಿ...ಕನಸಾಗೆ ಉಳಿದಳು...