ಪ್ರೀತಿಸಿದರೆ.........!

ಪ್ರೀತಿಸಿದರೆ.........!

ಬರಹ

ಮೊನ್ನೆ ಸೋಮವಾರ ಆಫೀಸಿಗೆ ಹೋದಾಗ ನಂಗೆ  ಆಘಾತ ಕಾದಿತ್ತು..ನನ್ನ ಜೊತೇನೆ ಜಾಯಿನ್ ಆಗಿದ್ದ ಸ್ನೇಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು ..ಕಾರಣ  ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಮನೆಯವರು  ಒಪ್ಪಲಿಲ್ವಂತೆ ..ತಂದೆ ತಾಯಿಯ ಮೇಲಿನ ಸಿಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು ..!ಎತ್ತ ಸಾಗುತ್ತಿದೆ ಇಂತಹ ಕುರುಡು ಪ್ರೀತಿ.. ಇವಳಿಗೆ ನಾವು ಏನು ಕಮ್ಮಿ ಮಾಡಿದ್ದೇವೋ ಅನ್ನೋ ಅವಳ ಅಪ್ಪನ ಅಳು ಇನ್ನೂ ಕಿವಿಯಲ್ಲಿದೆ.. ಬಹುಶಃ ಅವರಿಗೆ ಗೊತ್ತಿರಲ್ಲಿಕ್ಕಿಲ್ಲ,  ಏನೂ ಕಮ್ಮಿ ಮಾಡಿಲ್ಲ ಆದ್ದರಿಂದಲೇ ಹೀಗಾಗಿದ್ದು ಅಂತ  ..ಮುದ್ದು ಸ್ವಲ್ಪ ಕಮ್ಮಿ ಮಾಡಿದ್ದಿದ್ದರೆ ಹೊರಗಿನ ಪ್ರೀತಿಯನ್ನು ಹೀಗೆ ಸತ್ತು ಹೋಗುವಷ್ಟು ಹಚ್ಚಿಕೊಂಡಿರುತ್ತಿರಲಿಲ್ಲವೇನೋ  .. ಸಾಮನ್ಯವಾಗಿ ಯಾವ ಪ್ರೀತಿ ಸಿಗೊದಿಲ್ಲವೋ ಅದನ್ನೇ ಹುಡುಕಿಕೊಂಡು ಹೋಗುತ್ತದೆ ಮನಸ್ಸು..ಹೆತ್ತವರ ಪ್ರೀತಿ ಸ್ವಲ್ಪ ಕಡಿಮೆಯಾಗಿದ್ದರೆ ಮನಸ್ಸು ಅದಕ್ಕೆ ಹಾತೊರೆಯುತಿತ್ತೇನೋ..!

 

ಮೊದಲೆಲ್ಲ ಪ್ರೀತಿ ಪ್ರೇಮಕ್ಕೆ ಅದರದೇ ಆದ ಅರ್ಥ, ವ್ಯಾಖ್ಯಾನ ಇದ್ದಿತ್ತು ...ಪವಿತ್ರ ಪ್ರೇಮದ ಹಿನ್ನಲೆಯಲ್ಲಿ ಅದೆಷ್ಟೋ ದಂತ ಕಥೆಗಳಿವೆ ,ಗ್ರಂಥಗಳಿವೆ .ಮರೆಯಲಾಗದ ಹಾಡುಗಳಿವೆ ,ಶ್ರೇಷ್ಠ ಚಿತ್ರ ಗಳಿವೆ, ಅದ್ಭುತ ಸ್ಮಾರಕಗಳಿವೆ  ... ಪ್ರೀತಿಸಿ ಅವರನ್ನು ಪಡೆಯುವ ಅಥವಾ ಅದರ ಅಡೆ ತಡೆಗಳನ್ನು ಎದುರಿಸುವ ಅಥವಾ ಅಳಿದು ಅಮರರಾದ ಹಿನ್ನಲೆಗಳವು..ಈಗಿನ ಪ್ರೀತಿಯೋ ಅದರ ಸ್ಥಿತಿಯೋ ಅವರಿಗೆ ಪ್ರೀತಿಯಾಗಬೇಕು.. ಪ್ರೀತಿ  ಅಂದರೆ ದಿನಕ್ಕೊಂದು ಕಡೆ ಪಾರ್ಕು ,ಸಿನೆಮಾ, ಔಟಿಂಗ್, ಡೇಟಿಂಗ್ ಅಂತ ಬಾಯ್ ಫ್ರೆಂಡ್ಸ್ /ಗರ್ಲ್ ಫ್ರೆಂಡ್ಸ್ ಗಳೊಂದಿಗೆ ಸುತ್ತಾಡಿ ,ರಾತ್ರಿ ಇಡೀ ಚಾಟ್ ಮಾಡಿ ಇನ್ ಬಾಕ್ಸ್ ಗೆ  ಮಿಸ್ ಯು ಗಳನ್ನು ಕಳಿಸೋದಾ?,ಕಾಲೇಜಲ್ಲೋ ಅಥವಾ ಆಫಿಸಲ್ಲೋ ಹಿಂದಿನ ಸಲದ ಮಾತು ,ನೋಟ,ಸ್ಪರ್ಶ, ಚಿಕ್ಕ ಜಗಳ ಗಳ ನೆನಪಿಸಿಕೊಳ್ಳುತ್ತಾ  ಮೊಬೈಲಿನ  ಸ್ಕ್ರೀನ್ ಸೇವೆರ್ ನಲ್ಲಿನ ಅವರ ಫೋಟೋವನ್ನೇ ನೋಡೋದಾ? ಅಥವಾ ಊಟ ನಿದ್ದೆಯ ಪರಿವೆ ಇರದೇ ಅವರನ್ನೇ ಧ್ಯಾನಿಸುತ್ತ ಕೂರೋದಾ ?

 

ಇನ್ನೊಂದು ನನಗೆ ಅರ್ಥವಾಗದ ವಿಷಯ."ಲವ್ ಅಟ್ ಫಸ್ಟ್ ಸೈಟ್ " ಅನ್ನೋದು ..ಹಾಗಂದ್ರೇನು ? ಮೊದಲ ನೋಟಕ್ಕೆ ಪ್ರೀತಿ ಮೊಳೆತು ಬಿಡುತ್ತಾ? ಹಾಗಾದ್ರೆ ಒಂದ್ವೇಳೆ ಅವರಿಗೆ ಮದುವೆ ಆಗಿದ್ದಿದ್ರೆ ????!( ಯಾಕೆಂದರೆ ಇಲ್ಲಿ ಮದುವೆ ಆದವರಿಗೂ ಆಗದೆ ಇರುವವರಿಗೂ ವ್ಯತ್ಯಾಸವೇ ಕಾಣಿಸಲ್ಲ,.) ಹಾಗೇನಾದರೂ ಆದರೆ ಮೊಳೆತ ಪ್ರೀತಿ ಮತ್ತೆ ಮಾಯವಾಗಿಬಿಡುತ್ತ? ಅಥವಾ ಕೊನೆಯವರೆಗೂ ಕಾಡುತ್ತಲೇ ಇರುತ್ತಾ? ಬಲ್ಲವರೇ ಗೊತ್ತಿದ್ದರೆ ತಿಳಿಸಿ :) 'ಅವಳನ್ನು ನೋಡಿದ ಕೂಡಲೇ ಮರುಳಾಗಿಬಿಟ್ಟೆ ..ರಾತ್ರಿ ಇಡೀ ಅವಳ ಮುಖವೇ ಎದುರಿಗೆ ಬರ್ತಿತ್ತು ..ಇವತ್ ಎಲ್ಲಿ ಸಿಕ್ಕಿದ್ಲೋ ನಾಳೆನೂ ಅಲ್ಲೇ ಹೋಗ್ಬೇಕು..ಪ್ರೊಪೋಸ್ ಮಾಡ್ತೀನಿ' ಅಂತ ನನ್ನ ಇನ್ನೊಬ್ಬ ಸಹೋದ್ಯೋಗಿ ಅವತ್ತು ನೋಡಿದ್ದ ಹುಡುಗಿ ಬಗ್ಗೆ ಹೇಳ್ತಿದ್ದ..ನಾನು ಹೌದೇನೋ ಆಲ್ ದಿ ಬೆಸ್ಟ್ , ಆದ್ರೆ ಅವಳಿಗೆ ಮದುವೆ ಆಗಿದ್ಯೋ ಇಲ್ವೋ ಗೊತ್ತ ಅಂತ ಕೇಳಿದ್ರೆ ತಾಳಿ ಕಾಲುಂಗುರ ಇರ್ಲಿಲ್ಲ ಅಂದ..ಮಗನೆ, ಇದು ಬೆಂಗಳೂರು. ಇಲ್ಲಿ ಎಲ್ಲರೂ ಅವನ್ನೆಲ್ಲಾ  ಹಾಕ್ಕೊಳ್ಳೋದಿಲ್ಲ ಅಂತ ಪಕ್ಕದಲ್ಲಿದ್ದ ಟೀಂ ಲೀಡರ್ ಹೇಳಿದಾಗ  ಇವನ ಮುಖ ಪೆಚ್ಚಾಗಿತ್ತು. .

 

ಇರಲಿ, ವಿಷಯಕ್ಕೆ ಬರೋಣ ,ಸಿಗದ ಪ್ರೇಮಿಗಾಗಿ ನಡೆದ ಹಾಗೂ ನಡೆಯುತ್ತಿರುವ ಕೊಲೆ , ಆತ್ಮ ಹತ್ಯೆಗಳು ,ನಮಗೆ ಹೊಸ ವಿಷಯವೇನಲ್ಲ. ಮನೆಯಲ್ಲಿ ಯಾರ ಮಾತು ಕೇಳದಿದ್ದರೂ ಪ್ರೀತಿಗಾಗಿ ತಮ್ಮ ದಿನಚರಿ, ಮಾತಿನ ವೈಖರಿ, ಜೀವನ ಶೈಲಿ ಬದಲಾಯಿಸಿಕೊಂಡವರೆಷ್ಟೋ .. ಫಾಲಿತಾಂಶ ಸುಖಾಂತವಾದರೆ ಸಂತೋಷವೇ ….ಆದರೆ ಹತ್ತವರಿಗೆ ನೋವು ಕೊಡದೆ ಪ್ರೀತಿಯನ್ನು ಪಡೆದುಕೊಂಡ ಉದಾಹರಣೆಗಳು ನಮ್ಮಲ್ಲಿ  ತುಂಬಾ ಕಮ್ಮಿ. ನಮ್ಮ ಲೈಫ್ ನಮ್ಮಿಷ್ಟ ಅಂತ ಪ್ರೀತಿಸಿ ಮುಂದೊಂದು ದಿನ ಏನಾದರೂ ತೊಂದರೆ ಬಂದಾಗ ಸಂತೈಸುವ ಹಿರಿಯರಿರದಿದ್ದಾಗ,ಆಗ ತಿಳಿಯುತ್ತದೆ ಜೀವನ ಎಂದರೇನೆಂದು!

 

ಪ್ರೇಮಿಯ ಕಣ್ಣೀರಿಗೆ ಕರಗಿಬಿಡುವ ಇವರ ಹೃದಯಕ್ಕೆ ಮನೆಯವರ ದುಃಖದ ಅರಿವಾಗುವುದಿಲ್ಲ .ಪ್ರೀತಿಸಿ ಮನೆಯಿಂದ ದೂರಾಗಿ ಬೇರೆಯೇ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಮನೆಯವರು ಅನುಭವಿಸಬಹುದಾದ ನೋವಿನ ನೆನಪಾಗದಷ್ಟು ಸ್ವಾರ್ಥವೇ ಪ್ರೀತಿಅನ್ನೋದು ? ಸ್ವಾರ್ಥ ಇದ್ದರೆ ಅದು ಪ್ರೀತಿ ಹೇಗಾಗತ್ತೋ ..? ಕೇಶವ ರೆಡ್ಡಿ ಹಂದ್ರಾಳರ ಕಥೆಯಲ್ಲಿ  ಓದಿದ ನೆನಪು "ವಯಸ್ಸು ಮತ್ತೊಂದಷ್ಟು ದಿನದ ಭ್ರಮೆ ಕಳಚಿದ ಕೂಡಲೇ ವಾಸ್ತವ ಅಸಹ್ಯವಾಗಿಬಿಡುತ್ತೆ."…ನನ್ನ ನಿಲುವಿಗೆ ತೀವ್ರ ವಿರೋಧ ವ್ಯಕ್ತ ಪಡಿಸುವ ನನ್ನ ಗೆಳತಿ ಹೇಳೋದು, 'ಹೀಗೆ ಪ್ರೀತಿ ಸುಳ್ಳು ಪೊಳ್ಳು ಅಂತ ಹೇಳೋರೆ ಕೊನೆಗೊಂದು ದಿನ ಲವ್ ಮ್ಯಾರೇಜ್ ಆಗೋದು' ಅಂತ... ಸರಿ ಹೋಯ್ತು !ಲವ್ ಮ್ಯಾರೇಜ್ ಆಗಬೇಡಿ ಅಂತ ಯಾರ್ರೀ ಹೇಳಿದ್ದು ??ಪ್ರೀತಿಸಿ,. ಯಾರೂ ಬೇಡ ಅನ್ನೋಲ್ಲ .. ಈ ಜಗತ್ತೇ ಪ್ರೀತಿಯ , ನಂಬಿಕೆಯ ಮೇಲೆ ನಿಂತಿದೆ...ಆದರೆ ಅದರೊಂದಿಗೆ ನಿಮ್ಮನ್ನು ಪ್ರೀತಿಸುವ ನಿಮ್ಮ ಮನೆಯವರನ್ನೂ ಪ್ರೀತಿಸಿ..... ಸಾಕಿದವರಿಗೆ ನೋವು ಕೊಟ್ಟು ಓಡಿ ಹೋಗಬೇಡಿ ಅಥವಾ ಸಿಗದ ಪ್ರೀತಿಗಾಗಿ ಪ್ರಾಣ ತರಬೇಡಿ ಅಷ್ಟೇ ..ನೀವೇನಂತೀರಿ??