ನನ್ನ ಕಾಂತಿಯೇ...

ನನ್ನ ಕಾಂತಿಯೇ...

ಬರಹ

ನನ್ನ ಕಾಂತಿಯೇ...


          ಅರ್ಥಶಾಸ್ತ್ರ"ದ ಉಪನ್ಯಾಸ ಅರ್ಥವಾಗದೇ ಕಿಟಕಿಯೆಡೆಯಿಂದ ಬದಿಯಲ್ಲಿದ್ದ ಕೆಮಿಸ್ಟ್ರಿ ಲ್ಯಾಬ್‌ಗೆ ನೀನಿಟ್ಟ ಆ ಕುಡಿನೋಟ... ನಿರ್ಭಾವುಕನಾಗಿ ಕೂತು ಭಟ್ಟಿ ಇಳಿಸುತ್ತಿದ್ದ ನನ್ನೊಳಗೆ ಒಮ್ಮೆಲೆ ಭಾವಗಳ ಕುದಿತ... ಅರಿವಿಲ್ಲದೇ ಬಿಸಿ "ಬರ್ನರ್" ಮುಟ್ಟಿ ನಾ ಕೈ ಸುಟ್ಕೊಂಡಿದ್ದು... ಅತ್ತ ಇಡಿ ಕ್ಲಾಸಿಗೇ ಕೇಳಿಸುವಂತೆ ನೀ ನಕ್ಕಿದ್ದು... "ಸೈಂಸ್-ಕಾಮರ್ಸ್" ಮಿಶ್ರಣವಾಗಿದ್ದ ನಮ್ಮ ಗೆಳೆತನ ಶುರುವಾದದ್ದು ಇಲ್ಲೇ... ನೆನಪಿದೆಯಲ್ಲಾ? "ನೋಯ್ತಿದೆಯಾ" - ನೀ ಬಂದು ಕೇಳಿದ್ದಾಗ ರಸಾಯನ ಶಾಸ್ತ್ರದ ವಿದ್ಯಾರ್ಥಿಯಾದ ನಾನು ಆ ನೋವಿನಲ್ಲೂ ಸಿಹಿ ರಸಾಯನ ಸವಿದಂತೆ ಖುಷಿಪಟ್ಟಿದ್ದೆ.


       ದಿನಕ್ಕೊಂದು ಬಣ್ಣದ ಗುಲಾಬಿ ಹೂ ಮುಡಿದು ಬರುತ್ತಿದ್ದ ನಿನ್ನ ಆ "ರೋಸ್ ಕ್ವೀನ್" ಗೆಳತಿಯ ಪರಿಚಯ ನನಗೆ ಮುಂಚಿನಿಂದಲೇ ಇತ್ತು ಕಣೇ... ಆದ್ರೂ ಬೇಕ್‌ಬೇಕೆಂದೇ ಅವಳ ಪರಿಚಯ ಮಾಡ್ಸಿ ಕೊಡು ಅಂದಿದ್ದಿಕ್ಕೆ ಸುಖಾಸುಮ್ನೆ ಅವ್ಳೊಂದಿಗೆ ಜಗಳಕ್ಕಿಳಿದು "ನಾನವ್ಳ ಗೆಳತಿಯೇ ಅಲ್ಲ" ಅಂತ ಪ್ರೂವ್ ಮಾಡಿದ್ದೆ. ನಿನ್ಗೆ ನನ್ ಮೇಲಿದ್ದ "ಪೊಸೆಸ್ಸಿವ್‌ನೆಸ್" ಕೂಡಾ ಆವಾಗಲೇ ಸಾಬೀತಾಗಿಹೋಗಿತ್ತು.


       ಸತಾಯಿಸುವುದ್ರಲ್ಲಿ ನೀನೆಲ್ಲಿ ಹಿಂದೆ!!. "ಇದು ನನಗೆ ಗೆಳೆಯನೊಬ್ಬ ಕೊಟ್ಟ ಗಿಫ್ಟ್, ಮನೆಗೆ ಕೊಂಡೊಯ್ಯಲಾರೆ, ನಿನ್ ರೂಮಲ್ಲಿಟ್ಕೊಳ್ತಿಯಾ" ಅಂತಂದು ಪುಟ್ಟ "ತಾಜ್ ಮಹಲ್" ಗಿಫ್ಟ್ ನನ್ನ ಕೈಗೊಪ್ಪಿಸಿದ್ದಾಗ ನಾ ಪಟ್ಟ ಸಂಕಟ ಅಷ್ಟಿಷ್ಟಲ್ಲ. ಅರೆ! ಯಾರಿವನು? ನನ್ನ ಗೆಳತಿಗೆ ಪಾರಿತೋಷಕಗಳನ್ನು ಕೊಟ್ಟು ಪ್ರೇಮ ಪಾಶದಲ್ಲಿ ಬೀಳಿಸಲು ಪ್ರಯತ್ನಿಸುತ್ತಿರುವ "ಪ್ರೇಮ್ ಚೋಪ್ಡಾ"?! ಮೈಗೆಲ್ಲಾ ಯಾರೋ "ಸಲ್ಫ್ಯೂರಿಕ್ ಆಮ್ಲ" ಸುರಿದಂತೆ ಕೆಂಡಮಂಡಲವಾಗಿದ್ದೆ. ಕಾಲೇಜಿನೆದುರಿದ್ದ ಗಿಫ್ಟ್ ಅಂಗಡಿಯ ಅಜ್ಜ, ತನ್ನಲ್ಲಿದ್ದ ಏಕೈಕ ತಾಜ್ ಮಹಲ್ ಕೊಂಡವಳು "ನೋಡೋಕೆ ತುಂಬಾ ಲಕ್ಷಣವಾಗಿದ್ಲು" ಹೇಳ್ತಾ ಅವ್ನ ಕೃತಕ ಹಲ್ಲುಗಳ ಸೆಟ್‌ನ ದರ್ಶನ ಮಾಡಿಸಿದ್ದಾಗ್ಲೇ ಅದು ನೀನೆಂದು ಖಾತ್ರಿಯಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆ.


ಕಳೆದ ಆರು ತಿಂಗಳಿನಲ್ಲಿ ಇಂತಹಾ ಹಲವು "ಪ್ರೇಮ ಪ್ರಯೋಗ"ಗಳನ್ನು ನಮ್ಮ ಮನದ ಲ್ಯಾಬ್‌ನಲ್ಲಿ ನಡ್ಸಿದ್ದೇವೆ ಬಿಡು...


       ನೀವಿಬ್ರು ಬರೇ ಗೆಳೆಯರಲ್ಲ" ಅಂತ ವಿಜ್ನಾನಿಯಾಗಬಯಸುವ ನನ್ನ ಗೆಳೆಯ, ಅವನ ಮೊದಲ ಆವಿಷ್ಕಾರದಂತೆ ಹೇಳ್ತಿದಾನೆ. "ಸೈಂಸ್-ಕಾಮರ್ಸ್ ಓದುವ ನೀವಿಬ್ರು ಲೈಬ್ರೆರಿಯಲ್ಲಿ ಯಾವ ಕಂಬೈಂಡ್ ಸ್ಟಡಿ ಮಾಡ್‌ತೀರಾ?" ಅನ್ನೋದು ಕಾನೂನು ಕಲಿಯುತ್ತಿರುವ ಗೆಳತಿಯೊಬ್ಬಳ ವಾದ.

       



ದ್ರವ, ಅನಿಲ, ಘನ ಧಾತುಗಳಲ್ಲಿನ ಗುಣಲಕ್ಷಣಗಳನ್ನರಿಯುವ ಅನುರಕ್ತಿಯುಳ್ಳವನು ನಾನು. ಮೈಕ್ರೋ ಇಕಾನಮಿಕ್ಸ್, ಮ್ಯಾಕ್ರೋ ಇಕಾನಮಿಕ್ಸ್ ಅಂತೆಲ್ಲಾ ಆಧುನಿಕ ಕೌಟಿಲ್ಯನೀತಿಗಳ ಗುಂಗಿನಲ್ಲಿರುವವಳು ನೀನು. ಒಂದು ದ್ರವ, ಪ್ರತಿಕೂಲ ಗುಣಲಕ್ಷಣವಿರುವ ಇನ್ನೊಂದು ದ್ರವದೊಂದಿಗೆ ಬೆರೆತು ಒಂದು ಹೊಚ್ಚ ಹೊಸ ಮಿಶ್ರಣವಾಗಿ ಅದು ಪಡೆದುಕೊಳ್ಳುವ ಶಕ್ತಿ, ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ಓದುತ್ತಾ ನಮ್ಮಿಬ್ಬರನ್ನು ಅವುಗಳಿಗೆ ಹೋಲಿಸಿಕೊಳ್ಳುತ್ತಾ ನಾವಿಬ್ಬರು ಕೂಡಿ ಬಾಳೋ ಬಗ್ಗೆ ನಾ ಕಾಣ್ತಿರೋ ಕನಸುಗಳಿಗೆ ಅರ್ಥವಿದೆಯೇ? ನೀನೇ ಅದಕ್ಕುತ್ತರ ನೀಡ್ಬೇಕು...


        ಪ್ರೀತಿ, ಭಾವನೆಗಳಿಗೂ ನಿಲುಕದ ಏನೋ ಅನುಭೂತಿಯಂತೆ!!. ವಿಜ್ಞಾನ ಕಲಿಯುತ್ತಿರೋ ನಂಗೆ ಅದನ್ನ ಹೇಗೆ ಹೇಳ್ಕೊಳ್ಳೋದಂತ ಅರ್ಥವಾಗದೆ ನೀರಿಗೆ ಹಾಕಿದ "ಸೋಡಿಯಂ"ನಂತೆ ಚಡಪಡಿಸುತ್ತಿದ್ದೇನೆ... ಆಮ್ಲ-ಕ್ಷಾರದ ಪ್ರಮಾಣ ಅಳೆಯಲು ನಮ್ಮಲ್ಲಿರುವ "ಲಿಟ್ಮಸ್ ಟೆಸ್ಟ್"ನಂತೆ ಮನಸ್ಸಿನಲ್ಲಿರುವ ಪ್ರೀತಿಯನ್ನೂ ಅಳೆಯಲು ಒಂದು ಟೆಸ್ಟ್ ಇರ್ತಿದ್ರೆ ಎಷ್ಟು ಚೆನ್ನಾಗಿರ್ತಿತ್ತಲ್ವಾ... ಹೃದಯಕ್ಕೊಂದು ಲಿಟ್ಮಸ್ ಇಟ್ಟು ಅದ್ರಲ್ಲಿ ತುಂಬಿರೋ ನನ್ನ ಪ್ರೀತಿಯ ಬಣ್ಣ ನಿಂಗೆ ತೋರಿಸಿ ನನ್ನ ಪ್ರೀತಿ ಹೇಳಿಕೊಳ್ಳಬಹುದಿತ್ತು. ಆದ್ರೆ ಆ ರೀತಿ ಯಾವ ಸೌಲಭ್ಯವೂ ಅದಕ್ಕಿಲ್ವಲ್ಲಾ...


ಆದ್ರೂ...


     ಮುಂದೆ ಅರ್ಥ ವ್ಯವಸ್ಥೆ, ಬೆಲೆಯೇರಿಕೆ, ಹಣದುಬ್ಬರಗಳನ್ನೆಲ್ಲಾ "ಕಂಟ್ರೋಲ್" ಮಾಡ್ಬೇಕಾಗಿರೋ ನೀನು ಈ ರಸಾಯನ ಶಾಸ್ತ್ರಜ್ಞನ ಬಾಳ ದೋಣಿಯನ್ನೂ ನಿಯಂತ್ರಿಸಬೇಕೆಂಬ ಪುಟ್ಟ ಆಸೆ ಅವನಿಗೆ... ನೀನೊಪ್ಪಿದ್ರೆ ಆ "ಪ್ರೋಟಾನ್" ಸುತ್ತ ತಿರುಗೋ "ಇಲೆಕ್ಟ್ರಾನ್"ನಂತೆ ಬೇರೆ ಯಾರ ಹಂಗಿಲ್ಲದೆ ನಿನ್ನ ಸುತ್ತ ಇಡೀ ಜೀವನ ಪ್ರದಕ್ಷಿಣೆ ಹಾಕುವೆ. ನಿನ್ನ ಬಾಳಿನ ಖುಷಿಗಳಿಗೆ ದುಃಖದ "ತುಕ್ಕು" ಹಿಡಿಯದಂತೆ ಸದಾ ರಕ್ಷಿಸುವೆ. ನಿನ್ನ ಜೀವನದಲ್ಲೆಂದೂ ಪ್ರೀತಿಯ "ರಿಸೇಷನ್" ಬರದಂತೆ ನನ್ನೊಲವನು ಬಡ್ಡಿರಹಿತವಾಗಿ ಧಾರೆಯೆರೆಯುವೆ. ನನ್ನ ಪ್ರೀತಿಯಿಂದ ನಿನ್ನ ಬಾಳಲ್ಲಾಗುವ "ಪ್ರಾಫಿಟ್"ನ ಗ್ರಾಫ್ ಎಂದೂ ಕೆಳಮುಖವಾಗದಂತೆ ಶ್ರಮಪಡುವೆ...

 



ನನ್ನೆದೆಯಾಳದ ಭಾವಗಳು ಭಟ್ಟಿ ಇಳಿದು ಒಂದು ಶುಭ್ರ, ನಿಷ್ಕಲ್ಮಷ ಒಲವ ನದಿಯಾಗಿ ನಿನ್ನೆಡೆ ಹರಿಯ ಹೊರಟಿದೆ... ಅದಕ್ಕೆ ನಿನ್ನೊಲವಿನ ಸಾಗರದಲ್ಲಿ ಲೀನವಾಗಲು ಅನುಮತಿಸುವೆಯಾ? ಮನಸು, ಮನಸಾರೆ ಮಾಡಿದ ಮನದಾಳದ ಮನವಿಯನು ಮನ್ನಿಸುವೆಯಾ?


ನಾಡಿದ್ದು ನನಗೆ ಕೆಮಿಸ್ಟ್ರಿ ಲ್ಯಾಬ್‌, ನಿನಗೆ ಇಕಾನಮಿಕ್ಸ್ ಕ್ಲಾಸ್... ಅದೇ ಕಿಟಕಿ...

 


 


 



                                             ಇತೀ...


ನಿನ್ನೊಲವಿನ ಸೆಳೆತಕ್ಕೆ ಸಿಕ್ಕಿ ಪೇಚಾಡುತ್ತಿರುವ


ನಿನ್ನ ಅಯಸ್‌-"ಕಾಂತ".