ಗೌಡಪ್ಪನ ಸೈಕಲ್ ರೇಸ್

ಗೌಡಪ್ಪನ ಸೈಕಲ್ ರೇಸ್

ಬರಹ

ಬೆಳಗ್ಗೆನೇ ಸುಬ್ಬ, ಹೊಸಾ ಸೈಕಲ್ ತೊಳೀತಾ ಇದ್ದ. ಅಟೊತ್ತಿಗೆ ಗೌಡಪ್ಪ ಬಂದೋನು, ಲೇ ಸುಬ್ಬ ಸೈಕಲ್್ಗೆ ಏನ್ಲಾ ಕೊಟ್ಟೆ. ಕಾಸು ಅಂದ ಸುಬ್ಬ. ಅದು ನನಗೂ ಗೊತ್ತು. ಎಷ್ಟು ಕೊಟ್ಟೆ ಹೇಳಲಾ ಬಡ್ಡೆ ಐದನೆ. 2ಸಾವಿರ ಆತು. ಸೀಟಿಗೆ ಅಂಗೇ ಗಾಲಿಗೆ ಎಕ್ಸ್್ಟ್ರಾ ಅಂದ ಸುಬ್ಬ. ಅಲ್ಲ ಕಲಾ ಸೈಕಲ್ ತಗೊಂಡು ಮ್ಯಾಕೆ ಗಾಲಿ ಫ್ರೀ ಅಲ್ವೇನ್ಲಾ. ಗಾಳಿ ಮಾತ್ರ ಫ್ರೀ ಗಾಲಿಗೆ ಕಾಸು ಕೊಡಬೇಕು ಅಂದ ಸುಬ್ಬ. ಹೋಗಲಿ ಒಂದು ರವಂಡ್ ಹೋಗಿ ಬರ್ತೀನಿ ಕೊಡ್ಲಾ ಅಂದೋನೆ ಗೌಡಪ್ಪ ಸ್ಟಾಂಡು ತೆಗಿದೇ ಓಡಿ ಬಂದು ಹಾರು ಕುಂತ. ರಭಸಕ್ಕೆ ಸ್ಟಾಂಡು ಅಂಗೇ ಮುರಿದೇ ಹೋತು. ಸೀಟು ಮುಂದಕ್ಕೆ ಜಾರಿದ್ದಕ್ಕೆ ಹೋಗಿ ಮಗಾ ಬಾರ್ ಮೇಲೆ ಕುಂತಿದ್ದ. ಸ್ಪೀಡಾಗಿ ಹೋದ. ಅಡ್ಡ ಹಂದಿ ಬತ್ತಿದ್ದಾಗೆನೇ ಅಂಗೇ ಚೆರಂಡಿ ಮೂಲ್ಯಾಗೆ ಕಿಸ್ಕಂಡಿದ್ದ. ಲೇ ಹೊಸಾ ಸೈಕಲ್್ ಅಂತ್ಯಾ ಬ್ರೇಕ್ ಹಿಡಿಯಲ್ವಲ್ಲೋ ಅಂದಾ ಗೌಡಪ್ಪ. ಏ ಈಗ ತಾನೇ ತೊಳಿದೀವ್ನಿ. ರಿಮ್ ಹಸಿ ಆಗಿದ್ದಕ್ಕೆ ಬ್ರೇಕ್ ಹಿಡಿದಿಲ್ಲಾ ಅಂತಾ ಕಾಣ್ತದೆ ಅಂದ ಸುಬ್ಬ, ಅಯ್ಯೋ ನಿನ್ ಮಕ್ಕೆ ಸಗಣಿ ಹುಯ್ಯಾ.
ಕಡೆಗೆ ಗೌಡಪ್ಪನ್ನ ಎತ್ಕಂಡು ಬಂದು ಸುಬ್ಬನ ಮನೆತಾವ ಹಾಕಿದ್ದಾತು. ಲೇ ನಿಂದು ಹಳೇ ಸೈಕಲ್ ಎಲ್ಲಲಾ ಅಂದ ನಿಂಗ, ಲೇ ಅದು ಯಡೂರಪ್ಪ ಹೈಕ್ಳಿಗೆ ಅಂತಾ ಕೊಟ್ಟಿರೋದು, ಮಗನೇ ಅದರಲ್ಲಿ ಕಟ್ಟಿಗೆ ಸಾಗಿಸ್ತೀಯಾ ಅಂತಾ ಸಾಲೆಯೋರು ವಾಪಸ್ ಇಸ್ಕಂಡ್ರಲಾ ಅಂದ ಸುಬ್ಬ,. ಏ ಥೂ.


ನೋಡ್ರಲಾ ಈ ಬಾರಿ ದಸರಾಕ್ಕೆ ಅಂತಾ ಸೈಕಲ್ ಕಾಂಪಿಟೇಸನ್ ಮಡಿಗಿದೀನಿ. ಅದ್ರಾಗೆ ಯಾರು ಫಸ್ಟ್ ಬತ್ತಾರೆ ಅವ್ರಿಗೆ ನಂದು ಅರ್ಧ ಎಕರೆ ತೋಟ ಕೊತ್ತೀನಿ ಕನ್ರಲಾ ಅಂದ ಗೌಡಪ್ಪ,. ಸರಿ ಮಾರನೆ ದಿನದಿಂದ ಭಾಷಾನ ಸೈಕಲ್ ಅಂಗಡೀಲಿ ಎಲ್ರೂ ಸೈಕಲ್ ತಗೊಂಡು ಗಂಟೆ ಗಟ್ಟಲೆ ಹೊಡೆಯೋದೆಯಾ. ಕಿಸ್ನ ಚೆಡ್ಡಿ ಹಾಕ್ಕೊಂಡು ಭಾಷಾನ ಸೂಕಲ್ ಹೊಡೀತಾ ಇದ್ದ, ಅಲ್ಲೇ ಇದ್ದ ಮೇಸ್ಟ್ರು ಸಾಲೆ ಬಿಟ್ಟು ತಿರುಗ್ತೀಯಾ ಅಂತಾ ಎರಡು ಬಿಟ್ಟು ಸಾಲೆಗೆ ಕರ್ಕಂಡು ಹೋಗಿದ್ರು. ಕಡೆಗೆ ಗೌಡಪ್ಪ ನಮ್ಮ ಕಟ್ಟಿಗೆ ಒಡೆಯೋನು ಅಂದ್ ಮ್ಯಾಕೆ ಬಿಟ್ಟು ಕಳಿಸಿದ್ರು.
ಸೈಕಲ್ ಅಂಗಡಿ ಭಾಷಾ ಗಂಟೆಗೆ 10ರೂಪಾಯಿ ಮಾಡಿದ್ದ. ಮಗಾ ಸುಬ್ಬ ಅವನಿಗೆ ಟೇಂ ಕನ್ಫೂಸ್ ಮಾಡಿ 5ರೂಪಾಯಿ ಕೊಟ್ಟಿ ಬರೋನು. ನಮ್ಮ ಕಡೆಯಿಂದ ಒಂದು ವರ್ಸ ದುಡಿಯೋದನ್ನ ಒಂದೇ ವಾರದಾಗೆ ದುಡಿದು ಎರಡು ಹೊಸಾ ಸೆಕೆಂಡ್ ಹ್ಯಾಂಡ್ ಸೈಕಲ್ ತಂದಿದ್ದ. ಅದೂ ಯಡೂರಪ್ಪನ ಸೈಕಲ್,  ಇಸ್ಮಾಯಿಲ್ ಡ್ಯೂಟಿ ಮುಗಿದ ಮ್ಯಾಕೆ ಸೈಕಲ್ ಹೊಡೆಯೋಕೆ ಬರೋನು. ಮಗಾ ಅದ್ರಾಗೂ ಸ್ಪೀಡ್. ಅಂಗಾಗಿ ಭಾಷಾ ಇವನಿಗೆ ಗಂಟೆಗೆ 20ರೂಪಾಯಿ ತಗಳೋನು. ಯಾಕಲಾ. ನಾನು ಸೈಕಲ್ ನಿಲ್ಸಿದ್ ಮ್ಯಾಕೆ ಪಾರ್ಟ್ಸ್ ಒಂದೊಂದಾಗೆ ಉದುರುತ್ತದೆ ಅಂತೆ ಕಲಾ ಅಂದ ಇಸ್ಮಾಯಿಲ್. ಅದಕ್ಕೆ ಭಾಷಾ ರಾತ್ರಿ ಎಲ್ಲಾ ಚೆಕ್ ಮಾಡೋನಂತೆ.
ದೊನ್ನೆ ಸೀನ ಡಲ್ ಆಗಿ ಬರ್ತಾ ಇದ್ದ. ಯಾಕಲಾ. ಲೇ ಭಾಷಂಗೆ 200ರೂಪಾಯಿ ಕೊಟ್ಟೆ ಕಲಾ. ಯಾಕಲಾ. ಲೇ ಬರೋ ಬೇಕಾದ್ರೆ ಎಲ್ಲೋ ಚೈನ್ ಕಳಚಿ ಹೋಗಯ್ತೆ ನೋಡೇ ಇರ್ಲಿಲ್ಲ. ಸೈಕಲ್ ಸಾಪ್್ಗೆ ಬಂದು ನೋಡಿದ್ರೆ ಚೈನೇ ಇರ್ಲಿಲ್ಲ ಕಲಾ. ಪೆಡ್ಲ್ ಮಾತ್ರ ರೊಯ್ ಅಂತಾ ತಿರುಗ್ತಾನೆ ಇತ್ತು ಅಂದ ಸೀನ. ಏ ಥೂ. ಇವನ ಸೈಕಲ್ ಚೈನನ್ನು ರಾಜಮ್ಮ ನಾಯಿಗೆ ಕಟ್ಟಿದ್ಲು. ಏ ಥೂ, ಎಲ್ಲರೂ ಸೈಕಲ್ ಬಿಟ್ಟ ಮೇಲೂ ಸೈಕಲ್ ಹೊಡೆದಂಗೆ ಆಕ್ಸನ್ ಮಾಡೋರು, ಯಾಕ್ರಲಾ. ಲೇ ಮಂಡಿ ಅಡ್ಜಸ್ಟ್ ಆಗ್ ಬೇಕು ಕಲಾ ಅನ್ನೋವು. ಗೌಡಪ್ಪ ಮಕ್ಕಂಡಾಗ್ಲೂ ಸೈಕಲ್ ಹೊಡೆಯೋ ತರಾನೇ ಮಾಡ್ತಾ ಮಂಚದಿಂದ ಕಿಸ್ಕಂಡಿದ್ನಂತೆ. ಅವನ ಹೆಂಡರು ಯಾಕಲಾ ಅಂದ್ರೆ ಅರ್ಧ ಎಕರೆ ತೋಟ ಕಣಮ್ಮಿ ಸಿದ್ದೇಸನ ಪಾದ ಅಂತಿದ್ನಂತೆ.
ಎಲ್ಲಾರೂ ದಿನಾ ಪ್ರಾಕ್ಟೀಸ್ ಹೋಗೋ ಬೇಕಾದ್ರೆ ಗೌಡಪ್ಪನ ತೋಟ ನೋಡ್ಕಂಡೇ ಹೋಗೋರು. ಲೇ ಅಡಿಕೆ ಕೀಳಿಸಿ ಕಬ್ಬು ಹಾಕ್ತೀನಿ ಅಂತಿದ್ದ ಸುಬ್ಬ. ಗೌಡಪ್ಪ ಹಲ್ಲು ಕಡಿಯೋನು. ಮೊದಲು ಫಸ್ಟ್ ಬಾರಲಾ ಅನ್ನೋನು. ಮಗಾ ತಂತಿ ಪಕಡು ಸೀತು ಒಂದು ಹೆಜ್ಜೆ ಮುಂದೆ ಹೋಗಿದ್ದ, ರಿಜಿಸ್ಟಾರ್ ಆಫೀಸ್ನಾಗೆ ಆ ತೋಟ ಗೌಡಪ್ಪನ ಹೆಸರಿಗೆ ಐತು ಇಲ್ಲೊ ಅಂತಾ ಬ್ರೋಕರ್್ಗೆ 100ರೂಪಾಯಿ ಕೊಟ್ಟು ಚೆಕ್ ಮಾಡ್ಸಿದ್ದ. ಗ್ಯಾರಂಟಿ ಆದ್ ಮ್ಯಾಕೆ ಸೈಕಲ್ ಹೊಡೆಯೋದು ಕಲ್ತಿದ್ದ. ಅಕಸ್ಮಾತ್ ಗೌಡಪ್ಪ  ಗೆದ್ರೆ ಅಂದ ಸುಬ್ಬ. ಅವನ ತೋಟ ಅವನಿಗೆ ಕಲಾ ಅಂದ ನಿಂಗ,
ಸರಿ ಸೈಕಲ್ ರೇಸ್ ಸುರುವಾತು. ಗೌಡಪ್ಪನೇ ಬಂದು ಎಲ್ಲಾ ಸೈಕಲ್್ನ್ನು ನಿಲ್ಲಿಸಿ ಹೊಸಾ ಸುಣ್ಣದಿಂದ ಪಟ್ಟೆ ಹಾಕಿದ,. ಗೌಡಪ್ಪನ ಹೆಂಡರು ಗೌಡಪ್ಪನ ಕೈ ಸುಣ್ಣ ಆಗೈತೆ ಅಂತಾ ಬಂದು ನೀರು ಹಾಕಿದ್ಲು,. ಗೌಡಪ್ಪ ಅಮ್ಮಾ ಅಂದ. ನೋಡಿದ್ರೆ ಗೌಡಪ್ಪನ ಕೈ ಸುಟ್ಟು ಬೊಬ್ಬೆ ಬಂದಿತ್ತು,. ಯಾಕಲಾ. ಹೊಸಾ ಸುಣ್ಣ ಕಲಾ ಅಂದ ಕಿಸ್ನ, ನೋಡ್ರಲಾ ಇಲ್ಲಿಂದ 20ಕಿ.ಮೀ ಹೋಗಿ ವಾಪಸ್ಸು ಬರಬೇಕು ಅಂದ. ಸರೀ ಎಲ್ಲಾ ಹೊಂಟ್ವಿ, ಇಸ್ಮಾಯಿಲ್ ಹಿಂದೆ ಸೈಕಲ್ ಅಂಗಡಿ ಭಾಸಾ ಬತ್ತಾ ಇದ್ದ. ಯಾಕಲಾ. ಲೇ ಸೈಕಲ್ ಯಾರಾದರೂ ಅಂಗೇ ದ್ಯಂಕಂಡು ಹೋಗ್ಬಿಟ್ಟರೆ ಅಂತಾ ನಮ್ಮ ಹಿಂದೆನೇ ಬತ್ತಾವ್ನೆ ಕಲಾ ಅಂದೋನು ಎರಡು ಕಿತಾ ಭಾಸಾನ ಕೈಯಲ್ಲಿ ಚೈನ್ ಟೈಟ್ ಕರ್ರೇ ಸಾಲೇ ಅಂದು ಕೆಲಸ ಮಾಡ್ಸಿದ್ದ, ಕಿಸ್ನ ನಿಧಾನಕ್ಕೆ ಬತ್ತಾ ಇದ್ದ. ಯಾಕಲಾ, ಆ ಕಡೆಯಿಂದ ಬರೋಬೇಕಾದ್ರೆ ಫಾಸ್ಟಾಗಿ ಬರ್ತೀನಿ ಕಲಾ ಅಂದ. ಯಾವುದಕ್ಕೂ 108ಕ್ಕೆ ಹೇಳಲಾ ಅಂದ ಸುಬ್ಬ. ತಂತಿ ಪಕಡು ಸೀತು ಎಲ್ಲಿ ಅಂದ್ರೆ. ಮಗಾ ಕಿವಿಗೆ ಏನೋ ದಾರ ಹಾಕ್ಕೊಂಡು ಕೆರೆತಾವ ಹೋಗ್ತಾ ಇದ್ದ,. ಲೇ ರಸ್ತೆ ಇರೋದು ಈ ಕಡೆ ಕಲಾ ಅಂದ ಸುಬ್ಬ. ಗೊತ್ತು ಹೋಗಲೇ ಅಂದ ತಂತಿ ಪಕಡು. ಮಗಾ ಸಕ್ತಿ ಬರಲಿ ಅಂತ ಬೆಳಗ್ಗೆನೇ ಒಂದು ಅರ್ಧ ಕೆಜಿ ಹಲಸಂಧಿ ಕಾಳು ನೀರಲ್ಲಿ ನೆನಸಿಕೊಂಡು ತಿಂದ್ನಿದ್ನಂತೆ. ಲೇ ಗೌಡಪ್ಪ ಎಲ್ರಲಾ ಅಂದ್ರೆ, ಮಗಾ ಅವನೇ ಫಸ್ಟ್ ಇದ್ದ, ಗೇರ್ ಸೈಕಲ್ ತಂದಿದ್ದ, ಸ್ವಲ್ಪ ದೂರ ಹೋಗಿ ಗೌಡಪ್ಪ ವಾಂತಿ ಮಾಡ್ತಾ ಇದ್ದ, ಬೇವಿನ ಸೊಪ್ಪಿನ ವಾಸನೆ ಬತ್ತದೆ ಕಲಾ ಅಂದ ಸುಬ್ಬ., ಲೇ ಅವನಿಗೆ ಸಾನೇ ಸುಗರ್ ಐತೆ ಅದಕ್ಕೆ ಹಾಳು ಹೊಟ್ಟೆಗೆ ಕುಡಿದು ಬಂದಿರಬೇಕು.ಮಗಂದು ರಿವರ್ಸ್ ಆಗೈತೆ ಬುಡ್ಲಾ  ಅಂದ ಕಿಸ್ನ, ಸರಿ ಎಲ್ಲಾರೂ 20ಕಿಮೀ ಹೋಗಿ ಅಲ್ಲಿದ್ದ ಪಟ್ಟಿ ಮುಟ್ಟಿ ವಾಪಸ್ ಹೊಂಟ್ವಿ. ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ ಸೇವೆ. ಅಲ್ಲಲ್ಲೇ ಹೊಟ್ಟೆ ತೊಳಸಿದ ಮೇಲೆ ವಾಂತಿ ಕಾರ್ಯಕ್ರಮ. ಸೀತು ಮಾತ್ರ ಮನೆಯಿಂದಲೇ ಚೊಂಬ್ನಾಗೆ ನೀರು ತಂದಿದ್ದ, ಕುಡಿಯೋಕ್ಕೆ ಮತ್ತಿತರ ಕಾರ್ಯಕ್ಕೂ ಅದೇಯಾ.  ಜೋಬಿನಾಗೆ 100ಗ್ರಾಂ ಸಕ್ಕರೆ, ನಿಂಬೆ ಹಣ್ಣು.
ದೊನ್ನೆ ಸೀನ ಪೆಡ್ಲ್ ತುಳಿತಾನೆ ಇದ್ದ. ಮಗಂದು ಅಲ್ಲೂ ಚೈನ್ ಕಳಚಿತ್ತು, ಭಾಸಾ ಸೈಕಲ್ ಕಿತ್ಕಂಡಿದ್ದ, ಸುಬ್ಬನ ಕಾಲ್ನಾಗೆ ರಕ್ತಾ ಬತ್ತಾ ಇತ್ತು. ಯಾಕಲಾ, ಲೇ ಮಡ್ ಗಾರ್ಡ್ ಹೋಗೈತೆ ಕಲಾ ಅಂದ. ಅಲ್ಲೇ ಆಸ್ಪತ್ರಾಗೆ ಟಿಟಾನೆಸ್ ಇಂಜೆಕ್ಸನ್ ಹಾಕಿಸ್ಕಂಡ್ ಬಂದ. ಯಾಕಲಾ, ತುಕ್ಕು ಕಲಾ. ಸರೀ ಎಲ್ಲಾರೂ ವಾಪಸ್ ಹಳ್ಳಿಗೆ ಬಂದ್ರೆ. ಭವ್ಯವಾದ ಸ್ವಾಗತ. ಹೆಣ್ಣು ಐಕ್ಳು ಚಂಡು ಹೂವು ಎರೆಚೋವು,. ಯಾಕ್ರವಾ. ಮುಂಡೇವು ಹಳ್ಳಿ ಬಿಟ್ಟು ತೊಲಗಿದ್ರಲಾ ಅಂತಾ ನೆಮ್ಮದಿಯಿಂದ ಇದ್ವಿ ಮತ್ತೆ ಬಂದ್ರಲಾ ಅನ್ನೋವು.ಏ ಥೂ, ಸರಿ ಎಲ್ಲಾರೂ ಪಟ್ಟಿ ಮುಟ್ಟಿದ್ವಿ. ಗೌಡಪ್ಪನ ಹೆಂಡರು ಆರತಿ ಮಾಡಿದ್ಲು. ಗೌಡಪ್ಪಂಗೆ ತೋಟ ಹೋಯ್ತು. ನಮ್ಮ ಅಪ್ಪನ ಕರ್ಕಂಡು ಬಂದು ನಿನಗೆ ಹಬ್ಬ ಮಾಡಿಸ್ತೀನಿ ಅಂದ್ಲು. ನಾನೇ ಫಸ್ಟ್ ಕಣಮ್ಮಿ ಅಂದ ಗೌಡಪ್ಪ. ಅಲ್ನೋಡು ಅಂದ್ಲು.  ಕಿಸ್ನ ಆಗಲೇ ಬಂದು ಅರ್ಧ ಗಂಟೆ ಆಗೈತೆ ಅಂದ್ಲು. ಮಗಾ ಬೀಡಿ ಹೊಡೀತಾ ಕುಂತಿದ್ದ. ಸರಿ ಗೌಡಪ್ಪ ಅತ್ಕಂತಾ ಅರ್ಧ ಎಕರೆ ತೋಟ ಬರೆದು ಕೊಟ್ಟ. ಮಗಾ ಕಿಸ್ನ ಹೆಬ್ಬೆಟ್ಟು ಒತ್ತಿಸ್ಕೊಂಡಿದ್ದ. ಇಸ್ಮಾಯಿಲ್ ಏ ಧೋಕಾರೇ ಅನ್ನೋನು.  ಲೇ ಕಿಸ್ನ, ನೀನು ಲಾಸ್ಟಿಗೆ ಇದ್ದೋನು ಹೆಂಗಲಾ ಫಸ್ಟ್ ಬಂದ್ಯಲಾ ಅಂದ ಸುಬ್ಬ. ಲೇ ಇನ್ನು ಅರ್ಧ ದಾರ್ಯಾಗೆ ಇದ್ದಾಗ ಉದಯರಂಗ ಬಸ್ಸು ಬಂತು ಅದ್ರಾಗೆ ಸೈಕಲ್ ಹಾಕ್ಕಂಡು ಊರು ಹೊರಗೆ ಬಂದು ಇಳಿದು ಬಂದೆ ಕಲಾ ಅಂದ. ಅಯ್ಯೋ ನಿನ್ನ ಐಡಿಯಾಕ್ಕೆ ನನ್ನ ಅಂಗಡಿ ಚಾ ಚಲ್ಟಾ ಹುಯ್ಯಾ ಅಂದ ನಿಂಗ.