ನಮ್ಮೂರ್ನಾಗೆ ಷೂಟಿಂಗ್

ನಮ್ಮೂರ್ನಾಗೆ ಷೂಟಿಂಗ್

ಬರಹ

ಬೆಳಗ್ಗೆನೇ ಗೌಡಪ್ಪ ನಮ್ಮನೇಗೆ ಏದುಸಿರು ಬಿಡಕಂಡು ಬಂದ. ಏನ್ರೀ. ಲೇ ಪೂರ್ಣಿಮಾ ಎಂಟರ್ ಪ್ರೈಸಸ್ ನಿಂದ ಪೋನ್ ಬಂದಿತ್ತು ಕಲಾ ಅಂದ. ಯಾವುದು ಊದಬತ್ತಿ, ಕರಪೂರ ಕಂಪೆನಿನಾ ಅಂದೆ. ಅದಲ್ಲಲಾ. ರಾಜ್ಕುಮಾರ್ ಮನೆಯೋರದು ಕಲಾ. ನಮ್ಮೂರ್ನಾಗೆ ಸೂಟಿಂಗ್ ಮಾಡ್ತಾರಂತೆ. ಅದಕ್ಕೆ ಸ್ವಲ್ಪ ಉಪಕಾರ ಮಾಡಿ ಅಂತ ಹೇಳವ್ರೆ ಕಲಾ. ಪಿಚ್ಚರ್ ಯಾವದಂತೆ ಜಾಕಿ ಭಾಗ 2, ಪಾಕಿ ಅಂತ. ಅಂಗಾರೆ ಪುನೀತ್ ಗಡ್ಡ ಅಂಗೇ ಕುರ್ತಾ ಜುಬ್ಬಾ ಹಾಕಬೇಕು ಅಂದೆ. ಅಲ್ಲಲಾ. ಪಾಕಿ ಅಂದ್ರೆ ಪಾರುಗೆ ಕೀಟಲೆ ಅಂತ ಅರ್ಥ ಇರಬೇಕು ಕಲಾ ಅಂದ. ಸರಿ ನಾನೇನು ಮಾಡ್ಬೇಕು ಅದ್ಹೇಳಿ. ನೋಡಲಾ ನನ್ನ ಜೊತೆಗೆ ಇರು ಸಾಕು ಅಂದು ಅಂಗೇ ಕುಂತಿದ್ದ. ಲೇ ಬೈಟು ಚಾ ತಗೊಂಡು ಬಾರೇ ಇಲ್ಲಾ ಅಂದ್ರೆ ಇವನು ಎದ್ದು ಹೋಗಕ್ಕಿಲ್ಲಾ ಅಂದೆ. ಇವನ ಮನಗೆ ಹೋದ್ರೆ ಇವನ ಹೆಂಡರು ನೀರು ಕೊಡಕ್ಕಿಲ್ಲಾ , ಇವನು ನೋಡಿದ್ರೆ ನಮ್ಮ ಮನೇಲಿ ಹಂಡೆ ಗಟ್ಟಲೆ ಚಾ ಕುಡಿದು ಎದ್ದು ಹೋಯ್ತಾನೆ. ಮಗೂಗೆ ಬೇರೆ ಹಾಲು ಇಲ್ಲ ಅಂತಾ ನನ್ನ ಹೆಂಡರು ಉಗೀತಾ ಇದ್ಲು. ಕಡೆಗೆ ಡಿಕಾಕ್ಸನ್ ತಂದು ಕೊಟ್ಟಿದ್ದಳು.

ಸರಿ ಸೂಟಿಂಗ್ ನೋರು ಎಲ್ಲಾ ಬಂದ್ರು. ಏನಿಲ್ಲಾ ಅಂದ್ರು ಎರಡು ಬಸ್ನಾಗೆ ಜನ ಬಂದಿದ್ವು. ಬಂದೋರು ಕೆಲವರು ಇಳಿತಿದ್ದಂಗೆ ಕೆರೆತಾವ ಓಡಿದ್ವು. ಯಾಕ್ರಲಾ. ಯಾವುದೋ ಕಡಿಮೆ ಬಜೆಟ್ ಚಿತ್ರದ ಸೂಟಿಂಗ್ ಗೆ ಹೋಗಿದ್ವಿ. ಅಲ್ಲಿ ಚಿತ್ರಾನ್ನ ತಿಂದು ಹೊಟ್ಟೆ ಅನ್ನೋದು ಕನ್ನಂಬಾಡಿ ಕಟ್ಟೆ ಆಗೈತೆ ಅಂದ್ವು. ಲೇ ಕನ್ನಂಬಾಡಿ ಎಲ್ಲಲಾ ಬತ್ತದೆ. ನಮ್ಮ ತಮಿಳು ಕನ್ನ ಇಲ್ವಾ ಅವನ ಬಾಡಿ. ಅದೇನೋಪಾ ಅಂದ ಗೌಡಪ್ಪ.   ಬೆಳಗ್ಗೆ ಸೂಟಿಂಗ್ ಸುರುವಾತು. ಗೌಡ ಸಾ ನಂಗೊಂದು ಚಾನ್ಸ್ ಕೊಡಿರಿ ಅಂತಿದ್ದ. ಅದಕ್ಕೆ ಪುನೀತ್ ಅಮ್ಮನ್ನ ಕೇಳಬೇಕು ಅಂತಿದ್ರು. ಬೇಡ ಬುಡಪ್ಪಾ. ನಿಮ್ಮವ್ವ ಹೇಳಿ ನಾನು ಪಾಲ್ಟು ಮಾಡೋವತ್ತಿಗೆ ನಾನು ಸತ್ತು ಹೋಗಿರುತ್ತೀನಿ ಅಂದ. ಸಾಧು ಕೋಕಿಲನ್ನ ನೋಡಿ ಆಫ್ರಿಕದೋನು ಅನ್ನೋವು. ಮಗಾ ಗೌಡ ಯಾವಾಗಲೂ ರೇಖಾದಾಸ್ ಜೊತೆಗೆ ಇರೋನು. ಆ ವಮ್ಮ ಜೊಲ್ಲು ಪಾರ್ಟಿ ಅಂತಿದ್ಲು. ಇದನ್ನು ನೋಡ್ತಿದ್ದ ಲೈಟ್ ಬಾಯ್, ಗೌಡಪ್ಪ ಆ ವಮ್ಮನ ಹಿಂದೆ ಹೋಗ್ತಿದ್ದಂಗೆನೇ ಗೌಡಪ್ಪನ ಮುಖಕ್ಕೆ ಲೈಟ್ ಬಿಡೋನು. ಗೌಡ ಅಂಗೇ ತಲೆ ಮ್ಯಾಕೆ ಟವಲ್ ಹಾಕೋನು.

ಸರಿ ಮೊದಲನೆ ದಿನ ಮಹೂರ್ತದ ಪೂಜೆ. ಗೌಡಪ್ಪ ನಾನೇ ಕಾಯಿ ಒಡಿತೀನಿ ಅಂದ. ಒಂದು ಮಚ್ಚು ಕೊಟ್ಟು ಕೂರಿಸಿದ್ವಿ. ಸರಿ ಸಿದ್ದೇಸನ ಪೋಟೋ ಇಟ್ಟು ಪೂಜೆ ಮಾಡಿ ಕಾಯಿ ಒಡೆದ, ಆಮ್ಯಾಕೆ ಅವರು ಷೂಟಿಂಗ್ ಅಂತಾ ಕೆರೆತಾವ ಹೋದ್ರು. ಈ ಕಡೆ ಗೌಡ ಕಾಯಿ ಒಡೆಯೋದನ್ನ ನೋಡಿ ಯಾವುದೋ ಹಬ್ಬ ಇರಬೇಕು ಅಂತಾ ಎಲ್ಲಾವೂ ಬಂದು ಕಾಯಿ ಒಡಿಸೆದೋಯಾ. ಗೌಡ ಸಂಜೆ ತನಕ ಕಾಯಿ ಒಡೆಯೋದೆ ಮಾಡ್ದ. ಮಗಂದು ಕೈಯೆಲ್ಲಾ ರಕ್ತ. ಅಟೊತ್ತಿಗೆ ಬಂದ ಟೆನ್ನಿಸ್ ಕೃಷ್ಣ. ನಿಮ್ಮೂರ್ನಾಗೆ ಯಾವನೋ ಗೌಡಪ್ಪ ಅಂತ ಇದಾನಂತೆ. ಅವನ ಮೈ ಒಂದು ತರಾ ಹಂದಿ ಸತ್ತು ವಾಸನೆ ಬತ್ತದಂತೆ ಯಾರಲಾ ಅವನು ಅಂತು. ಇಲ್ಲೇ ನೋಡಿ ಆ ಪೆಸೆಲ್ ಪ್ರಾಡಕ್ಟ್ ಅಂತ ಸುಬ್ಬ ಗೌಡಪ್ಪನ ತೋರಿಸಿದ. ಯಾರಲಾ ನಂಗೆ ಬೈಯ್ದಿದ್ದು ಅಂತಾ ಗೌಡಪ್ಪ ಮಚ್ಚು ತಗೊಂಡು ಬೆನ್ನತ್ತಿದ್ದ. ಲೇ ಬಾರಲಾ ಇನ್ನು ಸಾನೇ ಕಾಯಿ ಐತೆ ಒಡೀಬಾ ಅಂತ ಜನ ಬಯ್ಯೋವು.

ಬೆಳಗ್ಗೆ ಟಿಫಿನ್ ಅಂಗೇ ಊಟ ಎಲ್ಲಾ ಷೂಟಿಂಗ್ ಬಂದೋರು ಜೊತೆಗೆ ಮುಗಿಸೋನು. ಏಥೂ. ಮಗಾ ಬಕ್ಕಿಟ್ಟು ಗಟ್ಟಲೆ ತಿನ್ನೋನು. ಕೇಸರಿ ಬಾತ್ ಇನ್ನು ಹಾಕಿ ಸಾ ಅಂತಿದ್ದ. ಸರಿ ಮಕ್ಕಳಕ್ಕೆ ಅಂತ ತನ್ನ ಮನೆ ಬಿಟ್ಟು ಕೊಟ್ಟಿದ್ದ. ಪುನೀತ್ ಎಲ್ಲಾ ಒಳಗೆ ಮಲಗೋರು. ಇವನು ಮಾತ್ರ ನಾಯಿ ತರಾ ಕಟ್ಟೆ ಮ್ಯಾಕೆ ಬಿದ್ದಿರ್ತಿದ್ದ. ಸೊಳ್ಳೆ ಕಚ್ಚಿದ್ದಕ್ಕೆ ಚಿಕನ್ ಗುನ್ಯಾ ಬಂದೈತೆ ಕಲಾ ಅನ್ನೋನು. ನೋಡಿ ನಿಮ್ಮ ಊರಿನ ಪೆಸೆಲ್  ಜಾಗವಾದ ಕೆರೆತಾವ, ತೋಟ ಎಲ್ಲಾ ತೆಗಿದ್ದಾತು. ನಾಳೆ ಕಡೇ ದಿನ ಷೂಟಿಂಗ್ ಮುಗಿಸಿ ಊರಿಗೆ ಹೋಯ್ತೀವಿ ಅಂದ್ರು. ಗೌಡ್ರೆ ನಿಮಗೆ ನಾಳೆ ಚಾನ್ಸ್ ಕೊತ್ತೀವಿ ಅಂದ್ರು. ಸರಿ ಬೆಳಗ್ಗೆನೇ ಷೂಟಿಂಗ್ ಸುರುವಾತು. ಫೈಟಿಂಗ್ ಸೀನ್. ಗೌಡಪ್ಪ ನಂಗೂ ಮೇಕಪ್ ಮಾಡ್ರೀ ಅಂದ. ನಿಮಗ್ಯಾಕೆ ಮೇಕಪ್ ಅಂತಾ ಕರೀ ಪ್ಯಾಂಟು, ಸಲ್ಟು ಅಂಗೇ ಮುಖಕ್ಕೆ ಮಂಕಿ ಕ್ಯಾಪ್ ಹಾಕಿ ಬಿಟ್ಟರು. ಲೇ ನನ್ನ ಮುಖನೇ ಕಾಣಕ್ಕಿಲ್ಲ ಅಂದ. ಆ ಮ್ಯಾಕೆ ಕಾಣುತ್ತದೆ ಅಂತಾ ಪುನೀತ್ ಎಗರಿಸಿ, ಎಗರಿಸಿ ಒದ್ದಿದ್ದೇ. ಗೌಡಪ್ಪ ಟೋಪಿ ತೆಗೆದರೆ ಮಗಂದು ಮುಖ ಅನ್ನೋದು ದೃಷ್ಟಿ ಬೊಂಬೆ ಆಗಿತ್ತು. ಅಂಗೆ ಹೊಡೆದಿದ್ದ ಪುನೀತ್. ಹಚ್ರಲಾ ಅರಿಸಿನ. ಲೇ ಈಗಲೇ ಮುಖ ಕಾಣಕ್ಕಿಲ್ಲ. ಇನ್ನು ಅರಿಸಿನ ಹಚ್ಚಿದ್ರೆ ಯಾವುದೋ ಸವದತ್ತಿ ಕಡೆಯೋರು ಬಂದಿದಾರೆ ಅನ್ಕಂತಾರೆ ಕಲಾ ಅನ್ನೋನು. ಪಿಚ್ಚರ್ನಾಗೆ ಲೇ ನಾನು ಅಂತಾ ಹೆಂಗಲಾ ಕಂಡು ಹಿಡಯೋದು. ವಾಸನೆಯಿಂದ ಅಂದ ಡೇರೆಕ್ಟರ್. ಹೌದು ಕಲಾ. ಅಲ್ರೀ ಪಿಚ್ಚರ್ನಾಗೆ ಏನು ವಾಸನೆ ಬತ್ತದಾ ಅಂದ ಸುಬ್ಬ. ಲೇ ಮೋಸ ಮಾಡಿದ್ರು ಕಲಾ ಅಂದ.

ಷೂಟಿಂಗ್ ನೋರು ನಮ್ಮ ಹಳ್ಳಿಗೆ ಬಂದು ಹೋಗಿದ್ದಕ್ಕೆ ಗೌಡಪ್ಪನ ಮುಂದಿನ ಎರಡು ವಕ್ರ ಹಲ್ಲು ಉದುರೈತೆ. ಅಂಗೇ ಮೂಗು ಡೊಂಕಾಗೈತೆ, ಅದನ್ನೆ ಎಲ್ಲಾರಿಗೂ ತೋರಿಸ್ತಾವ್ನೆ. ನೋಡ್ರಲಾ ಪುನೀತ್ ಉದುರಿಸಿರೋದು ಅಂತಾ. ಏ ಥೂ.