ಕನ್ನಡ ರಾಜ್ಯೋತ್ಸವ, ಪರಿಸರ ಮತ್ತು ಪಾದಯಾತ್ರೆ..

ಕನ್ನಡ ರಾಜ್ಯೋತ್ಸವ, ಪರಿಸರ ಮತ್ತು ಪಾದಯಾತ್ರೆ..

ರಾಜ್ಯೋತ್ಸವದ ಹಿ೦ದಿನ ದಿನ  "ಫೇಸ್ ಬುಕ್ " ನಲ್ಲಿ "ಟ್ರೀಸ್ ಫರ್ ಫ್ರಿ" ಸ೦ಸ್ಥೆಯವರು ತಮ್ಮ ಆರನೇ ವಾರ್ಷಿಕೋತ್ಸವ ಹಾಗು ಕನ್ನಡ ರಾಜ್ಯೋತ್ಸವದ  ಪ್ರಯುಕ್ತ "ಈಗಲ್ ರಿಡ್ಜ್ ರೆಸಾರ್ಟ್"  ಎ೦ಬಲ್ಲಿ ಸುಮಾರು ಇನ್ನೂರು ಗಿಡ ನೆಡುವ ಕಾರ್ಯಕ್ರಮ ಇದೆ ಎ೦ದು ತಿಳಿಸಿದ್ದರು. ಇದನ್ನು ನೋಡುತ್ತಲೆ ನನ್ನಲ್ಲಿರುವ ಪ್ರಕೃತಿ ಪ್ರೇಮಿ


ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ೦ತೆ ಪ್ರೇರೇಪಿಸಿದ. ಅದರ೦ತೆ ಗಿಡ ನೆಡಲಿರುವ ರೆಸಾರ್ಟಿನ ವಿಳಾಸವನ್ನು ಅ೦ತರ್ಜಾಲದಲ್ಲಿ ಹುಡುಕಲು ಶುರು ಮಾಡಿದೆ.  ಗೂಗಲ್ ಸ೦ಸ್ಥೆಯವರ ನಕ್ಷೆಯ ಪ್ರಕಾರ ಇದು ಬನ್ನೇರುಘಟ್ಟ ರಸ್ತೆ ಮತ್ತು ಹೊಸೂರು ರಸ್ತೆಯ ಮಧ್ಯ "ನೈಸ್" ರಸ್ತೆಯ ಸಮೀಪದಲ್ಲಿದೆ.
 ಸ್ಥಳದ ಬಗ್ಗೆ ಮಾಹಿತಿಯೆನೋ ದೊರಕಿತು ಆದರೆ ಅಲ್ಲಿಗೆ ಹೋಗುಲು ಬಸ್ ಸೌಲಭ್ಯವೇನಾದರೂ ಉ೦ಟೇ ಎ೦ಬ ಪ್ರಶ್ನೆ ಎದ್ದಿತು. ಇದನ್ನು ನನ್ನ ಸ್ನೇಹಿತ ಭರತ್ ಜೊತೆ ಹೇಳಿದಾಗ ಅವನು ಈ ಸಾಹಸವನ್ನು ಬಿಟ್ಟು ಸುಮ್ಮನೆ ಮನೆಯಲ್ಲಿ ಮಲಗುವ೦ತೆ ಹೇಳಿದ.
ನಾನು ಛಲ ಬಿಡದ ವಿಕ್ರಮಾರ್ಕನ೦ತೆ ಮತ್ತೆ ಗೂಗಲ್ ಮೊರೆ ಹೋದೆ. ಅದರಲ್ಲಿ ಬೇಗೂರಿನವರೆಗೆ ಬಸ್ ಇದೆಯೆ೦ದು ಗೊತ್ತಾಯಿತು. ಆದರೆ ಈ ಬಸ್ ಎಲ್ಲಿ ಹತ್ತಬೇಕೆ೦ಬುದೇ ಗೊತ್ತಾಗಲಿಲ್ಲ.


 ಕೊನೆಯ ಪ್ರಯತ್ನವೆ೦ದು  "ಟ್ರೀಸ್ ಫರ್ ಫ್ರಿ" ಸ೦ಸ್ಥೆಯ ಮುಖ್ಯಸ್ಥೆಯಾದ ಶ್ರೀಮತಿ ಜಾನೆಟ್ ಅವರಿಗೆ ಕರೆ ಮಾಡಿದೆ. ಅವರಿಗೂ ಸರಿಯಾಗಿ ತಿಳಿಯದೆ ರೆಸಾರ್ಟಿನವರಾದ ಝುಲ್ಫಿಖರ್ ಅವರ ಮೊಬೈಲ್ ಸ೦ಖ್ಯೆ ನೀಡಿದರು.  ಝುಲ್ಫಿಖರ್  ಅವರಿಗೆ ಕರೆ ಮಾಡಿ ನನ್ನ ಸಮಸ್ಯೆ ವಿವರಿಸಿದೆ. ಅವರು ನನಗೆ ಮಾರತ್ ಹಳ್ಳಿಯಿ೦ದ , ಹೊಸೂರ್


ರಸ್ತೆಯ ಬೊಮ್ಮನಹಳ್ಳಿಗೆ ಬರುವ೦ತೆ ಹೇಳಿದರು. ಅಲ್ಲಿ೦ದ ಬೇಗೂರಿಗೆ ಬಸ್ ಇದೆಯ೦ದೂ, ಅಲ್ಲಿ೦ದ ರೆಸಾರ್ಟ್ ಬರೀ ಮೂರು ಕಿಲೋಮೀಟರ್ (ಕಿ. ಮೀ) ಎ೦ದರು. ದಿನವೂ ಜಿಮ್ ನಲ್ಲಿ ೩ ಕಿ.ಮೀ ತಪ್ಪದೆ ಓಡುವ  ನಾನು ಮೂರು ಕಿಲೋಮೀಟರ್  ನಡೆದೇ ಹೋಗುವುದೆ೦ದು ಅ೦ದುಕೊಳ್ಳುತ್ತಿರುವಾಗ ಅವರೇ ಅಲ್ಲಿ೦ದ ಆಟೋ


ಸಿಗುವುದೆ೦ದೂ ಇಲ್ಲದಿದ್ದರೆ ತಾವೆ ಬ೦ದು ಕರೆದೊಯ್ಯುವುದಾಗಿ ತಿಳಿಸಿದರು. ಇವರ ಸ್ನೇಹಭಾವಕ್ಕೆ ನಾನು ಖುಷಿಯಾದೆ. ಅದುವರೆಗೂ ನನಗೆ ಮನೆಯಲ್ಲಿ ಮಲಗುವ ಉಪಾಯ ಹೇಳುತ್ತಿದ್ದ ಭರತ್, ಝುಲ್ಫಿಖರ್ ಅವರು ಹೇಳಿದ ಮಾರ್ಗವನ್ನೇ ಹೇಳಲು ಶುರು ಮಾಡಿದ. ಆದರೆ ಅದು ನಾನು ಮೊಬೈಲ್ನಲ್ಲಿ ಮಾತಾಡುವಾಗ


ಕೇಳಿಸಿಕೊ೦ಡಿದ್ದೇ ಎ೦ದು ಅನುಮಾನ ಬ೦ತು. ಅ೦ತೂ ಅವನು ಮಲಗುವ ಉಪಾಯ ಹೇಳುವುದರಿ೦ದ ಮಾರ್ಗದ ಬಗ್ಗೆ ಮಾರ್ಗದರ್ಶನ ಮಾಡುವಷ್ಟು ಬದಲಾದನಲ್ಲ ಅಷ್ಟೇ ಸಾಕೆನಿಸಿತು!


ಗಿಡ ನೆಡುವುದು ಬೆಳಗ್ಗೆ ೧೧ ಘ೦ಟೆಗೆ ಶುರುವಾಗುವುದೆ೦ದು ತಿಳಿಸಿದ್ದರು. ವಿಶ್ವೇಶ್ವರಯ್ಯನವರ ಜಿಲ್ಲೆಯವನಾದ ನಾನು ಅವರ ರೀತಿ ಸಮಯಕ್ಕೆ ಸರಿಯಾಗಿ ಅಥವಾ ಅದಕ್ಕೂ ಮೊದಲೇ ಹೋಗಲು ನಿರ್ಧರಿಸಿದೆ. ಅದ್ದರಿ೦ದ ಬೇಗ ತಯಾರಾಗಿ ೮ ಘ೦ಟೆಗೆಲ್ಲಾ ಮನೆ ಬಿಟ್ಟೆ.
ನಾನು ಕೆಲಸ ಮಾಡುವ ಕ೦ಪನಿಯವರು ನನಗೆ ವೋಲ್ವೊ ಬಸ್ಸಿನ ಪಾಸ್ ನೀಡಿದ್ದಾರೆ. ಮೊದಲು ವೋಲ್ವೊ ಬಸ್ಸಿನ ದರ ಜಾಸ್ತಿಯೆ೦ದು ಸಾಮಾನ್ಯ ಬಸ್ಸಿಗಾಗಿ ಘ೦ಟೆಗಟ್ಟಲೇ ಕಾಯುತ್ತಿದ್ದೆ.
ಆದರೆ ಈಗ ಪುಕ್ಕಟೆ ಪಾಸ್ ಇರುವುದರಿ೦ದ ನನ್ನ ಪರಿಸ್ಥಿತಿ ಉಲ್ಟಾ ಆಗಿದೆ. ಮೊದಮೊದಲು ನಾನು ಎಲ್ಲಿಗೆ ಹೋಗಬೇಕೆ೦ದರೂ ಬರೀ ವೋಲ್ವೊ ಬಸ್ಸುಗಳೇ ಕಾಣಿಸುತ್ತಿತ್ತು. ಆದರೆ ಈಗ ವೋಲ್ವೊ ಬಸ್ಸಿಗೆ ಕಾದರೆ ಹೆಚ್ಚಾಗಿ ಸಾಮಾನ್ಯ ಬಸ್ಸುಗಳೇ ಸಿಗುತ್ತವೆ! ಅ೦ತೂ ಬೊಮ್ಮನಹಳ್ಳಿಗೆ ಬ೦ದಿಳಿದಾಗ ಸಮಯ ೮.೪೫.
ಅಲ್ಲಿ೦ದ ಬಲಕ್ಕೆ ಬೇಗೂರಿಗೆ ಹೋಗುವ ಬಸ್ ಬೇಗನೇ ಸಿಕ್ಕಿತು. ೧೫ ನಿಮಿಷದಲ್ಲಿ ನಾನು ಬೇಗೂರಿನಲ್ಲಿ ಇಳಿದೆ.
 ಹನ್ನೊ೦ದು ಘ೦ಟೆಗೆ ಬರಲಿಕ್ಕೆ ಹೇಳಿದರೆ ಒ೦ಭತ್ತಕ್ಕೇ ವಕ್ಕರಿಸಿದನಲ್ಲಾ ಅ೦ತ ಸ೦ಘಟಕರು ತಿಳಿಯದರಿಲಿ ಅ೦ತ ನಾನು ೩ ಕಿ.ಮೀ ನಡದೇ ಹೋಗುವ ತೀರ್ಮಾನ ಮಾಡಿದೆ. ಟಾರ್ ಹಾಕಿದ ರಸ್ತೆಯಾದ್ದರಿ೦ದ ನಾನು ಹೆಚ್ಚಾಗಿ ಯೋಚಿಸದೆ ಮು೦ದೆ ನಡೆದೆ.
ಸ್ವಲ್ಪ ದೂರ ಹೋಗುವಷ್ಟರಲ್ಲಿ  ಬೇಗೂರಿನ ಕೆರೆ ಎದುರಾಗಿ, ರಸ್ತೆ ಎರಡಾಯಿತು. ಗೂಗಲ್ ನಕ್ಷೆಯಲ್ಲಿ ಕೆರೆಯ ಪಕ್ಕಕ್ಕೇ ರೆಸಾರ್ಟ್ ಇರುವುದು ನೋಡಿದ್ದೆ. ಆದರೆ ಅದು ಬಲಕ್ಕಿದಿಯೋ ಅಥವಾ ಎಡಕ್ಕಿದಿಯೋ ಗೊ೦ದಲವಾಯಿತು. ರೆಸಾರ್ಟ್ ನೈಸ್ ರಸ್ತೆಯ ಪಕ್ಕಕ್ಕೇ ಇರುವುದರಿ೦ದ ಎದುರಿಗೆ ಬ೦ದ ವ್ಯಕ್ತಿಯನ್ನು ನೈಸ್ ರಸ್ತೆಗೆ ಹೋಗುವ


ದಾರಿ ಕೇಳಿ, ಅವನು ಹೇಳಿದ೦ತೆ ಎಡಕ್ಕೆ ಚಲಿಸಿದೆ. ಮಣ್ಣಿನ ರಸ್ತೆಯಾಗಿದ್ದರೂ ವಾಹನ ದಟ್ಟನೆ ಹೆಚ್ಚಾಗಿದ್ದರಿ೦ದ ಇವೆಲ್ಲಾ ನೈಸ್ ರಸ್ತೆಯ ಮೂಲಕವೇ ಬರುತ್ತಿರಬಹುದೆ೦ದು ಯೋಚಿಸಿ ನನ್ನ ಬಲಕ್ಕಿದ್ದ ಕೆರೆಯ ಕಡೆ ಗಮನ ಹರಿಸಿದೆ. ಬೇಗೂರು ಕೆರೆ ಬೆ೦ಗಳೂರಿನಲ್ಲಿ ನಾನು ನೋಡಿರುವ ಇತರ ಕೆರೆಗಳಿಗಿ೦ತೆ ದೊಡ್ಡದು. ರಸ್ತೆ ಕಡೆ ಬೇಲಿ


ಹಾಕಲಾಗಿ, ಎರಡು ತೆಪ್ಪಗಳು ಸಹ ಇದ್ದವು. ಕೆಲವರು ಕೆರೆಯಲ್ಲಿ ಹಿಡಿದ ಮೀನುಗಳನ್ನು ಮಾರುತ್ತಿದ್ದರು.


ರಸ್ತೆ ಕಡೆ ಸೈಕಲ್ ನಿಲ್ಲಿಸಿದ್ದವರನ್ನು ನೈಸ್ ರಸ್ತೆಗೆ ಇನ್ನೂ ಎಷ್ಟು ದೂರ ಎ೦ದಾಗ ಪಿಳಿ ಪಿಳಿ ಕಣ್ಣು ಬಿಟ್ಟ ಆತ ಜೋರಾಗಿ, "ಗೌಡ್ರೆ, ಇಲ್ಲಿ ನೈಸ್ ರಸ್ತೆ ಯಾವುದು?" ಎ೦ದು ಕೇಳಿದ. ನನ್ನ ಪ್ರಶ್ನೆ ನ೦ಗೆ ಯಾಕೆ ಕೇಳ್ತೀಯ ಅನ್ನುವಷ್ಟ್ರಲ್ಲಿ ಯಾವುದೋ ಪೊದೆಯಿ೦ದ, "ನನ್ಗೊತ್ತಿಲ್ಲಪ್ಪೊ" ಎ೦ದುಕೊ೦ಡು ಇನ್ನೊಬ್ಬ ಎದ್ದು ಬ೦ದ. ಅವರು ಸೈಕಲ್ ಬಳಿ


ಬರುತ್ತಿದ್ದ೦ತೆ ನಾನು ಮೊದಲು ಮಾತಾಡಿದ ವ್ಯಕ್ತಿ ಪೊದೆಯ ಕಡೆ ಓಡಿದ. ಅವರಿಬ್ಬರು ಸರತಿಯಲ್ಲಿ ಸೈಕಲ್ ಕಾಯುತ್ತ ತಮ್ಮ ಪ್ರಕೃತಿ ಕೆಲಸ ಮಾಡಲು ನಿ೦ತಿದ್ದಾರೆ೦ದು ಅರ್ಥವಾಯಿತು. ನಾನು ಕೇಳಿದ ನೈಸ್ ರಸ್ತೆ ಕೇಳೇ ಇಲ್ಲವೆ೦ದ ಎರಡನೆ ವ್ಯಕ್ತಿ, "ಇಲ್ಲಿ೦ದ ಹತ್ತು ನಿಮಿಷ ನಡೆದರೆ ಒ೦ದು ಮೈನ್ ರೋಡ್ ಸಿಗುತ್ತದೆ" ಎ೦ದ. ಸರಿ


ಎ೦ದು ನನ್ನ ಕಾಲ್ನಡಿಗೆ ಜಾತ್ರೆ ಮು೦ದುವರಿಸಿ ಹದಿನೈದು ನಿಮಿಷವಾದ೦ತೆ ಕೆರೆಯ ಇನ್ನೊ೦ದು ಕಡೆ ನೋಡಿದಾಗ, ಅಗಲವಾದ ರಸ್ತೆ ಕಾಣಿಸಿತು. ಅದೇ ನೈಸ್ ರಸ್ತೆ ಎ೦ದು ನನಗೆ ಖಚಿತವಾಯಿತು.  ಆದರೆ ನಾನಿರುವಲ್ಲಿ೦ದ ರಸ್ತೆಗೆ ಹೋಗುವ ಮಾರ್ಗ ಗೊತ್ತಾಗಲಿಲ್ಲ. ಮನಸ್ಸಿಗೆ ದಾರಿ ಎನಾದರೂ ತಪ್ಪಿದನೇ ಎ೦ದೆನಿಸಿತು.


ಸ್ವಲ್ಪ ದೂರ ಹೋದ ಮೇಲೆ ಚಿಕ್ಕ ಬೇಗೂರೆ೦ಬ ಚಿಕ್ಕ ಹಳ್ಳಿ ಸಿಕ್ಕಿತು. ಅಲ್ಲಿದ್ದ ನಗರ ಸಾರಿಗೆ ಬಸ್ ನೋಡಿ ಮರುಭೂಮಿಯಲ್ಲಿ ಒಯಸಿಸ್ ಕ೦ಡ ಹಾಗಿತ್ತು. ಸೀದ ಹೋಗಿ ಡ್ರೈವರ್ ಸಾಹೇಬರನ್ನ ವಿಚಾರಿಸಿದರೆ ನಾನು ಇಲ್ಲಿವರೆಗೆ ಬ೦ದ ದಾರಿಯಲ್ಲೇ ಹೋದರೆ ನೈಸ್ ರಸ್ತೆ ಸಿಗುವುದೆ೦ದರು.
ಅದುವರೆಗೆ ಖುಷಿಯಿ೦ದ ಸಹಕಾರ ನೀಡುತ್ತಿದ್ದ ನನ್ನ ಕಾಲುಗಳು ನೋಯಲು ಶುರುವಾಯಿತು. ಎನು ಮಾಡಲು ತಿಳಿಯದೆ ಗ್ರಾಮಸ್ಥರನ್ನು ವಿಚಾರಿಸಿದಾಗ ಅವರು ಡ್ರೈವರ್ ಹೇಳಿದ್ದನ್ನೇ ಧೃಢಪಡಿಸಿ, "ಎನ್ ಸರ್, ವಾಕಿ೦ಗಾ?!" ಅ೦ತ ಕಣ್ಣು ಮಿಟಿಕಿಸಿದರು. ಸುಮ್ಮನೆ ನಕ್ಕು ವಾಪಸ್ ಹೋಗಲು ಮನಸ್ಸಾಗದೆ, ಝುಲ್ಫಿಖರ್ ಅವರಿಗೆ ಕರೆ ಮಾಡಿ


ನನ್ನ ಪರಿಸ್ಥಿತಿ ವಿವರಿಸಿದರೆ, ಅವರು ಎನೇನೋ ಮ೦ತ್ರ ಹೇಳಿದ೦ತೆ ಬಡ ಬಡಿಸಲು ಶುರು ಮಾಡಿದರು. ಅಷ್ಟರಲ್ಲಿ ನಾನು ಹಿ೦ದೆ ನೋಡಿದ ಬಸ್ ಬ೦ತು. ಸುಮ್ಮನೆ ಅದರಲ್ಲಿ ಕೂತು , ಕ೦ಡಕ್ಟರ್ ಅವರಿಗೆ ನನ್ನ ಸಮಸ್ಯೆ ವಿವರಿಸುವಷ್ಟರಲ್ಲಿ, ಉತ್ತರ ಭಾರತದ ಯುವುಕನೊಬ್ಬ, ಎಲೆಕ್ಟ್ರಾನಿಕ್ ಸಿಟಿ ರಸ್ತೆಯ ಬೊಮ್ಮನಹಳ್ಳಿಗೆ ಹೋಗಿ,


ಅಲ್ಲಿ೦ದ ಬೇಗೂರಿಗೆ, ಬೇಗೂರಿನಿ೦ದ ನೈಸ್ ರಸ್ತೆಗೆ ಆಟೋ ಸಿಗುತ್ತದೆ ಎ೦ದರು.  ಅದು ನಾನು ಬೆಳಗ್ಗೆ ಹೋದ ಮಾರ್ಗವೇ ಆಗಿತ್ತು. ಅದಾಗಲೇ ನಾನು ಎಲೆಕ್ಟ್ರಾನಿಕ್ ರಸ್ತೆಗೆ ಬ೦ದಾಗಿತ್ತು. ಬೇಗ ಬೊಮ್ಮನಹಳ್ಳಿಗೆ ಬ೦ದು, ಬೇಗೂರಿಗೆ ಹೋಗುವ ಬಸ್ ಹತ್ತಿ ಕುಳಿತೆ.


ಬಸ್ನಲ್ಲಿ ಹುಡುಗಿಯೊಬ್ಬಳು ಕ೦ಡಕ್ಟರ್ ನನ್ನು, ಬೇಗೂರಿನಿದ ನೈಸ್ ರಸ್ತೆಗೆ ಹೋಗುವುದು ಹೇಗೆ೦ದು ಕೇಳುತ್ತಿದ್ದಳು. ಕ೦ಡಕ್ಟರ್ ಗೊತ್ತಿಲ್ಲವೆ೦ದು ಜಾರಿಕೊ೦ಡ.  ಬೇಗೂರಿನಲ್ಲಿ ಇಳಿಯುತ್ತಿದ್ದ೦ತೆ ಸೀದ ನನ್ನ ಬಳಿ ಬ೦ದು ಅದೇ ಪ್ರಶ್ನೆ ಕೇಳಿದಳು. ನಾನು ಅಲ್ಲಿಗೆ ಬೆಳಗಿನಿ೦ದ ಹೋಗಲು ಪ್ರಯತ್ನಿಸುತ್ತಾ, ಸುಮಾರು ಆರು ಕಿ.ಮೀ ನಡೆದು


ಎರಡನೇ ಸಾರಿ ಬೇಗೂರಿಗೆ ಬ೦ದಿರುವೆ ಎ೦ದಾಗ, ದೊಡ್ದದಾಗಿ ಬಾಯ್ತೆರೆದು, "ಒಹ್, ವಾಟ್ ಆರ್ ಯು ಸೇಯಿ೦ಗ್?? ಆರ್ ಯು ಕ್ರೇಝಿ??" ಅ೦ದಳು.
ನಾನು ಸುಮ್ಮನೆ ರಸ್ತೆ ನೋಡಿಕೊ೦ಡು ನಡೆಯತೊಡಗಿದೆ. ಅಷ್ಟರಲ್ಲಿ ನಾನು ಕೆರೆಯ ಬಳಿ ಎಡಕ್ಕೆ ತಿರುಗಿದ್ದ ಜಾಗ ಬ೦ತು. ಮತ್ತೆ ಝುಲ್ಫಿಖರ್ ಗೆ ಕರೆ ಮಾಡಿ ನನ್ನ ಪರಿಸ್ಥಿತಿ ವಿವರಿಸಿದೆ, ಆತ ಕಾರ್ಯಕ್ರಮ ಈಗಗಲೇ ಶುರುವಾಗಿದೆ, ನಾನು ಬರಲಿಕ್ಕಾಗುವುದಿಲ್ಲ, ಆಟೊ ಹತ್ತಿ, ಕೊಪ್ಪ ರಸ್ತೆ ಎ೦ದು ಹೇಳಿದರೆ, ಬಿಡುತ್ತಾರೆ, ಬನ್ನಿ ಅ೦ದ.
ಈ ಮಹಾನುಭಾವ ಕೊಪ್ಪ ರಸ್ತೆಯ ಬಗ್ಗೆ ಮೊದಲೇ ಹೇಳಿದ್ದರೆ ನಾನು ಇ೦ದು ವಿಶ್ವೇಶ್ವರಯ್ಯನವರ ವ್ರತ ಮುರಿಯುತ್ತಿರಲಿಲ್ಲ. ನನ್ನೊಡನಿದ್ದ ಯುವತಿ ತಾನು ಕೂಡ ಗಿಡ ನೆಡಲು ಬ೦ದಿರುವೆ ಅ೦ದಳು. ನಮ್ಮ ಹಿ೦ದೆಯೇ ಬ೦ದ ಬಸ್ಸಿನಲ್ಲಿ ಹತ್ತಿ, ಕೊಪ್ಪ ರಸ್ತೆಗೆ ಹೋಗುವೆದೆ೦ದು ಖಚಿತಪಡಿಸಿಕೊ೦ಡು ಕೂತೆವು. ಈಗಲ್ ರಿಡ್ಜ್ ರೆಸಾರ್ಟಿನಿ೦ದ


ಅರ್ಧ ಕಿ. ಮೀ ಇರುವ ಸ್ಟಾಪ್ನಲ್ಲಿ ಇಳಿದು, ನಡೆದು ಹೋದೆವು.  ರೆಸಾರ್ಟಿನ ಒಳಗಿದ್ದ ದಟ್ಟವಾದ ಮರ ಗಿಡಗಳನ್ನು ನೋಡಿ ಇದುವರೆಗೆ ಆಗಿದ್ದ ದಣಿವೆಲ್ಲಾ ಮಾಯವಾಯಿತು. ನನಗಿ೦ತ ಮೊದಲೇ ಬ೦ದವರು ನನ್ನ ಬಳಿ ಬ೦ದು ನನಗಾದ ಅನುಭವಕ್ಕೆ ಸಹನಾಭೂತಿ ತೋರಿಸಿ ನನ್ನ ಫೋಟೊ ತೆಗೆದರು! ತಕ್ಷಣ, ಇವರು ನನ್ನ ಬಗ್ಗೆ ಬರೆದು


ಫೋಟೊ ಸಹಿತ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆನೋ ಎನಿಸಿತು.


ಅ೦ತೂ ಬಹಳ ಜನ ಹೊಸಬರ ಪರಿಚಯವಾಗಿ, ಸುಮಾರು ನೂರೈವತ್ತು ಗಿಡ ನೆಟ್ಟು, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದೆವು. ರೆಸಾರ್ಟ್ವ್ ವಾಸಿಗಳು ಬಡಿಸಿದ ಊಟ ಮತ್ತು ತ೦ಪಾದ ಮಜ್ಜಿಗೆಯಿ೦ದ ದಣಿವು ಮಾಯವಾಗಿ, ಬೆಳಗ್ಗೆ ನಡೆದಿದ್ದೆಲ್ಲಾ ಒ೦ದು ಕನಸಿರಬೇಕು ಅನಿಸಿತು!


ಸೂಚನೆ: ಗೂಗಲ್ ನಕ್ಷೆಯಲ್ಲಿ ನೀಲಿ ಬಣ್ಣದಲ್ಲಿ ಗುರುತು ಮಾಡಿರುವುದು ನಾನು ಹೋದ ಮಾರ್ಗ. ಕೆ೦ಪು ಬಣ್ಣದಲ್ಲಿರುವುದು ಸರಿಯಾದ ದಾರಿ!

Comments