ಅಮ್ಮನ ಸೀರೆ

ಅಮ್ಮನ ಸೀರೆ

ಚಳಿಗಾಲ ಶುರು. ಹಸಿವೂ ಹೆಚ್ಚು, ನಿದ್ದೆಯೂ ಹೆಚ್ಚು.  ಅಮ್ಮ ಮಾಡಿ ಕೊಟ್ಟ ಕುರುಕು ತಿಂಡಿಯನ್ನು ಮೆಲ್ಲುತ್ತಾ, ರೇಡಿಯೋ ಹಾಕಿಕೊಂಡು ಬೆಚ್ಚನೆಯ ಹೊದಿಕೆಯಡಿ ಮಲಗಿದರೆ ಸ್ವರ್ಗಕ್ಕೇ ಕಿಚ್ಚು ಹಚ್ಚೆಂದ ಸರ್ವಜ್ಞ! ಹೊದಿಕೆ ಅಂದ ಕೂಡಲೇ ನನಗೆ ನನ್ನ ಚಿಕ್ಕಂದಿನ ಚಳಿಗಾಲದ ದಿನಗಳು ನೆನಪಾದವು.  ಅಮ್ಮನ ನಾಲೈದು ಹಳೆಯ ಕಾಟನ್ ಸೀರೆಗಳನ್ನು ಒಟ್ಟು ಮಾಡಿ, ಅದರಲ್ಲೇ ನೋಡಲು ಅಂದದ ಡಿಸೈನ್ ಇದ್ದದ್ದನ್ನು ಮೇಲು ಹೊದಿಕೆ ಮಾಡಿ ಆಕೆ ಹೊಲಿದು ಕೊಡುತ್ತಿದ್ದಳು.  ಅದನ್ನು ಹೊದ್ದು ಮಲಗಿಬಿಟ್ಟರೆ ಆಕೆಯ ಮಡಿಲಿನಲ್ಲೇ ಮಲಗಿದಂತಹ ಅನುಭವ.  ಆ ಹೊದಿಕೆಯ ತುಂಬಾ ಆಕೆಯ ಪರಿಮಳ.  ಆಕೆಗೆ ಒಂದು ಹೊದಿಕೆ ಮಾಡಬೇಕೆಂದರೆ ಒಂದೆರಡು ವರ್ಷಗಳಾದರೂ ಬೇಕಿತ್ತು.  ವರ್ಷಕ್ಕೆ ನಾಲ್ಕೈದು ಸೀರೆಗಳನ್ನು ಕೊಂಡುಕೊಳ್ಳುವಷ್ಟು ಆಕೆಯ ಬಳಿ ಹಣವಾದರೂ ಎಲ್ಲಿಯಿತ್ತು?. ನಮ್ಮೆಲ್ಲರ ಹೊಟ್ಟೆ, ಬಟ್ಟೆ ತುಂಬಿಸುವುದರಲ್ಲೇ ಖುಷಿ ಕಾಣುತ್ತಿದ್ದ ಆ ಜೀವ, ಸೀರೆ ಕೊಂಡುಕೊಳ್ಳುತ್ತಿದ್ದದ್ದೇ ಅಪರೂಪ.  ಅದನ್ನು ಹಳತು ಮಾಡಿ, ಇನ್ನದನ್ನು ಉಡಲು ಸಾಧ್ಯವೇ ಇಲ್ಲವೆಂದಾಗ ಅದಕ್ಕೆ ಹೊದಿಕೆಯಾಗುವ ಭಾಗ್ಯ!  

ಈ ಅಮ್ಮನ ಸೀರೆಯಿಂದಾದ ಹೊದಿಕೆಗೆ ಮಕ್ಕಳಲ್ಲಿ ಬಲು ಡಿಮಾಂಡ್. ಆದರೆ ಗೆಲ್ಲುತ್ತಿದ್ದದ್ದು ಮಾತ್ರ ಕೊನೆಯವಳೆಂದು ನಾನೇ.  ಅಣ್ಣ ಅಸೂಯೆಯಿಂದ ಅದನ್ನು ಬಚ್ಚಿಟ್ಟದ್ದು ಎಷ್ಟು ಬಾರಿಯೋ! ನಾನು ಅಳುತ್ತಿದ್ದದ್ದು ಕೂಡ. ಕೊನೆಗೆ ಅಣ್ಣನಿಗೆ ಪಾಪವೆನಿಸಿ, ತಂದು ಕೊಡುತ್ತಿದ್ದ.  ನಾನು ಅದನ್ನು ಹೊದ್ದು ಬೀಗುತ್ತಿದ್ದೆ. ಈಗ ಎಲ್ಲರೂ ದೊಡ್ಡವರಾಗಿದ್ದೇವೆ. ಅಣ್ಣ ವಿದೇಶದಲ್ಲಿದ್ದಾನೆ. ಆತನಿಗೆ ಬಾಲ್ಯದ ಈ ಸವಿನೆನಪುಗಳು ಇದೆಯೋ, ಇಲ್ಲವೋ ಎನ್ನುವಷ್ಟು ಕೆಲಸದ ಒತ್ತಡ! ಅಮ್ಮನ ಬಳಿ ಈಗ ಸಾಕಷ್ಟು ಸೀರೆಗಳಿದ್ದರೂ, ಆಗ ಇದ್ದಂತಹ ಮೆತ್ತನೆಯ ಹೂವಿನಂತಹ ಸೀರೆಗಳಿಲ್ಲ. ಹೊಲಿದು ಕೊಡುವಷ್ಟು ಶಕ್ತಿಯೂ ಕೂಡ ಆಕೆಗಿಲ್ಲ. ನನಗೇ ನನ್ನ ಕೆಲಸವೇ ಹಾಸಿ ಹೊದ್ದುಕೊಳ್ಳುವಷ್ಟು ಇರುವಾಗ?! ಈ ಒತ್ತಡದ ದಿನಗಳಲ್ಲಿ ಇದನ್ನೆಲ್ಲಾ ಹೊದ್ದು, ಮಲಗುವಷ್ಟು ಪುರುಸೊತ್ತು ಯಾರಿಗಿದೆ?  ದಿನದಿನಕ್ಕೂ ಹೊಸದಾದ ಡಿಸೈನ್, ಬಣ್ಣಗಳಿಂದ, ಶಾಪಿಂಗ್ ಮಾಲ್ ಗಳಲ್ಲಿ ರಿಯಾಯಿತಿ ದರವೆಂದು ಹೆಚ್ಚಿನ ದರದಲ್ಲಿ! ಮಾರಾಟವಾಗುವ ಡಿಸೈನರ್ ರಜಾಯಿಗಳನ್ನೇ ತರಬೇಕು. ಒಂದೇ ಒಗೆತದಲ್ಲಿ ಬಣ್ಣ, ಆಕೃತಿಯನ್ನು ಕಳೆದುಕೊಂಡು ನಿಸ್ತೇಜವಾಗುವ ರಜಾಯಿಯಡಿಯಲ್ಲಿ, ಹಳೆಯ ದಿನಗಳನ್ನು ಮೆಲುಕು ಹಾಕಬೇಕು. 
 

 

Rating
No votes yet

Comments