ಅಪ್ಪಾ - ಅಮ್ಮಾ ನೀವು ನಮಗಾಗಿ ಮಾಡಿದ್ದೇನು... ??

ಅಪ್ಪಾ - ಅಮ್ಮಾ ನೀವು ನಮಗಾಗಿ ಮಾಡಿದ್ದೇನು... ??

 ಬೆಂಗಳೂರಿನ ಇಳಿಸಂಜೆ ...ದೇವಸ್ಥಾನದಲ್ಲಿ ನವಗ್ರಹ ಸುತ್ತೋವಾಗ ಬಾಯಿಂದ ಪಟಪಟನೆ ಉದುರಿದ ಮಂತ್ರಗಳು ಒಮ್ಮೆಲೇ ಅಪ್ಪನ ನೆನಪನ್ನ ತಂದಿತು..
ನನ್ನ ಪಪ್ಪಾ...!! ಕಣ್ಣು ತುಂಬಿ ಬಂತು...

 

 
ಪಪ್ಪಾ... ದೇವರ ಮೇಲೆ ಅಪಾರ ನಂಬಿಕೆ..ಶ್ರದ್ಧೆ.. ಬಾಯಲ್ಲಿ ನೂರಕ್ಕೂ ಹೆಚ್ಚು ಮಂತ್ರಗಳು.. ದೇವರ ಮುಂದೆ ಕುಳಿತು ಭಕ್ತಿಯಿಂದ ಪೂಜೆ ಮಾಡೋವಾಗ ಪಪ್ಪನ ಕಣ್ಣಲ್ಲಿ , ನನ್ನ ಮಕ್ಕಳನ್ನ ಕಾಪಾಡು, ಖುಷಿಯಲ್ಲಿಡು ಅನ್ನೋ ಬೇಡಿಕೆ, ಅದನ್ನ ದೇವರು ನೆರವೆರಿಸಿಯೇ ತೀರ್ತಾನೆ ಅನ್ನೋ ದೇವರ ಮೇಲಿನ ಮುಗ್ಧ ವಿಶ್ವಾಸ ಅವರ ಕಣ್ಣೀರ ಬಿಂದುವಲ್ಲಿ ಮಿಂಚಿನಂತೆ ಹೊಳೆಯೋದನ್ನ ಚಿಕ್ಕಂದಿನಿಂದಾನು ನೋಡ್ತಾ ಬಂದಿದೀನಿ..

 
 
 

 
ಪಪ್ಪನನ್ನ ನೋಡ್ತಾ ನೋಡ್ತಾ, ಅವರು ಹೇಳುತಿದ್ದ ಮಂತ್ರಗಳನ್ನ ಕೇಳ್ತಾ ಕೇಳ್ತಾ ಅದು ನನ್ನಲ್ಲೂ ದೇವರ ಮೇಲೆ ಅಪಾರವಾದ ಭಕ್ತಿಯನ್ನ ಬಿತ್ತಿತು.. ಅದೇ ಮಂತ್ರಗಳು ಇವತ್ತು ದೇವಸ್ತಾನದಲ್ಲಿ ನನ್ನ ಬಾಯಿಂದ ಹೊರಬಿದ್ದಾಗ ಮನಸಲ್ಲಿ ಏನೋ ಸಂಕಟ..ಹತ್ತು ಹಲವು ಪ್ರಶ್ನೆಗಳು..ಕಣ್ಣೀರು..

 
ನಿಶ್ಯಬ್ದ ...!!!

Pappa I MIss YOu..

 
ಅಪ್ಪ - ಅಮ್ಮ .... ಇಂದು ನಮ್ಮನ್ನು ಅರ್ಥ ಮಾಡಿಕೊಳ್ಳದ , ನಮ್ಮ ಆಲೋಚನೆಗಳಿಗೆ ಹೊಂದಿಕೊಳ್ಳದ ಬರೀ ಎರಡು ಜೀವಗಳು..
 
ನಮ್ಮ ಹುಟ್ಟಿನಿಂದ ಹಿಡಿದು ಬೆಳವಣಿಗೆಯ ಪ್ರತಿ ಹಂತದಲ್ಲೂ ಜೀವನವನ್ನು ಸಮರ್ಪಕವಾದ ರೀತಿಯಲ್ಲಿ ನಡೆಸಲು ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡೋದು ಯಾರು ?? ನಮ್ಮ ಅಪ್ಪ ಅಮ್ಮ.. !!
ಜೀವನದ ಮೊದಲ ಪುಟ್ಟ ಪುಟ್ಟ ಹೆಜ್ಜೆಗಳನ್ನ ಇಡೋ ಪ್ರಯತ್ನದಲ್ಲಿ ಎಡವಿ ಬಿದ್ದಾಗ ನಮ್ಮನ್ನ ಮೇಲೆತ್ತಿದೋರು ಯಾರು ? ನಮ್ಮ ಅಪ್ಪ ಅಮ್ಮ.. !!
ಶಾಲೆಯ ಮೊದಲ ದಿನ ಅಮ್ಮನ ಸೆರಗು ಹಿಡಿದು ಕಾಗೆಯ ತರಹ ಕಿರುಚುತ್ತ...ಸಿಂಬಳ ಸುರಿಸುತ್ತ...ಅತ್ತಾಗ ನಮ್ಮ ಕಣ್ಣೀರು ವರೆಸಿ ಕೆನ್ನೆಗೊಂದು ಮುತ್ತು..ಕೈಗೊಂದು ಲಾಲಿಪಪ್ಪು ಕೊಟ್ಟದ್ದು ಯಾರು ..??? ನಮ್ಮ ಅಪ್ಪ ಅಮ್ಮ.. !!
ಕ್ಲಾಸಿನಲ್ಲಿ ಗೆಳಯ/ಗೆಳತಿಯ ಬಳಪ/ರಬ್ಬರು/ ಸ್ಕೇಲು/ ಕೊನೆಗೆ ಊಟದ ಡಬ್ಬಿಯ ತಿಂಡಿಯನ್ನೂ ಕದ್ದು ಮಾಸ್ತರ ದೊಣ್ಣೆಯ ಪ್ರಹಾರಕ್ಕೆ ಬಲಿಯಾದಾಗ ನಮಗೆ ಮುಲಾಮು ಹಚ್ಚಿ ಮುದ್ದಿಸಿದ್ದು ಯಾರು..?? ನಮ್ಮ ಅಪ್ಪ ಅಮ್ಮ.. !!
 
ಗರಿ ಗರಿಯ ಚಕ್ಕುಲಿ ಕೋಡುಬಳೆ ..ಮಾವಿನ ಮಿಡಿಯ ಉಪ್ಪಿನಕಾಯಿ.. ಬಾಯಲ್ಲಿ ನೀರಿಳಿಸೋ ಚಿತ್ರಾನ್ನದ ಗೊಜ್ಜು.. ಜೊತೆಗೊಂದಿಷ್ಟು ಚಟ್ನಿ ಪುಡಿ ಡಬ್ಬದಲ್ಲಿ ಇಟ್ಟು, ಪ್ರೀತಿಯ ಒಂದೆರಡು ಸಾಲುಗಳನ್ನ ಪುಟ್ಟ ಚೀಟಿಯಲ್ಲಿ ಬರೆದು ಹಾಸ್ಟೆಲ್ ಗೆ ರವಾನಿಸಿದ್ದು ಇದೆ ನಮ್ಮ ಅಪ್ಪ ಅಮ್ಮ ..!!
 
ಪರೀಕ್ಷೆಯಲ್ಲಿ ಮೊದಲಬಾರಿ ನಪಾಸದಾಗ ನಮ್ಮನ್ನ ಕುಗ್ಗಲು ಬಿಡದೆ ಸೋಲುಗಳನ್ನ ಸಲೀಸಾಗಿ ಸ್ವೀಕರಿಸೋಕೆ ಕಲಿಸಿದೋರು ಯಾರು ..?? ನಮ್ಮ ಅಪ್ಪ ಅಮ್ಮ.. !!
ಕಾಲೆಜುದಿನಗಳ ಮೊದಲ ಪ್ರೇಮದ ಸೋಲನ್ನ ಸಹಿಸಲಾಗದೆ ಬಲೆಗಾರರ ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡುತ್ತಿದ್ದಾಗ ನಮ್ಮನ್ನು ಆಲಂಗಿಸಿ ಸಂಬಾಳಿಸ್ಸಿದ್ದು ಯಾರು ..?? ನಮ್ಮ ಅಪ್ಪ ಅಮ್ಮ.. !!
ಕೆಲಸದ ಸಂದರ್ಶನದ ದಿನ ನಮ್ಮೊಡನೆ ಘಂಟೆಗಟ್ಟಲೆ ನಿಂತು, ಬಾಯಾರಿಕೆ ಅಂದಾಗ ಹತ್ತಿರದ ಅಂಗಡಿಗೆ ಹೋಗಿ ಬಾಟಲಿ ನೀರು ಜೊತೆಗೆ ಬಿಸ್ಕತ್ತು ತಂದು ಬಾಯಿಗಿತ್ತಿದ್ದು ಯಾರು .. ?? ನಮ್ಮ ಅಪ್ಪ ಅಮ್ಮ.. !!
ನಮಗೆ ಕೆಲಸ ಸಿಕ್ಕಿದ ದಿನ.... ಅಪ್ಪ ಆಫೀಸಿನ ತನ್ನ ಸಿಬ್ಬಂದಿಗೆ, ಅಮ್ಮ ತನ್ನ ಅಕ್ಕಪಕ್ಕದವರಿಗೆ ಬಂಧುಗಳಿಗೆ ಶ್ರೀ ವೆಂಕಟೇಶ್ವರ ಬೇಕರಿಯ ಸ್ಪೆಷಲ್ ಮೈಸೂರ್ ಪಾಕ್ ಕೊಟ್ಟು ಸಂಭ್ರಮ ಹೆಮ್ಮೆಯಿಂದ ಭೀಗಿದ್ದು ಇದೆ ನಮ್ಮ ಅಪ್ಪ ಅಮ್ಮ ..!!
ಅವರ ಪಾಲಿನ ಅಷ್ಟೂ ಖುಶಿಗಳನ್ನ ನಮ್ಮ ಬೊಗಸೆಗೆ ಧಾರೆ ಎರೆದು, ಕೇಳಿಯೂ - ಕೇಳದೆಯೂ ಇದ್ದ ನಮ್ಮ ಬೇಡಿಕೆಗಳನ್ನ ಕಣ್ರೆಪ್ಪೆ ಮುಚ್ಚಿ ತೆರೆಯೋದರೊಳಗೆ ನೆರೆವೆರಿಸಿದ್ದು ಯಾರು? ನಮ್ಮ ಅಪ್ಪ ಅಮ್ಮ.. !!
ನಮ್ಮೊಡನೆ ಇಷ್ಟು ಬೆರೆತು ಹೋದ ನಮ್ಮ ಅಮ್ಮ ಅಮ್ಮ ಕೊನೆಗೊಂದು ದಿನ ನಮ್ಮ ಪ್ರೀತಿಗೂ ಹಸಿರು ನಿಶಾನೆ ತೋರಿಸಿ ಅಪ್ಪ ತಮ್ಮ ಜೀವಮಾನದ ಅಷ್ಟೂ ಉಳಿತಾಯವನ್ನ ಅಮ್ಮ ತನ್ನ ಭಾವಿ ಸೊಸೆ/ ಮಗಳಿಗಾಗಿ ವರುಷಗಳಿಂದ ಮಾಡಿಸಿಟ್ಟ ಬಂಗಾರವನ್ನ ಧಾರೆ ಎರೆದು ಮದುವೆ ಮಾಡಿ ಸುಖವಾಗಿರಿ ಎಂದು ಹಾರೈಸಿದವರು ಯಾರು ?? ನಮ್ಮ ಅಪ್ಪ ಅಮ್ಮ..!!
 
ನಮಗಾಗಿ ಇಷ್ಟೆಲ್ಲಾ ಮಾಡಿದ ಎರಡು ಜೀವಗಳು ಈಗೊಂದು ಬುದ್ದಿ ಮಾತು ಹೇಳಿದರೆ , ಎಲ್ಲಾ ನಂಗೆ ಗೊತ್ತು ಅನ್ನೋ ಅಹಂಕಾರದ ಮಾತು ಯಾಕೆ??
ಸಂಗಾತಿ ಎದುರಿಗೆ ಅಮ್ಮ ಅಮ್ಮನ ಮನಸು ನೋಯಿಸೋ ದುಸ್ಸಾಹಸ ಯಾಕೆ?? ನಮ್ಮನ್ನ ಅರ್ಥನೇ ಮಾಡ್ಕೊಳೋದಿಲ್ಲ ಅನ್ನೋ ದೂರು ಯಾಕೆ??
please leave us alone.. we need some space ಅನ್ನೋ ಮಾತು ಯಾಕೆ???
೨೫ ವರ್ಷಗಳು ನಮ್ಮನ್ನ ಸಹಿಸಿದ ಅಮ್ಮ ಅಪ್ಪನನ್ನ ಅವರ ಕೊನೆಯ ದಿನಗಳಲ್ಲಿ ಸಹಿಸಲಾಗದೆ ಅವರನ್ನ ವೃದ್ದಾಶ್ರಮದ ಬಾಗಿಲಿಗೆ ತಳ್ಳುವುದು ಅದೆಷ್ಟು ನ್ಯಾಯ??
 
ಪ್ರಿಯ ಗೆಳೆಯ ಗೆಳತಿಯರೆ... ಇಂದು ನಮ್ಮ ಅಮ್ಮ ಅಪ್ಪ ಇರುವ ಜಾಗವನ್ನು ನಾಳೆ ನಾವೂ ತುಂಬುವವರೆ .. ನನ್ನ ಪ್ರಾರ್ಥನೆ ಒಂದೇ.. ನಮ್ಮ ತಾಯಿ ತಂದೆಯ ಮಾತು ಸಂಧರ್ಭ ಸನ್ನಿವೇಶಕ್ಕೆ ನಮಗೆ ಅಹಿತವೆನಿಸಿದ್ರು ಅದು ನಮ್ಮ ನಾಳೆಯ ಒಳಿತಿಗಾಗಿ ಅನ್ನೋದು ಸುಳ್ಳಲ್ಲ ..

 
ಒಮ್ಮೆ ಯೋಚಿಸಿ.. ನಾವು ನಮ್ಮ ಸ್ನೇಹಿತರಿಗೆ ಇಂದು ನೀಡುತ್ತಿರುವ ಸಮಯ ಪ್ರಶಸ್ತ್ಯದಲ್ಲಿ ಒಂದು ಪಾಲನ್ನು ನಮ್ಮ ಪೋಷಕರಿಗೆ ನೀಡುವುದು ನಮ್ಮ ಕರ್ತವ್ಯ ತಾನೇ..?? ಅವರ ಪ್ರೀತಿ ಹಾರೈಕೆ ನಿಮಗಾಗಿ ಇರಬೇಕಾದರೆ ನಿಮ್ಮ ಪ್ರೀತಿಗೆ ಅವರೂ ಅರ್ಹರಲ್ಲವೇ ...??

- ಸಿರಿ ಸತ್ಯನಾರಾಯಣ್ , ಬೆಂಗಳೂರು 
 

 

Comments