ಅರೆ ಮಲೆನಾಡಿನ ಮಾಗಿ ಹಣ್ಣು 'ಗುಡ್ಡೇ ಗೇರು'

ಅರೆ ಮಲೆನಾಡಿನ ಮಾಗಿ ಹಣ್ಣು 'ಗುಡ್ಡೇ ಗೇರು'

ಚಿತ್ರ

ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು

ಲೆನಾಡಿನ ಕಾಡಿನಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಬಗೆಬಗೆಯ ಫಲಪುಷ್ಪಗಳು ದೊರೆಯುತ್ತವೆ. ಇವುಗಳಲ್ಲಿ ಕೆಲವು ಉಪಯೋಗಕ್ಕೆ ಬಾರವು. ಕೆಲವು ಗಿಡಮೂಲಿಕೆ ಔಷಧಕ್ಕೆ ಮಾತ್ರ ಬಳಕೆ. ಆದಗೆ ಈ ಗುಡ್ಡೇ ಗೇರು ಔಷಧಕ್ಕೆ, ತಿನ್ನಲಿಕ್ಕೆ, ನೋಡಲಿಕ್ಕೂ ಚೆಂದ ಈ ಹಣ್ಣುಗಳು. ರಾಜ್ಯದ ಬಹುತೇಕ ಕಡೆ ಕಂಡಬಂದರೂ ಅರೆಮಲೆನಾಡಿನಲ್ಲಿ ಅತಿ ಹೆಚ್ಚು ಕಾಣಸಿಗುತ್ತದೆ. ಅಸ್ಸಾಂ,ಗುಜರಾತ್,ಕೇರಳ ಮುಂತಾದ ಕಡೆಗೂ ಇದು ಕಾಣಸಿಗುತ್ತದೆ. ಏಷ್ಯಾದ ದಕ್ಷಿಣ ಭಾಗ, ದಕ್ಷಿಣ ಆಫ್ರಿಕಾ ಮುಂತಾದ ಜಗತ್ತಿನ ಇತರ ಪ್ರದೇಶಗಳಲ್ಲಯೂ ಕಂಡುಬರುವ ಇದರ ವೈಜ್ಞಾನಿಕ ಹೆಸರು 'ಸೇಮೋಕಾರ್ಪಸ್ ಅನಾಕಾರ್ಡಿಯಮ್'.

ಮಳೆಗಾಲದ ಆರಂಭದಲ್ಲಿ  ಹೂ ಬಿಡುವ ಇದು ಮಾಗಿಯ ಕಾಲಕ್ಕೆ, ಅಂದರೆ ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಮಾಗಿದ ಹಣ್ಣುಗಳು ಸಿಗುತ್ತವೆ. ಕಾಯಿ ಇದ್ದಾಗ ಕಾಯಿ ಮತ್ತು ಬೀಜ ಎರೆಡೂ ಹಸಿರಾಗಿರುತ್ತವೆ. ಕಾಯಿ ಹಣ್ಣಾದಾಗ ಹಳದಿ ಮಿಶ್ರಿತ ಕೆಂಪು ಬಣ್ಣದಿಂದ ಕೂಡಿರುತ್ತವೆ. ಕೆಂಪನೆಯ ಈ ಹಣ್ಣುಗಳು ಗಿಡದಲ್ಲಿದ್ದಾಗ ಅಂಲಕಾರಿಕ ವಿದ್ಯತ್ ದೀಪ ಹಚ್ಚಿದಂತೆ ಕಾಣುತ್ತವೆ. ತಿನ್ನಲು ಬಲು ರಿಚಿಯಾದ ಈ ಹಣ್ಣುಗಳು ಹಸಿಯಿದ್ದಾಗ ಮತ್ತು ಪೂರ್ಣ ಹಣ್ಣಾಗದಿದ್ದಾಗ ತಿನ್ನಲು ಒಗರಾಗಿದ್ದು ಗಂಟಲುಹಿ ಡಿಯುತ್ತವೆ. ಬಿಲಿಸಿನಲ್ಲಿ ಒಣಗಿಸಿ ಅಥವಾ ಹುರಿದು ತಿನ್ನುವುದರಿಂದ ರುಚಿ ಮತ್ತು ಸ್ವಾದ ಇನ್ನೂ ಹೆಚ್ಚಾಗಿರುತ್ತದೆಯಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.  ಬಿಸಿಲಿನಲ್ಲಿ ಒಣಗಿಸಿಟ್ಟರೆ ತಿಂಗಳುಗಟ್ಟಲೆ ಇಟ್ಟುಕೊಂಡುತಿನ್ನಬಹುದಾಗಿದೆ. ಸರಮಾಡಿದ ಹಣ್ಣುಗಳನ್ನು ಆಲೆಮನೆಯ ಬೆಲ್ಲದ ಕೊಪ್ಪರಿಗೆಯಲ್ಲಿ ಅದ್ದು ತಿಂದರೆ ಅದರ ರುಚಿನೇ ಬೇರೆ.

ಗುಡ್ಡೇ ಗೇರಿನ ಔಷಧಿಯ ಗುಣ

ಮಲೆನಾಡಿನಲ್ಲಿ ಈ ಗುಡ್ಡೇ ಗೇರು ಔಷಧಿಯಾಗಿ ಹೆಚ್ಚು ಪರಿಚತ. ಇದರ ಸೊನೆ ಅಥವಾ ಎಣ್ಣಯ ಅಂಶ ಮೈಗೆ ತಾಗಿದರೆ, ಬೆಂಕಿ ತಗುಲಿದರಾಗುವ ಗುಳ್ಳೆಗಳಂತೆ ಮೈಮೇಲೆ ಗುಳ್ಳೆಗಳಾಗುತ್ತವೆ. ಅಲ್ಲದೆ ಗಂಭೀರವಲ್ಲದ ಗಾಯವಾಗಿ ಕಿರಿ ಕಿರಿಯುಂಟಾಗುತ್ತದೆ. ಇದರ ಎಣ್ಣಯಿಂದ ಬೆಂಕಿ ವೃಧ್ಧಿಸುತ್ತದೆ. ಆದ್ದರಿಂದ ಇದನ್ನು ' ಅಗ್ನಿ ವರ್ಧಕ'  'ಅಗ್ನಿಮುಖಿ' ಎಂದು ಕರೆಯುತ್ತಾರೆ.  ಈ ಹಣ್ಣಿನ ಉಪಯೋಗವಷ್ಟೇ ಅಲ್ಲದೆ ಇದರ ಕಪ್ಲು ಬೀಜಗಳೂ ಪ್ರಯೋಜನಕಾರಿ. ಈ ಬೀಜಗಳಿಂದ ಎಣ್ಣೆ ತೆಗೆಯುತ್ತಾರೆ. ಈ ಎಣ್ಣೆಯನ್ನು ಮೊರ, ಬುಟ್ಟಿ ಮುಂತಾದ ಮರದ ದಿನಬಳಕೆಯ ವಸ್ತುಗಳಿಗೆ ಹಚ್ಚುತ್ತಾರೆ. ಇದರಿಂದ ಆ ವಸ್ತುಗಳು ಹಚ್ಚುದಿನ ಬಾಳಿಕೆ ಬರುತ್ತವೆ. ಕಾಲಿಗೆ ಕೆಸರು ಹುಣ್ಣಾಗಬಾರದೆಂದು ಎಳೇ ಗೇರು ಬೀಜದ ಸೊನೆಯನ್ನು ಮಳೆಗಾಲದಲ್ಲಿ ಕಾಲಿನ ಬೆರಳುಗಳ ಸಂದಿಗೆ ಹಚ್ಚಿಕೊಳ್ಳುತ್ತಾರೆ. ಇದರ ಎಣ್ಣೆಯನ್ನು ಬಟ್ಟಯ ಮೇಲೆ, ಗೋಣಿಚೀಲದ ಮೇಲೆ ಗುರುತು ಮಾಡಲು, ಹೆಸರು ಬರೆಯಲು ಬಳಸುತ್ತಿದ್ದರು. ಕಾರಣ ಶಾಶ್ವತವಾಗಿರುತ್ತಿದೆ. ಆದ್ದರಿಂದ ಬ್ರಿಟೀಷರು ಇದನ್ನು ' ಮಾರ್ಕಿಂಗ್  ನೆಟ್ 'ಎಂದು ಕರೆಯುತ್ತಿದ್ದರು. ಒಣಗಿದ ಬೀಜಗಳ ಒಳಗಿರುವ ತಿರುಳು ಗೋಡಂಬಿಯಂತಿದ್ದು ಅದರಷ್ಟೇ ರುಚಿಯಾಗಿರುತ್ತದೆ. ಅಷ್ಟೇ ಅಲ್ಲದೆ ಹೆಚ್ಚಿನ ಪೌಷ್ಠಿಕಾಂಶ ಗಳನ್ನು ಒಳಗೊಂಡಿದೆ. ಇದನ್ನು ತಿನ್ನುವುದರಿಂದ ಬುಧ್ಧಿ ಶಕ್ತಿ ಹೆಚ್ಚಾಗುತ್ತದೆ. ಕಸ, ವಾತ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತವೆ. ನಿಯಮಿತವಾಗಿ ಇದನ್ನು ತಿನ್ನುತ್ತಾ ಬಂದರೆ ದೇಹ ದಪ್ಪವಾಗುತ್ತದೆ.

ದನಕರುಗಳಿಗೆ ದೃಷ್ಠತಾಗಿದರೆ, ದನಗಳು ತಮ್ಮ ಕರುಗಳಿಗೆ ಹಾಲು ಕುಡಿಸದಿದ್ದರೆ, ಹಿಂಡಿದ ಹಾಲು ವಾಸನೆ ಬಂದರೆ ಈ ಗೇರು ಬೀಜದಿಂದ ದೃಷ್ಠಿ ತೆಗೆದು ನಿವಾಳಿಸಿ ಚಲ್ಲುತ್ತಾರೆ. ಇದರಿಂದಲೋ ಏನೋ  ಇದಕ್ಕೆ ಸಂಸ್ಕೃತದಲ್ಲಿ " ಭೂತನಾಶನ" ಎಂದು ಕರೆಯುತ್ತಾರೆ. ದನ ಕರುಗಳ ಪೀಡೆ ಓಡಿಸುವ ಗೇರು ದೀಪಾವಳಿಯ ಹಟ್ಟಿ ಪೂಜೆಗೆ ಅವಶ್ಯವಾಗಿ ಬೇಕೇ ಬೇದು. "ಕೆಂದೆತ್ತಿನಕುಂಡ್ಯಾಗ ಕರೆ ಎತ್ತು ಹೊಕ್ಕಂಡತಿ". ಏನ್ ಹೇಳ್ಡ್ರಪ?  ಎಂಬ ಮೋಜಿನ ಒಗಟನ್ನು ಈ ಹಣ್ಣಿನ ಮೇಲೆ ಹೇಳುತ್ತಾರೆ.

ಹಿರಿಯ ಕಿರಿಯರೆನ್ನದೆ ಎಲ್ಲರೂ ಇಷ್ಟಪಟ್ಟು ಈ ಹಣ್ಣನ್ನು ತಿನ್ನುತ್ತಾರೆ ಮತ್ತು ಮನೆಗೆ ತರುತ್ತಾರೆ. ದನಕಾಯುವ ಹುಡುಗರು ಈ ಹಣ್ಣುಗಳನ್ನು ಸರ ಮಾಡಿ ಕರುವಿನ ಕೊರಳಿಗೆ ಕಟ್ಟಿಕೊಂಡು ಬರುವಾಗಿನ \ಅವರ ಸಡಗರ ಹೇಳತೀರದು. ಕೆಲವೊಮ್ಮೆ ಹಣ್ಣು ಕೊಯ್ಯಲು ಹೋಗಿ ಮರದಿಂದ ಕೆಲವರು ಬಿದ್ದದ್ದೂ ಉಂಟು. ಅಲ್ಲದೆ ದನ ಕಳೆದುಕೊಂಡು ಮನೆಯಲ್ಲಿ ಬೈಸಿಕೊಂಡ ಪ್ರಸಂಗಗಳೂ ಇವೆ. ಬರೀ ದನಕಾಯುವ ಹುಡುಗರಷ್ಟೇ ಅಲ್ಲದೆ ಶಾಲೆಗೆ ಹೋಗುವ ಹುಡುಗರೂ ಸಹ ಶಾಲೆ ತಪ್ಪಿಸಿ ಹಣ್ಣು ಕೊಯ್ಯಲು ಹೋಗಿ ಮೇಷ್ಟ್ರ ಜೊತೆ ಮಂಗಳರಾತಿ ಮಾಡಿಸಿಕೊಂಡ ನನ್ನಂಥವರೂ ಸಹ ಇದ್ದಾರೆ. ಕೆಲವು ಹುಡುಗರು ಹಣ್ಣಿನ ಸರಗಳನ್ನು ಹತ್ತಿರದ ಪೇಟೆಗೆ ತಂದು ಮಾರುವ ಮೂಲಕ ತಮ್ಮ ಕೈ ಕಾಸು ಸಂಪಾದಿಸಿಕೊಳ್ಳುತ್ತಾರೆ.

Rating
Average: 4 (3 votes)

Comments