ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ

ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ

ದೊರಕೊಂಡಂತೆ ತಣಿದಿಹ ಮನದವರ ತೋರಾ
ದುಃಖಕ್ಕೆ ದೂರವಾಗಿಹರ ತೋರಾ
ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ
ಸಕಳೇಶ್ವರ ದೇವಾ 
ಎನಗಿದೇ ವರವು ಕಂಡಾ ತಂದೇ
[ಸಕಳೇಶ ಮಾದರಸ-೧೧೩೦. ಬಸವಣ್ಣನ ಹಿರಿಯ ಸಮಕಾಲೀನ. ಕಲ್ಲುಕುರಿಕೆ ಎಂಬ ಊರಿನ ಅರಸ. ತಂದೆಯ ಹೆಸರು ಮಲ್ಲಿಕಾರ್ಜುನ. ನಂತರದ ಕಾಲದಲ್ಲಿ ಬಂದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕ ಎಂಬ ಕವಿಗಳು ಇವನ ವಂಶದವರು. ಮಾದರಸನ ೧೩೩ ವಚನಗಳು ದೊರೆತಿವೆ]
ಈ ವಚನವನ್ನು ಇವತ್ತು ಓದಿದಾಗ ’ದರ್ಶನ’ ಅನ್ನುವ ಮಾತಿನ ಇನ್ನೊಂದು ಅರ್ಥ ಹೊಳೆಯಿತು. 
ಏನು ದೊರೆಯುತ್ತದೆಯೋ ಅದರಲ್ಲೇ ತಣಿವನ್ನು, ತೃಪ್ತಿಯನ್ನು ಪಡೆದಿರುವವರನ್ನು ತೋರಿಸು. ದುಃಖಕ್ಕೆ ದೂರವಾಗಿರುವವರನ್ನು ತೋರಿಸು. ಸದಾ ಆನಂದದಲ್ಲಿ ಅಥವಾ ಸತ್ (ದೇವರು, ಸತ್ಯ) ಆನಂದದಲ್ಲಿ ಇರುವವರನ್ನು ತೋರಿಸು. ಇದೇ ನೀನು ಕೊಡಬಹುದಾದ ದೊಡ್ಡ ವರ.
ವಚನಕಾರ ಹೇಳುವ ಗುಣಗಳಿರುವವರು ಅಪೂರ್ವವೇ ಅಲ್ಲವೇ! ನೋಡುವುದಿದ್ದರೆ ಅಂಥವರನ್ನು ನೋಡಬೇಕು! ಆದರೆ ಅಂಥವರು ಎಷ್ಟು ಅಪೂರ್ವವೆಂದರೆ ಸ್ವತಃ ದೇವರೇ ನಮಗೆ ವರಕೊಟ್ಟು ಅವರು ಕಾಣುವ ಹಾಗೆ ಮಾಡಬೇಕು. ಅಂಥ ಗುಣಗಳು ಇರುವವರು ಇದ್ದರೆ ಅವರೇ ದೇವರು ತಾನೇ! ದೇವರಿಗೆ ಬಯಕೆ ಇಲ್ಲ, ದುಃಖವಿಲ್ಲ, ಅವನು ಸದಾನಂದ ಸ್ವರೂಪಿ ಅನ್ನುವ ಮಾತುಗಳು ಇವೆಯಲ್ಲ. ನಾವು, ನಮ್ಮಲ್ಲಿಲ್ಲದವನ್ನು, ಇರಬೇಕಾದವನ್ನು, ದುಃಖ ರಹಿತ, ತೃಪ್ತ, ಆನಂದ ಗುಣವನ್ನು ಒಟ್ಟಾಗಿಸಿ ದೇವರ ಕಲ್ಪನೆ ಮಾಡಿಕೊಂಡಿದ್ದೇವೆ. ಕಲ್ಪನೆಯ ದೇವರನ್ನು ಕಾಣುವುದಕ್ಕಿಂತ ಈ ಗುಣ ಇರುವ ಮನುಷ್ಯರನ್ನೇ ಕಂಡರೆ ಅದೇ ದೊಡ್ಡದು. 
’ದರ್ಶನ’ ವೆಂದರೆ ಇದೇ ಅಲ್ಲವೇ? ದೈವತ್ವವನ್ನು ಕಾಣುವುದು, ಅದೂ ನಮ್ಮ ಜೊತೆಯಲ್ಲೇ ಇರುವ ಮನುಷ್ಯರಲ್ಲಿ.
ಗೆಳೆಯ, ಕನ್ನಡದ ಮುಖ್ಯ ಕವಿ ಎಸ್. ಮಂಜುನಾಥ, ಇತ್ತೀಚೆಗೆ ’ಮಗಳು ಸೃಜಿಸಿದ ಸಮುದ್ರ’ ಎಂಬ ಕವನ ಸಂಕಲನ ತಂದವರು, ಒಮ್ಮೆ ಹೇಳಿದರು. ’ಶ್ರೀಮಂತಿಕೆ ಅಂದರೆ ಏನು? ನನಗೆ ಬೇಕಾದದ್ದು ಬೇಕಾದಾಗ ಸಿಕ್ಕರೆ ನಾನೇ ಶ್ರೀಮಂತ. ಹಸಿವಾದಾಗ ಊಟ, ಮಾತಾಡಿಸಬೇಕು ಅನ್ನಿಸಿದಾಗ ಗೆಳೆಯರು, ಬಿಸಿಲಲ್ಲಿ ನಡೆಯುವಾಗ ನೆರಳು, ದಣಿದಾಗ ನಿದ್ರೆ-ಬೇಕಾದಾಗ ಸಿಕ್ಕರೆ ಸಾಕು. ಬೇಕಾದದ್ದು, ಬೇಕಾದ ಹೊತ್ತಿನಲ್ಲಿ ಯಾರಿಗೆ ದೊರೆಯುವುದೋ ಅವರೇ ಶ್ರೀಮಂತರು.’ ಬೇಡವಾದದ್ದನ್ನೆಲ್ಲ ಬೇಕು ಅಂದುಕೊಳ್ಳುತ್ತಾ ಅವನ್ನು ಪಡೆಯುವುದಕ್ಕೆ ’ಶ್ರೀಮಂತ’ರಾಗಲು ಹೆಣಗುತ್ತೇವಲ್ಲವೇ. ಮಾದರಸ ಹೇಳುವಂಥವರು ಕಂಡರೆ ಪುಣ್ಯ. ನಾವೇ ಹಾಗಾದರೆ ಬಲು ದೊಡ್ಡ ಭಾಗ್ಯ. 
Rating
Average: 1 (1 vote)

Comments