ಎಲ್ಲಬಲ್ಲವರಿಲ್ಲ; ಬಲ್ಲವರು ಬಹಳಿಲ್ಲ!
"ನಾವೇ ನಮ್ಮ ಅದೃಷ್ಟದ ಶಿಲ್ಪಿಗಳು. ನಾವು ಸಾಧಿಸಬೇಕೆಂದು ನಿರ್ಧರಿಸಿರುವ ಕಾರ್ಯ ಎಂದಿಗೂ ನಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದುದಲ್ಲ. ಅದು ನೀಡುವ ಶ್ರಮ, ನೋವುಗಳು ನಮ್ಮ ಸಹನಾಶಕ್ತಿಯನ್ನು ಮೀರಿದ್ದಲ್ಲ. ನಮ್ಮ ಧ್ಯೇಯದ ಬಗ್ಗೆ ಎಲ್ಲಿಯವರೆಗೆ ನಮ್ಮ ಶೃದ್ಧೆ ಅಚಲವಾಗಿರುವುದೋ, ಎಲ್ಲಿಯವರೆಗೆ ಗೆಲ್ಲುವ ಛಲ ನಮ್ಮಲ್ಲಿರುವುದೋ, ಯಶಸ್ಸು ನಮ್ಮದಾಗಲೇ ಬೇಕು. ಇದು ನಿಶ್ಚಿತ."
- ಸರ್. ವಿನ್ ಸ್ಟನ್ ಚರ್ಚಿಲ್ ಅವರ ಮಾತಿದು.
ಆದರೆ ನಾವು ನಮ್ಮ ಶಕ್ತಿಯ ಮೇಲೆ ಕಡಿಮೆ, ದೇವರ ದಯೆಯ ಮೇಲೆ ಹೆಚ್ಚು ನಂಬಿಕೆ ಉಳ್ಳವರು. ಅರ್ಥಾತ್, ದೇವರು ನಮ್ಮ ನಿತ್ಯದ ಊಟವಾಗಬಾರದು. ಆತ್ಮ ಖಾಯಿಲೆ ಬಿದ್ದಾಗ ಔಷಧಿಯಾಗಿ ಆ ಭಗವಂತ ಬಳಕೆಯಾಗಬೇಕು. ಆದರೆ ಇಲ್ಲಿ ಉಲ್ಟಾ. ಸರ್ವ ಶಕ್ತ ಹಾಗು ಸರ್ವಾಂತಯಾಮಿ ಭಗವಂತ ನಮ್ಮ ನಿತ್ಯದ ಊಟವಾಗಿ ಪರಿಣಮಿಸಿದ್ದಾನೆ.
ಹಾಗೆಯೇ ಆತನ ಸ್ಥಾನವನ್ನು ನಾವು ಯಾವ ಮಟ್ಟಕ್ಕೆ ಇಳಿಸಿದ್ದೇವೆ? ನೋಡಬೇಕೆ? ಬನ್ನಿ.. ಹುಬ್ಬಳ್ಳಿಗೆ. ದೇವರುಗಳನ್ನು ಅಕ್ಷರಶ: ಫುಟ್ ಪಾತ್ ಮಟ್ಟಕ್ಕೆ ಇಳಿಸಿದ್ದೇವೆ. ಭೈಲಪ್ಪನವರ ನಗರದಲ್ಲಿ ನಮ್ಮ ಮಹಾವಿದ್ಯಾಲಯವಿದೆ. ಹಿಂಬದಿಯ ರಸ್ತೆ ವಿಜಯನಗರಕ್ಕೆ ಹೋಗುವ ಕೂಡು ರಸ್ತೆ. ಈ ರಸ್ತೆಯ ಪಕ್ಕಕ್ಕೆ ಬೃಹತ್ ಆಲ-ಅರಳಿ ಕೂಡಿಕೊಂಡು ಬೆಳೆದ ಅಗಾಧ ನೆರಳು ನೀಡುವ ಮರವಿದೆ. ಕೆಳಗೆ ಕಟ್ಟೆ ಕಟ್ಟಲಾಗಿದೆ. ಹಾಗಂತ ಜನ ಸಂಜೆ ವಿಹಾರಕ್ಕೆಂದು ಬಂದು ಕುಳಿತು ವಿಶ್ರಮಿಸುತ್ತಾರೆ ಎಂದು ಕೊಳ್ಳ ಬೇಡಿ. ಸುಮಾರು ೫೦ ಕ್ಕೂ ಹೆಚ್ಚು ದೇವರುಗಳನ್ನು ಮರದ ಬುಡದಲ್ಲಿ ಪ್ರತಿಷ್ಠಾಪಿಸಲಾಗಿದೆ. ಭಗ್ನಗೊಂಡ ಮೂರ್ತಿಗಳ ಸಂಖ್ಯೆ ಅಲ್ಲಿ ಸಿಂಹಪಾಲು. ನಮ್ಮ ಆಸ್ತಿಕರು ಅಷ್ಟಕ್ಕೆ ಬಿಟ್ಟಿಲ್ಲ. ಗಿಡದ ನಾಲ್ಕೂ ಬದಿಗೂ ಮೊಳೆಗಳನ್ನು ಹೊಡೆದು, ಕಟ್ಟು ಹಾಕಿಸಲಾದ ಕ್ಯಾಲೆಂಡರ್ ಫೋಟೋಗಳು ರಾರಾಜಿಸುವಂತೆ ಮಾಡಿದ್ದಾರೆ.
ಮೂರು ರಸ್ತೆಗಳು ಕೂಡುವ ಹಂತದಲ್ಲಿ ಈ ಮರವಿದ್ದು, ಪ್ರತಿಯೊಬ್ಬ ದಾರಿಹೋವುಕ ವಾಹನ ಸವಾರರು ತಪ್ಪದೇ ಒಂದೇ ಕೈಯಿಂದ ಈ ದೇವರುಗಳಿಗೆ ಗೌರವ ವಂದನೆ ಸಲ್ಲಿಸುತ್ತಾ ಸಾಗುತ್ತಾರೆ. ಕೆಲವರು ಒಂದೇ ಕೈಯಲ್ಲಿ ಹೆಲ್ಮೆಟ್ ತೆಗೆಯುತ್ತ ತಲೆಬಾಗಿಸಿ ವಂದಿಸುತ್ತಾರೆ. ಇನ್ನು ಕೆಲವರು ಭುಜದ ಮೇಲೆ ಮೊಬೈಲ್ ಇಟ್ಟುಕೊಂಡು ತಲೆಯನ್ನು ಭುಜಕ್ಕೂ, ಕಿವಿಯನ್ನು ಮೊಬೈಲ್ ಗೂ ಆನಿಸಿ ಸರ್ಕಸ್ ಮಾಡುತ್ತ ವಂದಿಸುವ ರೀತಿ ಮಜವಾಗಿರುತ್ತದೆ. ಜೀವದ ಹಂಗು ತೊರೆದು! ಅಕ್ಕ-ಪಕ್ಕ, ಎದುರಿಗೆ ಯಾವುದನ್ನೂ ಈ ಭಕ್ತರು ಲೆಕ್ಕಿಸುವುದಿಲ್ಲ. ಇಲ್ಲಿಯವರೆಗೆ ಆ ಭಗವಂತನೇ ಈ ಸವಾರರ ಪ್ರಾಣ ಕಾಯ್ದಿದ್ದಾನೆ ಎನ್ನುವಿರಾ?
ನಿಮಗೆಲ್ಲ ಗೊತ್ತಿದೆ. ಉತ್ತರ ಕರ್ನಾಟಕದಾ ಮಂದಿ ಎಲೆ-ಅಡಿಕೆ ತಿಂದು, ಮೂಲೆ ಕಂಡಲ್ಲಿ ಉಗಿಯುವುದರಲ್ಲಿ ಎತ್ತಿದ ಕೈ. ಒಲಿಂಪಿಕ್ ಸ್ಪರ್ಧೆಗಳಲ್ಲಿ ಉಗುಳುವ ಸ್ಪರ್ಧೆ ಇಟ್ಟರೆ ಎಲ್ಲ ೩ ಪದಕಗಳು ನಮ್ಮವರ ಕೊರಳಿಗೆ! ಅಷ್ಟು ಪರಿಣತರು. ಹಾಗೆ ತರಹೇವಾರಿ ಚಿತ್ತಾರ ಗೋಡೆಯ ಮೇಲೆ ಮೂಡಿಸುವ ಪರಿ ಕೆಲವರಿಗೆ ವಾಕರಿಕೆ ತರಿಸಿದರೂ..ಹಲವರಿಗೆ ‘ಮಾಡರ್ನ್ ಆರ್ಟ್’ ತರಹ ಪ್ರೇರಣೆ ನೀಡುತ್ತದೆ! ಹುಬ್ಬಳ್ಳಿ-ಧಾರವಾಡದ ಬಹುತೇಕ ವಾಣಿಜ್ಯ ಸಂಕೀರ್ಣಗಳಲ್ಲಿ ಮೂಲೆ ಮೂಲೆಗೆ ಎಲ್ಲ ಜಾತಿ-ಧರ್ಮಗಳಿಗೆ ಸಂಬಂಧಿಸಿದ ದೇವರುಗಳ ಟೈಲ್ಸ ಲಗತ್ತಿಸಲಾಗಿದೆ. ಹಿಂದೂಗಳ ಅಧಿದೇವ=ದೇವತೆಗಳು, ಮುಸ್ಲಿಂ ಬಾಂಧವರ ಪೂಜಾರ್ಹರು, ಕ್ರಿಷ್ಚಿಯನ್ ಸಹೋದರರ ವಂದನೀಯರು ಇಲ್ಲಿ ಅಕ್ಕ-ಪಕ್ಕದಲ್ಲಿಯೇ ಜಾಗೆ ಪಡೆದಿದ್ದಾರೆ. ಅಷ್ಟರ ಮಟ್ಟಿಗೆ ಧಾರ್ಮಿಕ ಸಹಿಷ್ಣುತೆ ಬಂದಿದೆ ಎನ್ನಬಹುದು!
ಅಕ್ಕ-ಪಕ್ಕದಲ್ಲಿಯೇ ಇದ್ದರೂ ಅವರು ಇಂದಿಗೂ ತಮ್ಮ ಹಕ್ಕುಗಳಿಗಾಗಿ ಬಡಿದಾಡಿಲ್ಲ. ಅವರ ಅನುಯಾಯಿಗಳೂ ಇದಕ್ಕೆ ಕಿಂಚಿತ್ ಪ್ರತಿಭಟನೆ ನಡೆಸಿಲ್ಲ. ಆದರೂ ಉಗುಳುವವರು ಅಲ್ಲಿಯೂ ಉಗುಳುವುದನ್ನು ಖಾಯಂ ಆಗಿಸಿದ್ದಾರೆ ಎಂದರೆ ನಂಬುತ್ತೀರಾ? ಆ ಮೂಲೆಗಳಲ್ಲಿ ಸರ್ವಶಕ್ತ ಭಗವಂತನ ಟೈಲ್ಸ್ ಹಚ್ಚಿಸಿದವರ ಉದ್ದೇಶ ಎಷ್ಟು ಘನವಾಗಿದೆ..ಹಾಗು ಅಲ್ಲಿಯೂ ಉಗುಳುವವರ ಮನಸ್ಥಿತಿ ಎಷ್ಟು ಆರೋಗ್ಯಪೂರ್ಣವಾಗಿದೆ ನಿಮ್ಮ ಊಹೆಗೆ ಬಿಟ್ಟಿದ್ದು. ಇದು ನನ್ನ ಊಹೆಗೆ ನಿಲುಕದ್ದು!
ಹಾಗೆಯೇ ಅವಳಿ ನಗರದಲ್ಲಿ ರಾಷ್ಟ್ರೀಯ ನಾಯಕರನ್ನು ಸಹ ಫುಟ್ ಪಾತ್ ಗೆ ಇಳಿಸಿದ್ದೇವೆ ಎಂದರೆ ನಿಮಗೆ ಚಿಂತೆಯಾಗಬಹುದು. ನಗರದ ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ಸುಮಾರು ೪೦ ಪುತ್ಥಳಿಗಳನ್ನು ಪುರಪಿತೃಗಳು ತಮ್ಮ ಹೆಸರುಗಳೊಂದಿಗೆ ಕೆತ್ತಿಸಿ ನಿಲ್ಲಿಸಿದ್ದಾರೆ. ರಾಷ್ಟ್ರನಾಯಕರ ಆದರ್ಶಗಳನ್ನು ಯುವ ಜನತೆ ಪಾಲಿಸಲು ಪ್ರೇರಣೆ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯ ಸಾಗಬೇಕಿತ್ತು. ಆದರೆ ಈ ಪುತ್ಥಳಿಗಳು ಮಹಾನಗರ ಪಾಲಿಕೆಯ ಆಸ್ತಿ ಎಂಬುವಂತೆ ಬಿಂಬಿತವಾಗುತ್ತಿರುವುದು ದುರದುಷ್ಟಕರ. ಹಾಗೆಯೇ ಈ ರಾಷ್ಟ್ರನಾಯಕರಿಗೆ ಸ್ನಾನ ಮಾತ್ರ ವರುಷದಲ್ಲಿ ೨ ಬಾರಿ. ಜನ್ಮದಿನದಂದು ಒಮ್ಮೆ, ಮತ್ತೊಮ್ಮೆ ಪುಣ್ಯತಿಥಿಯಂದು. ಅದೂ ಪತ್ರಿಕೆಗಳಲ್ಲಿ ಫೋಟೊ ಬರುವ ನಿಮಿತ್ತ! ರಸ್ತೆಯ ಬದಿಯ ಧೂಳು, ಹಕ್ಕಿಗಳ ಹೊಲಸು, ಎಂದೋ ಹಾಕಿದ, ಒಣಗಿ ನಿಂತ ಮಾಲೆ..ನಿಜವಾಗಿಯೂ ಹಿರಿಯರ ಆದರ್ಶಗಳನ್ನು ಆಂತರಿಕವಾಗಿ ಪಾಲಿಸುವ ಬಹಳಷ್ಟು ನಮ್ಮ ಹಿರಿಯರಿಗೆ ಇದು ನುಂಗಲಾರದ ತುತ್ತು. ಪುತ್ಥಳಿಯ ಎದುರಿನ ಉದ್ಯಾನ, ಲೈಟಿಂಗ ವ್ಯವಸ್ಥೆ ಎಲ್ಲ ಕಳಪೆ ನಿರ್ವಹಣೆಯಿಂದಾಗಿ ಕರದಾತ ಹಾಗು ರಾಷ್ಟ್ರ ಸಮರ್ಪಿತ ಜೀವನ ನಡೆಸಿದ ಮಹನೀಯರಿಗೆ ನಾವು ಘೋರ ಅನ್ಯಾಯ ವೆಸಗುತ್ತಿರುವಂತೆ ಭಾಸವಾಗುತ್ತಿದೆ.
ಪ್ರಜ್ಞಾವಂತರು ಈ ದಿಸೆಯಲ್ಲಿ ಚಿಂತಿಸಿ ಈ ಬಾಹ್ಯ ಆಡಂಬರಗಳಿಗೆ ಕಡಿವಾಣ ಹಾಕಿಸಬೇಕು. ಜಾರ್ಜ ಬರ್ನಾಡ್ ಷಾ ಹೇಳಿದ ಅವರು ಹೇಳಿದ ಮಾತು ಇಲ್ಲಿ ಉಲ್ಲೇಖನೀಯ.
"ನನ್ನ ಪಾಲಿಗೆ ಜೀವನವೊಂದು ಚಿಕ್ಕ ಮೋಂಬತ್ತಿಯಲ್ಲ.
ಅದೊಂದು ಅದ್ಭುತ ಪಂಜು.
ನಾನು ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವವರೆಗೆ
ಅದು ಉಜ್ವಲವಾಗಿ ಬೆಳಗುವಂತೆ ಮಾಡಬಯಸುತ್ತೇನೆ."
ಎಲ್ಲ ಬಲ್ಲವರಿಲ್ಲ; ಬಲ್ಲವರು ಬಹಳಿಲ್ಲ!