ನಡು ರಾತ್ರಿಯಲಿ ಅತ್ತ ಸಮಯ
ಆಗ ಸಮಯ ಸುಮಾರು ೧೧.೩೦ ಇರಬಹುದೇನೊ .ಲ್ಯಾಪ್ಟಾಪ್ನಲ್ಲಿದ್ದ ಆ ಸಾಲುಗಳನ್ನು ಓದಿದ ತಕ್ಷಣ ಮನಸಿಗ್ಗೆ ಅದೇನೋ ನೋವು. ಈ ವರೆಗೂ ಹಾಗೆ ಯಾರ ಬಳಿಯಲ್ಲೂ ಕರೆಸಿಕೊಂಡಿರದ ನನಗೆ ಹಾಗೆ ಆಗುವುದು ಸಹಜವೇ ಆಗಿತ್ತು . ಮನೆಯಲ್ಲಿ ಮಗು ಹಾಗು ಅಮ್ಮ ಇಬ್ಬರೂ ಇರಲಿಲ್ಲ. ಕಣ್ಣಲ್ಲಿ ಸುಮ್ಮ ಸುಮ್ಮನೇ ನೀರು
ರಾತ್ರಿ ೧೨ ಘಂಟೆಗೆ ಮನೆಗೆ ಬಂದ ಇವರು ನನ್ನ ಅವತಾರ ನೋಡಿ ಗಾಭರಿ . ಏನಾಯ್ತು ಎಂದರು. ಹೇಳಿ ಅವರಿಂದ ಮತ್ತೊಮ್ಮೆ ಅಪಹಾಸ್ಯಕ್ಕೆ ಈಡಾಗಲು ಮನಸ್ಸು ಬಯಸಲಿಲ್ಲ.
ಯಾರೋ ಕಂಡರಿಯದವರಿಂದ ಮಾತನ್ನು ಕೇಳುವುದು ಕಷ್ಟವೇ.
ಒಂದು ಸರಳವಾಗಿ ಆಗಬಹುದಾದ ಚರ್ಚೆ ವೈಯುಕ್ತಿಕ ನಿಂದೆ ಕಟು ಟೀಕೆಯಾದಾಗ ನನ್ನ ತರಹದ ಯಾರಿಗೇ ಆಗಲಿ ತುಂಬಾ ವೇದನೆಯೇ ಆಗುತ್ತದೆ.
ಯಾವುದೋ ಲೇಖನದ ಬಗ್ಗೆ ಬರೆಯಲು ಹೊರಟವಳು. ನನಗೆ ಯಾವುದೋ ಭಾಷೆಯೊಂದು ತಿಳಿದಿಲ್ಲ ಎಂದು ಹೇಳಿಸಿಕೊಂಡ ಮೇಲೆ ಇನ್ನು ಅದನ್ನು ಒಳಗೊಂಡ ಲೇಖನ ಬರೆಯುವದರಲ್ಲಿ ಅರ್ಥವಿಲ್ಲ ಎಂದು ಅನ್ನಿಸಿ ಪ್ರಯತ್ನ ಕೈಬಿಟ್ಟೆ .
ದುಖ: ಅಡಗಿಸಿಕೊಳ್ಳುವ ಯಾವ ಪ್ರಯತ್ನವೂ ಕೈ ಗೂಡಲಿಲ್ಲ. ಕಾರಣ ತಿಳಿಯದೆ ಇವರು ನನ್ನನ್ನು ಸ್ವಲ್ಪ ಹೊತ್ತು ಬೈದು ನಿದ್ರೆಗೆ ಜಾರಿದರು.
ನಾನು ಮಲಗಲು ಪ್ರಯತ್ನಿಸಿದೆ. ಆಗಲಿಲ್ಲ
ಕಣ್ಣ ಮುಂದೆ ನನ್ನನ್ನು ಹಿಂಸೆಗೆ ಈಡು ಮಾಡಿದ ಆ ಪದವೇ ಕುಣಿಯುತ್ತಿತ್ತು
ಯಾವತ್ತೂ ರಾತ್ರಿಯಲ್ಲಿ ಹೊರಗೆ ಬಂದು ನಿಂತವಳಲ್ಲ . ಆದರೆ ಮನಸ್ಸು ರೋಸಿ ಹೋಗಿದ್ದ ಕಾರಣ ಬಾಗಿಲು ತೆಗೆದು ಬಾಲ್ಕನಿಯಲ್ಲಿ ಚೇರ್ ಹಾಕಿಕೊಂಡು
ಕುಳಿತೆ.
ವಾಚ್ಮೆನ್ನ ಮಗು ಅಳುತ್ತಿತ್ತು. ಅದರ ತಾಯಿ ಸುಧಾರಿಸಲು ಹೊರಗೆ ತಂದಿದ್ದಳು
ಕೆಳಗೆ ಯಾವದೋ ಸುಮೊ ಬಂದು ನಿಂತಿತು ಕೆಳಗಿನ ಫ್ಲೋರಿನ ಹುಡುಗಿಯರು ಕೆಲಸ ಮುಗಿಸಿ ಬಂದಿದ್ದರೆಂದು ಕಾಣುತ್ತದೆ.ಅವರೂ ಮೇಲಕ್ಕೆ ಹತ್ತಿದರು
ನಾಯಿಗಳು ಬೊಗಳಲಾರಂಭಿಸಿದವು. ಹಸುವೊಂದು ಮೈನ್ ರೋಡಿನಲ್ಲಿ ಹೋಗುತ್ತಿತ್ತು . ಅದಕ್ಕಾಗಿಯೇ ಈ ಬೊಗಳಾಟ .
ನಮ್ಮ ಅಪಾರ್ಟ್ಮೆಂಟ್ಗಿಂತ ಸ್ವಲ್ಪ ದೂರದಲ್ಲಿ ಕೆರೆಯೊಂದಿದೆ ಆ ಕೆರೆಯ ಬಳಿ ಇರುವ ಜನರು ದಲಿತರು ಎನ್ನುತ್ತಾರೆ. ಅಲ್ಲಿರುವ ಚರ್ಚ್ ಮೇಲೆ ನಕ್ಷ್ತತ್ರ ದೀಪ ಹಾಕಿದ್ದರು .
ಇವನ್ನೆಲ್ಲಾ ನೋಡುತ್ತಿದ್ದರೂ ಮನಸ್ಸಿಗೆ ಯಾವ ರೀತಿಯಲ್ಲೊ ಶಾಂತಿ ಸಿಗಲಿಲ್ಲ. ಅಷ್ಟು ಹೊತ್ತಿಗಾಗಲೆ ಎರೆಡು ಘಂಟೆಯಾಗಿತ್ತು
ಕೊನೆಗೆ ದೇವರ ಕೋಣೆಯಿಂದ ಅಮ್ಮನ ನಿತ್ಯಾಷ್ಟೋತ್ತರ ಪುಸ್ತಕ ತೆಗೆದುಕೊಂಡು ಬಂದು ಪಠಿಸುತ್ತಾ ಇದ್ದಂತೆ ಮನಸ್ಸು ತಿಳಿಯಾಗುತ್ತಾ ಬಂತು.
ಸುಮಾರು ಹೊತ್ತಿನ ನಂತರ ಮನಸ್ಸು ಒಂದು ಸಹಜ ಸ್ಥಿತಿಗೆ ಬಂತು
ನನಗೆ ನಿರಾಳತೆಯನ್ನು ಕೊಟ್ಟ ಪುಸ್ತಕ ನನ್ನ ನಂಬಿಕೆಯ ಧರ್ಮದ್ದು. ನನ್ನ ಕಷ್ಟ ಕಾಲದಲ್ಲಿ ಕೈ ಹಿಡಿಯುವ ದೇವರು ನನ್ನ ನೆಚ್ಚಿನ ಧರ್ಮದ್ದೇ. ಹಾಗಾಗಿ ಯಾರೇನೆಂದರೂ ನನಗೇನು ಹಾನಿಯಾಗಲಿ, ಲಾಭವಾಗಲಿ ಇಲ್ಲ ಎಂಬುದನ್ನು ಮನಗೊಂಡೆ.
ಯಾರ ಯಾರ ಮಾತಿಗೋ ಬೇಸರಿಸಿಕೊಂಡು ಕೂರುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದನಿಸಿತು.
ಮತ್ತೆ ಸುಮಾರು ಮೂರುವರೆಗೆ ಮಲಗಿದೆ .ಕಣ್ತುಂಬಾ ನಿದ್ರೆ.
ಎದ್ದಾಗ ಬೆಳಗ್ಗೆ ೯.೩೦ . ಪುಣ್ಯಕ್ಕೆ ಅಂದು ಶನಿವಾರ. ಇವರಿಗೊ ನನಗೂ ರಜಾ ದಿನ