ಬೂಟ್ ಸೇವೆಗೆ ನಕ್ಕ ಬುಷ್ ಇದು ಮುಕ್ತ ಸಮಾಜ ಎಂದ
ಆತ ಅಮೆರಿಕಾ ಅಧ್ಯಕ್ಷ. ಅಮೆರಿಕಾವೋ ಇಡೀ ವಿಶ್ವಕ್ಕೆ ದೊಡ್ಡಣ್ಣ. ಅಂತಹ ರಾಷ್ಟ್ರದ ಪ್ರಥಮ ಪ್ರಜೆ ಜಾರ್ಜ್ ಬುಷ್. ಬುಷ್ ಇರಾಕ್ಗೆ ಹೋಗಿ ಅಲ್ಲಿನ ಪ್ರಧಾನಿ ಜೊತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಸುದ್ದಿಯಾಗಿಲ್ಲ. ಸುದ್ದಿಯಾಗಿದ್ದು ಆತನ ಮೇಲೆ ಇರಾಕಿ ಪತ್ರಕರ್ತ ಬೂಟ್ ಎಸೆದುದು. ಈ ಘಟನೆ ಎಷ್ಟೆಲ್ಲ ಹೊಸತನಕ್ಕೆ ನಾಂದಿಯಾಯಿತು ಎಂದರೆ ಅದು ವಿಡಿಯೋ ಗೇಮ್ ರಚನೆಗೂ ಪ್ರೇರಣೆಯಾಯಿತು.
ಅಮೆರಿಕಾ ಅಧ್ಯಕ್ಷ ಬುಷ್ಗೆ ಇರಾಕ್ನ ರಾಜಧಾನಿಯಲ್ಲಿ ಪತ್ರಕರ್ತ ಮಾಡಿದ ಬೂಟ್ ಸೇವೆ ಇದೀಗ ಸುದ್ದಿಯ ಕೇಂದ್ರ ಬಿಂದು. ಆ ಇರಾಕಿ ಪತ್ರಕರ್ತ ಮುಂತಾಜೀರ್ ಅಲ್ ಜೈದಿ ಈಗ ಇರಾಕ್ನಲ್ಲಿ ಹೀರೋ… ಹಾಗಾಗಿ ಇಡೀ ವಿಶ್ವವೇ ಅತ್ತ ತಿರುಗಿದೆ. ಈ ವರ್ತನೆಗೆ ಅಲ್ ಜೈದಿ ಬಂಧಿಸಲ್ಪಟ್ಟಿದ್ದರೂ ಆತನ ಪರ ಪ್ರತಿಭಟನೆಗಳು ನಡೆದಿರುವುದನ್ನು ನಾವೆಲ್ಲರೂ ಗಮನಿಸಬಹುದು. ಅಂತರ್ಜಾಲ ತಾಣ ಹೊಕ್ಕು ಗಮನಿಸಿದರೆ, ಅಲ್ಲಿ ಬುಷ್ಗೆ ಬೂಟ್ ಎಸೆದ ಘಟನೆ ವಿಡಿಯೋ ಗೇಮ್ಗೂ ಪ್ರೇರಣೆ ನೀಡಿರುವುದು ಮನದಟ್ಟಾಗುತ್ತದೆ.
ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ಈ ಪತ್ರಿಕಾಗೋಷ್ಠಿಯ ತುಣುಕುಗಳನ್ನು ಗಮನಿಸಿದರೆ ಅನೇಕ ವಿಷಯಗಳು, ಯೋಚನೆಗಳು ಹರಿದಾಡಬಹುದು. ಅಲ್ ಜೈದಿ ಮೊದಲು ಒಂದು ಬೂಟ್ ಎಸೆದ. ಅದರಿಂದ ಬುಷ್ ತಪ್ಪಿಸಿಕೊಂಡಾಗ ಮತ್ತೊಂದು ಬೂಟ್ ಎಸೆದ. ಇದು ಆಕ್ರೋಶದ ಸಂಕೇತ. ಅಣ್ವಸ್ತ್ರದ ನೆಪದಲ್ಲಿ ಇರಾಕ್ ಮೇಲೆ ಯುದ್ಧ ಸಾರಿದ ಬುಷ್ ಬಗ್ಗೆ ಇರಾಕ್ ಜನರಿಗಿದ್ದ ಆಕ್ರೋಶ ವ್ಯಕ್ತವಾಗಿದ್ದು ಹೀಗೆ ಎಂದು ವ್ಯಾಖ್ಯಾನಿಸಬಹುದು. ಅದು ಸರಿಯೂ ಕೂಡಾ. ಯಾಕೆಂದ್ರೆ ಅಲ್ಲಿ ಆತ ಪತ್ರಕರ್ತನಾಗಿ ಮಾತ್ರ ಇರಲಿಲ್ಲ. ತಾನೊಬ್ಬ ಇರಾಕಿ ಎಂಬುದು ಅಲ್ ಜೈದಿ ಮರೆತಿಲ್ಲ. ಹಾಗಾಗಿ ಭಾವೋದ್ರೇಕದಿಂದ ಅಂತೂ ಇಂತೂ ಮುಗೀತಲ್ಲ ಬುಷ್ ಆಡಳಿತಾವಧಿ ಎಂಬ ಭಾವುಕತೆ ಇಡೀ ಘಟನೆಗೆ ಕಾರಣ ಎಂದರೆ ತಪ್ಪಾಗಲಾರದು.
ಇನ್ನೊಂದು ಮಜಲನ್ನು ನಾವು ಗಮನಿಸಿದರೆ ಅಮೆರಿಕಾ ಅಧ್ಯಕ್ಷನಾಗಿ ಮಾತ್ರವಲ್ಲದೇ ಒಬ್ಬ ಸ್ಪೋರ್ಟಿವ್ ರಾಜಕಾರಣಿಯಾಗಿ ಈ ಘಟನೆಗೆ ಬುಷ್ ಸ್ಪಂದಿಸಿದ ರೀತಿ. ಎರಡು ಬಾರಿ ಬೂಟ್ ಎಸೆತದಿಂದ ತಪ್ಪಿಸಿಕೊಂಡ ಬಳಿಕ ಬುಷ್ ಹೇಳಿದ್ದು ಇದು ಹತ್ತು ನಂಬರ್ನ ಬೂಟ್. ಕೆಲ ಹೊತ್ತಿನ ಬಳಿಕ ಪ್ರತಿಕ್ರಿಯೆ ನೀಡಿದ ಬುಷ್ ಹೇಳಿದ್ದು, ಇಂತಹ ಘಟನೆ ಮುಕ್ತ ಸಮಾಜದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು.
ಒಂದು ಕ್ಷಣ ಈ ಘಟನೆ ಭಾರತದಲ್ಲಿ ನಡೆದಿದ್ದರೆ ನಮ್ಮ ರಾಜಕಾರಣಿಗಳು ಇದನ್ನು ಈ ರೀತಿ ಮುಕ್ತವಾಗಿ ತೆಗೆದುಕೊಳ್ಳಲು ಸಾಧ್ಯವಿತ್ತೇ? ಅಲ್ಲಿ ಅಲ್ ಜೈದಿ ಮೇಲೆ ಮೊಕದ್ದಮೆ ದಾಖಲಾಗಿದೆ. ನಿಜ ಒಪ್ಪಿಕೊಳ್ಳೋಣ ಆದರೆ ನಮ್ಮಲ್ಲಾಗಿದ್ದರೆ ನಮ್ಮ ಜನಪ್ರತಿನಿಧಿಗಳೆನಿಸಿಕೊಂಡಿದ್ದವರು ಸ್ಥಳದಲ್ಲೇ ದ್ವೇಷದ ರಾಜಕಾರಣಕ್ಕೆ ಮುಂದಾಗಿರುತ್ತಿದ್ದರು ಅಲ್ವೇ?
ಈ ಚರ್ಚೆ ಹಾಗಿರಲಿ ಇಲ್ಲಿ ಇನ್ನೊಂದು ವಿಷಯ ಏನ್ ಗೊತ್ತಾ? ಈ ಘಟನೆ ವಿಡಿಯೋ ಗೇಮ್ ರಚನೆಗೂ ಕಾರಣವಾಗಿದ್ದು. ಅಚ್ಚರಿಯೇ ಸರಿ. ಕೇವಲ ಎರಡೇ ದಿನಗಳಲ್ಲಿ ಈ ಗೇಮ್ ರಚನೆಯಾಗಿ ವಿಶ್ವದೆಲ್ಲೆಡೆ ಬಹಳ ಜನ ಬೂಟ್ ಎಸೆಯುವ ಆಟ ಆಡಿ ಬುಷ್ ಮೇಲಿನ ದ್ವೇಷ ತೀರಿಸ್ತಾ ಇದ್ದಾರೆ. ನಿಮ್ಗೂ ದ್ವೇಷ ಏನಾದ್ರೂ ಇದ್ರೆ ಈ www.SockandAwe.com, www.t-enterprise.co.uk ವೆಬ್ ಸೈಟ್ಗೆ ಭೇಟಿ ಮಾಡಿ ಆಟ ಆಡಬಹುದು.