ಮೂಗು ತೂರಿಸುವುದಲ್ಲ...

ಮೂಗು ತೂರಿಸುವುದಲ್ಲ...

ಬರಹ

ಗಂಡಸಿಗೆ ಯಾಕೆ ಗೌರಿ ಚಿಂತೆ ಅಂತ ಮೂಗು ಮುರಿಯಬೇಡಿ. ನಾನು ಹೇಳಹೊರಟದ್ದು ಮಹಿಳೆಯರ ಉಡುಗೆ ತೊಡುಗೆಗಳ ಬಗೆಗೆ. ಆಧುನಿಕತೆಗೆ ಸರಿಯಾಗಿ ವಸ್ತ್ರ ಧರಿಸಿದರೆ ಭಾರತೀಯ ಸಂಸ್ಕೃತಿ ಹಾಳಾಯ್ತು ಅಂತ ಒಂದು ಕಡೆ ಹೇಳಿದರೆ, ನೋಡ್ರೀ ಹರಳ್ಳೆಣ್ಣೆ ಗೌರಮ್ಮ ಬಂದಳು ಅಂತ ಸದಾ ಸೀರೆ ಧರಿಸಿ ಬಂದರೆ ಹೇಳ್ತಾರೆ. ಇನ್ನು ವಿಶ್ವ ಸುಂದರಿ ಸ್ಪರ್ಧೆ ನಡೆಯ ಬೇಕೋ ಬೇಡವೋ ಎಂಬ ಬಗ್ಗೆ ಮಹಿಳಾ ಸಂಘಟನೆಗಳಲ್ಲೇ ಗೊಂದಲ ಇದೆ. ಅಲ್ಲಿ ಹೆಣ್ಣು ಮಕ್ಕಳನ್ನು ಮಾರುಕಟ್ಟೆ ಸರಕಿನ ಹಾಗೆ ಬಿಂಬಿಸಲು ಅದಷ್ಟು ಕಡಿಮೆ ಬಟ್ಟೆ ಧರಿಸುವಂತೆ ಮಾಡ್ತಾರೆ ಎಂದು ಒಂದು ಗುಂಪು ಹೇಳಿದರೆ, ಇದು ಮಹಿಳಾ ಸ್ವಾತಂತ್ರ್ಯದ ಪ್ರಶ್ನೆ. ತನಗೆ ಬೇಕಾದ ವಸ್ತ್ರವನ್ನು ಆಕೆ ಧರಿಸಲಿ ಅಂತ ಇನ್ನೊಂದು ಗುಂಪಿನ ವಾದ.

ಆದರೆ ಎರಡು ಗುಂಪುಗಳಿಗೂ ತಿಳಿದಿಲ್ಲವೆನಿಸುತ್ತದೆ ಉಡುಪುಗಳ ಆಯ್ಕೆಯಲ್ಲಿ ಮಹಿಳೆಯರಿಗೆ ಯಾವತ್ತೂ ಸ್ವಾತಂತ್ರ ಇಲ್ಲ ಎಂಬುದು. ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಎನ್ನೋ ಹಾಗೆ ಇದರಲ್ಲಿ ಸಾದಾ ಪುರುಷನದೇ ಕಿತಾಪತಿ. ಆತನ ಲಕ್ಷ್ಯಕ್ಕೆ ತಕ್ಕಂತೆ ಕುಣಿಯುವುದಷ್ಟೇ ಮಹಿಳೆಯ ಕೆಲಸ. ಆದರೆ ಅದಕ್ಕೆ ಸಂಸ್ಕೃತಿ ಇಲ್ಲವೇ ಆಧುನಿಕತೆಯ ಲೇಪವಿರುವ ಕಾರಣ ಇದರ ಹಿಂದಿನ ಪುರುಷನ ಕೈವಾಡ ತಿಳಿಯುವುದೇ ಇಲ್ಲ. ಧರ್ಮ ಯಾವತ್ತೂ ಪುರುಷನಿಷ್ಠ. ಸಂಸ್ಕೃತಿಯಲ್ಲಿ ಧರ್ಮದ ಪಾಲು ನಿರ್ಣಾಯಕ. ಹೀಗೆ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ಕಲೆ ಪುರುಷಜನ್ಯ ಮೌಲ್ಯಗಳಿಗಿದೆ. ಪ್ರತಿ ಧರ್ಮವು ಸ್ತ್ರೀಗೆ ಮಾತ್ರ ಇಂಥ ಉಡುಪುಗಳನ್ನು ಧರಿಸಬೇಕೆಂದು ನಿರ್ಬಂಧಿಸುತ್ತದೆಯೇ ವಿನಾ ಪುರುಷರಿಗಲ್ಲ. ನಮ್ಮ ಸಮಾಜದ್ದೇ ಹೇಳುವುದಾದರೆ ಪುರುಷರ ಉಡುಗೆಗಳಲ್ಲಿ ಆದ ಬದಲಾವಣೆ ಸ್ತ್ರೀ ಉಡುಗೆಗಳಲ್ಲಿ ಆಗಿಲ್ಲ.

ರಣರಣ ಬಿಸಿಲಿನಲ್ಲೂ ಕಿತ್ತುಬರುವ ಬೆವರಿನ ನಡುವೆಯೂ ಉಸಿರಾಡಲು ಕಷ್ಟವಾಗುವ ಉಡುಗೆ ಧರಿಸುವವರ ಮತ್ತು ರ್ಯಾಂಪ್ ಮೇಲೆ ಬೆಕ್ಕಿನ ಹೆಜ್ಜೆಹಾಕುವ ತುಂಡು ಲಂಗದ ಹುಡುಗಿಯರ ನಡುವೆ ಅಂಥ ವ್ಯತ್ಯಾಸವೇನಿಲ್ಲ. ಕಾಲಕ್ಕೆ ತಕ್ಕಂತೆ ಹೆಣ್ಣನ್ನು ಬಟ್ಟೆಯಲ್ಲಿಯೇ ಬಚ್ಚಿಡುವ ಇಲ್ಲವೇ ಬಿಚ್ಚಿಡುವ ಸಾಮರ್ಥ್ಯ ಪುರುಷ ಕೇಂದ್ರಿತ ಮೌಲ್ಯಗಳಿಗಿದೆ. ಈಗ ಹೇಳಿ ಇದು ಮಹಿಳೆಯರು ಮಾತ್ರ ಯೋಚಿಸಬೇಕಾದ ವಿಷಯವೇ?