ತಂತ್ರಜ್ಞಾನದ ಚಂಚಲತೆ

ತಂತ್ರಜ್ಞಾನದ ಚಂಚಲತೆ

ಹಾಗೆ ಹಳೆ ಸಿ.ಡಿ.ಗಳನ್ನು ನೋಡುತ್ತಿದ್ದೆ. ಕೆಲವು ಮೇಜಿನ ಮೇಲೆ ಇದ್ದರೆ ಕೆಲವು ಮೇಜಿನ ಡ್ರಾಯರ್ ಒಳಗೆ ಇದ್ದವು. ಹಾಗೆ ಕೆಲವು ಕಪಾಟಿನ ಒಳಗೆ ಇದ್ದವು. ಎಲ್ಲ ಸಿ.ಡಿ.ಗಳನ್ನು ಒಟ್ಟು ಮಾಡಿ ಒಂದು ಕಡೆ ಇಟ್ಟೆ. ಕೆಲವು ಸಿ.ಡಿ.ಗಳಿಗೆ ಟೈಟಲ್ ಇರಲಿಲ್ಲ. ಹಾಗೆ ಕೆಲವುಗಳಿಗೆ ಕವರ್ಗಳು ಇರಲಿಲ್ಲ. ಬಹಳ ಒಳ್ಳೆಯ ಸಂಗ್ರಹಗಳು ಇದ್ದವು. ಅದರಲ್ಲಿ ಟಿ.ಕೆ.ರಂಗಾಚಾರಿ, ಜಿ.ಎನ್.ಬಾಲಸುಬ್ರಮಣ್ಯಂ ಮೊದಲಾದ ಸಂಗೀತ ದಿಗ್ಗಜರ ಕಚೇರಿಗಳಿದ್ದವು. ಹಾಗೆ MIT ಪ್ರಾಧ್ಯಾಪಕರಾದ ಗಿಲ್ಬೆರ್ಟ್ ಸ್ಟ್ರಾಂಗ್ ಅವರ ಬೀಜಗಣಿತದ ಸಿ.ಡಿಗಳೂ ಇದ್ದವು.

ಇವುಗಳನ್ನೆಲ್ಲ ಕೂಡಿ ಇಡುವುದಕ್ಕೆ ಒಂದು ಸಿ.ಡಿ. ಪೌಚನ್ನು ತರಲು ಯೋಚಿಸಿದೆ.ಸ್ನೇಹಿತನೊಬ್ಬ ಮನೆಗೆ ಬರುವವನಿದ್ದ. ಹೇಗೂ ಅವನು ಕೃಷ್ಣರಾಜ ಮಾರುಕಟ್ಟೆ ಮೂಲಕವೇ ಬರಬೇಕು. ಹಾಗೆ ನಾನು ಬರುವಾಗ ಒಂದು ಪೌಚ್(೧೨೦ ಸಿ.ಡಿ ಸಾಮರ್ಥ್ಯ) ತರಲು ಫೋನ್ ಮಾಡಿ ಹೇಳಿದೆ. ಆಗ ಅವನು"ಈಗ ಯು.ಎಸ್.ಬಿ ಸ್ಟೋರೇಜ್ ಮಾಮೂಲಿ ಆಗಿದೆ. ನೀ ಇನ್ನು ಸಿ.ಡಿ. ಕಾಲದಲ್ಲೇ ಇದಿಯಲ್ಲ" ಅಂತ ಹಿಯಾಳಿಸಿದನು. ನನಗೂ ಹಾಗೆ ಎನಿಸಿತು. ಅವನ ಮಾತಿನಿಂದ ನನಗನಿಸಿದ್ದು ತಂತ್ರಜ್ಞಾನದ-ಚಂಚಲತೆ(technology-volatility) ಅಂದಾಜು ಮಾಡುವುದು ಬಹಳ ಕಷ್ಟ. ಆದರೂ ಹಳೆ ಸಿ.ಡಿ.ಗಳನ್ನು ಇಡಲು ಪೌಚ್ ಬೇಕಿತ್ತು. ಅದಕ್ಕೆ ತರಿಸಿದೆ.

ಹಾಗಾದರೆ ಇನ್ನು ಸಿ.ಡಿ, ಮಾಗ್ನೆಟಿಕ್ ಟೇಪ್ ಹಾಗೂ ಫ್ಲಾಪಿಯ ಹಾದಿ ಹಿಡಿಯುವುದು ನಿಶ್ಚಿತ ಅನ್ನಿಸುತ್ತದೆ. ಬಹುಷಃ ಡಿವಿಡಿ ಕೂಡ ಇದೆ ಹಾದಿ ಹಿಡಿಯುವುದೇನೋ? ಸೋನಿಯ ಬ್ಲೂ-ರೇ ಮುಂದೆ ಸೋಲುಂಡ ತೋಶಿಬಾ HD-ಡಿವಿಡಿ, ಸಿಕ್ಕಾಪಟ್ಟೆ ನಷ್ಟ ಅನುಭವಿಸಿತು. ಮಾತು ಅದಲ್ಲ. ಸೋನಿಯ ೫೦ಜಿಬಿ ಬ್ಲೂ-ರೇ ಡಿಸ್ಕ್ ಎಲ್ಲಿ, ೭೦೦ಎಮ್.ಬಿ ಸಿ.ಡಿ ಅಥವಾ ೭ಜಿಬಿ ದ್ವಿಮುಖ-ಪದರದ(dual-layer) ಡಿವಿಡಿ ಎಲ್ಲಿ? ಸೋನಿಯ ಬ್ಲೂ-ರೇ ಈಗ ಬಹಳ ದುಬಾರಿ ಇರಬಹುದು. ಯಾವುದು ದುಬಾರಿ ಇರಲಿಲ್ಲ ಹೇಳಿ. ಉಳ್ಳವರಿಗೆ ಮಾತ್ರ ಇದ್ದ ಮೊಬೈಲ್ ಫೋನ್, ಈಗ ನಾಯಿ ಬಾಲಕ್ಕೂ ಇದೆ ಎಂದು ಹಳ್ಳಿಯವರೂ ಹೇಳುತ್ತಾರೆ. ಅದೇ ರೀತಿಯಲ್ಲಿ ಬ್ಲೂ-ರೇ ಕೂಡ ಅಗ್ಗವಾಗುವುದರಲ್ಲಿ ಸಂಶಯವಿಲ್ಲ.

೫ ವರ್ಷದ ಹಿಂದಿನ ಮಾತು. ಮನೆಯಲ್ಲಿ ಸಿಡಿ-ರೈಟರ್ ಇದ್ದರೆ ಸ್ನೇಹಿತರ ಹುಬ್ಬೆರಿಸುತ್ತಿತ್ತು. ಆದರೆ ಈಗ ದ್ವಿಮುಖ-ಪದರದ ಡಿವಿಡಿ-ರೈಟರ್ ಮಾಮೂಲಿಯಾಗಿವೆ. ಇನ್ನು ಅದೂ ಕೂಡ ಸಿಡಿಯ ಹಾಡಿ ಹಿಡಿಯುತ್ತೇನೋ? ಇವೆಲ್ಲದರ ಜೊತೆಗೆ ಈಗ ಅಧಿಕ ಸಾಮರ್ಥ್ಯದ ಯು.ಎಸ್.ಬಿ-ಹಾರ್ಡಿಸ್ಕ್ ಗಳು, ಫ್ಲಾಶ್-ಮೆಮೋರಿಗಳು ಬಂದಿದೆ. ಇವುಗಳು ಬಹಳ ಪೋರ್ಟೇಬಲ್ ಮತ್ತು ಹಲವು ರೀಡ್-ರೈಟ್ ಸುತ್ತುಗಳನ್ನು(cycle) ಒಳಗೊಂಡಿವೆ. ಹಾಗೆ ಕೇವಲ ೧೨೮ಎಮ್.ಬಿ ಗೆ ಸೀಮಿತವಾಗಿದ್ದ ಫ್ಲಾಶ್-ಮೆಮೋರಿಗಳು ಈಗ ಸುಮಾರು ೬೦ಜಿಬಿಗಳಲ್ಲೂ ಲಭ್ಯ. ತಂತ್ರಜ್ಞಾನ ಮುಂದುವರೆದಂತೆ ಇನ್ನಷ್ಟು ಸಾಮರ್ಥ್ಯ ಹೆಚ್ಚಬಹುದು. ನಾನು ಕೇಳಿದ ಹಾಗೆ ಆಪಲ್ ಅವರು ೧೬೦ಜಿಬಿ ಫ್ಲಾಶ್-ಮೆಮೊರಿ ಇರುವ ಲ್ಯಾಪ್-ಟಾಪ್ ಗಳನ್ನೂ ಹೊರತಂದಿದ್ದಾರೆಂದು. ಆಗ ಹಾರ್ಡ್-ಡಿಸ್ಕ್ ಗಳು ಕೂಡ ತೆರೆಗೆ ಸರಿಯಬಹುದು. ಏಕೆಂದರೆ ಫ್ಲಾಶ್-ಮೆಮೊರಿಗಳ ರೀಡ್-ರೈಟ್ ಸಮಯ ಮೈಕ್ರೋ-ಸೆಕೆಂಡ್ ಗಳಲ್ಲಿ ಇದ್ದರೆ, ಹಾರ್ಡ್-ಡಿಸ್ಕ್ ಗಳದ್ದು ಮಿಲ್ಲಿ-ಸೆಕೆಂಡ್ ಗಳಲ್ಲಿ. ಅಂದರೆ ಫ್ಲಾಶ್ ಗಳ ವೇಗ ಹಾರ್ಡ್-ಡಿಸ್ಕ್ ಗಳಿಗಿಂತ ೧೦೦೦ ಪಟ್ಟು ಹೆಚ್ಚು. ಬಹುಷಃ ಫ್ಲಾಶ್ ಬಂದರೆ ರ್ಯಾಮ್(RAM) ಕೂಡ ಬೇಡವಾಗಬಹುದು. ಅಂತಹ ಪದಗಳೂ ಕೂಡ ಮಾಯವಾಗಬಹುದು. ಇನ್ನು ನಾನೋ-ತಂತ್ರಜ್ಞಾನ ಬಂದರೆ ಏನೇನು ಆಗುತ್ತವೋ ಹೇಳಲು ಅಸಾಧ್ಯದ ಮಾತು. ಆದರೆ ಆರ್ಥಿಕ ಹಿಂಜರಿತದಿಂದಾಗಿ ಸದ್ಯದ ಮಟ್ಟಿಗೆ ಚಂಚಲತೆ ಅಷ್ಟು ಇಲ್ಲ ಎನಿಸುತ್ತದೆ.

ಹಾಗೆ ಮತ್ತೆ ಸಿಡಿ ವಿಷಯಕ್ಕೆ ಬರೋಣ. ಆಕಾಶವಾಣಿಯವರು ತಮ್ಮ ಹಳೆ ಗ್ರಾಮಾಫೋನ್-ರೆಕಾರ್ಡ್ ಗಳು ಹಾಳಾಗುತ್ತವೆ ಎಂದು, ಅವುಗಳನೆಲ್ಲ ಕ್ಯಾಸೆಟ್ ಮಾಡಿದರು. ಕ್ಯಾಸೆಟ್ ಎಂದರೆ, ಫಂಗಸ್ ತೊಂದರೆ. ಅದ್ದರಿಂದ ಈಗ ಸಿಡಿಗಳಿಗೆ ಮಾರ್ಪಾಟು ಮಾಡುತ್ತಿದ್ದಾರೆ. ಸ್ವಲ್ಪ ದಿನಗಳ ನಂತರ ಸಿ.ಡಿ-ರೀಡರ್ ಗಳು ಮಾಯವಾಗಬಹುದು. ಆಗ ಮತ್ತೆ ಅದನ್ನು ಬೇರೆ ರೂಪಕ್ಕೆ ಮಾರ್ಪಾಡು ಮಾಡಬೇಕಾಗಬಹುದು. ಇದರ ಪರಿಣಾಮ ಹೊಸ ರೂಪಕ್ಕೆ ಮಾರ್ಪಾಡು ಮಾಡಿದ ನಂತರ ಬೆಲೆ ಹೆಚ್ಚಾಗುತ್ತದೆ. ಆರ್ಕೈವಿಂಗ್ ಬಂದಾಗ ಸಮಕಾಲಿನ ತಂತ್ರಜ್ಞಾನಗಳನ್ನು ನೋಡಬೇಕಾಗುತ್ತದೆ. ಹಾಗೆ ಮುಂದೆ ಬರುವ ತಂತ್ರಜ್ಞಾನದ ಬಗ್ಗೆಯೂ. ಏಕೆಂದರೆ ಮುಂದೆ ಒಂದು ದಿನ ಅದರ ತಂತ್ರಜ್ಞಾನ, ಉಪಕರಣಗಳೂ ಮೂಲೆಗುಂಪಾಗಿರುತ್ತವೆ. ಹಾಗೆ ಮುಂದಿನ ಓಎಸ್ ಗಳಲ್ಲೂ ಫ್ಲಾಪಿ, ಸಿ.ಡಿ ಡ್ರೈವರ್ ಗಳು ಮಾಯವಾಗಿರುತ್ತವೇನೋ?

ನನಗೆ ತಿಳಿದಿರುವ ಪ್ರಕಾರ ಮಾಗ್ನೆಟಿಕ್ ಟೇಪ್ ಗಳು ಸುಮಾರು ೩೦ವರ್ಷ ಬಾಳಿದವು, ಹಾಗೆ ಫ್ಲಾಪಿಗಳು ಸುಮಾರು ೧೫ವರ್ಷ, ಸಿಡಿಗಳು ೭ವರ್ಷ(?) ಬದುಕುವವೇನೋ, ಹಾಗೆ ಡಿವಿಡಿಗಳು(ಸಾಧಾರಣ) ಸುಮಾರು ೪ವರ್ಷ(?). ರೇಖಾಚಿತ್ರ ಹಾಕಿ ನೋಡಿದರೆ ತಂತ್ರಜ್ಞಾನದ ಆಯಸ್ಸು ವರ್ಷ ಕಳೆದಂತೆ decreasing-exponential-distribution ತರ ಕಾಣಿಸುತ್ತದೆ.

ಹಾಗೆ ಹಳೆ ಸಿಡಿಗಳನ್ನು ಡಿವಿಡಿ ಮಾಡಬೇಕೆಂಬ ಯೋಜನೆ ಹಾಕಿಕೊಂಡಿದ್ದೆ. ಆದರೆ ಈಗ ಅದಕ್ಕೆ ಎಳ್ಳು-ನೀರು ಬಿಟ್ಟಿದ್ದೇನೆ. ತುಂಬಾ ಹಣ ಮತ್ತು ಸಮಯ ಸುರಿಯಬೇಕಾಗುತ್ತದೆ. ಅಷ್ಟೊತ್ತಿಗೆ ಆಪ್ಟಿಕಲ್-ಡಿಸ್ಕ್ ಇಲ್ಲವಾದರೆ ಎಂಬ ಭಯ. ಸದ್ಯಕ್ಕೆ ಯು.ಎಸ್.ಬಿ ಹಾರ್ಡ್-ಡಿಸ್ಕ್ ತಗೊಂಡು ಎಲ್ಲ ಅದಕ್ಕೆ ತುಂಬಿಸುವ ಪ್ಲಾನ್ ಇದೆ. ಏನಾಗುತ್ತೋ ನೋಡುವ.

*******************************************************************

ಪದಗಳ ಮಾಹಿತಿ: ವಿಕಿಪೀಡಿಯಾ

ಉಪಯೋಗಿಸಿದ ನಿಘಂಟು:ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟುಗಳು
USB ಬಗ್ಗೆ ಮಾಹಿತಿ ಇಲ್ಲಿದೆ
*******************************************************************

Rating
No votes yet

Comments