ಕನಸು ನನಸುಗಳ ನಡುವೆ

ಕನಸು ನನಸುಗಳ ನಡುವೆ

ಬರಹ

"What is your dream for future?" "What do you dream to become in the future?" - ಮುಂತಾದ ಪ್ರಶ್ನೆಗಳು ಸ್ಕೂಲು ಕಾಲೇಜುಗಳಲ್ಲಿ ಉತ್ತರ ಹುಡುಕಿಸುವಂತೆ ಮಾಡಿದ್ದು ಕಡಿಮೆ, ಬದಲಿಗೆ ಉತ್ತರ 'ಕಟ್ಟುವಂತೆ' ಮಾಡಿರುತ್ತಿತ್ತು.   ಭಾಷಣ ಸ್ಪರ್ಧೆಗೆ ಉತ್ತಮ ಮಾತುಗಾರನನ್ನು ಅಣಿ ಮಾಡುವ ಮೂಲಗಳಾಗುತ್ತಿದ್ದವು ಅವು. ಭಾಷೆ ಅರಿತ ಹುಡುಗರಿಗೆ, ಸರಾಗವಾಗಿ ಮಾತಾಡಬಲ್ಲ ಹುಡುಗಿಯರಿಗೆ - ಬರಿಯ ಭಾಷೆಯ ಕಸರತ್ತು ಆಗಿಬಿಡುತ್ತಿತ್ತು. ಕೇಳುಗರಿಗೆ ತಾವು ಕೇಳಬೇಕೆನಿಸಿದ್ದು ಕೇಳಿಬರುವ ಸಮಯ, ಕೇಳಿಬರುವುದು, ಕೇಳಿದವರಿಂದ ಹೊರಬರುವ ಪ್ರತಿಕ್ರಿಯೆ - ಅದಕ್ಕೆ ಸಿಗುವ ಮನ್ನಣೆ, ಅವಾರ್ಡುಗಳು - ಎಲ್ಲ ತೀರ cliche!

ನನಗೆ "ಕಟ್ಟಿದ" ಉತ್ತರಗಳ ಕುರಿತು, ಉತ್ತರಗಳಿಗಾಗಿ ಕಟ್ಟಿದ ಕನಸುಗಳ ಕುರಿತು ಅಸಮಾಧಾನ ಹುಟ್ಟಿದ್ದು ಇವುಗಳಿಂದ.

ಹೀಗಾಗಿ ಉತ್ತರ ಹುಡುಕಲು ಎಂದೋ ನಾನು ಮುಂದೇನಾಗಬೇಕು ಎಂಬುದರ ಕುರಿತು ಆಲೋಚಿಸಿದ್ದಿದೆ. ಕನಸು ಕಾಣುವಷ್ಟು ಸೀರಿಯಸ್ ಆಗಿದ್ದಿದ್ದರೆ ನಮ್ಮಲ್ಲಿ ಹಲವರು ಕ್ರಿಕೆಟ್ಟಿಗರಾಗುವ ಕನಸು ಕಾಣುತ್ತಿದ್ದೆವು ಬಹುಶಃ, ಅಷ್ಟೊಂದು ಕ್ರಿಕೆಟ್ ಸವಾರಿ, ಸ್ಕೂಲು, ಕಾಲೇಜು, ಟಿ ವಿ - ಎಲ್ಲೆಲ್ಲೂ. ಅಪ್ಪ ಅಮ್ಮಂದಿರಿಗೂ ಇದರಲ್ಲಿ "ಸಖತ್ ದುಡ್ಡು" ಎಂದು ಯಾವಾಗ ಅನಿಸಿತೋ ಮಧ್ಯಮ ವರ್ಗದ ಹಲವರು ಸಾಯಂಕಾಲ "forcibly" ಮಕ್ಕಳನ್ನು ಕ್ರಿಕೆಟ್ 'ಟ್ಯೂಶನ್ನಿ'ಗೆ ಅಟ್ಟಲು ಪ್ರಾರಂಭಿಸಿದ್ದರಲ್ಲ ಆಗ! ಕಂಪ್ಯೂಟರ್ ಬಂದ ಹೊಸತರಲ್ಲಿ "ಎಷ್ಟು ಖರ್ಚಾದರೂ ಪರವಾಗಿಲ್ಲ" ಎಂದು 386, 486 ಇಟ್ಟುಕೊಂಡು ಅರ್ಧಂಬರ್ಧ ಹೇಳಿಕೊಡುತ್ತಿದ್ದ instituteಗಳಿಗೆ ಕಳುಹಿಸುತ್ತಿದ್ದರಲ್ಲ!

(ಹಾರುತ್ತಿರುವ ಪ್ಲೇನು ನೋಡಿ)
"ಪಾಪಾ, ಮೇಂ ಪೈಲಟ್ ಬನೂಂಗ... "
"ಕಭೀ ಕಭೀ ಹಮೇಂ ಭೀ ಲಿಫ್ಟ್ ದೇ ದಿಯಾ ಕರೋ... "

(ಸಿನಿಮಾ ನೋಡುತ್ತ)
"ಪಾಪಾ... "
"... "
"ಹೀರೋ!"

(ಆಟಿಕೆ ಅಂಗಡಿಯಲ್ಲಿ, ಅಪ್ಪ ಫುಟ್ ಬಾಲ್ ಹಿಡಿದು ಬಂದರೆ)
"ಪಾಪಾ, ಮೇಂ ಕ್ರಿಕೆಟರ್ ಬನೂಂಗ... "

ಎಂಬುದು ಜಾಹೀರಾತು. ಆದರೆ ಮಕ್ಕಳಲ್ಲಿ ಹುಟ್ಟಿಹಾಕುವ, ಹುಟ್ಟುವ "ಕನಸುಗಳ" ಬಗ್ಗೆ ಪಟ್ಟನೆ ಹೇಳಿ ಹೊರಟುಹೋಗುತ್ತದೆ. ಜಾಹೀರಾತು ಮನಸ್ಸಿಗೆ ಹತ್ತಿರವಾದರೂ, ಕಟ್ಟಿದ ಕನಸುಗಳ ಕಹಿ ಸತ್ಯ ಎಲ್ಲೋ ಮನದ ಮೂಲೆಯಲ್ಲಿ ರಾಚಿ ಕಸಿವಿಸಿಗೊಳಿಸಿಯೇ ಹೋಗುತ್ತದೆ.

ಉತ್ತರ ಹುಡುಕುವ ಹಿನ್ನೆಲೆಯಲ್ಲೇ:
ನಮ್ಮ ಮನೆಯಲ್ಲಿ "ಹರಿ ದೊಡ್ಡವನಾಗಿ ಏನಾಗಬೇಕು?" ಎಂಬುದರ ಕುರಿತು ಎಲ್ಲರಿಗೂ ಒಂದೊಂದು "ಕಟ್ಟಿಕೊಂಡ" ಕನಸು ಇದ್ದಿರಲಿಕ್ಕೂ ಸಾಕು! ಮನೆಯಲ್ಲಿ ಸಣ್ಣವನಲ್ವ? ನಾನೇನಾಗಬಹುದು ಎಂದು ಕೇಳಿದಾಗ ಸುಮಾರು ಉತ್ತರಗಳು ಸಿಗುತ್ತಿದ್ದವು. ಕೆಲವರಿಂದ ಆದೇಶಗಳೂ ಸಿಗುತ್ತಿದ್ದವು. ಅಮ್ಮ ಒಬ್ಬರಿಗೆ ಅಂಥದ್ದೇನೂ ಇರಲಿಲ್ಲ. ಅವರು "ನಿನಗೇನು ಇಷ್ಟವೋ ಅದು ಮಾಡು ಹರಿ. ಎಲ್ಲಕ್ಕಿಂತ ಮುಖ್ಯ ಒಳ್ಳೆತನ ಉಳಿಸಿಕೊಳ್ಳುವುದು, ಸಮಾಜಕ್ಕೆ ಒಳ್ಳೆಯನಾಗುವುದು" ಎಂದು ಕಾಳಜಿಯುಳ್ಳ ಉತ್ತರವೇ ಕೊಡುತ್ತಿದ್ದರು. ಭಾಷಣಕ್ಕೆ ಸಾಮಗ್ರಿ ಒದಗಿಸಿಕೊಳ್ಳಲು ಹೊರಟು ಅಮ್ಮನ ಉತ್ತರ ಕೇಳಿ ಅದನ್ನೇ ನೆಚ್ಚಿಕೊಂಡರೆ ಕಥೆಯೇ ಮುಗಿಯಿತು! ಊಹಿಸಿಕೊಳ್ಳಿ:

"ನಾನು ನನಗೇನು ಇಷ್ಟವಾಗುತ್ತದೋ ಅದೇ ಆಗಬೇಕೆಂದು ಬಯಸುತ್ತೇನೆ. ಆದರೆ ಮುಖ್ಯವಾಗಿ ಸಮಾಜಕ್ಕೆ ಒಳ್ಳೆಯವನಾಗಬೇಕೆಂದು ಬಯಸುತ್ತೇನೆ. ಡಿ.ವಿ.ಜಿಯವರೇ ಬರೆದಿರುವಂತೆ... ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು... "
- ಇದು ಯಾರಿಗೂ ರುಚಿಸಲಿಕ್ಕಿಲ್ಲ! ದ್ವಾಪರಯುಗದ ಸರಕು ಅನ್ನಿಸೀತು.

ಇಷ್ಟೆಲ್ಲ ನೆನಪಾದದ್ದು ನಾನು ಏನಾಗಬೇಕು ಎಂದು ನಾನೇನಂದುಕೊಂಡಿದ್ದೆ ಎಂಬುದರ ಬಗ್ಗೆ ಆಲೋಚನೆ ತಲೆಯಲ್ಲಿ ಸುಳಿದಾಗ. ನನಗೇನೋ ಕಂಪ್ಯೂಟರ್ ಇಷ್ಟವಿತ್ತು, ಫೋಟೋಗ್ರಫಿ ಇಷ್ಟವಿತ್ತು, ಕನ್ನಡ ಇಷ್ಟವಿತ್ತು, ಚೆಸ್ ಇಷ್ಟವಿತ್ತು, ಪರಿಸರ ಇಷ್ಟವಿತ್ತು, ಚಿತ್ರ, ಕಾರ್ಟೂನು ಇಷ್ಟವಾಗುತ್ತಿತ್ತು, ಸಿನಿಮಾ ಇಷ್ಟವಾಗುತ್ತಿತ್ತು.  - ಏನೇನೆಲ್ಲ ಇಷ್ಟಗಳು, ಹವ್ಯಾಸಗಳು! ಆ ನಿಟ್ಟಿನಲ್ಲಿ "ಏನು ಆಗಬೇಕು" ಎಂಬುದರ ಕುರಿತು ಏನೂ ಅಂದುಕೊಂಡದ್ದಿಲ್ಲ, ಆದರೆ ಕನಸು ಕಟ್ಟಿಕೊಳ್ಳದಿದ್ದರೂ ಕಂಡ ಕನಸುಗಳೇ ಇಷ್ಟಗಳ ಸುತ್ತ ನನಸಾಗುತ್ತ ಹೋಗಬಹುದು ಎಂದು ಅನಿಸಿದ್ದು ಏನೂ ಕಟ್ಟಿಕೊಳ್ಳದ್ದರ ಗಾಬರಿ ಕಡಿಮೆ ಮಾಡಿದ್ದುಂಟು.

ಕನಸು ನನಸುಗಳ ಈ ಲಹರಿ ಯಾಕೋ? ಹಲವು ವರ್ಷಗಳಿಂದ ಗ್ನು/ಲಿನಕ್ಸ್ ಸುತ್ತ ಆಸಕ್ತರನ್ನು ಒಟ್ಟುಗೂಡಿಸಿ ಅದರ ಸುತ್ತ ಇರುವ ತೊಂದರೆಗಳನ್ನು ಸವಾಲುಗಳನ್ನು ಚರ್ಚಿಸುತ್ತ ಏನೇನು ಮಾಡಬಹುದು ಎಂದು ಆಲೋಚಿಸುತ್ತ ನಡೆದ ಪರಿಧಿಯಲ್ಲಿ ನನಗೆ ಪರಿಚಿತನಾಗಿ, ನಮ್ಮ ಸಮೂಹಕ್ಕೆ ಸೇರ್ಪಡೆಯಾಗಿ ಈಗ ಅದರ ಬಹುಮುಖ್ಯ ಸದಸ್ಯನಾಗಿರುವ ಓಂಶಿವು ಹುಟ್ಟುಹಬ್ಬ ಇಷ್ಟೆಲ್ಲ ಆಲೋಚನೆಗಳನ್ನು ಬಡಿದೆಬ್ಬಿಸಿತು. ಇವತ್ತು ಅವನ ಹುಟ್ಟುಹಬ್ಬ. ಫೆಬ್ರವರಿ ೧೩!

ಮುಂಚಿನಿಂದ ಗುರಿ ಎನ್ನುವುದು ಏನಾದರೂ ಕೊಳ್ಳುವುದು, ನನ್ನದಾಗಿಸಿಕೊಳ್ಳುವುದು ಎಂದು ನನಗೆ ಇದ್ದದ್ದಿಲ್ಲ, ಅದರ ಪರಿಚಯವೂ ಕಡಿಮೆ. ಬಹುಶಃ ಅದು ನಾನು ಹಿಡಿದ ಹಾದಿಯಿರಬಹುದು, ಅಥವ ನನ್ನಲ್ಲಿ ಹುಟ್ಟಿಕೊಂಡ ಗುಣವೇ ಇದ್ದಿರಬಹುದು. ಇದೊಂದು "ದೊಡ್ಡ ಗುಣ" ಎಂದು ನಾನು ಹೇಳುತ್ತಿಲ್ಲ. ನನಗೆ ಅದರ ಹತ್ತಿರದ ಪರಿಚಯವಿರಲಿಲ್ಲವೆಂಬುದನ್ನು ತಿಳಿಸಲು ಈ ಸಾಲುಗಳು ಅಷ್ಟೆ. ಆದರೆ ಏನಾದರೂ ಒಂದನ್ನು ಪಡೆದುಕೊಳ್ಳಬೇಕು ಎಂದು ಗುರಿ ಇಟ್ಟುಕೊಳ್ಳುವುದೂ ಒಂದು ಗುರಿಯಾಗಬಹುದು ಎಂಬುದು ನನಗೆ ಸರಿಯಾಗಿ ಅರ್ಥವಾದದ್ದು ಬಹಳ ಇತ್ತೀಚೆಗೆ. ಹಾಗೊಂದು ಲೌಕಿಕ ಗುರಿ ಇಟ್ಟುಕೊಳ್ಳುವುದರ ಪರದೆಯ ಹಿಂದೆ ಇರುವ ಸಂಗತಿಗಳನ್ನವಲೋಕಿಸಿದರೆ ಇದರ ಅಸ್ತಿತ್ವದ ಹಿಂದಿರುವ ಮೂಲಕಾರಣ ಅಥವ ಮೂಲಕಾರಣಗಳು ಚೆನ್ನಾಗಿ ಅರ್ಥವಾಗಬಹುದು. ಮುಂದೇನಾಗಬೇಕು ಎನ್ನುವುದಕ್ಕಿಂತ ಮೈಲಿಗಲ್ಲುಗಳನ್ನು ಅರಸಿ ಹೊರಟು ಕೆಲ ದೂರ ಕ್ರಮಿಸಿ ಗುರಿ ತಲುಪುತ್ತ ಮುನ್ನಡೆಯುವುದು ವಿಭಿನ್ನ ಎಂದು ಕೂಡ ಅನಿಸಬಹುದು.

ಇದು ಸರಿಯಾಗಿ ಅರ್ಥವಾಗಿದ್ದು ತೀರ ಇತ್ತೀಚೆಗೆ ಎಂದು ಹೇಳಿದೆ, ತದನಂತರ ಹಲವು ಬಾರಿ ನನ್ನ ಗಮನ ಇದರ ಹತ್ತಿರ ಸುಳಿದು, ಇದರ ಅಸ್ತಿತ್ವ, ಅಸ್ತಿತ್ವದ ಹಿಂದಿರುವ subtle ಸಂಗತಿಗಳು ಮತ್ತೆ ಮತ್ತೆ ಅಚ್ಚು ಒತ್ತಿವೆ.

ಹಾಗೆಯೇ ಮತ್ತೊಮ್ಮೆ ಇದರ ಅಚ್ಚು ಒತ್ತಿದ ಸಂಗತಿ ನಮ್ಮ ಓಂಶಿವು career - ಅವನು ಇಲ್ಲಿಯವರೆಗೂ ತೆಗೆದುಕೊಂಡಿರುವ ಪುಟ್ಟ ಹಾದಿ...  ನಾನು ಕಳೆದ ಹಲವು ವರ್ಷಗಳು ಗಮನಿಸಿರುವಂತೆ (ಇಲ್ಲಿ ಅವನ ವೈಯಕ್ತಿಕ ಜೀವನದ ಬೌಂಡರಿಯೊಳಗೆ ಅನುಮತಿಯಿಲ್ಲದೇ ಕಾಲಿಟ್ಟು ಮಾತನಾಡುತ್ತಿರುವುದು 'ಓಕೆ' ಎಂದುಕೊಂಡು ಮುಂದುವರೆಯುವೆ). ನಮ್ಮಲ್ಲಿ ಹಲವರು ಮಧ್ಯಮವರ್ಗದವರು - ಸೂರು ಸಿರಿಯಿಂದ ತುಂಬಿಲ್ಲವಾದರೂ ಸೋರದೆ ಇರುವುದರಿಂದ ಸೂರು ಮರೆತು ದಿನಗಳನ್ನು ಸಾಗಿಸುವವರು. ಸಿರಿತನದ ಅರಿವಿಲ್ಲದಿದ್ದರೂ ಬಡತನದ ಅರಿವಿಲ್ಲದವರು!
ಆದರೆ ನಾನು ಇವನ ಜೀವನದಲ್ಲಿ ಕಂಡದ್ದರಲ್ಲಿ ವ್ಯತ್ಯಾಸವಿತ್ತು. ಅವ ಕಾರು ತೆಗೆದುಕೊಳ್ಳಬೇಕು, ಮನೆ ತೆಗೆದುಕೊಳ್ಳಬೇಕು ಎಂಬುದಕ್ಕೆ ಏಕೆ ಇಷ್ಟು ಒತ್ತು ಕೊಡುತ್ತಾನೆ, ಅದ್ಯಾಕೆ ಅವನಿಗೆ ಅದು ಬೆಳಕು ಕಾಣುವವರೆಗೂ 'ಗುರಿ'ಯಾಗಿ, ಬೆಳಕು ಕಂಡ ನಂತರ ಒಂದು ಮೆಟ್ಟಿಲು ಹತ್ತಿದಂತಾಗಿ ಕಾಣುತ್ತದೆ ಎಂಬುದು ಮೊದಲಿಗೆ ಭಿನ್ನ ಎನಿಸಿದರೂ ತದನಂತರ ಚೆನ್ನಾಗಿ ಅರ್ಥವಾದದ್ದುಂಟು. ಚಾಕಲೇಟು ಕೇಳಿದಾಗಲೆಲ್ಲ ಬಹು ಪಾಲು ಸಿಗುತ್ತಲೇ ಇದ್ದುದರಿಂದ ನನಗೆ ಚಾಕಲೇಟು ಕೊಳ್ಳುವುದು ಅಂಥದ್ದೇನೂ ವಿಶೇಷವಲ್ಲ. ಚಾಕಲೇಟು ಗೌಣ! ಮನೆಯಲ್ಲಿ ಆಗಲೇ ಕಾರುಗಳಿರುವವರಿಗೆ ಕಾರೂ ಗೌಣ. ಹಾಗೇನಾದರೂ ಬೇಕು ಅನಿಸಿದರೆ ಅದೊಂದು necessityಯಾಗಿ ಚುಚ್ಚಿದಾಗ ಮಾತ್ರ. ಮೊಬೈಲು ಕೊಂಡ ನಿಮಿಷವೇ ಅದರ ಕವರ್ರು ಕಿತ್ತು ಬಿಸುಟು ಹೊರಹೋಗುವಾಗ ಅಂಗಡಿಯವ "ಸಾರ್, ಇರಲಿ ಬಿಡಿ. ಸ್ವಲ್ಪ ದಿನ ಇಟ್ಟುಕೊಳ್ಳಿ" ಎನ್ನುವ ಅವನ ಮನಸ್ಸು ಅರ್ಥವಾಗದೇ ಇರದು. ಆದರೆ ಅದೇ ಸಮಯ ಮೊಬೈಲು ಯಾವುದೇ priced possession ಆಗದೇ ಕೇವಲ necessityಗಾಗಿ ಬಳಸುತ್ತಿರುವುದರಿಂದ ಗೌಣ ಎನ್ನಿಸುವುದೂ ಅರ್ಥವಾಗುವಂತಹ ವಿಷಯವೇ. ಇವೆರಡೂ ಮನಸ್ಸಿನ ಮುಖಗಳು, ಒಂದೇ ಮನಸ್ಸಿನಲ್ಲೇ ಇದ್ದೀತು ಕೂಡ. ಹಾಗೆ ಇಲ್ಲದಿದ್ದರೆ ಇನ್ನು ಮುಂದೆ ಏನೂ ವಿಶೇಷ ಅನಿಸಲಿಕ್ಕಿಲ್ಲ, ಹಾಗೆ ಇದ್ದರೆ ಎಲ್ಲವೂ ವಿಶೇಷ ಎನ್ನಿಸಲಿಕ್ಕೂ ಸಾಕು ಎಂಬುದರ ನಡುವೆ ತೆವಳುತ್ತ ಒಂದು ಕನಸು - ನನಸುಗಳ ಪಟ್ಟಿ ಇಟ್ಟುಕೊಂಡರೇ ಚೆಂದವೇನೋ ಅಂತಲೂ ಅನಿಸೋದುಂಟು!

ಇಂಥದ್ದೇ ಒಂದು ಉತ್ತಮ, ಚೆಂದದ ಪಟ್ಟಿ ಇಟ್ಟುಕೊಂಡು ತನ್ನ ಎಷ್ಟೋ ಕನಸುಗಳನ್ನು ನನಸಾಗಿಸಿಕೊಂಡಿರುವ ಓಂಶಿವು ಹುಟ್ಟುಹಬ್ಬ ಇವತ್ತು. ಶಿವುಗೆ ಹುಟ್ಟು ಹಬ್ಬದ ಶುಭಾಶಯಗಳು. ಓಂಶಿವು ಕಟ್ಟಿರುವ *ನಿಜವಾದ* ಕನಸುಗಳು ನನಸಾಗಲಿ ಎಂದು ಹಾರೈಸೋಣ.