ಹೆಣ್ಣು, ಶೀಲ, ಕನ್ಯತ್ವ ಮತ್ತು ಮುಕ್ತ ನಾಗರೀಕತೆ(ನಿರ್ಭೀಡ ಹೆಣ್ಣೊಬ್ಬಳ ಮನದಾಳ)

ಹೆಣ್ಣು, ಶೀಲ, ಕನ್ಯತ್ವ ಮತ್ತು ಮುಕ್ತ ನಾಗರೀಕತೆ(ನಿರ್ಭೀಡ ಹೆಣ್ಣೊಬ್ಬಳ ಮನದಾಳ)

ಬರಹ

ಮೊದಲೇ ಹೇಳಿಬಿಡುತ್ತೇನೆ ನಿರ್ಭೀಡ ಹೆಣ್ಣು ಎಂದು ಕರೆದದ್ದು ನನ್ನನ್ನಲ್ಲ ಮುಂದೆ ಓದಿ
ಸ್ವಲ್ಪ ಹಾಟ್ ಟಾಪಿಕ್ ಆದರೆ ತುಂಬಾ ದಿನದಿಂದ ಮನಸಲ್ಲಿ ಕೊರೀತಾ ಇತ್ತು. ಟೈಪ್ ಮಾಡೋಕೆ ನೂರಾರು ಅಡ್ಡಿ ಅಡಚಣೆಗಳು, ಇಂದು ಹೊರಗಡೆ ಹಾಕ್ತಾ ಇದ್ದೇನೆ

ಹೋದ ಶನಿವಾರ ವಾಲೆಂಟೈನ್ಸ್ ದಿನ ಯಲಹಂಕ ಏರ್ ಶೋ ಗೆ ಹೋಗಿದ್ದೆವು :)
ನನಗೇನು ಅದರಲ್ಲಿ ಅಂತಹ ವಿಶೇಷ ಆಸಕ್ತಿ ಇಲ್ಲ ನಮ್ಮ ಮನೆಯವರು ಅದೇ ಫ಼ಿಎಲ್ದ್ನಲ್ಲಿ ಕೆಲಸ ಮಾಡುವುದರಿಂದ ಟಿಕೇಟ್ ಸಿಕ್ಕಿತು ಹಾಗಾಗಿ ನಾನು ಜೊತೆಗೆ ಹೋದೆ, ಜೊತೆಗೆ ಎರೆಡು ಬಾಲಗಳು (ನನ್ನ ಮಗಳು, ನನ್ನ ಅಕ್ಕನ ಮಗಳು)
ವಿಮಾನಗಳನ್ನೆಲ್ಲಾ ನೋಡಿಯಾದ ಮೇಲೆ ಇವರು ಸ್ಟಾಲ್ಸ್ ನ ವೀಕ್ಷಣೆಗೆ ಹೋದರು ನಾನು ಹಾಗು ಬಾಲಗಳೆರೆಡು ಅಲ್ಲೇ ಕ್ಯಾಂಟೀನ್ ಮುಂದೆ ಕೂತೆವು.

ನನ್ನ ಪಕ್ಕದಲ್ಲೇ ಜೋಡಿಯೊಂದು ಬಂದಿತು. ಆ ಹೆಂಗಸು ನನ್ನ ಬಳಿಯಲ್ಲೇ ಕೂತಳು, ಅವಳ ಫ್ರೆಂಡ್ ಎಲ್ಲಿಯೋ ಹೊರಟನು.
ಸ್ವಲ್ಪ ಹೊತ್ತಿನಲ್ಲೇ ನನ್ನ ಅವಳ ಮಾತುಕತೆ ಶುರುವಾಯಿತು ಅವಳು ಕನ್ನಡದವಳೇ, ಯಾವುದೋ ಎಲೆಕ್ಟಾನಿಕ್ ಕಂಪೆನಿಯಲ್ಲಿ ಸೋರ್ಸಿಂಗ್ ಹೆಡ್ ಎಂದು ಪರಿಚಯಿಸಿಕೊಂಡಳು ಮಾತು ಹಾಗೆ ಮಂಗಳೂರಿನ ಪಬ್ ಬಗ್ಗೆ ಹೊರಳಿತು.
ನೋಡಲು ಸೌಮ್ಯವಾಗಿದ್ದರೂ ಮಾತು . ಆಲೋಚನೆಗಳು ವಿಭಿನ್ನ ಎನಿಸಿತು
ನನ್ನ ನಿಲುವು ಕೊಂಚ ಹಳೆಯದು ಸ್ತ್ರೀ ಸ್ವಾತಂತ್ರ್ಯ ಸಂಸ್ಕೃತಿ ಎಂದೆಲ್ಲಾ ಬಡ ಬಡಿಸಿದೆ
ನನ್ನ ಮಾತುಗಳು ಹಳೆಯವೇ ಹಾಗಾಗಿ ನನ್ನ ಮಾತುಗಳನ್ನು ಕಟ್ ಮಾಡಿ ಅವಳ ಆಲೋಚನೆಗಳನ್ನಷ್ಟೆ ಹೇಳುತ್ತೇನೆ
" ಯಾವ ಸಂಸ್ಕೃತಿ ಯಾವ ಕನ್ಯತ್ವ, ಇವೆಲ್ಲಾ ಸುಮ್ಮನೆ ಸಮಾಜ ಮಾಡಿರೋ ಕಟ್ಟುಪಾಡುಗಳು, ನಾವು ಮನುಷ್ಯರೆ ನಮಗೂ ಆಸೆ ಆಕಾಂಕ್ಷೆ ಇರುತ್ತವೆ, ಮದುವೆಗೆ ಮುಂಚೆ ಹೆಣ್ಣು ಲೈಂಗಿಕ ಸುಖ ಹೊಂದಬಾರದು ಅನ್ನೋದು ತಪ್ಪಲ್ಲವಾ. ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯಾನಾ. ಹೆಣ್ಣು ಕನ್ಯತ್ವ ಕಳೆದುಕೊಳ್ಳುತಾಳೆ ಅನ್ನೋದು ತಲೆ ಇರದವರ ಮಾತಲ್ಲ್ವಾ.
ಹೆಣ್ಣಿಗೆ ಕನ್ಯತ್ವ ಇರ್ಬೇಕು ಅಂದರೆ ಗಂಡು ಬ್ರಹ್ಮಚಾರಿ ಆಗಿರಬೇಕು ಆದರೆ ಅದು ಈಗ ಸಾಧ್ಯ ಇಲ್ಲ
ಯಾವ ಹೆಣ್ಣು ಸೀತೆ ಥರ ಇರೋಕೆ ಚಾನ್ಸೇ ಇಲ್ಲ , ಮನಸಲ್ಲಿ ಮದುವೆಗೆ ಮುಂಚೆ ಬೇರೆ ಯಾರೋ ಒಬ್ಬರನ್ನಾದರೂ ಅಪೇಕ್ಷಿಸಿರುತ್ತಾಳೆ. ಹಾಗೆ ನೋಡಿದರೆ ಅದೂ ಮಾನಸಿಕ ವ್ಯಭಿಚಾರ .
ನಾನು ಕಾಲೇಜಲ್ಲಿ ಓದುವಾಗ ಒಬ್ಬರನ್ನ ಪ್ರೀತಿಸಿದ್ದೆ. ನಂತರ ಇಬ್ಬರಿಗೂ ಏನೋ ಜಗಳ ಆಯ್ತು. ಈಗ ನಾನೇ ಬೇರೆ ಅವನೇ ಬೇರೆ, ನಾನೆಲ್ಲಾ ಕೊಟ್ಟೆ ಅನ್ನೋದು ತಪ್ಪು . ಹಾಗೆ ಅವನು ಎಲ್ಲಾ ಲಾಭ ಪಡೆದ ಅನ್ನೋಹಾಗಿಲ್ಲ ನಾವಿಬ್ಬರೂ ಪರಸ್ಪರ ಹಂಚಿಕೊಂಡಿದ್ದೇವೆ.ಈಗ ಬಂದಿರೋನು ನನ್ನ ಬಾಯ್‌ಫ್ರೆಂಡ್ ಮುಂದೆ ಅವನ ಜೊತೆ ಮದುವೆ ಖಂಡಿತಾ ಆಗುತ್ತೆ ಅಂತ ಹೇಳೊಕಾಗಲ್ಲ ಯಾರೊಡನೆ ಬೇಕಾದರೂ ಆಗಬಹುದು,
ನಮಗೆ ಇಷ್ಟಾ ಇರೋ ಹಾಗೆ ಇರೋಕೆ ಈ ಸಮಾಜ ಬಿಡಲ್ಲ ಅಂತ ನಾವು ನಮ್ಮ ಆಸೆನೆಲ್ಲಾ ಅದುಮಿ ಇಡ್ಲಿಕ್ಕ್ಕಾಗಲ್ಲ ಅಲ್ಬಾ
ಮೊದಲೆಲ್ಲಾ ಹೆಣ್ಣು ಚೂಡಿದಾರ್ ಹಾಕ್ಕೋಳೋದೆ ತಪ್ಪು ಅಂತ ಹೇಳ್ತಿದ್ದ ಸಮಾಜ ಅದನ್ನ ಟೋಟಲ್ಲು ಅಕ್ಸೆಪ್ಟ್ ಮಾಡಿದೆ, ಹಾಗೆ ಮುಂದೆ ಹೆಣ್ಣು ಮದುವೆಗೆ ಮುಂಚೆ ಸೆಕ್ಸ್ ಹೊಂದಿರೋದು ಅಕ್ಸೆಪ್ಟ್ ಆಗಬಹುದು
ಇನ್ನೂ ಎಷ್ಟು ದಿನ ಅಂತ ಹೆಂಗಸರು ಕೂಪ ಮಂಡೂಕಗಳ ಹಾಗೆ ತಾವು ಕುಳಿತ ಬಾವೀನೆ ಪ್ರಪಂಚ ಅಂತಂದ್ಕೋತಿರ್ಬೇಕು. "
ಅವಳು ಇನ್ನೂ ಹೇಳುತ್ತಿದ್ದಳು
ನನ್ನ ಪ್ರಶ್ನೆ ಕೇಳಿದೆ " ಮುಂದೆ ಮದುವೆಯಾದರೆ ಇವೆಲ್ಲಾವನ್ನು ನಿಮ್ಮ ಗಂಡನಿಗೆ ಹೇಳ್ತೀರಾ"
"ಹೌದು ಆದರೆ ಮದುವೆಗೆ ಮುಂಚೇನೆ . ಅವನು ಒಪ್ಪಿಲ್ಲಾ ಅಂದ್ರೆ ನೀನು ಶ್ರೀರಾಮಾನ ಅಂತ ಕೇಳ್ತೀನಿ. ಹೌದು ಅಂದರೆ ಆಯ್ತು ಸೀತೆನ ಹುಡುಕ್ಕೋ ಅಂತೀನಿ, ಒಪ್ಪಿದರೆ ಮದುವೆ ಇಲ್ಲ ಅಂದರೆ ಇಲ್ಲ"
ನನಗೆ ತಲೆ ನೋವು ಬಂತು. ಇವಳೇನು ನನ್ನ ಬ್ರೈನ್ ವಾಶ್ ಮಾಡೋಕೆ ಬಂದಿದಾಳ ಹೇಗೆ ಅಂತನ್ನಿಸ್ತಿತ್ತು. . ಈ ವಿಚಾರ ಧಾರೆನ ಎಲ್ಲೂ ಕೇಳಿಲ್ಲಾ .
ನನ್ನ ಭಾರತೀಯ ನಾರಿಯರು ನಾವು ಎಂಬ ಮಾತಿಗೆ
ಭಾರತೀಯ ನಾರಿ ಎನ್ನೋ ಸಮಾಜ ಯಾಕೆ ಭಾರತೀಯ ಪುರುಷ ಎನ್ನೋದಿಲ್ಲ. ಹೆಂಡತಿ ಬದುಕಿರುವಾಗಲೆ ಗಂಡು ಇನ್ನೊಂದು ಮದುವೆ ಆಗಬಹುದು. ಇಬ್ಬರ ಜೊತೆಯೂ ಸಂಸಾರ ಮಾಡಬಹುದು . ಆದರೆ ನಮ್ಮ ಸಮಾಜ ಅದೇ ಹೆಣ್ಣು ಇನ್ನೊಬ್ಬನೊಡನೆ ಮಾತಾಡಿದರೆ ತಪ್ಪು ಅನ್ನುತ್ತಲ್ಲ ಇಂಥ ಸಮಾಜಕ್ಕೆ ನಾವ್ಯಾಕೆ ಹೆದರಬೇಕು?
ಹೀಗೆ ಅವಳ ಮಾತಿನ ಮೋಡಿಗೆ ಸಿಲುಕಿದ್ದೆ ಕೊನೆಯದಾಗಿ
ಅದಿರಲಿ ನೀವು ಯಾಕೆ ಇದನ್ನೆಲ್ಲಾ ನನ್ನ ಹತ್ತಿರ ಹೇಳ್ತಾ ಇದ್ದೀರ್‍ ಎಂದು ಕೇಳಿದೆ
"ಯಾಕೆಂದರೆ ನಿಮ್ಮ ಬಗ್ಗೆ ನನಗೇನು ಗೊತ್ತಿಲ್ಲ, ನನ್ನ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ನಿಮಗೆ ಹೇಳಿದರೆ ಯಾವುದೇ ಅಪಾಯ ಇಲ್ಲ ಅಂತ ಗೊತ್ತಿದೆ. ತುಂಬಾ ದಿನದಿಂದ ನನ್ನ ಮನಸಲ್ಲಿ ಇರೋದನ್ನ ಯಾರಲ್ಲಾದರೂ ಹೇಳ್ಬೇಕು ಅಂತನ್ನಿಸ್ತಿತ್ತು. ಈಗ ಮನಸ್ಸು ಹಗುರ ಆಗಿದೆ" ಅಂದಳು.
ಅಬ್ಬಬ್ಬಾ ಹೀಗೂ ಇರ್ತಾರಾ ಅನ್ನಿಸ್ತಾ ಇದ್ದ ಹಾಗೆ ಮತ್ತೆ ಮತು ಶುರು ಮಾಡಿದಳು
"ಈಗ ನೋಡಿ ನೀವು ಇಬ್ಬರು ಮಕ್ಕಳನ್ನು ಕೂರಿಸ್ಕೊಂಡು ಹೆಣಗ್ತಾ ಇದೀರಾ . ನಿಮ್ಮ ಯಜಮಾನರು ಆರಾಮಾವಾಗಿ ಹೋಗಿದಾರೆ. ಎಲ್ಲಿದೆ ಸ್ತ್ರೀ ಸ್ವಾತಂತ್ರ್ಯ ಹೇಳಿ, ಮನೇಲಿ ಅಡಿಗೆ ನೀವೇ ಮಾಡ್ವೇಕೆ ಹೊರತು ನಿಮ್ಮ ಯಜಮಾನರು ಮಾಡಲ್ಲ ಅಲ್ವಾ.ಅದ್ಯಾಕೆ ನಿಮ್ಮದೆ ಜವಾಬ್ದಾರಿ ಆಗಿರ್ಬೇಕು ಹೀಗೆ ಹೆಣ್ಣು ಇಲ್ಲಿ ಎಷ್ಟೆ ಸಮಾನತೆ ಸಿಕ್ಕಿತು ಅಂತ ಹೇಳಿದರು. ನನ್ನ ಪ್ರಕಾರ ಅದು ಸಿಕ್ಕಿಲ್ಲ. ಅದಕ್ಕೆ ನನ್ನ ಸ್ವಾತಂತ್ರ್ಯಾನ ನಾನೆ ಆರಿಸಿಕೊಂಡಿದ್ದೀನಿ. "
ನಗುತ್ತಾ ನೋಡಿದಳು ಅದೇನು ನಗೂನೋ ಅಥವ ಅವಳ ಆಯ್ಕೆಯ ಬಗ್ಗೆ ಹೆಮ್ಮೆಯೋ ತಿಳಿಯಲಿಲ್ಲ
ಅವಳ ಮಾತಿಗೆ ಉತ್ತರ ಕೊಡುವಷ್ಟ್ರ್‍ಅಲ್ಲಿ ಅವಳ ಬಾಯ್ ಫ್ರೆಂಡ (ಅವಳೇ ಹೇಳಿದಂತೆ ) ಬಂದ. ನನಗೆ ಬಾಯ್ ಹೇಳಿದಳು, ಫೋನ್ ನಂ ಕೇಳೋಣ ಅನ್ನಿಸಿತು ಆದರೆ ಅವಳು ಕೊಡಲಿಕ್ಕಿಲ್ಲ ಎಂದು ತೋರಿ ಸುಮ್ಮನಾದೆ. ಇವರು ಇನ್ನೂ ಬಂದಿರಲಿಲ್ಲ.
ನನಗೆ ಆಲೋಚನೆಗಳು ಶುರುವಾದವು ಸ್ತ್ರೀ ಸ್ವಾತಂತ್ರ್ಯ ಎಂದರೆ ಹೀಗು ಉಂಟೆ ಹೆಣ್ಣು ಹಾಳಾಗುವುದು, ಕಾಲು ಜಾರುವುದು, ನಡತೆಗೆಟ್ಟವಳು ಎಂಬ ಮಾತಿಗೆಲ್ಲಾ ಅರ್ಥವೇ ಇರೋದಿಲ್ಲ ಹೀಗಾದರೆ. ಅವೆಲ್ಲಾ ಸವಕಲು ಮಾತುಗಳಾಗುವುದರಲ್ಲಿ ಸಂಶಯವೇ ಇಲ್ಲ
ನಿಜಕ್ಕೂ ಅವಳು ಹೇಳಿದ ಮಾತುಗಳಲ್ಲಿ ಅರ್ಥವಿದೆ ಅನ್ನಿಸಿತು
ಅವಳೇ ಹೇಳಿದ ಹಾಗೆ ಕೂಪ ಮಂಡೂಕದ ಥರ ಇದ್ದು ಇದನ್ನೇ ಪ್ರಪಂಚ ಅಂದುಕೊಂಡಿದ್ದೀನೇನೋ ಅಂತನ್ನಿಸುತ್ತಿದ್ದಂತೆ. ಕೂಪ ಮಂಡೂಕವನ್ನು ಸಾಗರಕ್ಕೆ ಕರೆದುಕೊಂಡು ಬಂದ ಸಾಗರ ಮಂಡೂಕ ತಾನೆ ತಿಮಿಂಗಿಲದ ಬಾಯಿಗೆ ತುತ್ತಾದದ್ದು ನೆನಪಿಗೆ ಬಂದು ಕೂಪ ಮಂಡೂಕವಾಗಿರುವುದೇ ಲೇಸು ಎಂದನಿಸಿ ಸುಮ್ಮನಾದೆ ಅಷ್ಟರಲ್ಲೇ ಇವರು ಬಂದರು. ಅವರಿಗೆ ಹೇಳಿದರೆ ನಗುತ್ತಾ ಅವಳು ಸುಮ್ಮನೆ ಬಡಾಯಿ ಕೊಚ್ಚಿಕೊಂಡಿರ್ತಾಳೆ ಹಾಗೆಲ್ಲ ಹೆಣ್ಣು ಇರಕ್ಕೆ ಆಗಲ್ಲ ಎಂದು ಸುಮ್ಮನಾದರು.
ಆದರೂ ಅವಳು ಹಾಗು ಅವಳ ಮಾತು ಇನ್ನೂ ಮನದಿಂದ ಮರೆಯಾಗಿಲ್ಲ
ಸಂಪದಿಗರೆ ಅವಳ ಈ ಮಾತಿಗೆ ನಿಮ್ಮ ಅಭಿಪ್ರಾಯವೇನು. ನೀವು ಅವಳ ಮಾತಿನ ಪರವೋ ಅಥವ ವಿರೋಧವೋ?