ಅಂದು - ಇಂದು .... ಸುಮ್ಮ್ನೆ ಹಾಗೇ

ಅಂದು - ಇಂದು .... ಸುಮ್ಮ್ನೆ ಹಾಗೇ

ಬರಹ

ಇಂದಿಗಿಂತ ಅಂದೇನೇ ಚೆಂದವೋ ಅಂತ ಬರೀ ಫ಼್ಲಾಶ್ ಬ್ಯಾಕ್ ನಲ್ಲೇ ಇರುವವರಿಗೆ ಇದೊಂದು ಮಾತು. ಹಳೆಯದೆಲ್ಲಾ ಒಳ್ಳೇದಲ್ಲಾ ಹೊಸದೆಲ್ಲಾ ಕೆಟ್ಟದಲ್ಲ ಅಂತ ಕವಿ ಕಾಳಿದಾಸನೇ ಹೇಳಿದ್ದಾನೆ. ಕೆಲವೊಂದು ಹಳೆಯ ವಿಚಾರಗಳನ್ನು, ವಸ್ತು ವಿಷಯಗಳನ್ನು, ಕಥೆಗಳನ್ನೋ ಅವಲೋಕಿಸಿದಾಗ ಈಗಾಲೂ ಅದು ಚಾಲ್ತಿಯಲ್ಲಿದೆ ಅಂತ ಅನ್ನಿಸುತ್ತದೆ. ಅದಕ್ಕೊಂದು ಬೇರೇ ರೂಪ ಇರಬಹುದು ಆದರೆ ಮೂಲ ಉದ್ದೇಶ ಒಂದೇ! ವಿಜ್ಞ್ನಾನಿಗಳು ತಮ್ಮ ಪರಿಶ್ರಮದಿಂದ ಕಂಡುಹಿಡಿದಿದ್ದರೂ ಅದರ ಮೂಲ, ಪುರಾಣಗಳಲ್ಲೋ ಅಥವಾ ಕಥೆಗಳಲ್ಲೋ ಕಂಡಿದ್ದೇವೆ ಎನ್ನಿಸುವುದು ಸುಳ್ಳಲ್ಲ.

ಅಂದು: ಕನ್ನಡ ಚಲನಚಿತ್ರದಲ್ಲಿ ಫ಼್ಯಾಂಟಸಿ ಚಿತ್ರಗಳಿಗೆ ಹೆಸರಾದವರು ವಿಠಲಾಚಾರ್ಯ. ರುಂಡಗಳ ಸರಮಾಲೆ ಧರಿಸಿ, ಕಮಂಡಲ ಹಾಗೂ ದಂಡ ಹೊತ್ತು, ಕಪ್ಪು ಬಟ್ಟೆ ಧರಿಸಿ ಕೆಂಗಣ್ಣು ಮಾಡಿಕೊಂಡು ಗುಹೆಯ ಮುಂದೆ ನಿಂತು ಎನೋ ಪಿಟಿಪಿಟಿ ಮಂತ್ರ ಹೇಳುತ್ತ ದಂಡವನ್ನು ಒಮ್ಮೆ ಬಾಗಿಲಿಗೆ ತೋರಿಸುತ್ತಿದ್ದಂತೆಯೇ ಅದು ತೆರೆದುಕೊಳ್ಳುತ್ತದೆ. ಸ್ವಲ್ಪ ನಂತರದ ’ಆಲೀಬಾಬ ಹಾಗೂ ನಲವತ್ತು ಕಳ್ಳರು’ ಕಥೆಯಲ್ಲಿ ಗುಹೆಯ ಮುಂದೆ ನಿಂತು ’ಓಪನ್ ಸೇಸೇಮ್’ ಎಂದು ಹೇಳಿದಾಗ ಬಾಗಿಲು ತೆರೆದುಕೊಳ್ಳುತ್ತದೆ. ಇವೆರಡೂ ಸನ್ನಿವೇಶದಲ್ಲಿ ನೆಡೆದದ್ದು ಒಂದೆ. 'identity validation' ಇಬ್ಬರೂ ಸಹ ಗುಹೆಯ ಮುಂದೆ ನಿಂತು ತಮ್ಮ ಪಾಸ್ ವರ್ಡ್ ಹೇಳಿದರು.

ಇಂದು: ಗರಾಜ್ ಬಾಗಿಲ ಬಳಿ ನಿಂತು ರಿಮೋಟ್ ಒತ್ತಿದರೆ ಬಾಗಿಲು ತೆರೆದುಕೊಳ್ಳುತ್ತದೆ. ಕಾರಿನ ಒಳಗೂ ಹೋಗದೆ ಬಟನ್ ಒತ್ತಿದರೆ ಕಾರು ಸ್ಟಾರ್ಟ್ ಆಗುತ್ತದೆ.

*******

ಅಂದು: ಗಾಂಧಾರಿಗೆ ಜನಿಸಿದ ಮಾಂಸದ ಮುದ್ದೆಯನ್ನು ನೂರೊಂದು ಭಾಗ ಮಾಡಿ ನೂರೊಂದು ಕಂಚಿನ ಪಾತ್ರೆಯಲ್ಲಿ ಬೆಣ್ಣೆಯೊಡನೆ ಹಾಕಿಟ್ಟು ಅದನ್ನು ಭದ್ರ ಮಾಡಿ ಇಡಲಾಗಿತ್ತು. ಎರಡು ವರ್ಷಗಳ ನಂತರ ಒಂದೊಂದೇ ಹೊರತೆಗೆಯಲಾಗಿ ಕೌರವರು ಜನಿಸಿದರು.

ಇಂದು: ಹಲವಾರು ವರ್ಷಗಳ ಹಿಂದೆಯೇ ನಾವು ಈ ಅಂಶವನ್ನು ಕದ್ದು ಪ್ರನಾಳ ಶಿಶುವನ್ನು ’ತಯಾರಿ’ಸಿದ್ದೇವೆ

*****

ಅಂದು: ನಳ ಮಹಾರಾಜನು ದಮಯಂತಿಯನ್ನು ವರಿಸಲು ಸ್ವಯಂವರಕ್ಕೆ ಹೊರಟಾಗ ಅವನಂತೆಯೇ ಕಾಣುವಂತೆ ನಾಲ್ವರು ದೇವತೆಗಳು ತಮ್ಮ ಚಹರೆಯನ್ನು ಬದಲಿಸಿ ಅವನೊಂದಿಗೆ ಹೋದರು.

ಇಂದು: ಸಿನಿಮಾ ಜಗತ್ತಿನಲ್ಲಿ ಅಂತಹವರನ್ನು ಡ್ಯೂಪ್ ಎಂದು ಕರೆಯುತ್ತೇವೆ. ಪ್ಲಾಸ್ಟಿಕ್ ಸರ್ಜರಿಯೇ ಮೊದಲಾದ ಕ್ರಿಯೆಯನ್ನು ಅನುಸರಿಸಿ ತನ್ನಂತೆಯೇ ಕಾಣುವ ಹಲವರನ್ನು ಸದ್ದಾಮ ಹೊಂದಿದ್ದನೆಂದು ಹೇಳುತ್ತಾರೆ.

****

ಅಂದು: ದುಷ್ಯಂತ ಮಹಾರಾಜನು ಕಾಡಿಗೆ ಬೇಟೆಗೆ ಹೋಗಿ, ಶಕುಂತಳೆಯನ್ನು ಗಾಂಧರ್ವ ರೀತಿಯಲ್ಲಿ ವಿವಾಹವಾಗಿ, ತನ್ನ ರಾಜ್ಯಕ್ಕೆ ಹಿಂದಿರುಗುವಾಗ ತಾನು ಹೋಗಿ ಅವಳನ್ನು ಕರೆಸಿಕೊಳ್ಳುವುದಾಗಿ ಹೇಳುತ್ತಾನೆ. ಎಷ್ಟು ದಿನವಾದರೂ ಅವನಿಂದ ಸಂದೇಶ ಬಾರದಿರಲು ಮುನಿಕುಮಾರರ ಸಹಿತ ತಾನೇ ಅವನಲ್ಲಿಗೆ ಹೋಗಲು, ಅವಳಾರೆಂಬುದೇ ತನಗೆ ಅರಿಯದೆಂದು ಹೇಳುತ್ತಾನೆ ದುಷ್ಯಂತ.

ಇಂದು: ಕಾರ್ಯನಿಮಿತ್ತ ಪರ ಊರಿಗೋ / ದೇಶಕ್ಕೋ ಹೋಗಿ ಅಥವ ಬಂದು, ಮಹತ್ಕಾರ್ಯ ಸಾಧಿಸಿ ವಾಪಸ್ಸಾಗಿ ನಂತರ ತಮಗೇನೂ ತಿಳಿದಿಲ್ಲವೆಂದು ನಾಟಕವಾಡುವ ಹಲವಾರು ದುಷ್ಯಂತರು ಎಷ್ಟೋ ಮಂದಿ ಇದ್ದಾರೆ.

***

ಅಂದು: ತನ್ನ ಮಗನ ತಲೆಯನ್ನು ಕಡಿದನೆಂದು ಗೋಳಿಡುತ್ತಿದ್ದ ಪಾರ್ವತಿಯನ್ನು ಕಂಡು ನೊಂದ ಪರಶಿವ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಯಾವುದಾರೂ ಪ್ರಾಣಿಯ ತಲೆಯನ್ನು ತನ್ನಿರೆಂದು ತನ್ನ ಗಣರಿಗೆ ಆಜ್ಞಾಪಿಸುತ್ತಾನೆ. ಅದರಂತೆ ಅವರು ತಂದ ಆನೆಯ ತಲೆಯನ್ನು ಬಾಲಕನಿಗೆ ಜೋಡಿಸಲು ಅವನು ’ಗಣೇಶ’ ಎಂದು ಹೆಸರು ಪಡೆದನು.

ಇಂದು: ಮೂತ್ರಪಿಂಡ ಮರುಜೋಡಣೆ, ಹೃದಯ ಮರುಜೋಡಣೆಗಳನ್ನು ಮಾಡುವಲ್ಲಿ ನಮ್ಮ ವೈದ್ಯರು ಯಶಸ್ವಿಯಾಗಿದ್ದರೂ ’ತಲೆಯ ಮರುಜೋಡಣೆ’ ಯಲ್ಲಿ ಇನ್ನೂ ಪ್ರಗತಿ ಸಾಧಿಸಿಲ್ಲ ಅದರಲ್ಲೂ ಮಾನವನ ದೇಹಕ್ಕೆ ಇನ್ನೊಂದು ಪ್ರಾಣಿಯ ತಲೆಜೋಡಣೆ! ಆದರೆ ಲಾಜಿಕಲ್ಲಾಗಿ ನಮ್ಮ ಕಂಪ್ಯೂಟರ್ ಜನ ಇದನ್ನು ಸಾಧಿಸಿ ಹಳಬರಾಗಿದ್ದಾರೆ. ಅಶ್ಲೀಲ ಚಿತ್ರಗಳಿಗೆ ಯಾರದೋ ತಲೆಗೆ ಯಾರದೋ ದೇಹ ಜೋಡಿಸಿ, ಅದು ಅವರೇ ಎಂದು ನಂಬಿಸಿ ಬ್ಲ್ಯಾಕ್ ಮೇಲ್ ಮಾಡುವುಷ್ಟು ಮುಂದುವರಿದಿದ್ದಾರೆ !!

*****

ಅಂದು: ಬೇಡರ ಕಣ್ಣಪ್ಪ ಶಿವ ದರ್ಶನ ಮಾಡುವಾಗ, ಶಿವನ ಕಣ್ಣಲ್ಲಿ ರಕ್ತ ಕಾಣಿಸುತ್ತದೆ. ಅದಕ್ಕೆ ಕಣ್ಣಪ್ಪನು ತನ್ನ ಒಂದು ಕಣ್ಣನ್ನು ಕಿತ್ತು ಲಿಂಗಕ್ಕೆ ಅಂಟಿಸುತ್ತಾನೆ. ಆಗ ಮತ್ತೊಂದು ಕಣ್ಣಲ್ಲೂ ರಕ್ತ ಸುರಿಯಲು ಮತ್ತೊಂದು ಕಣ್ಣನ್ನೂ ಕಿತ್ತು ಲಿಂಗಕ್ಕೆ ಅಂಟಿಸುತ್ತಾನೆ

ಇಂದು: ಇದೇ ’ನೇತ್ರ ದಾನ’. ತಮ್ಮ ನಂತರ ತಮ್ಮ ಕಣ್ಣುಗಳನ್ನು ಬೇರೆಯವರಿಗೆ ದಾನ ಮಾಡವ ವಿಶಾಲ ಹೃದಯವಂತರು ಬಹಳಷ್ಟು ಮಂದಿ ಇದ್ದಾರೆ.

*******

ಅಂದು: ದೇವಾನುದೇವತೆಗಳು ಪಕ್ಷಿಯನ್ನು ತಮ್ಮ ವಾಹನವನ್ನಾಗಿಸಿಕೊಂಡು ಪ್ರಯಾಣ ಮಾಡುತ್ತಿದ್ದರು

ಇಂದು: ವಿಮಾನಗಳನ್ನು ಬಳಸಿಕೊಂಡು ನಾವು ದೇಶ-ವಿದೇಶಗಳನ್ನು ಸುತ್ತುತ್ತೇವೆ. ಮಾರುತಿ, ಸ್ಕಾರ್ಪಿಯೋ, ಟೌರಸ್, ಜಗ್ವಾರ್, ಯಮಾಹ (ಕೋಣ) ದಂತಹ ವಾಹಗಳನ್ನು ಏರಿ ಪ್ರಾಣಿಗಳ ಮೇಲೂ ಪ್ರಯಾಣ ಮಾಡುತ್ತೇವೆ ಎಂದು ತೋರಿಸಿದ್ದೇವೆ !!!

*********

ಅಂದು: ರಾಜಕುಮಾರಿ ತನ್ನ ಶಯ್ಯಾಗೃಹಕ್ಕೆ ಹೋಗಿ ಒಮ್ಮೆ ಚಪ್ಪಾಳೆ ತಟ್ಟಲು ಜಗ್ಗನೆ ದೀಪಗಳು ಹೊತ್ತಿಕೊಂಡವು. ಮೆತ್ತನೆಯ ತನ್ನ ಹಾಸಿಗೆಯನ್ನೇರಿ, ಮಲಗಿ ಮತ್ತೊಮ್ಮೆ ಚಪ್ಪಾಳೆ ತಟ್ಟಲು ದೀಪಗಳು ನಂದಿದವು.

ಇಂದು:ಈಗಲೂ ಇದು ಸಾಧ್ಯ. ಇದನ್ನು ಸೌಂಡ್ ಡಿಟೆಕ್ಟರ್ ಎಂದು ಕರೆಯುತ್ತೇವೆ.

******

ಇಂತಹ ಅನೇಕ ಉದಾಹರಣೆಗಳಿರಬಹುದು. ನಿಮಗೆ ಗೊತ್ತಿದ್ದಲ್ಲಿ ತಿಳಿಸಿ....