ಆಸ್ತಿಕರು ‍ಯಾಕೆ ಹಿಂಗಾಡ್ತಾರೊ ?

ಆಸ್ತಿಕರು ‍ಯಾಕೆ ಹಿಂಗಾಡ್ತಾರೊ ?

ಬರಹ

ನಾನು ಆಸ್ತಿಕ. ಆದರೆ ದೇವರು ಇದ್ದಾನೆ ಎಂದು ಸಾಧಿಸುವ ಅವಶ್ಯಕತೆಯಾಗಲೀ, ಬುದ್ಧಿಯಾಗಲೀ, ಆಳವಾದ ಜ್ಞಾನವಾಗಲೀ ನನಗಿಲ್ಲ. ಆಸ್ತಿಕರೆಲ್ಲಾ ಯಾಕೆ ನಾಸ್ತಿಕರ ಹಿಂದೆ ಬಿದ್ದು ದೇವರಿದ್ದಾನೆ ಎಂದು ನಿರೂಪಿಸಲು ಹೊರಡುತ್ತಾರೊ ತಿಳಿಯದು. ಏನೇನೊ ತರ್ಕಗಳನ್ನು ಹುಡುಕುತ್ತಾರೆ. ಧರ್ಮಗ್ರಂಥಗಳಲ್ಲಿ ವಿಜ್ಞಾನವನ್ನು ಹುಡುಕುತ್ತಾರೆ! ಅದಕ್ಕೆ ನಾಸ್ತಿಕರ ಟೀಕೆಗಳು, ವ್ಯಂಗ್ಯಗಳಿಗೆ ಬಲಿಯಾಗಿ ನರಳುತ್ತಾರೆ! ವಾದ ಮಾಡುತ್ತ ಕೂರಲು ಆಳವಾದ ಜ್ಞಾನ ಅಥವಾ ತರ್ಕಶಕ್ತಿ ಬೇಕು. ಒನ್ಸ್ ಅಗೇನ್ ತರ್ಕದಿಂದ ನಾವು ಎಷ್ಟು ಬುದ್ಧಿವಂತರು ಎಂದು ತಿಳಿಯುತ್ತದೋ ಹೊರತು ಸತ್ಯವನ್ನು ನಿರೂಪಿಸಲು ಸಾಧ್ಯವಾಗುವುದಿಲ್ಲ.

ಸಂಪ್ರದಾಯಗಳು, ನಂಬಿಕೆಗಳು ಒಂದು ಸಮಾಜವನ್ನು ಸಂಸ್ಕೃತಿಯನ್ನು ರೂಪಿಸುತ್ತವೆ. ಪ್ರತಿಯೊಂದು ಸಂಪ್ರದಾಯಕ್ಕೂ ವೈಜ್ಞಾನಿಕ ಕಾರಣಗಳಿಲ್ಲದಿದ್ದರೂ ಕೆಲವು ಆಚರಣೆಗಳು ಕೆಲ ನಂಬಿಕೆಗಳನ್ನು ಪ್ರತಿನಿಧಿಸುತ್ತವೆ. ಈ ನಂಬಿಕೆ ಆಚರಣೆಗಳಿಗೆ ಗೌರವ ಸಲ್ಲಲೇಬೇಕು. ನಮಗೆ ನಂಬಿಕೆ ಇಲ್ಲದಿದ್ದರೆ ನಂಬಿದವರು ಆಚರಿಸಿಕೊಳ್ಳಲಿ. ಅದಕ್ಕೆ ವಿರೋಧದ ಅಗತ್ಯವಿಲ್ಲ. ಜನರ ಭಾವನೆಗಳನ್ನು ಆದರಿಸಬೇಕು. ಅದರೆ ಆಚರಣೆಯೊಂದು ಸಾಮಾಜಿಕ ದೋಷವಾಗಿದ್ದರೆ ಅದನ್ನು ವಿರೋಧಿಸಲೇಬೇಕು (ಉದಾ: ಅಸ್ಪೃಷ್ಯತೆ ಇತ್ಯಾದಿ). ಆಚರಣೆ, ನಂಬಿಕೆ, ಸಂಪ್ರದಾಯಗಳಿಲ್ಲದ ಸಮಾಜ ಮಹಾಬೋರಿಂಗ್ ಆಗಿಬಿಡುತ್ತದೆ. ಕಮ್ಯುನಿಸ್ಟ್ ಆಳ್ವಿಕೆಯ ಥರ!

ಆಸ್ತಿಕರು, ಸನಾತನಿಗಳು ತಪ್ಪು ಮಾಡುತ್ತಾರೆ. ಸುಮ್ಮನೆ ತಮ್ಮ ಪಾಡಿಗೆ ದೇವರ ಜೊತೆ ಇರುವುದು ಬಿಟ್ಟು ಧರ್ಮಗ್ರಂಥಗಳಲ್ಲಿ ವೈಜ್ಞಾನಿಕತೆಯನ್ನು ಹುಡುಕಲು ಹೊರಡುತ್ತಾರೆ. ನಾಸ್ತಿಕರಿಗೆ ದೇವರ ಬಗ್ಗೆ ನಂಬಿಕೆ ಹುಟ್ಟಿಸಲು ಹೊರಡುತ್ತಾರೆ. ಎಲ್ಲೆಲ್ಲಿನದೋ ಹುಡುಕಿ ಈಗಿನ ಯಾವುದ್ಯಾವುದೊ ಸಂಶೊಧನೆಗೆ ಸಮೀಕರಿಸಿ ಹೆಮ್ಮೆ ಪಟ್ಟುಕೊಳ್ಳುತ್ತಾರೆ.

ಇಂತಹ ಕೆಲವು ಸರ್ಕಸ್‍ಗಳು ನಗೆ ತರಿಸುತ್ತವೆ.

೧. ದೇವಸ್ಥಾನದಲ್ಲಿ ತೀರ್ಥ ಕೊಡುವುದು ವಾಟರ್ ಥೆರಪಿ. ಜರ್ಮನಿಲೆಲ್ಲ ಐನೂರು ರೂಪಾಯಿಗೆ ಒಂದು ಚಮಚ ತೀರ್ಥ ಸಿಗುತ್ತದೆ. ಜನ ಕ್ಯೂ ನಿಂತು ತೆಗೆದುಕೊಳ್ಳುತ್ತಾರೆ.-- ಮನೆಲಿ ನೀರಿರಲ್ವೆನೊ. ಅದನ್ನು ಕೊಡಿದರೆ ವಾಟರ್ ಥೆರಪಿ ಆಗಲ್ವೆನೊ?

೨. ಸೂರ್ಯನಿಗೆ ಅರ್ಘ್ಯ ಕೊಡುವಾಗ ನೀರ ಹನಿಗಳ ಮೂಲಕ ಕಿರಣಗಳು ವಿಭಜನೆಯಾಗಿ ಮೈಮೇಲೆ ಆ ಕಿರಣದ ಬಣ್ಣಗಳು ಬಿದ್ದು ಕಲರ್ ಥೆರಪಿ ಆಗುತ್ತದೆ!-- ಕಲ್ಪನೆ ಅದ್ಭುತವಾಗಿದೆ!

೩. ಎಡಗಡೆಯಿಂದ ಎದ್ದರೆ ಹೃದಯದ ಮೇಲೆ ಭಾರ ಬೀಳುತ್ತದೆ.-- ಹೃದಯ ಎದೆಯ ಮಧ್ಯಭಾಗದಲ್ಲಿರುತ್ತದೆ. ಎಡಕ್ಕೆ ವಾಲಿಕೊಂಡಿರುತ್ತದೆ ಅಷ್ಟೆ. ಯಾವ ಕಡೆಯಿಂದ ಎದ್ದರೂ ಸಮಾನವದ ಭಾರ ಹೃದಯದ ಮೇಲೆ ಬೀಳುತ್ತದೆ. ಇದು ನಿಜವೇ ಆಗಿದ್ದಲ್ಲಿ ರಾತ್ರಿ ನಾವು ಎಡಕ್ಕೆ ಹೊರಳಿ ಮಲಗಲೇಬಾರದು.

೪. ಭಗವದ್ಗೀತೆಯಲ್ಲಿ ಡಾರ್ಕ್ ಮ್ಯಾಟರ್ ಬಗ್ಗೆ ಹೇಳಿದೆ-- ಥತ್!

೫. ಬಂಗಾರದ ಬಳೆ ಉಂಗುರ ಹಾಕುವುದರಿಂದ ಕೀಲು ನೋವು ಬರುವುದಿಲ್ಲ.-- ಅದಕ್ಕೇ ಬಂಗಾರದ ರೇಟು ಜಾಸ್ತಿಯಾಗಿರುವುದು ಅನ್ಸುತ್ತೆ!

೬ ಸ್ವಾಮಿ ವಿವೇಕಾನಂದರ ಸಾವಿನ ಬಗ್ಗೆ ಅತ್ಯಂತ ಹಾಸ್ಯಾಸ್ಪದ ವಿವರಣೆಗಳಿವೆ. ಅವರು ವೀರ್ಯವನ್ನು ನಿಗ್ರಹಿಸಿ ಆ ಶಕ್ತಿಯನ್ನು ತಾಳಲಾಗದೇ ದೇಹ ತ್ರಾಣ ಕಳೆದುಕೊಂಡಿತಂತೆ, ಧ್ಯಾನ ಮಾಡುವಾಗ ಅವರ ಭ್ರೂಮಧ್ಯದಿಂದ ಚಲಿಸುತ್ತಿದ್ದ ಶಕ್ತಿ ಓಘವನ್ನು ತಾಳಲಾಗದೇ ಭ್ರೂಮಧ್ಯ ಒಡೆದು ಹೋಗಿ ಸಾವು ಸಂಭವಿಸಿತಂತೆ; ಆದ್ದರಿಂದಲೇ ಅವರು ಮರಣಿಸಿದಾಗ ಭ್ರೂಮಧ್ಯದಿಂದ ರಕ್ತ ಹರಿಯುತ್ತಿತ್ತಂತೆ! ವಿವೇಕಾನಂದರು ಗಂಟಲ ಕ್ಯಾನ್ಸರ್ ನಿಂದ ತೀರಿಹೋದರು ಎಂಬುದು ನನಗೆ ಗೊತ್ತಿರುವ ಮಾಹಿತಿ. ಅವರಿಗೆ ಸಿಗರೇಟು ಸೇದುವ ಅಭ್ಯಾಸ ಇತ್ತೆಂದೂ ಕೇಳಿದ್ದೇನೆ.

೭. ಶಿವನ ಮೂರನೆ ಕಣ್ಣಿಂದ ಬಂದ ಬೆಂಕಿ ಮನ್ಮಥನನ್ನು ಸುಟ್ಟು ಹಾಕಿತು. ಇದು ಇಂದಿನ ಲೇಸರ್ ಗೆ ಸಮ. ಹಾಗಾಗಿ ಲೇಸರ್ ಬಗ್ಗೆ ನಮ್ಮ ಹಿರಿಯರಿಗೆ ಗೊತ್ತಿತ್ತು. -- ಕಲ್ಪನೆ ಇತ್ತು ಎನ್ನಬಹುದೇ ಹೊರತು ಗೊತ್ತಿತ್ತು ಎನ್ನಲಾಗುವುದಿಲ್ಲ.ಪುಷ್ಪಕ ವಿಮಾನವೂ ಇದೇ ವಿಭಾಗಕ್ಕೆ ಸೇರುತ್ತದೆ.

೮ ಅರ್ಜುನನ ಸರ್ಪಾಸ್ತ್ರ(ಇನ್ಯಾವುದೊ ಅಸ್ತ್ರ ಅಂತ ಇಟುಕೊಳ್ಳಿ) ಜಗತ್ತನ್ನೆ ನಾಶ ಮಾಡುವಂತಿತ್ತು. ಇದು ಹೈಡ್ರೋಜನ್ ಬಾಂಬ್!-- ಕಲ್ಪನೆ ಚೆನ್ನಾಗಿದೆ ಅಷ್ಟೇ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ವಸ್ತ್ರದ್ ರವರು "ಜಗದ ಚೇಷ್ಟೆಗಳಿಗೆಲ್ಲಾ ರವಿ ಬೀಜ" ಎಂಬ ಅಕ್ಕನ ವಚನಕ್ಕೆ "Sun is source of energy on the Earth" ಎಂದು ವಿವರಣೆ ಕೊಟಿದ್ದರು. ಬೆಳಕು ಹರಿದ ಮೇಲೆಯೇ ಎಲ್ಲಾ ಕೆಲಸಗಳು ಶುರು ಆಗುತ್ತವೆ ಎಂಬುದು ಇದರ ನೇರ ವಿವರಣೆ.
ತಾಳಿ ಕಟ್ಟಲು ಯಾವ ವೈಜ್ಞಾನಿಕ ವಿವರಣೆ ಇದೆಯೋ ನನಗೆ ಗೊತ್ತಿಲ್ಲ. ತಾಳಿ ಕಟ್ಟಿಕೊಳ್ಳಲೇಬೇಕು, ಕುಂಕುಮ ಹಚ್ಚಿಕೊಳ್ಳಲೇಬೇಕು ಎಂದು ಯಾವ ಶಾಸ್ತ್ರಗಳಲ್ಲೂ ಹೇಳಿಲ್ಲ. ಮದುವೆಗೆ ಮುಖ್ಯ ಅಂದರೆ ಪ್ರತಿಜ್ಞಾ ವಿಧಿ ಅಷ್ಟೇ!
ಮಹಿಳೆಯರೇ ಕೇಳಿ! ಇನ್ನು ಮುಂದೆ ಯಾರಾದರೂ ನಿಮಗೆ ಜೀವ ಬೆದರಿಕೆ ಹಾಕಿ ಮಂಗಳ ಸೂತ್ರ ಬಿಚ್ಚಿಕೊಡು ಎಂದು ಕೇಳಿದರೆ ಸುಮ್ಮನೆ ಕೊಟ್ಟು ಪ್ರಾಣ ಉಳಿಸಿಕೊಳ್ಳಿ. ತಾಳಿ ಬಿಚ್ಚಿದ ತಕ್ಷಣ ನಿಮ್ಮ ಗಂಡನೇನೂ ನೆಗೆದು ಬಿದ್ದು ಹೋಗುವುದಿಲ್ಲ. "ಪ್ರಾಣಾನ್ ರಕ್ಷೇತ್ ಭಾರ್ಯೈರಪಿ ಧನೈರಪಿ". ಇದು ಹೆಣ್ಣು ಮಕ್ಕಳಿಗೂ ಅನ್ವಯಿಸುತ್ತದೆ. ಸ್ವಯಂ ಪ್ರಾಣರಕ್ಷಣೆ ಪ್ರಕೃತಿ ನಿಯಮ!

ದೇವರು ಎಂಬುದು ಸಮುದ್ರದ ನೀರಿನಂತೆ. ನಮಗೆ ಎಲ್ಲವನ್ನೂ ತುಂಬಿಕೊಳ್ಳಲಾಗುವುದಿಲ್ಲ. ನಮ್ಮ ಬಳಿ ಎಷ್ಟು ದೊಡ್ಡ ತಂಬಿಗೆ ಅಥವಾ ಬಿಂದಿಗೆ ಇದೆಯೋ ಅಷ್ಟೇ ನಮಗೆ ಪ್ರಾಪ್ತಿ! ಸುಮ್ಮನೆ ದಿನಕೊಂದು ಬಾರಿ ದೇವರಿಗೆ ಕೈಮುಗಿದು ಮುಂದೆ ನಮ್ಮ ನಮ್ಮ ಕರ್ಮಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ದೇವರನ್ನು ನಂಬಿದರೆ ಒಳ್ಳೆಯದು (ನನ್ನ ಅಭಿಪ್ರಾಯ) ಏಕೆಂದರೆ ನಮ್ಮನ್ನು ಕಾಪಾಡುವವನೊಬ್ಬನಿದ್ದಾನೆ ಎಂಬ ನಂಬಿಕೆ ನಮ್ಮಲ್ಲಿ ಕೊನರಿಸುವ ಮನೋಸ್ಥೈರ್ಯ ನಮ್ಮಿಂದ ಉತ್ತಮ ಕೆಲಸಗಳನ್ನು ಮಾಡಿಸುತ್ತದೆ. ಹೋಮ ಪೂಜೆಗಳೆಲ್ಲ ಮನಕ್ಕೆ ಬಲ ಕೊಡುವ ಕಸರತ್ತುಗಳೇ! ಪೂಜೆ ನಡೆಸಿ ಒಳ್ಳೆಯದಾಗುತ್ತದೆ ಕೆಲಸವನ್ನು ಕೈಗೆತ್ತಿಕೊಳ್ಳಿ ಎಂದು ತಾವು ನಂಬಿರುವ ದೇವರ ಪರವಾಗಿ ಒಬ್ಬರು ಹೇಳಿದರೆ ಮನಸ್ಸಿಗೆ ಒಂದು ತಾಕತ್ತು ಬರುತ್ತದೆ. ಕಷ್ಟದ ಸಮಯದಲ್ಲಿ ನಮ್ಮ ಪರವಾಗಿ ಒಬ್ಬ ಪೂಜೆ ನೆರವೇರಿಸಿ ದೇವರ ಪರವಾಗಿ ನಮಗೆ ಆಶೀರ್ವಾದ ನೀಡಿದರೆ ಮನಸ್ಸಿಗೆ ಸಮಾಧಾನವಾಗುತ್ತದೆ.

ಆಸ್ತಿಕರೇ ಕೇಳಿ! ಪೂಜೆ ನಂಬಿಕೆಗಳಿಲ್ಲದೇ ಮನೋಸ್ಥೈರ್ಯವನ್ನು ನಾನು ಸಾಧಿಸಬಲ್ಲೆ ಎಂದು ಯಾರಾದರೂ ಹೇಳಿದರೆ ಸಾಧಿಸಲಿ ಬಿಡಿ! ಪ್ರಚಾರಕ್ಕಾಗಿ ಕೆಲವರು ಸಂಪ್ರದಾಯಗಳನ್ನು ಪ್ರಶ್ನಿಸಿದರೆ ಇನ್ನು ಕೆಲವರಿಗೆ ಆಸ್ತಿಕರನ್ನು ಗೋಳು ಹೊಯ್ದುಕೊಳ್ಳುವುದೇ ಖುಶಿ! ತಲೆ ಯಾಕೆ ಚಚ್ಚಿಕೊಳ್ತೀರಾ? ಸಲ್ಪ ನಗೋದು ಕಲೀರಿ. ನಿಮ್ಮನ್ನು ನೋಡಿ ನಾಸ್ತಿಕರು ನಗುತ್ತಾರೆ. ಅವರನ್ನು ನೋಡಿ ನೀವು ನಕ್ಕುಬಿಡಿ ಅಷ್ಟೆ. ಅವರು ಕೆಲವು ತರ್ಕಗಳನ್ನು ಹೇಳಿದಾಕ್ಷಣ ನಿಮ್ಮ ನಂಬಿಕೆ ಸುಳ್ಳಾಗಲೇಬೇಕು ಎಂದು ನಿಯಮವೇನೂ ಇಲ್ಲ. ಬನ್ನಂಜೆ ಗೋವಿಂದಾಚಾರ್ಯರಂತಹ ವಿದ್ವಾಂಸರು ನಾಸ್ತಿಕರ ಜೊತೆ ಚರ್ಚೆ ಮಾಡಿ ಮೇಲುಗೈ ಸಾಧಿಸಿದ್ದಾರೆ. ನಿಮ್ಮಲ್ಲೂ ಅಷ್ಟು ವಿದ್ವತ್ತು ಇದ್ದರೆ ಚರ್ಚಿಸಿ. ಇಲ್ಲವೆಂದರೆ ನನ್ನ ಹಾಗೆ ನಕ್ಕು ಸುಮ್ಮನಾಗಿಬಿಡಿ. ಬಿ.ಪಿ ಏರಿಸಿಕೊಳ್ಳುವುದು ಬೇಡ ಎಂದಷ್ಟೇ ನನ್ನ ಆಸ್ತಿಕ ಮಿತ್ರರ ಬಗ್ಗೆ ನನ್ನ ಕಳಕಳಿ! ಸಂಪ್ರದಾಯಗಳನ್ನು ಆಚರಿಸಿ; ಧರ್ಮಗ್ರಂಥ, ಧರ್ಮ, ದೇವರಲ್ಲಿ ಶ್ರದ್ಧೆ ಇಡಿ. ಆದರೆ ಅದರಲ್ಲಿ ವೈಜ್ಞಾನಿಕತೆ ಹುಡುಕುವುದು ....ಯಾಕೊ ಸರಿ ಅನ್ನಿಸ್ತಿಲ್ಲ!!!

ಯಾಕೆ ಅಂದರೆ ವಿಜ್ಞಾನ ಇತಿಹಾಸದಂತೆ ನಿಚ್ಚಳ ಸತ್ಯವಲ್ಲ. ನ್ಯೂಟನ್ ಹೇಳಿದ್ದನ್ನು ಐಗನ್ ಸುಳ್ಳು ಎಂದು ಸಾಧಿಸುತ್ತಾನೆ. ಜೆ.ಜೆ ಥಾಮ್ಸನ್ ಕಂಡುಹಿಡಿದಿದ್ದನ್ನು ಅವನ ಶಿಷ್ಯ ರುದರ್ಫ಼ೊರ್ಡ್ ಸುಳ್ಳು ಎನಿಸುತ್ತಾನೆ. ಇನ್ನೊಬ್ಬ ಬಂದು ಇದು ಸುಳ್ಳು ಎಂದು ಹೇಳುವವರೆಗೂ ಸಧ್ಯದ ಸಂಶೊಧನೆಯೆ ಸತ್ಯ ಎಂದು ನಂಬಲಾಗುತ್ತದೆ. ಸತ್ಯ ಕಾಲಕಾಲಕ್ಕೆ ಬದಲಾಗುವುದು ವಿಜ್ಞಾನದಲ್ಲಿ ಮಾತ್ರ! ರಷ್ಯನ್ ವಿಜ್ಞಾನಿಯೊಬ್ಬ ಯಾವುದೋ ನಕ್ಷತ್ರದ ಅಧ್ಯಯನ ಮಾಡಿ ಆ ನಕ್ಷತ್ರದಲ್ಲಿ ರಂಜಕ ಇದೆ ಎಂದು ಸಾಧಿಸಿದನಂತೆ. ಮೂವತ್ತು ವರ್ಷಗಳ ಕಾಲ ಇದೇ ಸತ್ಯ ಎಂದು ನಂಬಲಾಗಿತ್ತು. ಹೆಚ್ಚಿನ ಸಂಶೊಧನೆಗೆಂದು ವಿದ್ಯಾರ್ಥಿಯೊಬ್ಬ ಆ ನಕ್ಷತ್ರವನ್ನು ಆಯ್ದುಕೊಂಡಾಗ ಸ್ಪೆಕ್ಟ್ರಮ್ ನಲ್ಲಿ ರಂಜಕದ ಅಂಶಗಳೇ ಇಲ್ಲದ್ದು ಕಂಡು ಬಂತಂತೆ! ಏಕೆ ಹೀಗಾಯಿತು ಎಂದು ತನಿಖೆ ಮಾಡಿದಾಗ ಹವೆಯಲ್ಲಿದ್ದ ಸಿಗರೇಟಿನ ಹೊಗೆ ಹಿಂದಿನ ವಿಜ್ಞಾನಿಯ ಸ್ಪೆಕ್ಟ್ರಮ್ ನಲ್ಲಿ ರಂಜಕದ ಗೆರೆಗಳನ್ನು ಮೂಡಿಸಿತ್ತಂತೆ! ಇದು ಇವರೆಲ್ಲಾ ಹೇಳುವ ವಿಜ್ಞಾನದ ಖಚಿತತೆ!