ಕ್ಷೇತ್ರ ಪರ್ಯಟನೆ: ಹಟ್ಟಿಯಂಗಡಿ, ಕೊಲ್ಲೂರು, ಕುಂಭಾಸಿ

ಕ್ಷೇತ್ರ ಪರ್ಯಟನೆ: ಹಟ್ಟಿಯಂಗಡಿ, ಕೊಲ್ಲೂರು, ಕುಂಭಾಸಿ

ಮಾರ್ಚ್ ೨೯, ೨೦೦೯

ಪೂರ್ವಯೋಜಿತವಾಗಿ ಹಟ್ಟಿಯಂಗಡಿ, ಕೊಲ್ಲೂರು ಮತ್ತು ಕುಂಭಾಸಿ ಕ್ಷೇತ್ರಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೆವು. ಅಂತೆಯೇ, ಭಾನುವಾರ ಬೆಳಿಗ್ಗೆ ಬೇಗ ಎದ್ದು ಪೂಜೆ ಮುಗಿಸಿ, ಮೊಸರವಲಕ್ಕಿ ತಿಂದು ಹೊರಟೆವು (ನಮ್ಮ ಕಾರಿನಲ್ಲಿ). ಒಟ್ಟಿಗೆ ೫ ಮಂದಿ. ನಾನು, ಅಪ್ಪ, ಅಮ್ಮ, ಹಿರಿಯಕ್ಕ ಮತ್ತು ಮುದ್ದಿನ ಅಳಿಯ(ಹಿರಿಯಕ್ಕನ ಮಗ). ಸರಿ ನಾನು ಇಂಜಿನ್ ಚಾಲು ಮಾಡಿದೆ. ಹೋಗುವಾಗ ನಾನು ಬರುವಾಗ ತಂದೆ ಕಾರು ಓಡಿಸುವ ಪ್ಲಾನ್ ಅಗಿತ್ತು. ನಮ್ಮ ಮನೆಯಿಂದ ಗಣಪನ ನೆನೆಸಿಕೊಂಡು ಸುಮಾರು ೭:೩೦ ಹೊತ್ತಿಗೆ ಹೊರಟೆವು. ೪ ಕಿ.ಮೀ ಹಳ್ಳಿ ರಸ್ತೆಯ ನಂತರ ರಾಹೆ-೧೭ ಕಾಣಿಸಿಕೊಂಡಿತು. ಹೆದ್ದಾರಿ ಇಲಾಖೆಯವರ ಕೃಪೆಯಿಂದ ರಸ್ತೆ ಸಮತಟ್ಟಾಗಿ ಸುಸ್ತಿತಿಯಲ್ಲಿತ್ತು :). ಕಾರು ಹೆದ್ದಾರಿಗೆ ಇಳಿದದ್ದೆ ತಡ, ವೇಗ ೯೦ ದಾಟಿತು. ಆರ್ಥಿಕ ಹಿಂಜರಿತದ ಪರಿಣಾಮವಾಗಿ ಮಣ್ಣಿನ ಲಾರಿಗಳು (ಗಣಿ ಲಾರಿಗಳು) ಇರಲಿಲ್ಲ :). ಆದ್ದರಿಂದ ಯಾವುದೆ ತೊಂದರೆ ಇಲ್ಲದೆ ಕಾರು ಮುನ್ನುಗ್ಗುತ್ತಿತ್ತು. ಆದರೆ ಅಗಾಗ ನಿಯಮ ಪಾಲಿಸದ ಸೈಕಲ್ ಸವಾರರು ತಲೆ ಕೆಡಿಸುತ್ತಿದ್ದರು. ೧೫ ನಿಮಿಷದ ನಂತರ ಉಡುಪಿಗೆ ಸೇರಿದ್ದೆವು. ಅಲ್ಲಿಂದ ರಸ್ತೆ ಹೇಗಿದೆಯೋ ಎಂಬ ತಳಮಳ. ಸರಿ ಧೈರ್ಯ ಮಾಡಿ ಹೊರಟೆವು. ಏನಾಶ್ಚರ್ಯ!! ಹೆದ್ದಾರಿ ಇಲಾಖೆಯಿಂದ ಮತ್ತೊಂದು ಗಿಫ್ಟ್. ಗದ್ದೆಯಂತಾಗಿದ್ದ ಉಡುಪಿ-ಕುಂದಾಪುರ ರಸ್ತೆಯಲ್ಲಿ ಯಾವುದೇ ಗೊಂದಲವಿಲ್ಲದೆ ಡ್ರೈವ್ ಮಾಡಬಹುದಾದಷ್ಟು ಉತ್ತಮ ರಸ್ತೆಯಾಗಿದೆ. ನವ ವಧುವಿನಂತೆ ಕಂಗೊಳಿಸುತ್ತಿತ್ತು ರಾಹೆ-೧೭. ಇಲ್ಲಿಯೂ ಕಾರಿನ ವೇಗ ೯೦ಕ್ಕಿಂತ ಕೆಳಗಿಳಿಯಲಿಲ್ಲ. ಕೆಲವೊಮ್ಮೆ ನಿಯಮ ಪಾಲಿಸದ ಸೈಕಲ್ ಸವಾರರ ಅಜಾಗರೂಕತೆಯಿಂದ ಮತ್ತು ಮಾರ್ಗ ಮಧ್ಯದಲ್ಲಿ ನಿಲ್ಲಿಸುತ್ತಿದ್ದ ಬಸ್ಸುಗಳಿಂದ ತೀವ್ರ ಸಂಕಷ್ಟ ಅನುಭವಿಸಬೇಕಾಗಿ ಬಂತು. ೪೦ ನಿಮಿಷದ ಪ್ರಯಾಣದ ಬಳಿಕ ಕುಂದಾಪುರ ತಲುಪಿದೆವು. ಒಂದು ಉಪಾಹಾರ ಗೃಹದಲ್ಲಿ ೨ ಇಡ್ಲಿ ಹೊಟ್ಟೆಗೆ ಇಳಿಸಿಕೊಂಡ ನಂತರ ಹಟ್ಟಿಯಂಗಡಿ ಕಡೆಗೆ ಪ್ರಯಾಣ. ಕಾಪು-ಕುಂದಾಪುರ ಮಧ್ಯೆ ಸಿಗುವ ಸುಮಾರು ೭ ಸೇತುವೆಗಳನ್ನು (ಪಾಂಗಾಳ, ಉದ್ಯಾವರ, ಕಲ್ಯಾಣಪುರ, ಕುಂದಾಪುರದ ಬಳಿ ಎರಡು, ಮತ್ತೊಂದು ಮರೆತು ಹೋಯ್ತು) ನೋಡಲು ಕಣ್ಣಿಗೆ ಹಬ್ಬ.

ಸ್ಪಷ್ಟ ಸೂಚನಾ ಫಲಕದಿಂದಾಗಿ ಎಲ್ಲಿ ಕೂಡ ದಾರಿ ತಪ್ಪುವ ಪ್ರಮೇಯವೇ ಬರಲಿಲ್ಲ. ಹಟ್ಟಿಯಂಗಡಿ ದೇವಸ್ಥಾನದ ಗೋಪುರ ರಸ್ತೆಯಲ್ಲಿ ಹೋಗುತ್ತಾ ದೇವಸ್ಥಾನ ಸೇರಿದೆವು. ಅಂತಹ ಬೃಹತ್ ದೇವಸ್ಥಾನವಲ್ಲ. ಐತಿಹಾಸಿಕ ಮಹತ್ವವಿರುವ ದೇವಸ್ಥಾನದಲ್ಲಿ ಆಗಲೇ ಬಹಳಷ್ಟು ಭಕ್ತರು ಇದ್ದರು. ದೇವರಿಗೆ ಹೂವು-ಹಣ್ಣು ಮನೆಯಿಂದಲೇ ತಂದಿದ್ದೆವು. ಸೇವಾ ಕಚೇರಿಗೆ ಹೋಗಿ ಹೂವಿನ ಪೂಜೆ ಜೊತೆಗೆ ಅಲಂಕಾರ ಪೂಜೆಗೆ ಚೀಟಿ ಬರೆಸಿದ್ದಾಯಿತು. ಅರ್ಚಕರು ಎಲ್ಲ ಪೂಜೆಯನ್ನು ಕ್ರಮಬದ್ಧವಾಗಿ ನೆರವೇರಿಸಿ ಪ್ರಸಾದವನ್ನು ಕೈಗಿತ್ತರು. ಗರ್ಭಗುಡಿಯ ಸುತ್ತಲೂ ವಿವಿಧ ಭಂಗಿಯ ಗಣಪನ ಮೂರ್ತಿಗಳಿವೆ. ಪಕ್ಕದಲ್ಲಿ ನವಗ್ರಹ ಮಂದಿರ ಕೂಡ ಇದೆ. ದೇವಾಲಯದಿಂದ ಸ್ವಲ್ಪ ದೂರದಲ್ಲಿ ವಾರಾಹಿ ನದಿ ಹರಿಯುತ್ತದೆ. ಅದನ್ನು ನೋಡಲು ಸಾಧ್ಯವಾಗಲಿಲ್ಲ. ಶಿವನ ದೇವಸ್ಥಾನ ಕೂಡ ಇದ್ದಿರಬೇಕು, ಏಕೆಂದರೆ ಕರಾವಳಿಯಲ್ಲಿ ಕೇವಲ ಗಣಪನ ದೇವಸ್ಥಾನ ಎಲ್ಲೂ ಇಲ್ಲ. ಹೊರಗಡೆ ಅಂಗಡಿಯಲ್ಲಿ ಮೊಮ್ಮನಿಗೆ ಕೆಲವು ಆಟದ ಸಾಮಾನನ್ನು ತಂದೆ ಕೊಡಿಸಿದರು. ಮೋದಕ ಪ್ರಸಾದ ಸಿಗಲಿಲ್ಲ, ಖಾಲಿಯಾಗಿತ್ತಂತೆ. ಸೇವಾ ಕಚೇರಿಯಲ್ಲಿ ಕ್ಷೇತ್ರ ಪರಿಚಯ ಪುಸ್ತಕವನ್ನು ಕೊಂಡ ನಂತರ ಕೊಲ್ಲೂರಿಗೆ ಹೋಗಲು ಅಣಿಯಾದೆವು. ದಾರಿ ಮಧ್ಯೆಯ ಗೋಡಂಬಿ ಮರಗಳು, ಬೆಟ್ಟಗಳು, ಅಂಕು-ಡೊಂಕು ರಸ್ತೆಗಳು ಮೈಮನ ಸೆಳೆಯುತ್ತವೆ.

ಹಟ್ಟಿಯಂಗಡಿ ಸ್ವಾಗತ ಗೋಪುರ ಮತ್ತು ದೇವಸ್ಥಾನ

--

ಕೊಲ್ಲೂರಿಗೆ ಹೋಗುವ ರಸ್ತೆ ಬಹಳ ಚೆನ್ನಾಗಿದೆ. ಒಂದೆ ಒಂದು ಹೊಂಡ ಇಲ್ಲ (ಎಲ್ಲಾ ಕಡೆ ಹೊಸ ಡಾಮರೀಕರಣ ಮಾಡಿದ್ದಾರೆ. ಕೆಲವು ಕಡೆ ರಸ್ತೆ ಅಗಲೀಕರಣವೂ ನಡೆಯುತ್ತಿದೆ). ಕೆಲವು ಕಡೆ ರಸ್ತೆ ಬದಿಯ ಮಣ್ಣು ಜರಿದಿದೆ. ಡ್ರೈವ್ ಮಾಡುವವರು ಸ್ವಲ್ಪ ಜಾಗರೂಕರಾಗಿರಬೇಕು, ಇಲ್ಲವಾದಲ್ಲಿ ಹೊಲಕ್ಕೆ ಬೀಳುವುದು ಖಂಡಿತ :). ಅದರ ಜೊತೆಗೆ ಘಾಟಿ ಚಾಲನೆಯ ಅನುಭವ. ನೇರ ರಸ್ತೆಗಳೇ ಇಲ್ಲ. ಬದಲಾಗಿ ಅಂಕು-ಡೊಂಕಾದ ಏರಿಳಿತದ ರಸ್ತೆಗಳು, ದಟ್ಟ ಕಾಡುಗಳು, ಬೆಟ್ಟಗಳು ಡ್ರೈವಿಂಗ್ ಅನ್ನು ಮರೆಯಲಾಗದ ಅನುಭವವವನ್ನು ನೀಡುತ್ತದೆ. ಇಲ್ಲಿ ೭೦ರ ಮೇಲೆ ಡ್ರೈವ್ ಮಾಡುವುದು ಸ್ವಲ್ಪ ಕಷ್ಟವಾಗಬಹುದು. ದಾರಿ ಮಧ್ಯೆ ಎರಡು ’ಮಂಗಳೂರು ಹೆಂಚಿನ’ ಕಾರ್ಖಾನೆಗಳು ಕಾಣಿಸಿದವು. ಅಂದು ಭಾನುವಾರವಾದ್ದರಿಂದ ಭಕ್ತರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿದ್ದರು. ಆದ್ದರಿಂದ ಕಾರುಗಳ, ಮಾಕ್ಸಿಕ್ಯಾಬ್ ಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಬೇಸಿಗೆ ರಜೆಯಲ್ಲಿ ಮತ್ತಷ್ಟು ಹೆಚ್ಚಬಹುದು. ಕೊಲ್ಲೂರು ಹತ್ತಿರವಾದಂತೆ ಪಶ್ಚಿಮ ಘಟ್ಟದ ಸಾಲುಗಳು ಆಕರ್ಷಿಸಿದವು :). ನಿಗದಿಯಂತೆ ೧೧ ಘಂಟೆಗೆ ಕೊಲ್ಲೂರು ತಲುಪಿದ್ದಾಯಿತು. ಕುಂದಾಪುರದಿಂದ ಕೊಲ್ಲೂರಿಗೆ ಹೋಗುವಾಗ ಸ್ವಲ್ಪವೂ ದಾರಿ ತಪ್ಪುವುದಿಲ್ಲ. ಅಷ್ಟು ನಿಖರವಾದ ಮಾಹಿತಿ ಫಲಕಗಳನ್ನು ಕಾಣಬಹುದು. ದೇವಸ್ಥಾನದ ಕಾರ್ ನಿಲುಗಡೆಯಲ್ಲಿ ನಮ್ಮ ಕಾರ್ ನಿಲ್ಲಿಸಿ, ತಾಯಿಯ ದರ್ಶನಕ್ಕೆ ಹೊರಟೆವು. ನಾವು ಹೋದಾಗ ದೇವಿಗೆ ಅಲಂಕಾರವಾಗುತ್ತಿದ್ದರಿಂದ ಒಳ ಹೊಕ್ಕುವುದು ಸ್ವಲ್ಪ ತಡವಾಯಿತು. ಅಂದು ಬಹಳ ಜನ ಸೇರಿದ್ದರು. ಗೌರಿ ಹಬ್ಬ, ನವರಾತ್ರಿ ಮತ್ತು ಶುಕ್ರವಾರದಂದು ಕಾಲಿಡಲಾಗದಷ್ಟು ಜನ ಸೇರುತ್ತಾರಂತೆ. ಸರತಿಯಲ್ಲಿ ನಿಲ್ಲುವಾಗ ಆನಂದ ಭೈರವಿ ರಾಗದಲ್ಲಿ ’ಸರ್ವಮಂಗಲ ಮಾಂಗಲ್ಯೇ..’ ಶ್ಲೋಕ ನಿರಂತರವಾಗಿ ಕೇಳಿಬರುತ್ತಿತ್ತು. ಅದರ ಜೊತೆಗೆ ದೀಕ್ಷಿತರ ’ಕಮಲಾಂಬಾ ಸಂರಕ್ಷತುಮಾಂ...’ ನವಾವರಣ ಕೃತಿ ನೆನಪಾಯಿತು. ದೇವಿ ದರ್ಶನ ಹತ್ತಿರವಾದಂತೆ ನೂಕು ನುಗ್ಗಲು ಹೆಚ್ಚಾಯಿತು. ಇದರ ಮಧ್ಯೆಯೂ ದೇವಿ ದರ್ಶನ ಸುಸೂತ್ರವಾಗಿ ಆಯಿತು. ಕುಂಕುಮಾರ್ಚನೆ, ಮಹಾಪ್ರಸಾದ ಸೇವೆ ಮಾಡಿಸಿದೆವು. ಪ್ರಸಾದವನ್ನು ದೇವಸ್ಥಾನದ ಹೊರ ಆವರಣದಲ್ಲಿ ನೀಡುತ್ತಾರೆ. ಮಹಾಪ್ರಸಾದದಲ್ಲಿ ಕಡ್ಲೆ ಹಿಟ್ಟಿನ ಸಿಹಿಪುಡಿಯನ್ನು ಒಂದು ಡಬ್ಬಿಯಲ್ಲಿ ನೀಡುತ್ತಾರೆ. ಬಹಳ ರುಚಿಯಾಗಿತ್ತು :). ಕ್ಷೇತ್ರದ ಲಡ್ಡು ಪ್ರಸಾದ ಕೂಡ ಬಹಳ ರುಚಿಯಾಗಿದೆ. ಒಂದು ಲಡ್ಡುಗೆ ೧೦ ರುಪಾಯಿ. ತುಂಬಾ ಹಸಿವಾಗಿದ್ದರಿಂದ ಒಂದು ಲಡ್ಡನ್ನು ಅಲ್ಲಿಯೇ ಮುಗಿಸಿದೆವು :). ನಂತರ ಭೋಜನಕ್ಕೆ ಹೊರಟೆವು. ಸಾರಿನ ಘಮ ಘಮ ಪರಿಮಳ ಎಂತವರನ್ನು ಸೆಳೆಯುತ್ತದೆ. ಪ್ರತಿ ಮಧ್ಯಾಹ್ನ ಭೋಜನ ವ್ಯವಸ್ಥೆ ಇದೆ. ಅನ್ನ ಎರಡೇ ಬಾರಿ ಹಾಕುವುದರಿಂದ ಮೊದಲೇ ಬೇಕಾಗುವಷ್ಟು ಅನ್ನ ಹಾಕಿಕೊಳ್ಳುವುದು ಒಳಿತು. ಸಾರು, ಗಸಿ, ಗೋಧಿ ಪಾಯಸ, ಮಜ್ಜಿಗೆ ಎಲ್ಲಾ ಬೊಂಬಾಟ್. ಭರ್ಜರಿಯಾಗಿ ಊಟ ಮಾಡಿಯಾಯಿತು. ಹೊರಗಡೆ ಕೊಡಚಾದ್ರಿಯ ವಿಹಂಗಮ ನೋಟ ಮತ್ತು ಅದಕ್ಕೆ ಮುತ್ತಿಕ್ಕುತ್ತಿದ್ದ ಮೋಡಗಳು ಎಲ್ಲರನ್ನೂ ಆಕರ್ಷಿಸುತ್ತಿತ್ತು. ಊಟವಾದ ನಂತರ ಲೋಕಲ್ ಸೋಡಾ ಕುಡಿದು, ತಾಯಿ ಮೂಕಾಂಬಿಕೆಗೆ ಮತ್ತೊಮ್ಮೆ ನಮನ ಸಲ್ಲಿಸಿ, ೧೦ ರುಪಾಯಿ ಪಾರ್ಕಿಂಗ್ ಫೀ ತೆತ್ತು ಕುಂಭಾಸಿ ಕಡೆಗೆ ಕಾರನ್ನು ತಿರುಗಿಸಿದೆವು. ಕೊಲ್ಲೂರಿಗೆ ಸುಮಾರು ೬ ಕಿ.ಮೀ ಇದ್ದಾಗ ಮೂಕಾಂಬಿಕ ಅಭಯಾರಣ್ಯ ಪ್ರದೇಶ ಪ್ರಾರಂಭವಾಗುತ್ತದೆ. ಮಾರ್ಗ ಮಧ್ಯೆ ಸರ್ಕಾರದ ಪ್ರಕೃತಿ ಚಿಕಿತ್ಸೆ ಶಿಬಿರವೂ ಸಹ ಇದೆ (ನಾವು ಇಲ್ಲಿಗೆ ಭೇಟಿ ನೀಡಲಿಲ್ಲ).

ಕೊಲ್ಲೂರಿಗೆ ಹೋಗುವ ಅಂಕುಡೊಂಕಾದ ದಾರಿ ಮತ್ತು ಹೋಗುವ ದಾರಿಯಲ್ಲಿನ ಕಾಡು

--

ಕೊಲ್ಲೂರು ದೇವಸ್ಥಾನದ ಸ್ವಾಗತ ಗೋಪುರ ಮತ್ತು ದೇವಸ್ಥಾನ

--

ದೇವಸ್ಥಾನದ ಆನೆ ಹಾಗೂ ಕೊಡಚಾದ್ರಿ ಬೆಟ್ಟದ ನೋಟ

-----

ಕುಂಭಾಸಿ, ಉಡುಪಿ-ಕುಂದಾಪುರ ಮಧ್ಯೆ ಇರುವುದರಿಂದ, ನಾವು ಬಂದ ದಾರಿಯಲ್ಲಿ ವಾಪಸ್ ಹೋಗಬೇಕು. ಈಗ ಡ್ರೈವಿಂಗ್ ಮಾಡುವುದು ಅಪ್ಪನ ಸರತಿ. ನಾನು ಸ್ವಲ್ಪ ಹೊತ್ತು ಮಲಗಿಕೊಂಡೆ. ತಂದೆ ೬೦ರ ಮೇಲೆ ಕಾರನ್ನು ಓಡಿಸದ ಕಾರಣ ಕುಂಭಾಸಿ ತಲುಪಲು ಸ್ವಲ್ಪ ಸಮಯ ಹಿಡಿಯಿತು. ಸುಮಾರು ೩;೩೦ಕ್ಕೆ ಕುಂಭಾಸಿ ತಲುಪಿದೆವು. ಈ ದೇವಸ್ಥಾನ ಯಾವಗಲೂ ತೆರೆದಿರುತ್ತದೆ. ಅಂದರೆ ಮಧ್ಯಾಹ್ನ ಬಾಗಿಲು ಮುಚ್ಚುವುದಿಲ್ಲ. ಇಲ್ಲಿಯೂ ಮಧ್ಯಾಹ್ನ ಊಟ ಇದೆ. ಇಲ್ಲಿ ಸಹ ನಾವು ಹೂವಿನ ಪೂಜೆ ನೀಡಿದೆವು. ಪ್ರಸಾದ ಸ್ವೀಕರಿಸಿ, ಪೂಜೆ ಮುಗಿಸಿಕೊಂಡು ಪಕ್ಕದಲ್ಲಿದ್ದ ಶಿವನ ದೇವಸ್ಥಾನಕ್ಕೆ ತೆರಳಿದೆವು. ಅಲ್ಲಿನ ಪುಷ್ಕರಿಣಿ ಬಹಳ ಆಕರ್ಷಿಸಿತು. ಸಮೀಪದಲ್ಲಿ ಅಯ್ಯಪ್ಪನ ದೇವಸ್ಥಾನ ಕೂಡ ಇದೆ. ಕುಂಭಾಸಿಯ ಪಂಚಕಜ್ಜಾಯ ಪ್ರಸಾದ ಬಹಳ ರುಚಿ. ಹಾಗೆ ಇಲ್ಲಿನ ಮೂಡೆ ಒಲಿ ಕೂಡ ಬಹಳ ಪ್ರಸಿದ್ಧಿ. ಮೂಡೆ ಪ್ರಸಾದ ಯಾರಾದರೂ ಸೇವೆ ನೀಡಿದ್ದರೆ ಮಾತ್ರ ಸಿಗುತ್ತದೆ. ನಮ್ಮ ಅದೃಷ್ಟಕ್ಕೆ ನಮಗೆ ಅಂದು ಮೂಡೆ ಪ್ರಸಾದ ಲಭಿಸಿತು. ೪ ಮೂಡೆಗೆ ೨೦ ರುಪಾಯಿಗಳು. ಮೂಡೆ ಪ್ರಸಾದ ತೆಗೆದುಕೊಂಡು ಮನೆಯ ಹಾದಿ ಹಿಡಿದೆವು. ಕುಂಭಾಸಿಯಿಂದ ಮತ್ತೆ ನನ್ನ ಡ್ರೈವಿಂಗ್(ತಂದೆಗೆ ಹೆಚ್ಚು ಹೊತ್ತು ಡ್ರೈವ್ ಮಾಡಲು ಕಷ್ಟ).

 

ಆನೆಗುಡ್ಡೆ ದೇವಸ್ಥಾನದ ಸ್ವಾಗತ ಗೋಪುರ ಹಾಗೂ ಆನೆಗುಡ್ಡೆ ದೇವಸ್ಥಾನ

--

ಕುಂಭಾಸಿ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿ

ಮನೆ ತಲುಪಿದಾಗ ಸಾಯಂಕಾಲ ೬ ಘಂಟೆಯಾಗಿತ್ತು. ಮಳೆ ಕೂಡ ಬಂದಿದ್ದರಿಂದ ಸ್ವಲ್ಪ ಹಿತವಾದ ವಾತಾವರಣವಿತ್ತು. ರಾತ್ರಿ ಊಟಕ್ಕೆ ಕುಂಭಾಸಿಯ ಮೂಡೆ ಪ್ರಸಾದವನ್ನು ತಿಂದೆವು. ಬಹಳ ರುಚಿಯಾಗಿತ್ತು. ಮಡಿಕೇರಿ ಘಾಟಿಯ ನಂತರ ನನ್ನದು ಇದು ಎರಡನೆಯ ಅನುಭವ. ಆದರೆ ಈ ಘಾಟಿ ಪ್ರದೇಶ ಅಷ್ಟು ಕ್ಲಿಷ್ಟವಾಗಿಲ್ಲ. ಹೆಚ್ಚೆಂದರೆ ೩೦ ಡಿಗ್ರಿ ತಿರುವುಗಳು ಇರಬಹುದು. ನಾಲ್ಕನೇ ಗೆಯರಿನಲ್ಲೆ ಗಾಡಿ ಓಡಿತು. ಶಿರಾಡಿ ಘಾಟಿಯಲ್ಲಿ ಕೆಲವು ಕಡೆ ೮ ಡಿಗ್ರಿ ತಿರುವುಗಳಿವೆ. ಅಲ್ಲಿ ಫರ್ಸ್ಟ್ ಗೆಯರ್ ನಲ್ಲೆ ಓಡಿಸಬೇಕು. ಹೀಗೆ ನನ್ನದೊಂದು ಕ್ಷೇತ್ರ ಪರ್ಯಟನೆಯ ಸಣ್ಣ ಅನುಭವ ಇಲ್ಲಿ ಹಂಚಿಕೊಂಡಿದ್ದೇನೆ. ಈಗಲೂ ಅಲ್ಲಿನೆ ನೆನಪುಗಳು ಕಾಡುತ್ತವೆ ಅದರಲ್ಲೂ ವಿಶೇಷವಾಗಿ ಕೊಲ್ಲೂರಿನದ್ದು. ಮುಂದಿನ ಬಾರಿ ಇಡಗುಂಜಿ ಹಾಗೂ ಮುರ್ಡೇಶ್ವರ ದರ್ಶನ ಮಾಡಬೇಕೆಂಬ ಯೋಜನೆ ಇದೆ. ಆದಷ್ಟು ಬೇಗ ದರ್ಶನ ಭಾಗ್ಯ ಸಿಗಲಿ ಎಂಬುದು ನನ್ನ ಬಯಕೆ :)

ಸಂಜೆ ಮನೆಯಲ್ಲಿ ಕಂಡ ನೋಟ


ಸೇತುವೆಗಳ ಚಿತ್ರಗಳನ್ನು ತೆಗೆಯಲಾಗಲಿಲ್ಲ. ಕುಂದಾಪುರದ ಒಂದು ಸೇತುವೆಯಿಂದ, ನದಿಯು ಸಮುದ್ರ ಸೇರುವ ದೃಶ್ಯ ಮನಮೋಹಕವಾಗಿತ್ತು.

Rating
No votes yet

Comments