ಕೆಂಪಾದವೋ ಎಲ್ಲ ಕೆಂಪಾದವೋ॒॒॒॒॒॒॒॒॒॒॒.॒.

ಕೆಂಪಾದವೋ ಎಲ್ಲ ಕೆಂಪಾದವೋ॒॒॒॒॒॒॒॒॒॒॒.॒.

ಬರಹ

ಪ್ರತಿನಿತ್ಯ ಬೆಳಿಗ್ಗೆ ಲಘುವ್ಯಾಯಾಮವೆಂದು ವಾಯು ಸಂಚಾರಕ್ಕೆ ಹೊರಟಾಗ ದಾರಿಯಲ್ಲೆಲ್ಲ ಅರಳಿದ ಗುಲ್‌ಮೊಹರ್(ಮೇಫ್ಲವರ್) ಗಮನ ಸೆಳೆಯಿತು. ದಾರಿಯುದ್ದಕ್ಕೂ ತಲೆತುಂಬ ಹೂಮುಡಿದ ಮದುಮಗಳಿಂತಿರುವ ಗುಲ್‌ಮೊಹರ್ ಯಾರನ್ನೇ ಆಗಲಿ ಗಮನ ಸೆಳೆಯದೇ ಇರದು. ಮೇ ತಿಂಗಳಲ್ಲಿ ನಿಗಿನಿಗಿಸುವ ಕೆಂಡದಂತಿರುವ ಗುಲ್‌ಮೊಹರ್ ಹೂಗಳ ಗಾಢ ಕೆಂಪು ವರ್ಣ ತಕ್ಷಣವೇ ಆಕರ್ಷಿಸುತ್ತದೆ.
ವಕ್ರ ವಿನ್ಯಾಸಗಳ ರೆಂಬೆ, ಕೊಂಬೆಗಳನ್ನು ಹೊಂದಿರುವ ಗುಲ್‌ಮೊಹರ್ ಮರದಲ್ಲಿ ಮಾರ್ಚ್ ತಿಂಗಳಿನಿಂದ ಎಲೆಗಳು ಕಡಿಮೆಯಾಗಿ ಹೂ ಅರಳಲು ಆರಂಭವಾಗುವುದು. ಮೇ ತಿಂಗಳು ಗುಲ್‌ಮೊಹರ್‌ನ ವರ್ಣ ವೈಭವದ ಪರಾಕಾಷ್ಠೆಯ ತಿಂಗಳು. ಗಾಢ ಕೆಂಪು ಬಣ್ಣವನ್ನು ಹೊಂದಿದ, ೪-೫ ದಳಗಳಿಂದ ಕೂಡಿದ ಹೂಗಳು, ಗುಚ್ಛವಾಗಿ ಕೊಂಬೆಗಳ ಮೇಲೆಲ್ಲ ಅರಳಿ ನೋಡುಗರ ನೋಟವನ್ನು ಸೆರೆಹಿಡಿಯುತ್ತವೆ. ಹೀಗಾಗಿಯೇ ಇವನ್ನು ಮೇ ಫ್ಲವರ್ ಎಂದೂ ಕರೆಯುವುದು.
ಗುಲ್‌ಮೊಹರ್‌ನ ಬೊಟಾನಿಕಲ್ ಹೆಸರು ಡೆಲೊನಿಕ್ಸ್ ರೆಜಿಯಾ, ಆಂಗ್ಲ ನಾಮಧೇಯ ಫ್ಲೆಮ್ ಬೊಯಾಂಟ್. ಜನೆವರಿ ತಿಂಗಳಿನಿಂದ ಎಲೆ ಚಿಗುರಿ ಅಚ್ಚ ಹಸಿರಾಗುವ ಗುಲ್‌ಮೊಹರ್, ಮಾರ್ಚ್ ತಿಂಗಳಿನಿಂದ ಹೂ ಅರಳಿಸುವ ಪ್ರಕ್ರಿಯೆಗೆ ತೊಡಗುತ್ತದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಗುಲ್‌ಮೊಹರ್‌ನ ಬೀಜಗಳ ಉತ್ಪಾದನಾ ತಿಂಗಳುಗಳು. ಗುಲ್‌ಮೊಹರ್‌ನ ಬೀಜಗಳನ್ನು ೨ ವರ್ಷಗಳವರೆಗೂ ಕಾಯ್ದಿಟ್ಟು, ಬಿತ್ತನೆ ಮಾಡಿ ಬೆಳೆಸಬಹುದಾಗಿದೆ. ಯಾವುದೇ ಹೆಚ್ಚಿನ ಉಪಚಾರಗಳನ್ನು ಬಯಸದ ಗುಲ್‌ಮೊಹರ್ ಗಿಡ ಸಾಮಾನ್ಯ ಉಷ್ಣಾಂಶ, ನೀರು, ಹವಾಮಾನಗಳಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.
ಸಾಮಾನ್ಯವಾಗಿ ಎಲ್ಲೆಡೆ ಬೆಳೆಯುವ ಗುಲ್‌ಮೊಹರ್‌ನ ಹೂಗಳ ಗಾಢವರ್ಣ ನಿತ್ಯ ಜೀವನದಲ್ಲಿ ಚೇತೋಹಾರಿಯೆನಿಸದೇ ಇರದು. ಆದರೆ ಇದಕ್ಕಾಗಿ ವರ್ಷದಲ್ಲಿ ಎಪ್ರೀಲ್ ಹಾಗೂ ಮೇ ತಿಂಗಳಿನವರೆಗೂ ಕಾಯಬೇಕೆನ್ನುವುದೇ ಬೇಸರದ ಸಂಗತಿಯಾಗಿದೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ