ಕಮಲ ಪಕ್ಷದ ಕಲಸುಮೇಲೋಗರ

ಕಮಲ ಪಕ್ಷದ ಕಲಸುಮೇಲೋಗರ

ಬರಹ

ಬಿಜೆಪಿಯ ಜಾಹೀರಾತುಗಳನ್ನು ಗಮನಿಸಿದ್ದೀರಾ?

ತೆರಿಗೆ ಹೊರೆ ಇಳಿಸುವುದಾಗಿರಬಹುದು, ಬೆಲೆ ಏರಿಕೆಯ ತರಾಟೆಯಾಗಿರಬಹುದು, ವಿದ್ಯಾರ್ಥಿನಿಯರಿಗೆ ನೀಡಿದ ಸೈಕಲ್‌, ಉದ್ಯೋಗ ಭರವಸೆ- ಹೀಗೆ ಹಲವಾರು ವಿಷಯಗಳ ಬಗ್ಗೆ ಬರುತ್ತಿರುವ ಜಾಹೀರಾತುಗಳು ಅಪಕ್ವವಾಗಿವೆ.

ಸಾಮಾನ್ಯವಾಗಿ ಬಿಜೆಪಿಯ ಜಾಹೀರಾತುಗಳು ನೇರವಾಗಿರುತ್ತವೆ. ಹೇಳುವುದನ್ನು ಮನಮುಟ್ಟುವಂತೆ ಹೇಳುವುದು ಆ ಪಕ್ಷದ ಶೈಲಿ. ಆದರೆ, ಈ ಸಾರಿ ಅದ್ಯಾರು ಜಾಹೀರಾತು ಮಾಡಿದ್ದಾರೋ, ಒಂದಕ್ಕಿಂತ ಒಂದು ಅಧ್ವಾನವಾಗಿವೆ. ಕೆಟ್ಟದಾಗಿವೆ. ರೈತನ ಹೆಸರಲ್ಲಿ ತೋರಿಸುತ್ತಿರುವ ವ್ಯಕ್ತಿ ಪಿಂಚಣಿ ಸಿಗದ ಗುಮಾಸ್ತನಂತೆ ಘೋರವಾಗಿದ್ದಾನೆ. ಬಾಲಿಶ ಸಂಭಾಷಣೆಗಳು, ಚಿತ್ರಣಗಳು ಹಾಗೂ ಪ್ರಸ್ತುತಿ ಜಾಹೀರಾತುಗಳ ಮೂಲ ಉದ್ದೇಶವನ್ನೇ ಕೊಂದಿವೆ.

ಬಿಜೆಪಿ ಗೊಂದಲದಲ್ಲಿದೆ, ಅರ್ಜೆಂಟಿನಲ್ಲಿದೆ ಹಾಗೂ ಏನಾದರೂ ಮಾಡಿ ಅಧಿಕಾರಕ್ಕೆ ಬರುವ ಹಪಾಹಪಿಯಲ್ಲಿದೆ ಎಂಬುದನ್ನು ಬಿಂಬಿಸುವಂತಿವೆ ಈ ಜಾಹೀರಾತುಗಳು. ಲೋಕಸಭೆಯಂಥ ಚುನಾವಣೆಯನ್ನು ಎದುರಿಸಲು ಹೊರಟ ಪಕ್ಷಕ್ಕೆ, ಅದನ್ನು ಸಮರ್ಥವಾಗಿ ಬಿಂಬಿಸುವಂಥ ಜಾಹೀರಾತುಗಳನ್ನು ಮಾಡಲೂ ಆಗಲಿಲ್ಲವಲ್ಲ!

ಸಮರ್ಥ ನಾಯಕ, ನಿರ್ಣಾಯಕ ಸರ್ಕಾರ ಎಂಬ ಘೋಷಣೆ ಬಿಟ್ಟರೆ ಇಡೀ ಜಾಹೀರಾತು ಬಿಜೆಪಿಯ ಸಾಧನೆಗಳನ್ನಾಗಲಿ, ಪ್ರಣಾಳಿಕೆಯನ್ನಾಗಲಿ ಸರಿಯಾಗಿ ಬಿಂಬಿಸುವುದಿಲ್ಲ. ಬಿಜೆಪಿಯ ಥಿಂಕ್‌ ಟ್ಯಾಂಕ್‌ ಸೋರುತ್ತಿದೆ ಎಂಬುದಕ್ಕೆ ಸಾಕ್ಷ್ಯದಂತಿವೆ ಇವು.

- ಚಾಮರಾಜ ಸವಡಿ